ತನ್ನ  ಡಿಪ್ಲೋಮಾ ಸರ್ಟಿಫಿಕೇಟ್ ಪಡೆಯಲು ಬಾಕಿ ಉಳಿದರುವ ಫೀ ಕಟ್ಟಲು ನರೇಗಾದಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾದ ಯುವತಿಯ ಬೆನ್ನಲ್ಲೇ ಮೊಮ್ಮಗಳ ಶಿಕ್ಷಣಕ್ಕಾಗಿ ಇದ್ದ ಮನೆಯನ್ನು ಮಾರಿ, ಆಟೋದಲ್ಲಿ ಬದುಕುತ್ತಿರುವ ಅಜ್ಜನ ಕತೆ ನಿಮ್ಮ ಕಣ್ಣಂಚಿನಲ್ಲಿ ನೀರು ತರಿಸುತ್ತದೆ!

ಮುಂಬಯಿ ಮಹಾನಗರಿಯ ಈ ಅಜ್ಜನ ಕತೆಯನ್ನು ಫೇಸ್‌ಬುಕ್‌ನಲ್ಲಿ ಹ್ಯೂಮನ್ಸ್ ಆಫ್ ಬಾಂಬೆ ಎಂಬ ಪೇಜ್ ಷೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬಿಟೆಕ್, ಡಿಪ್ಲೋಮಾ ಬಾಕಿ ಶುಲ್ಕ ಪಾವತಿಗೆ ನರೇಗಾದಲ್ಲಿ ಬೆವರು ಹರಿಸುತ್ತಿರುವ ಸೋದರಿಯರು

ತನ್ನ ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಿ, ಆಟೋದಲ್ಲಿ ರಾತ್ರಿ ಕಳೆಯತ್ತಿರುವ ಅಜ್ಜನ ಹೆಸರು ದೇಸರಾಜ್. ಇಬ್ಬರು ಗಂಡುಮಕ್ಕಳನ್ನು ಕಳೆದುಕೊಂಡಿರುವ ಅವರು,  ತಮ್ಮ ಮೊಮ್ಮಕ್ಕಳು ಹಾಗೂ ಸೊಸೆಯಂದಿರ ಜೀವನವನ್ನು ಕಾಪಾಡುವುದು ತಮ್ಮ ಜವಾಬ್ದಾರಿ ಎಂದು ಅರಿತು ಇಳಿವಯಸ್ಸಿನಲ್ಲೂ ದಿನಾ ರಾತ್ರಿ ಆಟೋ ಓಡಿಸಿ ದುಡಿಯುತ್ತಿದ್ದಾರೆ.

ಅವರ ಕತೆಯನ್ನು ದೇಸರಾಜ್ ಬಾಯಲ್ಲೇ ಕೇಳಿ....
ಆರು ವರ್ಷಗಳ ಹಿಂದೆ ಹಿರಿಯ ಮಗ ಕೆಲಸಕ್ಕೆಂದು ಹೊರಗೆ ಹೋದವನು ವಾರವಾದರೂ ಮನೆಗೆ ಬರಲೇ ಇಲ್ಲ. ವಾರದ ನಂತರ ಮಗನ ಹೆಣ ಮಾತ್ರ ಸಿಕ್ಕಿತು. ಆತ 40ನೇ ವಯಸ್ಸಿಗೇ ಶವವಾದ. ಅವನ ಜೊತೆ ನಾನು ಸತ್ತಿದ್ದರೆ ಚೆನ್ನಾರ್ಗಿತಿತ್ತು ಎನ್ನಿಸಿತು. ಆದರೆ, ಮರು ಕ್ಷಣವೇ ಜವಾಬ್ದಾರಿಗಳು ನೆನಪಾದವು. ಆತನ ಬಗ್ಗೆ ಕಣ್ಣೀರು ಹಾಕುವಷ್ಟು ಸಮಯವಿರಲಿಲ್ಲ. ಮರು ದಿನವೇ ನಾನು ಆಟೋ ತೆಗೆದುಕೊಂಡು ರಸ್ತೆಗಿಳಿದೆ.

ಎರಡು ವರ್ಷಗಳ ನಂತರ ಮತ್ತೊಬ್ಬ ಕಿರಿಯ ಮಗ ಆತ್ಮಹತ್ಯೆ ಮಾಡಿಕೊಂಡ. ಇಬ್ಬರು ಸೊಸೆಯಂದಿರು ಹಾಗೂ ನಾಲ್ಕು ಮೊಮ್ಮಕ್ಕಳನ್ನು ಸಾಕುವ ಜವಾಬ್ದಾರಿ ನನ್ನ ಮೇಲಿತ್ತು.

ಮೊಮ್ಮಗಳು ಶೇ.80 ಮಾರ್ಕ್ಸು ತೆಗೆದಳು
9ನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನ ಮೊಮ್ಮಗಳು ನನಗೆ ಕೇಳಿದಳು, “ಕಷ್ಟವಾದರೆ ನಾನು ಶಾಲೆ ಬಿಟ್ಟು ಬಿಡುತ್ತೇನೆ’’ ಎಂದು. ನಾನು ಆಗ, “ಮಗು ನೀನು ಎಲ್ಲಿಯವರೆಗೆ ಶಾಲೆ ಕಲಿಯಬೇಕು ಎನ್ನುತ್ತಿವೆಯೋ ಅಲ್ಲಿವರೆಗೆ ಕಲಿಸುತ್ತೇನೆ’’ ಎಂದು ಭರವಸೆ ನೀಡಿದೆ.

ಕುಟುಂಬದ ನಿರ್ವಹಣೆಗೆ ಆಟೋ ಓಡಿಸುವುದು ಅನಿವಾರ್ಯವಾಗಿತ್ತು. ಶಿಕ್ಷಣ ಹಾಗೂ ಮನೆ ನಿರ್ವಹಣೆಗೆ ಹಣ ಹೆಚ್ಚು ಬೇಕಾಗುತ್ತಿತ್ತು. ಓವರ್ ಟೈಮ್ ಆಟೋ ಓಡಿಸಲಾರಂಭಿಸಿದೆ. ಮಧ್ಯೆ ರಾತ್ರಿವರೆಗೂ ಓಡಿಸುತ್ತಿದ್ದೆ. ಆಗ ತಿಂಗಳಿಗೆ 10 ಸಾವಿರ ರೂಪಾಯಿ ಸಿಗುತ್ತಿತ್ತು. ಇದರಲ್ಲಿ ಮೊಮ್ಮಕ್ಕಳ ಶಿಕ್ಷಣಕ್ಕೆ ಆರು ಸಾವಿರ ವೆಚ್ಚವಾದರೆ, ಉಳಿದ ನಾಲ್ಕು ಸಾವಿರದಲ್ಲಿ ಜೀವನ ನಿರ್ವಹಣೆ ಮಾಡಬೇಕಿತ್ತು. ಬಹಳಷ್ಟು ವೇಳೆ ನಮ್ಮಲ್ಲಿ ತಿನ್ನಲ್ಲೂ ಏನೂ ಇರ್ತಿರಲಿಲ್ಲ.

ಫೈನಲ್ ಇಯರ್ ಡಿಗ್ರಿಯಲ್ಲಿದ್ದಾಗಲೇ 30 ಲಕ್ಷ ರೂಪಾಯಿ ವೇತನದ ನೌಕರಿ

ಕ್ಲಾಸ್ 12ನೇ ಬೋರ್ಡ್ ಎಕ್ಸಾಮ್‌ನಲ್ಲಿ ಅವಳು ಯಾವಾಗ ಶೇ.80ರಷ್ಟು ಮಾರ್ಕ್ಸು ತಗೊಂಡ್ಲೋ ಆಗ ನಾನ ಕಷ್ಟ ಪಟ್ಟಿದ್ದು ಸಾರ್ಥಕವಾಯಿತು ಎನಿಸಿತು. ಎಷ್ಟು ಸಂತೋಷವಾಯಿತು ಎಂದರೆ, ಆ ದಿನಾ ನಾನು ಪೂರ್ತಿ ಆಟೋದಲ್ಲಿ ಪ್ರಯಾಣಿಸಿದವರಿಗೆ ದುಡ್ಡೇ ತೆಗೆದುಕೊಳ್ಳಲಿಲ್ಲ. ಉಚಿತವಾಗಿ ಓಡಿಸಿ ಸಂಭ್ರಮಪಟ್ಟೆ..

ಅವಳ ಕನಸು ಈಡೇರಿಸಲು ಮನೆ ಮಾರಿದರು...
ಬಿಎಡ್ ಶಿಕ್ಷಣಕ್ಕಾಗಿ ಮೊಮ್ಮಗಳು ದಿಲ್ಲಿಗೆ ಹೋಗಬೇಕು ಎಂದಾಗ ನನಗೆ ಏನು ಹೇಳಬೇಕು ಗೊತ್ತಾಗಲಿಲ್ಲ. ಯಾಕೆಂದರೆ ಅದು ನನ್ನ ಸಾಮರ್ಥ್ಯ ಮೀರಿದ್ದಾಗಿತ್ತು.  ಆದರೆ, ಅವಳ ಕನಸು ಭಗ್ನಗೊಳಿಸಲು ನಾನು ಸಿದ್ಧನಿರಲಿಲ್ಲ. ಅವಳ ಕಾಲೇಜು ಶಿಕ್ಷಣಕ್ಕಾಗಿ ನಾನು ಮನೆಯನ್ನೇ ಮಾರಿದೆ.

ಹೆಂಡತಿ ಮತ್ತು ಸೊಸೆಯಂದಿರು ಹಾಗೂ ಉಳಿದ ಮೊಮ್ಮಕ್ಕಳನ್ನು ಹಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಿದೆ. ನಾನು ಇಲ್ಲಿ ಮುಂಬೈ ಮಹಾನಗರಿಯಲ್ಲಿ ದಿನಾ ರಾತ್ರಿ ಆಟೋ ಓಡಿಸಲಾರಂಭಿಸಿದೆ.

ಅವಳು ಶಿಕ್ಷಕಿಯಾಗುವುದನ್ನು ನಾನು ನೋಡಬೇಕು...
ಈಗ ಒಂದು ವರ್ಷವಾಯಿತು ಜೀವನವೇನೂ ತೀರಾ ನಿಕೃಷ್ಟವಾಗಿಲ್ಲ. ಆಟೋದಲ್ಲಿ ತಿನ್ನುತ್ತೇನೆ, ಆಟೋದಲ್ಲಿ ಮಲಗುತ್ತೇನೆ. ಹಗಲಿಡಿ ಆಟೋ ಓಡಿಸುತ್ತೇನೆ. ಮೊಮ್ಮಗಳು ಮೊನ್ನೆ ಕಾಲ್ ಮಾಡಿದಾಗ ತಾನು ಕ್ಲಾಸ್‌ನಲ್ಲೇ ಮುಂದಿರುವುದಾಗಿ ಹೇಳಿದಳು. ಆಗ ನನ್ನ ಕಷ್ಟವೆಲ್ಲವೂ ಗಾಳಿಗೆ ಹಾದಿ ಹೋದ ಅನುಭವವಾಯಿತು. ನಾನು ಅವಳು ಶಿಕ್ಷಕಿಯಾಗುವುದನ್ನು ನೋಡಲು ಕಾಯುತ್ತಿದ್ದೇನೆ. ನಾನವಳನ್ನು ಅಪ್ಪಿಕೊಂಡು, ನೀನು ನನಗೆ  ಹೆಮ್ಮೆ ಬರುವಂತೆ ಮಾಡಿದೆ ಎಂದು ಹೇಳುವ ದಿನಕ್ಕೆ ಕಾಯುತ್ತಿದ್ದೇನೆ. ಆ, ದಿನದಂದು ಮತ್ತೆ ಉಚಿತವಾಗಿ ನಾನು ಆಟೋ ಓಡಿಸುತ್ತೇನೆ, ಇದು ಪ್ರಾಮೀಸ್ ಎಂದರು ದೇಸರಾಜ್ ಅವರು.

ದೇಸರಾಜ್ ಕತೆ ಕೇಳಿ ಕಣ್ಣೀರಿಟ್ಟ ನೆಟ್ಟಿಗರು...
ಹ್ಯೂಮನ್ಸ್ ಆಫ್ ಬಾಂಬೆ ಪೇಜ್‌ನಲ್ಲಿ ದೇಸರಾಜ್ ಅವರ ಕತೆ ಓದಿ ಹಲವರು ಕಂಬನಿ ಮಿಡಿದಿದ್ದಾರೆ. ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕೈಲಾದ ಮಟ್ಟಿಗೆ ಧನಸಹಾಯ ಮಾಡಲು ಮುಂದಾಗಿದ್ದಾರೆ.

ಫೇಸ್‌ಬುಕ್ ಬಳಕೆದಾರ ಗುಂಜನ್ ರಟ್ಟಿ ಎಂಬವವರು ದೇಸರಾಜ್ ನಿಧಿ ಸಂಗ್ರಹಿಸಲು ಆರಂಭಿಸಿದ್ದಾರೆ. ಈಗಾಗಲೇ 276 ದೇಣಿಗೆದಾರರಿಂದ 5.3 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಕಾಂಗ್ರೆಸ್‌ನ ಅರ್ಚನಾ ದಾಲ್ಮಿಯಾ ಅವರು ದೇಸರಾಜ್ ಕತೆಯನ್ನು ಟ್ವೀಟ್ ಮಾಡಿದ್ದಾರೆ. ಇದನ್ನು ಕಾಂಗ್ರೆಸ್‌ನ ಮತ್ತೊಬ್ಬ ನಾಯಕ ಮಿಲಿಂದ್ ದೆವೂರಾ ರಿಟ್ವೀಟ್ ಮಾಡಿದ್ದಾರೆ.  ಅರ್ಚನಾ ದಾಲ್ಮಿಯಾ ಮಾಡಿರುವ ಟ್ವೀಟ್‌ನಲ್ಲಿ ದೇಸರಾಜ್ ಅವರ ಫೋನ್ ನಂಬರ್ ಕೂಡ ಇದೆ. ಆಸಕ್ತರು ಸಹಾಯಮಾಡಬಹುದು.

ಮೊಮ್ಮಗಳ ಶಿಕ್ಷಣಕ್ಕೆ ಸರ್ವಸ್ವವನ್ನು ತ್ಯಾಗ ಮಾಡಿದ ದೇಸರಾಜ್ ಕತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಅಕ್ಕ-ತಂಗಿ ಎಲ್ಲರಂತಲ್ಲ, ಗಣಿತ ಎಂದರೆ ಇವರಿಗೆ ಲೆಕ್ಕವೇ ಅಲ್ಲ