ಬಿಜೆಪಿ, ಕಾಂಗ್ರೆಸ್ ಕದನಕ್ಕೆ ಜೆಡಿಎಸ್ ಅಂಪೈರ್!
ಬಿಜೆಪಿಯ ಪ್ರತಾಪ್ ಸಿಂಹ, ಕಾಂಗ್ರೆಸ್ಸಿನ ವಿಜಯ ಶಂಕರ್ ನಡುವೆ ಜಿದ್ದಾಜಿದ್ದಿ | ಜೆಡಿಎಸ್ ಒಲಿದವರಿಗೆ ಗೆಲುವು ಸುಗಮ ದೋಸ್ತಿ ಪಕ್ಷಗಳ ನಡುವಣ ಭಿನ್ನಮತ ಕಾಂಗ್ರೆಸ್ಸಿಗೆ ತೊಡರುಗಾಲು | ಮೋದಿ ಅಲೆಯಿಂದ ಮತ್ತೆ ಗೆಲ್ಲಲು ಪ್ರತಾಪ್ ಯತ್ನ
ಅಂಶಿ ಪ್ರಸನ್ನಕುಮಾರ್/ವಿಘ್ನೇಶ್ ಭೂತನಕಾಡು
ಕ್ಷೇತ್ರ ಸಮೀಕ್ಷೆ: ಮೈಸೂರು ಕೊಡಗು ಲೋಕಸಭಾ ಕ್ಷೇತ್ರ
ಮೈಸೂರು/ಮಡಿಕೇರಿ[ಏ.01]: ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮೈಸೂರು ಅಂತಿಮವಾಗಿ ಕಾಂಗ್ರೆಸ್ ಪಾಲಾಗಿದ್ದರಿಂದ ಇದೀಗ ಕಾಂಗ್ರೆಸ್ ವರ್ಸಸ್ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಆದರೆ, ಜೆಡಿಎಸ್ ನಾಯಕರು ಪ್ರಚಾರದಲ್ಲಿ ಕಾಂಗ್ರೆಸ್ ಜೊತೆಗೆ ಹೆಚ್ಚು ಕಾಣಿಸಿಕೊಳ್ಳದೇ ಇರುವುದು ಈ ಕ್ಷೇತ್ರದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಕ್ಷೇತ್ರದಲ್ಲಿ ಈವರೆಗೆ ನಡೆದಿರುವ 16 ಚುನಾವಣೆಗಳ ಪೈಕಿ ೧೩ ಬಾರಿ ಕಾಂಗ್ರೆಸ್ ಜಯ ಸಾಧಿಸಿದೆ. 1998ರಿಂದ ಈಚೆಗೆ ಮೂರು ಬಾರಿ ಬಿಜೆಪಿ ಗೆದ್ದಿದೆ. ದ್ವಿಸದಸ್ಯ ಕ್ಷೇತ್ರವಾಗಿದ್ದಾಗ 1952ರಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ ಗೆದ್ದಿದ್ದನ್ನು ಹೊರತುಪಡಿಸಿದರೆ ಈವರೆಗೆ ಮೈಸೂರು ಜನತಾ ಪರಿವಾರಕ್ಕೆ ಒಲಿದಿಲ್ಲ. 1996 ಹಾಗೂ 2004ರಲ್ಲಿ ಮಾತ್ರ ಗೆಲುವಿನ ಸಮೀಪ ಬಂದಿತ್ತು. ಈ ಕ್ಷೇತ್ರದಿಂದ ಆಯ್ಕೆಯಾದವರು ಈವರೆಗೆ ಕೇಂದ್ರದಲ್ಲಿ ಮಂತ್ರಿಗಳಾಗಿಲ್ಲ. ಆದರೆ ಈ ಕ್ಷೇತ್ರ ದವರೇ ಆದ ಎಂ.ಎಸ್.ಗುರುಪಾದಸ್ವಾಮಿ ಹಾಗೂ ಎಂ. ರಾಜಶೇಖರಮೂರ್ತಿ ಅವರು ರಾಜ್ಯಸಭಾ ಸದಸ್ಯರಾಗಿದ್ದಾಗ ಮಂತ್ರಿಗಳಾಗಿದ್ದರು. ಮೈಸೂರು ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಇವೆ. ಆ ಪೈಕಿ ಬಿಜೆಪಿ-4, ಜೆಡಿಎಸ್ -3, ಕಾಂಗ್ರೆಸ್- 1ರಲ್ಲಿ ಶಾಸಕರನ್ನು ಹೊಂದಿದೆ.
ಬಿಜೆಪಿ, ಕಾಂಗ್ರೆಸ್ ನಡುವೆಯೇ ಜಿದ್ದಾಜಿದ್ದಿ
ಈ ಹಿಂದೆ ಎರಡು ಬಾರಿ ಬಿಜೆಪಿಯಿಂದ ಮೈಸೂರು ಕ್ಷೇತ್ರ ಪ್ರತಿನಿಧಿಸಿದ್ದ ಸಿ.ಎಚ್. ವಿಜಯಶಂಕರ್ ಈ ಸಲ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದಾರೆ. ವಿಜಯಶಂಕರ್‌ರನ್ನು ಕಣಕ್ಕೆ ಇಳಿಸುವ ಸಲುವಾಗಿಯೇ ಮಾಜಿ ಮುಖ್ಯಮಂತ್ರಿ, ಹಾಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಪಟ್ಟು ಹಿಡಿದು ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಪಡೆದುಕೊಂಡಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಆಯ್ಕೆಯಾಗಿದ್ದ ಪ್ರತಾಪ್ ಸಿಂಹ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಕಣದಲ್ಲಿ ೨೨ ಅಭ್ಯರ್ಥಿಗಳಿದ್ದರೂ, ಪ್ರತಾಪ್ ಸಿಂಹ ಹಾಗೂ ವಿಜಯ ಶಂಕರ್ ನಡುವೆ ಮಾತ್ರ ಜಿದ್ದಾಜಿದ್ದಿ ನಡೆಯುವುದು ಬಹುತೇಕ ನಿಶ್ಚಿತ ಎನ್ನುವಂತಾಗಿದೆ.
ಮೋದಿ ಅಲೆ ವರ್ಸಸ್ ದೋಸ್ತಿ ಒಗ್ಗಟ್ಟು
5 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ‌್ಯಗಳು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲೆ, ಕೊಡಗು ಜಿಲ್ಲೆಯಲ್ಲಿ ಇಬ್ಬರು ಶಾಸಕರೊಂದಿಗೆ ಬಿಜೆಪಿ ಅಲ್ಲಿ ಹೊಂದಿರುವ ಭದ್ರನೆಲೆ, ಮೈಸೂರು ನಗರದ ಕೃಷ್ಣರಾಜ, ಚಾಮರಾಜ ಕ್ಷೇತ್ರದಲ್ಲಿ ಪಕ್ಷದ ಶಾಸಕರಿರುವುದು ಸಂಸದ ಪ್ರತಾಪ್ ಸಿಂಹ ಅವರಿಗೆ ವರವಾಗಬಹುದು. ಕಾಂಗ್ರೆಸ್‌ನ ವಿಜಯಶಂಕರ್ ಅವರಿಗೆ ದೋಸ್ತಿಯ ಒಗ್ಗಟ್ಟು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಮಬಲ, ಈಗಾಗಲೇ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ, ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿರುವುದರಿಂದ ಎಲ್ಲರ ಪರಿಚಯ, ಈ ಹಿಂದೆ ಬಿಜೆಪಿಯಲ್ಲಿ ಇದ್ದಿದ್ದರಿಂದ ತಳಮಟ್ಟದಲ್ಲೂ ಕಾರ್ಯಕರ್ತರ ಸಂಪರ್ಕ ಇರುವುದು ಕೈಹಿಡಿಯುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮೋದಿ ಅಲೆ ಬಿಜೆಪಿಗೆ ಪ್ರಮುಖ ಅಸ್ತ್ರವಾಗಿದ್ದರೆ, ದೋಸ್ತಿ ಒಗ್ಗಟ್ಟಿನೊಂದಿಗೆ ಗೆಲ್ಲಲು ಕಾಂಗ್ರೆಸ್ ಯತ್ನಿಸುತ್ತಿದೆ.
ಜೆಡಿಎಸ್ ಬೆಂಬಲ ಯಾರಿಗೆ?
ಆದರೆ ಕಾಂಗ್ರೆಸ್- ಜೆಡಿಎಸ್ ದೋಸ್ತಿಯಲ್ಲಿ ಸ್ಥಳೀಯ ನಾಯಕರ ನಡುವೆ ಭಿನ್ನಮತ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಈವರೆಗೆ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಆದರೆ ಮತ್ತೊಬ್ಬ ಸಚಿವ ಸಾ.ರಾ. ಮಹೇಶ್ ನಾಮಪತ್ರ ಸಲ್ಲಿಕೆ ವೇಳೆ, ಸಿದ್ದರಾಮಯ್ಯ ನಿವಾಸದ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ನೋಟ್ ಬ್ಯಾನ್, ಜಿಎಸ್‌ಟಿಯಿಂದ ಕೇಂದ ಸರ್ಕಾರದ ಬಗ್ಗೆ ಇರುವ ವಿರೋಧಿ ಅಲೆ, ರಾಜ್ಯ ಸರ್ಕಾರದ ಸಾಲಮನ್ನಾ ಮತ್ತಿತರ ಅಂಶಗಳು ಕಾಂಗ್ರೆಸ್‌ಗೆ ನೆರವಾಗಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹೊತ್ತಿದೆ.
ಒಟ್ಟಾರೆ ಕಾಂಗ್ರೆಸ್- ಬಿಜೆಪಿ ಕದನದಲ್ಲಿ ಅಂಪೈರ್ ಸ್ಥಾನದಲ್ಲಿರುವ ಜೆಡಿಎಸ್ ಯಾರನ್ನು ಬೆಂಬಲಿಸುತ್ತವೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗಿದೆ. ಏಕೆಂದರೆ ಆ ಪಕ್ಷಕ್ಕೆ ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ಕ್ಷೇತ್ರಗಳಲ್ಲಿ ಭದ್ರನೆಲೆ ಇದೆ.
ಬಿಜೆಪಿಗೆ ಬಲ ತುಂಬಿದ್ದ ಒಡೆಯರ್ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜನತಾ ಪರಿವಾರ ಸಾಂಪ್ರದಾಯಿಕ ಎದುರಾಳಿಗಳು. ಲೋಕಸಭಾ ಚುನಾವಣೆಯ ವಿಚಾರವಾಗಿ ಹೇಳುವುದಾದರೆ 1989ರವರೆಗೂ ಇದೇ ಪರಿಸ್ಥಿತಿ ಇತ್ತು. ಆದರೆ 1991ರ ಚುನಾವಣೆಯಿಂದ ಬಿಜೆಪಿ ಬಲ ವೃದ್ಧಿಯಾಯಿತು. ಇದಕ್ಕೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಬಿಜೆಪಿ ಸೇರಿ, ಅಭ್ಯರ್ಥಿಯಾಗಿದ್ದು ಕಾರಣ. ಆದರೆ ಆ ಚುನಾವಣೆಯಲ್ಲಿ ಒಡೆಯರ್ ಸೋತರು. 1996ರಲ್ಲಿ ಒಡೆಯರ್ ಮತ್ತೆ ಕಾಂಗ್ರೆಸ್‌ಗೆ ಮರಳಿ ಗೆದ್ದರು. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಆದರೆ 1998ರಲ್ಲಿ ಬಿಜೆಪಿಯ ಅದೃಷ್ಟ ಖುಲಾಯಿಸಿತು. ಅನಾರೋಗ್ಯ ನಿಮಿತ್ತ ಒಡೆಯರ್ ಕಣದಿಂದ ಹಿಂದೆ ಸರಿದಿದ್ದರು. ಕಾಂಗ್ರೆಸ್ ಪಕ್ಷವು ಮಾಜಿ ಶಾಸಕ ಎಸ್. ಚಿಕ್ಕಮಾದು ಅವರನ್ನು ಕಣಕ್ಕಿಳಿಸಿತ್ತು. ಅಟಲ್ ಬಿಹಾರಿ ವಾಜಪೇಯಿ ಅಲೆ ಇತ್ತು. ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್ ಬಿಜೆಪಿ ಅಭ್ಯರ್ಥಿಯಾಗಿದ್ದರು. ಹೀಗಾಗಿ ವಿಜಯಶಂಕರ್ ಗೆದ್ದು, ಮೊದಲ ಬಾರಿ ಕಮಲ ಅರಳಿಸಿದರು. 1999ರಲ್ಲಿ ವಿಜಯಶಂಕರ್ ಕಾಂಗ್ರೆಸ್‌ನ ಒಡೆಯರ್ ಎದುರು ಸೋತರು. 2004ರಲ್ಲಿ ಮತ್ತೆ ವಿಜಯಶಂಕರ್ ಎರಡನೇ ಬಾರಿ ಗೆದ್ದರು. ಜೆಡಿಎಸ್‌ನ ಎ.ಎಸ್.ಗುರುಸ್ವಾಮಿ ದ್ವಿತೀಯ ಸ್ಥಾನ ಪಡೆದಿದ್ದರು. ಒಡೆಯರ್ ಮೂರನೇ ಸ್ಥಾನಕ್ಕೆ ಕುಸಿದಿದ್ದರು. 2009ರಲ್ಲಿ ವಿಜಯಶಂಕರ್ ನಾಲ್ಕನೇ ಚುನಾವಣೆ ಎದುರಿಸಿ ಕಾಂಗ್ರೆಸ್‌ನ ಎಚ್.ವಿಶ್ವನಾಥ್ ಎದುರು ಸೋತರು.
2014ರ ಲೋಕಸಭಾ ಚುನಾವಣೆಯಲ್ಲಿ ವಿಜಯಶಂಕರ್ ಅವರಿಗೆ ಟಿಕೆಟ್ ಸಿಗಲಿಲ್ಲ. ಅವರಿಗೆ ಹಾಸನದಲ್ಲಿ ಟಿಕೆಟ್ ನೀಡಲಾಗಿತ್ತು. ಮೈಸೂರಿನಲ್ಲಿ ಅಂಕಣಕಾರ ಪ್ರತಾಪ್‌ಸಿಂಹ ಮೊದಲ ಬಾರಿ ಕಣಕ್ಕಿಳಿದು, ಕಾಂಗ್ರೆಸ್‌ನ ಎಚ್.ವಿಶ್ವನಾಥ್ ಅವರನ್ನು ಸೋಲಿಸಿದರು. ಮೋದಿ ಅಲೆಯ ನಡುವೆಯೂ ಅವರನ್ನು ಗೆಲ್ಲಿಸಿದ್ದು ಜೆಡಿಎಸ್‌ನ ಪರೋಕ್ಷ ತಂತ್ರಗಾರಿಕೆ. ಆಗ ದೇವೇಗೌಡರ ಕುಟುಂಬದ ಕಡುವಿರೋಧಿಯಾಗಿದ್ದ ಎಚ್.ವಿಶ್ವನಾಥ್ ಅವರ ಮೇಲಿನ ಕೋಪಕ್ಕೆ ಜೆಡಿಎಸ್‌ನ ಹಲವರು ತಮ್ಮ ಅಭ್ಯರ್ಥಿ ನ್ಯಾ.ಚಂದ್ರಶೇಖರಯ್ಯ ಅವರ ಬದಲು ಪ್ರತಾಪ್‌ಸಿಂಹ ಅವರನ್ನು ಬೆಂಬಲಿಸಿದ್ದರು.
ಕಳೆದ 28 ವರ್ಷಗಳಿಂದಲೂ ಕ್ಷೇತ್ರದಲ್ಲಿ ತ್ರಿಕೋನ ಹೋರಾಟ ನಡೆಯುತ್ತಿತ್ತು. ಇದರ ಲಾಭ ಪಡೆದು, ಕಾಂಗ್ರೆಸ್ ಇಲ್ಲವೇ ಬಿಜೆಪಿ ಜಯ ಗಳಿಸುತ್ತಿದ್ದವು. ಆದರೆ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹೋರಾಟ ಇದೆ. ಮೈತ್ರಿ ಧರ್ಮ ಪಾಲಿಸಬೇಕಾದ ಅನಿವಾರ್ಯತೆ, ಮಂಡ್ಯ, ಹಾಸನದಲ್ಲಿ ಕೊಡುಕೊಳ್ಳುವಿಕೆ ನಡೆಯಬೇಕಿರುವುದರಿಂದ ಈ ಬಾರಿ ಜೆಡಿಎಸ್ ಕಳೆದ ಬಾರಿಯಂತೆ ಪ್ರತಾಪ್‌ಸಿಂಹ ಪರ ನಿಲ್ಲುತ್ತದೆಯೇ ಎಂಬ ಕುತೂಹಲ ಕಂಡು ಬಂದಿದೆ.
2 ಜಿಲ್ಲೆಗಳಲ್ಲಿರುವ ಕ್ಷೇತ್ರ ಮೈಸೂರು ಕ್ಷೇತ್ರ ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲೆರಡು ಚುನಾವಣೆಗಳಲ್ಲಿ ಚಾಮರಾಜನಗರ ಒಳಗೊಂಡಂತೆ ದ್ವಿಸದಸ್ಯ ಕ್ಷೇತ್ರವಾಗಿತ್ತು. ೧೯೬೨ರಲ್ಲಿ ಚಾಮರಾಜನಗರ ಪ್ರತ್ಯೇಕ ಮೀಸಲು ಕ್ಷೇತ್ರವಾಯಿತು. ಅಂದಿನಿಂದ ಮೈಸೂರು ಸಾಮಾನ್ಯ ಕ್ಷೇತ್ರವಾಗಿದೆ. ೨೦೦೪ರವರೆಗೆ ಮೈಸೂರು ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು. ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಮರುವಿಂಗಡಣಾ ಆಯೋಗದ ಶಿಫಾರಸಿನಂತೆ ೨೦೦೯ ರಿಂದ ಮೈಸೂರಿನ ಕೃಷ್ಣರಾಜ, ಚಾಮರಾಜ, ನರಸಿಂಹ ರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾ ಪಟ್ಟಣ, ಕೊಡಗಿನ ಮಡಿಕೇರಿ ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ
2014ರ ಫಲಿತಾಂಶ
ಪ್ರತಾಪ್ ಸಿಂಹ | ಬಿಜೆಪಿ 5,03,908
ಎಚ್. ವಿಶ್ವನಾಥ್ | ಕಾಂಗ್ರೆಸ್ 47,23,000
ಚಂದ್ರಶೇಖರಯ್ಯ | ಜೆಡಿಎಸ್ 1,38,587
ಸಿ. ಮೋಹನ ಕುಮಾರ್ | ಬಿಎಸ್ಪಿ 13,637
ಅಂತರ 31,608
ಕಣದಲ್ಲಿರುವ ಅಭ್ಯರ್ಥಿಗಳು
ಪ್ರತಾಪ್ ಸಿಂಹ (ಬಿಜೆಪಿ), ಸಿ.ಎಚ್. ವಿಜಯಶಂಕರ್ (ಕಾಂಗ್ರೆಸ್), ಡಾ.ಬಿ. ಚಂದ್ರ (ಬಿಎಸ್ಪಿ), ಅಯೂಬ್ ಖಾನ್ (ಐಎನ್‌ಸಿಪಿ), ವಿ. ಆಶಾರಾಣಿ (ಉತ್ತಮ ಪ್ರಜಾಕೀಯ ಪಾರ್ಟಿ), ಪಿ.ಕೆ. ಬಿದ್ದಪ್ಪ (ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ), ಪಿ.ಎಸ್. ಸಂಧ್ಯಾ (ಎಸ್ ಯುಸಿಐಸಿ), ಎಂ. ಆನಂದ್‌ಕುಮಾರ್, ಎನ್.ಕೆ. ಕಾವೇರಿಯಮ್ಮ, ಎನ್. ನಾಗೇಶ್, ಬಿ.ಡಿ. ನಿಂಗಪ್ಪ, ಜಿ.ಎಂ. ಮಹದೇವ, ಆರ್. ಮಹೇಶ್, ರವಿ, ರಾಜು, ಜಿ. ಲೋಕೇಶ್‌ಕುಮಾರ್, ಆಲಗೂಡು ಲಿಂಗರಾಜು, ವೆಂಕಟೇಶ್ ಡಿ. ನಾಯಕ, ಶ್ರೀನಿವಾಸಯ್ಯ, ಎಂ.ಜೆ. ಸುರೇಶ್‌ಗೌಡ, ಎಸ್. ಅಲಿ ಶಾನ್, ಕೆ.ಎಸ್. ಸೋಮಸುಂದರ (ಎಲ್ಲರೂ ಪಕ್ಷೇತರರು)
ಮತದಾರರು:18,59,011| ಪುರುಷ:9,28,930| ಮಹಿಳೆ: 9,30,056 | ಇತರೆ:25
ದಕ್ಷಿಣ ಕನ್ನಡ ಕ್ಷೇತ್ರ ಸಮೀಕ್ಷೆ: ದ. ಕನ್ನಡದಲ್ಲಿ ಬಿಜೆಪಿ ಪಂಟ V/S ಕಾಂಗ್ರೆಸ್ ಹೊಸ ಬಂಟ!
ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...