ತ್ಯಾಗ, ಸಮಾನತೆ ಸಹಬಾಳ್ವೆಯ ಸಂಕೇತ ಬಕ್ರೀದ್..!
ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್‌ನ ಕೊನೆಯ ತಿಂಗಳು ದುಲ್ಹಜ್ ಹತ್ತನೇ ದಿನದಂದು ಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್ ಕರ್ಮದಲ್ಲಿ ತೊಡಗಿಕೊಳ್ಳುವಾಗ ವಿಶ್ವದೆಲ್ಲೆಡೆಯ ಮುಸ್ಲಿಮರು ಈದ್ ಆಚರಿಸುತ್ತಾರೆ.
ಬೆಂಗಳೂರು(ಜೂ.29): ಸಮಾನತೆ, ಸಹಬಾಳ್ವೆ, ಬಲಿದಾನ, ತ್ಯಾಗೋಜ್ವಲ ಬದುಕಿನ ಸಂದೇಶಗಳನ್ನು ಹೊತ್ತುಕೊಂಡು ಜಾಗತಿಕ ಮುಸಲ್ಮಾನರನ್ನು ಸಂಭ್ರಮದಲ್ಲಿ ತೇಲಾಡಿಸುವ ಬಕ್ರೀದ್ ಮತ್ತೊಮ್ಮೆ ಆಗತವಾಗಿದೆ. ಮುಸ್ಲಿಮರ ಅತ್ಯಂತ ಶ್ರೇಷ್ಠ, ಮಹತ್ವದ ದಿನಗಳಲ್ಲೊದಾದ ಬಕ್ರೀದ್ ಅಥವಾ ಈದುಲ್ ಅಳ್‌ಹಾ ಈ ಬಾರಿ ಜೂ.29ಕ್ಕೆ ಆಚರಿಸಲಾಗುತ್ತಿದೆ. ಅಂದರೆ ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್‌ನ ಕೊನೆಯ ತಿಂಗಳು ದುಲ್ಹಜ್ ಹತ್ತನೇ ದಿನದಂದು ಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್ ಕರ್ಮದಲ್ಲಿ ತೊಡಗಿಕೊಳ್ಳುವಾಗ ವಿಶ್ವದೆಲ್ಲೆಡೆಯ ಮುಸ್ಲಿಮರು ಈದ್ ಆಚರಿಸುತ್ತಾರೆ.
ಪ್ರವಾದಿಗಳಲ್ಲಿ ಓರ್ವರಾದ ಹಝ್ರತ್ ಇಬ್ರಾಹಿಂ, ಅವರ ಪುತ್ರ ಇಸ್ಮಾಯಿಲ್ ತ್ಯಾಗದ ಜೀವನ ಸ್ಮರಣೆಯಾಗಿದೆ ಈದ್. ದೇವ ನಿಷ್ಠೆಗಾಗಿ ತನಗೆ ಏನನ್ನೂ ತ್ಯಾಗ ಮಾಡಲು ಸಿದ್ಧನಿರಬೇಕೆಂಬುದೇ ಬಕ್ರೀದ್ ಸಾರುವ ಸಂದೇಶ. ಒಂದು ಪ್ರವಾದಿ ಕುಟುಂಬದ ಸಂಕಷ್ಟಗಳ ಸರಮಾಲೆ, ಕಷ್ಟಕಾರ್ಪಣ್ಯಗಳು, ಎದುರಿಸಿದ ಸವಾಲುಗಳನ್ನು ಸ್ಮರಿಸುವ ದಿನವಾಗಿದೆ ಈದ್. ಹಜ್ ಯಾತ್ರೆ, ಪ್ರಾಣಿ ಬಲಿ ಅರ್ಪಿಸುವಿಕೆ, ಉಪವಾಸ, ದಾನ, ಸಮಾನತೆಯ ಸಂದೇಶವು ಬಕ್ರೀದ್ ಎಂಬ ಮೂರಕ್ಷರದ ನಡುವೆ ಸುತ್ತುತ್ತಲೇ ಇರುತ್ತವೆ.
ಇವರು 'ವೈರಿ'ಗಳಿಗಿಂತ ಡೇಂಜರ್: ಇಂತವರಿಂದ ದೂರ ಇರಿ ಅಂತಾರೆ ಚಾಣಕ್ಯರು..!
ಏನಿದು ಹಜ್ ಯಾತ್ರೆ?
ಮುಸ್ಲಿಮರು ಕಡ್ಡಾಯವಾಗಿ ಮಾಡಬೇಕಾದ 5 ಕಾರ್ಯಗಳಲ್ಲಿ ಐದನೇಯದು ಹಜ್. ದುಲ್ಹಜ್ ತಿಂಗಳ ಆರಂಭದಲ್ಲೇ ಪವಿತ್ರ ಮಕ್ಕಾ ಭೂಮಿಯನ್ನು ತಲುಪುವ ಯಾತ್ರಿಕರು ಅರಫಾ ಮೈದಾನ, ಸಫಾ ವರ್ಮಾ ಬೆಟ್ಟ, ಮಿನಾ, ಮುಝ್ದಲಿಫಾ ಸೇರಿದಂತೆ ಮಕ್ಕಾದ ವಿವಿಧ ಭಾಗಗಳಲ್ಲಿ ಹಜ್ ಕಾರ್ಯಗಳನ್ನು ಪೂರೈಸುತ್ತಾರೆ. ತಿಂಗಳ 9ನೇ ದಿನದಂದು ಮಕ್ಕಾದ ‘ಅರಫಾ’ ಎಂಬ ಬೃಹತ್ ಮೈದಾನದಲ್ಲಿ ಜಗತ್ತಿನ ವಿವಿಧ ದಿಕ್ಕುಗಳಿಂದ ಬಂದ ಲಕ್ಷಾಂತರ ಮಂದಿ ಪವಿತ್ರ ಹಜ್‌ಗಾಗಿ ಒಂದುಗೂಡುತ್ತಾರೆ. ಅದೇ ದಿನ ಜಗತ್ತಿನೆಲ್ಲೆಡೆಯ ಮುಸ್ಲಿಮರು ಉಪವಾಸ ಕೈಗೊಂಡು, ತಿಂಗಳ 10ರಂದು ಅಂದರೆ ಮರುದಿನ ಈದ್ ಅಥವಾ ಹಬ್ಬ ಆಚರಿಸುತ್ತಾರೆ. ಮಕ್ಕಾದಲ್ಲಿ ಒಂದುಗೂಡಿದ ಹಜ್ ಯಾತ್ರಿಕರು ಒಕ್ಕೊರಲಿನಿಂದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾರೆ. ಬಡವ ಶ್ರೀಮಂತನೆಂಬ ಭೇದ ಭಾವವಿಲ್ಲದೇ, ಎಲ್ಲರೂ ಒಂದೇ ಎಂದು ಸಮಾನತೆಯ ಮೆಸೇಜ್ ಜಗತ್ತಿಗೆ ಸಾರುತ್ತಾರೆ. ಜಗತ್ತಿನ ಶಾಂತಿ, ಎಲ್ಲರ ಸುಖ, ಲಾಭಕ್ಕಾಗಿ ಪ್ರಾರ್ಥಿಸುತ್ತಾರೆ.
ಅರಫಾ ಎಂಬ ಅಧ್ಬುತ!
ವಿಶ್ವದ 160ಕ್ಕೂ ಹೆಚ್ಚಿನ ರಾಷ್ಟ್ರಗಳಿಂದ ಬಂದ 25 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅರಫಾ ಮೈದಾನದಲ್ಲಿ ಒಂದುಗೂಡುವುದೇ ಒಂದು ಅದ್ಭುತ. ಅಲ್ಲಿ ಒಗ್ಗೂಡುವ ಜನರ ವಿಶೇಷತೆ ಏನೆಂದರೆ ಎಲ್ಲರೂ ಶ್ವೇತ ವಸ್ತ್ರವನ್ನಷ್ಟೇ ಧರಿಸುವುದು. ಹಜ್‌ನಲ್ಲಿ ಬಡವ, ಶ್ರೀಮಂತ ಯಾರೇ ಇರಲಿ, ಧರಿಸಬೇಕಿರುವುದು ಶುಭ್ರ ಬಿಳಿ ವಸ್ತ್ರ ಮಾತ್ರ. ಅಲ್ಲಿ ಧನಿಕನಿಗೂ ಬರಿಗಾಲಲ್ಲೇ ನಡೆಯುವವನ ಮಧ್ಯೆಯೂ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ. ವರ್ಗ, ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನ, ಪದವಿಗಳ ಯಾವುದೇ ವ್ಯತ್ಯಾಸಗಳಿಲ್ಲದೆ ಬಡವ, ಶ್ರೀಮಂತ, ರಾಜ, ರಾಜಕಾರಣಿ, ನಿರ್ಗತಿಕ ಕೂಡಾ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕದೈವ ವಿಶ್ವಾಸದ ಮಂತ್ರ ಜಪಿಸುತ್ತಾರೆ. ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಮನುಷ್ಯರೆಲ್ಲರೂ ಸಹೋದರರು ಮತ್ತು ಸಮಾನರು ಎಂಬ ಸಂದೇಶವನ್ನು ಜಗತ್ತಿಗೆ ಈ ಹಜ್ ಮೂಲಕ ಸಾರಲಾಗುತ್ತದೆ. ಇದೇ ಅರಫಾ ಮೈದಾನದಲ್ಲೇ ಅಂತಿಮ ಪ್ರವಾದಿ ಮುಹಮ್ಮದರು ಮಾಡಿದ ವಿದಾಯದ ಭಾಷಣ ಚರಿತ್ರೆಯ ಪುಟಗಳಲ್ಲಿ ಇಂದಿಗೂ ಅದ್ವಿತೀಯ ಭಾಷಣ ಎನಿಸಿಕೊಂಡಿದೆ.
ಬಕ್ರೀದ್ಗೆ ಪ್ರಾಣಿ ಬಲಿ ಏಕೆ?
ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್ರನ್ನು ಬಲಿಯರ್ಪಿಸಲು ಮುಂದಾಗುವ ರೋಚಕ ಘಟನೆಯೇ ಈ ಬಲಿದಾನ ಅಥವಾ ಕುರ್ಬಾನಿಯ ಹಿಂದಿರುವ ಇತಿಹಾಸ. ಸುದೀರ್ಘ ಕಾಲದ ಬಳಿಕ ಜನಿಸಿದ ಮಗ ಇಸ್ಮಾಯಿಲ… ಜೊತೆ ಸಂತೋಷಭರಿತ ಜೀವನವನ್ನು ನಡೆಸುತ್ತಿರುವ ಇಬ್ರಾಹಿಮರು ಒಂದಿನ ವಿಶೇಷ ಕನಸು ಕಾಣುತ್ತಾರೆ. ಆದರೆ ಕನಸು ಮಾತ್ರ ವಿಚಿತ್ರ ಮತ್ತು ಅಚ್ಚರಿ. ತನ್ನ ಮಗನನ್ನೇ ಬಲಿಯರ್ಪಿಸುವ ಕನಸೊಂದನ್ನು ಕಾಣುವ ಇಬ್ರಾಹಿಮರು ಅದನ್ನು ಮಗ ಇಸ್ಮಾಯಿಲರಿಗೂ ತಿಳಿಸುತ್ತಾರೆ. ದೇವನ ಆದೇಶವಲ್ಲದಿದ್ದರೂ ಕನಸಲ್ಲಿ ಕಂಡಿದ್ದು ದೇವನ ಆದೇಶ ಎಂದುಕೊಂಡು ಪುತ್ರನ ಒಪ್ಪಿಗೆಯೊಂದಿಗೆ ಪುತ್ರನನ್ನೇ ಬಲಿಯರ್ಪಿಸಲು ಮುಂದಾಗುತ್ತಾರೆ. ಆದರೆ ಅಲ್ಲಾಹನಿಗೆ ಬೇಕಿದ್ದದ್ದು ಪ್ರವಾದಿ ಇಬ್ರಾಹಿಮರ ದೇವನಿಷ್ಠೆ ಮಾತ್ರವಾಗಿತ್ತು. ಅದಕ್ಕಾಗಿಯೇ ಇಸ್ಮಾಯಿಲರನ್ನು ಬಲಿಯರ್ಪಿಸುವುದರ ಬದಲು ಇಬ್ರಾಹಿಮರಿಗೆ ಆಡೊಂದನ್ನು ನೀಡುವ ಅಲ್ಲಾಹನು ಅದನ್ನೇ ಬಲಿಯರ್ಪಿಸಿ ಎಂದು ಸೂಚಿಸುತ್ತಾನೆ.
ಈ ಬಗ್ಗೆ ಕುರ್ಆನ್ನಲ್ಲಿ ಅಲ್ಲಾಹನು ಸ್ಪಷ್ಟವಾಗಿ ಹೇಳುವುದು ನೋಡಿ. ‘ನಿಶ್ಚಯವಾಗಿಯೂ ಅದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು. ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು. ಆ ಘಟನೆಯ ನೆನಪನ್ನು ಮುಂದಿನ ಜನಾಂಗದಲ್ಲೂ ಉಳಿಸಿದೆವು (ಕುರ್ಆನ್ 37:106-108). ಇಂದು ಬಕ್ರೀದ್ ಸಂದರ್ಭ ಜಗತ್ತಿನ ಎಲ್ಲೆಡೆ ನೀಡಲಾಗುವ ಪ್ರಾಣಿ ಬಲಿಯು ಇಬ್ರಾಹಿಂ ಮತ್ತು ಅವರ ಪುತ್ರ ಇಸ್ಮಾಲಿಯರ ತ್ಯಾಗದ ಸಂದೇಶವನ್ನಷ್ಟೇ ಸೂಚಿಸುತ್ತದೆ. ‘ಅವುಗಳ ಮಾಂಸ, ರಕ್ತ ಯಾವುದೂ ಅಲ್ಲಾಹನಿಗೆ ತಲುಪುವುದಿಲ್ಲ. ಅವನಿಗೆ ತಲುಪುವುದು ನಿಮ್ಮ ಧರ್ಮನಿಷ್ಠೆ ಮಾತ್ರ’ ಎಂದು ಕುರ್ಆನ್ ಸಷ್ಟವಾಗಿ ಮಾನವನ ದೇವನಿಷ್ಠೆಯತ್ತ ಬೊಟ್ಟು ಮಾಡುತ್ತದೆ.
ಹೀಗೆ ಬಲಿ ನೀಡಲಾದ ಕುರ್ಬಾನಿ ಮಾಂಸವನ್ನು ಬಡವರಿಗೆ ಹಂಚಲಾಗುತ್ತದೆ. ಕುಟುಂಬಸ್ಥರಿಗೂ ಇದರ ಪಾಲು ಸಿಗುತ್ತದೆ. ಎಂದೂ ಮಾಂಸ ಬೇಯದ ಕಡುಬಡವನ ಒಲೆಯ ಮೇಲಿನ ಕೊರತೆಯೊಂದನ್ನು ಬಕ್ರೀದ್ ಇಲ್ಲವಾಗಿಸುತ್ತದೆ. ಆದರೆ ಕುರ್ಬಾನಿ ಹೆಸರಿನ ಅನ್ಯಾಯವನ್ನು ಇಸ್ಲಾಂ ಎಂದಿಗೂ ಒಪ್ಪುವುದಿಲ್ಲ. ಬದಲಾಗಿ ಸ್ಪಷ್ಟವಾಗಿ, ಕಠಿಣವಾಗಿ ವಿರೋಧಿಸುತ್ತದೆ. ಸಾಮರ್ಥ್ಯವಿದ್ದರೆ ಕುರ್ಬಾನಿ ನೀಡು ಎಂದು ಹೇಳುವ ಧರ್ಮ, ಅನ್ಯಾಯವಾಗಿ ಸಂಪಾದಿಸಿದ ಹಣದಿಂದ ಪ್ರಾಣಿ ಬಲಿ ನೀಡುವುದನ್ನು ವಿರೋಧಿಸುತ್ತದೆ. ಗಾಯಗೊಂಡ ಪ್ರಾಣಿಯನ್ನೂ ಕುರ್ಬಾನಿ ನೀಡಬಾರದು ಎಂದು ಆದೇಶಿಸುವ ಇಸ್ಲಾಂ, ಅನ್ಯರಿಂದ ಕಬಳಿಸಿದ, ಕಳ್ಳತನದ ಮೂಲಕ ನೀಡುವ ಪ್ರಾಣಿ ಬಲಿಯನ್ನು ಒಪ್ಪಲು ಸಾಧ್ಯವೇ?
ಬಕ್ರೀದ್ ಕುರ್ಬಾನಿ: ಲಕ್ಷಕ್ಕೆ ಬಿಕರಿಯಾದ ಟಗರು, ಹೋತಗಳು ಇಲ್ಲಿವೆ ನೋಡಿ..
ಈದ್ ಸಂಭ್ರಮದಲ್ಲಿ ಜಗತ್ತು
ಮುಸ್ಲಿಮರ ಪಾಲಿಗೆ ರಂಜಾನ್‌ನಂತೆಯೇ ಅತ್ಯಂತ ಮಹತ್ವ, ಪ್ರಾಮುಖ್ಯವಿರುವ ದಿನವಾಗಿದೆ ಈ ಈದ್. ಅತ್ತ ಮಕ್ಕಾ ಮರುಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್ ಕರ್ಮದಲ್ಲಿ ತೊಡಗಿಸಿಕೊಳ್ಳುವಾಗ ಅವರ ಜೊತೆ ಭಾವೈಕ್ಯತೆ ಪ್ರದರ್ಶಿಸುತ್ತಾ ವಿಶ್ವದೆಲ್ಲೆಡೆ ಮುಸ್ಲಿಮರು ಈದ್ ಆಚರಿಸುತ್ತಾರೆ. ಹಬ್ಬದ ದಿನ ಸೂರ್ಯೋದಯದ ಬಳಿಕ ಒಂದು ವಿಶೇಷ ಸಾಮೂಹಿಕ ನಮಾಜ್ ನಡೆಯುತ್ತದೆ. ಅಲ್ಲಾಹನ ಕೀರ್ತನೆಗಳೊಂದಿಗೆ ಮಸೀದಿ, ಈದ್ಗಾ ವಠಾರ ಸಂಭ್ರಮದಲ್ಲಿ ತೇಲಾಡುತ್ತದೆ. ಧಾರ್ಮಿಕ ವಿದ್ವಾಂಸರು ಬದುಕಿಗೆ ಸಂಬಂಧಿಸಿದ ಚರಿತ್ರೆಯ ಪಾಠಗಳನ್ನು, ವರ್ತಮಾನಕ್ಕೆ ಅಗತ್ಯವೆನಿಸಿದ ಉಪಯುಕ್ತ ಸಂದೇಶಗಳನ್ನು ಜನರಿಗೆ ನೀಡುತ್ತಾರೆ. ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನದ ಮೂಲಕ ಅನ್ಯರು, ಸ್ನೇಹಿತರು, ಸಂಬಂಧಗಳೇ ಸರಿಯಿಲ್ಲದ ನೆರೆಕರೆಯವರ ಜೊತೆಗೂ ನಡೆಸುವ ಹ್ರಸ್ವ ಮಾತುಕತೆ, ಹಬ್ಬದ ಶುಭ ಹಾರೈಕೆ ಮನಕ್ಕೆ ನೀಡುವ ಸಂತೋಷ ವರ್ಣಿಸಲು ಸಾಧ್ಯವೇ ಇಲ್ಲ. ಬಳಿಕ ಕುಟುಂಬಸ್ಥರು, ಅಕ್ಕಪಕ್ಕದ ಮನೆಗೆ ಭೇಟಿ ನೀಡಿ ಹಬ್ಬದ ಸಂತೋಷ ಹರಡುವುದು ಪರಸ್ಪರ ಹಗೆ, ದ್ವೇಷಗಳನ್ನು ಇಲ್ಲವಾಗಿಸುತ್ತದೆ.
160+ ದೇಶಗಳ 25 ಲಕ್ಷಕ್ಕೂ ಹೆಚ್ಚು ಜನ ಪವಿತ್ರ ಮಕ್ಕಾದಲ್ಲಿ ರಾಜ, ಸೇವಕ, ಬಡವ, ಸಿರಿವಂತ ಎಂಬ ಭೇದವಿಲ್ಲದೆ ಹಜ್ ಕರ್ಮದಲ್ಲಿ ಭಾಗಿಯಾದರೆ, ಜಗತ್ತಿನೆಲ್ಲೆಡೆಯ ಮುಸ್ಲಿಮರು ಈ ದಿನ ಬಕ್ರೀದ್ ಹಬ್ಬ ಆಚರಿಸುತ್ತಾರೆ. ಇದು ಮುಸ್ಲಿಂ ಸಮುದಾಯವು ಸಮಾನತೆ, ಸಹಬಾಳ್ವೆ, ಬಲಿದಾನದ ಸಂದೇಶವನ್ನು ಜಗತ್ತಿಗೆ ಸಾರುವ ಹಬ್ಬ: ನಾಸಿರ್ ಸಜಿಪ ಮಂಗಳೂರು