Asianet Suvarna News Asianet Suvarna News

JLF 2022: ಯೌವನ ಉಕ್ಕುವ ಕಾವ್ಯದ ಸುತ್ತ ,ಕವಿತೆಗಿದು ಕಾಲವಲ್ಲ ಎನ್ನುವುದು ತರವಲ್ಲ

ಕವಿಗೆ ತೀರಾ ಸಂಕೋಚ ಇರಬಾರದು. ಕವಿತೆಗಳು ಇರುವುದು ಓದಲಿಕೆ. ಅದನ್ನು ಹೆಚ್ಚು ಮಂದಿ ಓದಬೇಕು. ಅದಕ್ಕಾಗಿ ನಾವು ಆಧುನಿಕ ಮಾಧ್ಯಮಗಳಲ್ಲಿ ಕೆನಕ್ಟ್‌ ಆಗಿರಬೇಕು.
 

Kannada writer Jogi writes on modern poetry and poems open mindedness relevancy vcs
Author
Bangalore, First Published Mar 27, 2022, 11:01 AM IST

ಜೋಗಿ

ಇದ್ದಕ್ಕಿದ್ದಂತೆ ದೇಶದಲ್ಲಿ ಕವಿತೆಯ ಕ್ರಾಂತಿಯಾಗಿದೆ ಅನ್ನಿಸುವಂತೆ ಸುಮಾರು ಐನೂರು ಮಂದಿ ಕುಳಿತು ಕವಿತೆ ಕೇಳುತ್ತಿದ್ದರು. ಕುರ್ಚಿಗಳು ತುಂಬಿ, ನೆಲದ ಮೇಲೆ ಚಕ್ಕಳಮಕ್ಕಳ ಹಾಕಿಕೊಂಡು ಕೂತು ಪದ್ಯ ಕೇಳಿಸಿಕೊಳ್ಳುತ್ತಿರುವವರ ಸರಾಸರಿ ವಯಸ್ಸು 23. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ತರುಣಿಯರು. ಬೇರೆ ಬೇರೆ ಊರುಗಳಿಂದ ಬಂದ ಬಸವಳಿದ ಮುಖ, ಸುಕ್ಕುಬಿದ್ದ ಅಂಗಿಯ ತರುಣರು. ಇದ್ದಕ್ಕಿದ್ದಂತೆ ಒಬ್ಬ ಎದ್ದು ನಿಂತು ಕವಿಗಳೇ, ನನಗೋಸ್ಕರ ನೀವು ಈ ಪದ್ಯ ಓದಬೇಕು. ಅದು ನನ್ನ ಕೊನೆಯಾಸೆ ಎಂದು ಕಿರುಚಿ ಹೇಳಿದ. ಕವಿ ಮುಗುಳ್ನಕ್ಕು ಆ ಕವಿತೆ ಓದುತ್ತಿದ್ದಂತೆ, ಕವಿತೆ ಓದಲು ಹೇಳಿದವನ ಕೆನ್ನೆ ತೋಯುತ್ತಿತ್ತು.

ಅವರೆಲ್ಲ ನಿಜಕ್ಕೂ ಕವಿತೆ ಕೇಳುತ್ತಾರಾ ಎಂದು ನೋಡಿದರೆ ಆರು ನೂರು ರುಪಾಯಿಯ ಕವನ ಸಂಕಲನ ಸುಮಾರು ನೂರಿನ್ನೂರು ಮಂದಿಯ ಕೈಯಲ್ಲಿತ್ತು. ಕವಿ ಓದುತ್ತಿದ್ದರೆ ಇವರೆಲ್ಲ ಗುಂಪು ಗುಂಪಾಗಿ ಕೂತು ಪುಸ್ತಕದಲ್ಲಿ ಅಚ್ಚಾದ ಆ ಕವಿತೆಯ ಸಾಲುಗಳ ಮೇಲೆ ಬೆರಳಿಟ್ಟುಕೊಂಡು ಕವಿತೆ ಕೇಳಿಸಿಕೊಳ್ಳುತ್ತಿದ್ದರು. ನಡುನಡುವೆ ಕವಿ ತನ್ನ ಸಂಕಷ್ಟದ ಕತೆ ಹೇಳುತ್ತಿದ್ದ, ತಾನು ಬರೆಯಲು ಪಟ್ಟಕಷ್ಟವನ್ನು ವಿವರಿಸುತ್ತಿದ್ದ, ತನ್ನೂರಿನ ಕುರಿತು ನಾಕು ಮಾತಾಡುತ್ತಿದ್ದ. ಆಗ ಅಲ್ಲಿ ಗಾಢಮೌನ. ಕವಿತೆ ಓದಿದ ನಂತರ ಭರ್ಜರಿ ಚಪ್ಪಾಳೆ.

JLF 2022: ಭಾರತ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರುವ ಶಕ್ತಿ ರೈತರಿಗಿದೆ

ಅವರೆಲ್ಲ ಬೇರೆ ಬೇರೆ ರಾಜ್ಯದವರು. ಒಬ್ಬ ಮಹಾರಾಷ್ಟ್ರ, ಮತ್ತೊಬ್ಬ ಗುಜರಾತ್‌, ಆಕೆ ಪಂಜಾಬಿ, ಈಕೆ ಕೇರಳ, ಮತ್ತೊಬ್ಬ ತಮಿಳುನಾಡು. ಆದರೆ ಎಲ್ಲರ ಕವಿತೆಯೂ ಇಂಗ್ಲಿಷಿನಲ್ಲಿತ್ತು. ಕೇಳಿಸಿಕೊಳ್ಳುತ್ತಿದ್ದವರೆಲ್ಲ ಬೇರೆ ಬೇರೆ ರಾಜ್ಯದವರು. ಅವರನ್ನೆಲ್ಲ ಬೆಸೆದದ್ದು ಎಲ್ಲರಿಗೂ ಗೊತ್ತಿರುವ- ಇಂಗ್ಲಿಷ್‌ ಭಾಷೆ. ಕವನ ಓದಿ ಮುಗಿದ ನಂತರ ಕವಿಯ ಜತೆ ನಾಲ್ಕು ಮಾತಾಯಿತು. ಅವರು ತಮ್ಮ ಯಶಸ್ಸಿನ ಗುಟ್ಟು ಬಿಚ್ಚಿಟ್ಟರು.

1. ಕವಿ ದ್ವಿಭಾಷಿ ಆಗಿರಲೇಬೇಕು. ನಮ್ಮ ನಮ್ಮ ಭಾಷೆಯನ್ನಷ್ಟೇ ನಂಬಿ ಕುಳಿತುಕೊಂಡರೆ ಉಪಯೋಗ ಇಲ್ಲ. ಎಷ್ಟೋ ವರುಷಗಳ ನಾನು ಬೆಂಗಾಲಿಯಲ್ಲಿ ಮಾತ್ರ ಬರೆಯುತ್ತಿದ್ದೆ. ನಮ್ಮ ಊರಲ್ಲಷ್ಟೇ ನನ್ನ ಕವಿತೆ ಓದುತ್ತಿದ್ದರು. ಒಂದು ಸಲ ಜ್ಞಾನೋದಯ ಆಯಿತು. ಇಂಗ್ಲಿಷಿನಲ್ಲಿ ಬರೆಯಲು ಆರಂಭಿಸಿದೆ. ಜಗತ್ತೇ ಈಗ ನನ್ನ ಕವಿತೆ ಓದುತ್ತಿದೆ.

JLF 2022: ಜೈಪುರ ಸಾಹಿತ್ಯೋತ್ಸವ ಮೂರನೇ ದಿನದ ಸ್ವಾರಸ್ಯಗಳು

2. ಎರಡು ಭಾಷೆಗಳಲ್ಲಿ ಬರೆಯುವುದು ಅಂದರೆ ಮೊದಲು ನನ್ನ ಮಾತೃಭಾಷೆಯಲ್ಲಿ ಬರೆದು, ನಂತರ ಅನುವಾದ ಮಾಡುವುದಲ್ಲ. ಎರಡೂ ಭಾಷೆಯಲ್ಲಿ ಬೇರೆ ಬೇರೆ ಕವಿತೆಗಳನ್ನು ನಾನು ಬರೆಯುತ್ತೇನೆ. ಕೆಲವು ಕವಿತೆಗೆ ಇಂಗ್ಲಿಷ್‌ ಹೊಂದಿಕೊಳ್ಳುತ್ತದೆ. ಕೆಲವು ಕವಿತೆಗೆ ನಮ್ಮ ನಮ್ಮ ಭಾಷೆಯಲ್ಲೇ ಹೆಚ್ಚು ರುಚಿಸುತ್ತದೆ. ಈ ವ್ಯತ್ಯಾಸ ನನಗೆ, ಕವಿತೆ ಬರೆಯುವಾಗಲೇ ಗೊತ್ತಾಗುತ್ತದೆ.

3. ಕವಿಗೆ ತೀರಾ ಸಂಕೋಚ ಇರಬಾರದು. ಕವಿತೆಗಳು ಇರುವುದು ಓದಲಿಕ್ಕೆ. ಅದನ್ನು ಹೆಚ್ಚು ಮಂದಿ ಓದಬೇಕು. ಅದಕ್ಕಾಗಿ ನಾವು ಆಧುನಿಕ ಮಾಧ್ಯಮಗಳಲ್ಲಿ ಕನೆಕ್ಟ್ ಆಗಿರಬೇಕು. ನಾವೆಲ್ಲರೂ ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌, ಟ್ವಿಟ್ಟರ್‌- ಎಲ್ಲದರಲ್ಲೂ ಇದ್ದೇವೆ. ಈ ಕಾಲದ ಅತ್ಯಂತ ಪ್ರಭಾವೀ ಮಾಧ್ಯವ ಇನ್‌ಸ್ಟಾಗ್ರಾಮ್‌. ಅಲ್ಲಿ ನಾನು ಇಡೀ ಕವಿತೆಯನ್ನು ಹಾಕುವುದಿಲ್ಲ. ಮೂರೋ ನಾಲ್ಕೋ ಸಾಲು ಮಾತ್ರ ಹಾಕುತ್ತೇನೆ. ಕೆಲವೊಮ್ಮೆ ಪೂರ್ತಿ ಪದ್ಯ ಹಾಕುವುದೂ ಉಂಟು. ಒಂದು ಕವಿತೆಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಓದುತ್ತಾರೆ.

Republic of Hindutva: ಜೈಪುರ ಸಾಹಿತ್ಯೋತ್ಸವದಲ್ಲೂ ಪ್ರಧಾನಿ ನರೇಂದ್ರ ಮೋದಿ ಜಪ!

4. ಸಾಹಿತ್ಯ ಉತ್ಸವಗಳು ವರುಷಕ್ಕೊಮ್ಮೆ ಬಂದು ಹೋಗುವಂಥವು. ಮಿಕ್ಕ ಅವಧಿಯಲ್ಲಿ ನಾವು ಓದುಗರ ಜತೆ ಕನೆಕ್ಟ್ ಆಗಬೇಕು. ಒಬ್ಬನೇ ಒಬ್ಬ ಓದುಗ ನನಗೋಸ್ತರ ಒಂದು ಪದ್ಯ ಓದು ಅಂದರೆ ಓದಿ ಕಳಿಸಬೇಕು. ಪದ್ಯ ಇರುವುದು ಮನರಂಜನೆಗೆ ಅಲ್ಲ, ಸಾಂತ್ವನಕ್ಕೆ. ನಾವೊಂದು ಪದ್ಯ ಓದಿ ಹೇಳಿದರೆ ಕೇಳಿಸಿಕೊಂಡವನಿಗೆ ಅದರಲ್ಲಿ ಏನೋ ಒಂದು ನೆಮ್ಮದಿ, ಸಂತೋಷ, ಸುಖ ಸಿಗಬಹುದು. ಅವನ ಬಳಿ ದುಡ್ಡಿರಬಹುದು, ಸಂತೋಷ ಇರಲಿಕ್ಕಿಲ್ಲ. ಬಳಗ ಇರಬಹುದು, ಬಾಂಧವ್ಯ ಇರಲಿಕ್ಕಿಲ್ಲ. ಮನೆ ಇರಬಹುದು, ಮಾನ್ಯತೆ ಇರಲಿಕ್ಕಿಲ್ಲ. ಅದನ್ನೆಲ್ಲ ಒಂದು ಕವಿತೆ ಕೊಡುತ್ತದೆ ಅಂತ ಕವಿ ನಂಬಬೇಕು. ಕವಿತೆ ಕವಿಗಷ್ಟೇ ಅಲ್ಲ ಓದುಗನಿಗೂ ಬಿಡುಗಡೆಯೇ.

5. ಈ ತರುಣ ತರುಣಿಯರೆಲ್ಲ ಯಾಕೆ ಕವಿತೆ ಕೇಳಲು ಬರುತ್ತಾರೆ? ಅವರಿಗೆ ಇಂಟರ್‌ನೆಟ್ಟು, ಸಿನಿಮಾ, ಯೂಟ್ಯೂಬು, ಓಟಿಟಿ- ಎಲ್ಲವೂ ಇದೆ. ಆದರೆ ಅಲ್ಲೆಲ್ಲೂ ಸಿಗದ ಏನೋ ಒಂದು ಇಲ್ಲಿ ಸಿಗುತ್ತದೆ. ಇಲ್ಲಿ ನಾವು ನಮ್ಮನ್ನು ಕಂಡುಕೊಳ್ಳುತ್ತೇವೆ. ಇದು ಕನ್ನಡಿ, ಇದು ಈ ಕಾಲ, ಈ ಕ್ಷಣ. ನಾವು ಸುಮ್ಮನೆ ಅಬ್ಬರದಲ್ಲಿ ಕಳಕೊಳ್ಳುವ ಕ್ಷಣಗಳ ಸಾರ್ಥಕತೆ ಇಲ್ಲಿ ಕಂಡರೆ ಅದಕ್ಕಿಂತ ಸಂತೋಷ ಮತ್ತೇನಿದೆ ಹೇಳಿ.

6. ಕತೆ, ಕಾದಂಬರಿ, ಆತ್ಮಕತೆ ಈಗ ಜನಪ್ರಿಯಗೊಂಡಿವೆ. ಎಲ್ಲ ಭಾಷೆಗಳ ಬರಹಗಾರರೂ ಅವನ್ನೆಲ್ಲ ಬರೆಯುತ್ತಿದ್ದಾರೆ. ಆದರೆ ಕವಿತೆ ಹಾಗಲ್ಲ. ಇಂಡಿಯಾದಲ್ಲಿ ನಾಲ್ಕೈದು ಭಾಷೆಗಳಲ್ಲಿ ಮಾತ್ರ ಕವಿಗಳಿದ್ದಾರೆ. ಯಾವ ಭಾಷೆಯಲ್ಲಿ ಕವಿಗಳಿರುತ್ತಾರೆ ಅದು ಸಮೃದ್ಧವಾದ ಆರೋಗ್ಯಕರವಾದ ಭಾಷೆ. ಹಾಗಂತ ಕವಿ ಅದೇ ಭಾಷೆಯಲ್ಲಿ ಬರೆಯಬೇಕು ಅಂತೇನಿಲ್ಲ. ಅವನು ಆ ಭಾಷೆಗೆ ಸೇರಿದವನಾಗಿದ್ದರೆ ಸಾಕು. ಇಂಗ್ಲಿಷಿನಲ್ಲೇ ಬರೆಯಬಹುದು. ಮಾರ್ಕೆಸ್‌ ಬರೆದದ್ದು ಸ್ಪಾ್ಯನಿಷಿನಲ್ಲಿ, ನಮಗೆ ಆ ಭಾಷೆಯೇ ಗೊತ್ತಿಲ್ಲ. ಅನುವಾದದಲ್ಲೇ ಓದಿದರೂ ನಮಗೆ ಆ ಭಾಷೆಯ ಶಕ್ತಿ ಏನೆಂಬುದು ಅರಿವಾಯಿತು. ಆರ್‌ಕೆ ನಾರಾಯಣ್‌ ಇಂಗ್ಲಿಷಲ್ಲೇ ಬರೆದರು. ಆದರೆ ಜಗತ್ತಿಗೆ ಸಿಕ್ಕಿದ್ದು ಕನ್ನಡದ ಮಾಲ್ಗುಡಿ.

ಇವೆಲ್ಲ ಮಾಚ್‌ರ್‍ ಮೊದಲ ವಾರದಲ್ಲಿ ನಡೆದ ಜೈಪುರ ಸಾಹಿತ್ಯೋತ್ಸವದ ಚಿತ್ರಗಳು. ಆ ಉತ್ಸವಕ್ಕಾಗಿಯೇ ಪುಸ್ತಕ ಬರೆಯುವ ಲೇಖಕರು, ಬರೆಸುವ ಏಜಂಟರು, ರೋಗ ಬಂದು ವಾಸಿಯಾದವರು, ಸಂಸಾರ ಛಿದ್ರವಾದವರು, ಸಂಕಟದಿಂದ ಪಾರಾದವರು, ಹೋರಾಡಿ ಗೆದ್ದವರು- ಹೀಗೆ ನೋವಿನಿಂದ ಗೆಲುವಿನತ್ತ ಸಾಗುವ ಕತೆಗಳ ನೂರಾರು ಪುಸ್ತಕಗಳ ನಡುವೆ ಒಂದು ದೊಡ್ಡ ಗುಂಪು ಕೇವಲ ಕವಿತೆ ಕೇಳಲೆಂದೇ ಬಂದಿರುತ್ತದೆ. ಕವಿತೆಯನ್ನೇ ಧ್ಯಾನಿಸುತ್ತದೆ. ಅಲ್ಲಿಗೆ ಬಂದ ಕವಿಗಳ ಜತೆ ಗಂಟೆಗಟ್ಟಲೆ ಮಾತಾಡುತ್ತಾ ಇರುಳು ಸರಿಯುತ್ತದೆ.

ಕವಿತೆಗಿದು ಕಾಲವಲ್ಲ ಅನ್ನುವ ಮುನ್ನ ಸುತ್ತಲೂ ಒಮ್ಮೆ ನೋಡಿಕೊಳ್ಳೋಣ.

Follow Us:
Download App:
  • android
  • ios