ವೇತನ ಕೊಡಿ ಇಲ್ಲ, ದಿನಸಿ ಸಾಮಗ್ರಿ ಕೊಡಿ: ಅತಿಥಿ ಉಪನ್ಯಾಸಕರ ಗೋಳು ಕೇಳೋರೇ ಇಲ್ಲ..!

ಕೆಲಸ ಹೆಚ್ಚಾದರೂ ಸರ್ಕಾರ ಗಮನ ಹರಿಸುತ್ತಿಲ್ಲ, ಉದ್ಯೋಗ ಭದ್ರತೆ ಇಲ್ಲ, 3 ತಿಂಗಳೋ, 6 ತಿಂಗ​ಳಿಗೋ ಕೊಡ್ತಾರೆ ಸಂಬಳ, 'ವೇತನ ಕೊಡಿ ಇಲ್ಲ, ದಿನಸಿ ಸಾಮಗ್ರಿ ಕೊಡಿ’ ಎಂದ ಅಂಗ​ಲಾಚಿ ಬೇಡಿ​ಕೊ​ಳ್ಳುವ ದುಸ್ಥಿತಿ ತಲು​ಪಿ​ರುವ ಅತಿ​ಥಿ ಉಪ​ನ್ಯಾ​ಸ​ಕ​ರು. 

Guest Lecturers Faces Problems For Not Get Salary in Karnataka grg

ಗೋಪಾಲ್‌ ಯಡಗೆರೆ

ಶಿವಮೊಗ್ಗ(ಆ.05):  ಕಾಯಂ ಉಪನ್ಯಾಸಕರಂತೆ ಕಾರ್ಯಭಾರವಿದ್ದರೂ ಇವರಿಗೆ ಸಿಗುತ್ತಿರುವುದು ಕನಿಷ್ಠ ವೇತನ. ಅದೂ 3 ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ! ಸರ್ಕಾರ ಇವರನ್ನು ಅಸಡ್ಡೆ ಮನೋಭಾವದಿಂದ ನೋಡುತ್ತಿರುವ ಪರಿಣಾಮ ‘ವೇತನ ಕೊಡಿ ಇಲ್ಲ, ದಿನಸಿ ಸಾಮಗ್ರಿ ಕೊಡಿ’ ಎನ್ನುವ ಮಟ್ಟಕ್ಕೆ ಬಂದು ನಿಂತಿದ್ದಾರೆ ಅತಿಥಿ ಉಪನ್ಯಾಸಕರು!!

ಈ ಅತಿಥಿ ಉಪನ್ಯಾಸಕರಿ​ಗೆ ಕಳೆದ 3 ತಿಂಗಳಿಂದ ಸಂಬಳವೇ ಆಗಿಲ್ಲ. ಹಾಗೆಂದು ಕೆಲಸ ನಿಲ್ಲಿಸುವಂತಿಲ್ಲ. ನಿತ್ಯ ಹತ್ತಾರು ಕಿ.ಮೀ. ದೂರದ ಊರುಗಳಿಗೆ ಪ್ರಯಾಣ ಮಾಡಿ ಕಾಲೇಜುಗಳಲ್ಲಿ ಬೆಳಗಿನಿಂದ ಸಂಜೆಯವರೆಗೆ ಉಪನ್ಯಾಸ ವೃತ್ತಿ ಮಾಡಲೇಬೇಕು.

Ramanagara: ಅತಿಥಿ ಉಪ​ನ್ಯಾ​ಸ​ಕ​ರ ವೇತ​ನ​ಕ್ಕೂ ಲಂಚದ ಬೇಡಿಕೆ!

11 ಸಾವಿ​ರಕ್ಕೂ ಅಧಿಕ ಮಂದಿ:

ಹತ್ತಾರು ವರ್ಷಗಳಿಂದ ಪಾಠ ಮಾಡಿ ಜೀವನ ಸಾಗಿಸುತ್ತಿರುವ ರಾಜ್ಯದ 426 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಸಕಾಲಕ್ಕೆ ವೇತನ ಸಿಗುತ್ತಿಲ್ಲ. ಕೆಲಸಕ್ಕೆ ತಕ್ಕ ವೇತನ ಸಿಗದೇ ಪರದಾಡುತ್ತಿರುವ ಇವರಿಗೆ ಕೊಡುವ ಕನಿಷ್ಠ ಸಂಬಳವನ್ನು ಕೂಡ ಸರ್ಕಾರ ಸಕಾಲಕ್ಕೆ ನೀಡದೇ ಮತ್ತಷ್ಟುಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಮೂರ್ನಾಲ್ಕು ತಿಂಗಳಿಂದ ವೇತನ ಸಿಗದೇ ಕಂಗಲಾಗಿರುವ ಅತಿಥಿ ಉಪನ್ಯಾಸಕರು ವೇತನ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಂಬಳ ಸಿಗುವವರೆಗೆ ನನಗೆ ಅಗತ್ಯವಿರುವ ದಿನಸಿ ಕೊಡಿ ಎಂದು ಪ್ರಾಂಶುಪಾಲರಿಗೆ ಪತ್ರ ಬರೆದಿರುವುದು ಇವರ ದುಸ್ಥಿತಿ ಬಿಚ್ಚಿಟ್ಟಿದೆ.

ಪ್ರತಿ ವರ್ಷವೂ ಆತಂಕ:

ವರ್ಷದಲ್ಲಿ 10 ತಿಂಗಳ ಕೆಲಸವಾದರೂ ಇವರಿಗೆ ವೇತನ ಸಿಗುವುದು ಮಾತ್ರ 8 ತಿಂಗಳು ಮಾತ್ರ. ವರ್ಷದಲ್ಲಿ ಮೂರ್ನಾಲ್ಕು ತಿಂಗಳು ವೇತನ ಇಲ್ಲದೇ ಕಾಲ ಕಳೆಯಬೇಕು. ಹಲವು ವರ್ಷ ಸೇವೆ ಸಲ್ಲಿದರೂ ಇನ್ನೂ ಸೇವಾಭದ್ರತೆ ಇಲ್ಲ. ಪ್ರತಿವರ್ಷ ಹೊಸದಾಗಿ ನೇಮಕಾತಿ ಆಗಬೇಕು. ಹೀಗಾಗಿ ಪ್ರತಿ ವರ್ಷದ ಕೊನೆಯಲ್ಲಿ ಆತಂಕದಲ್ಲಿಯೇ ಇರುತ್ತಾರೆ. ಮುಂದೇನು ಎಂಬ ಭಯ ಕಾಡುತ್ತಲೇ ಇರುತ್ತದೆ. 10 ತಿಂಗಳು ಕೆಲಸ ಮಾಡಿದರೆ ಉಳಿದ ಎರಡು ತಿಂಗಳು ಬೇರೆ ವೃತ್ತಿಯತ್ತ ಹೊರಬೇಕಾಗದ ಪರಿಸ್ಥಿತಿಯಿದೆ. ಕೊರೋನಾ ಕಾಲದಲ್ಲಂತೂ ತರಕಾರಿ ಮಾರುವುದು, ಪತ್ರಿಕೆ ಹಂಚುವುದು ಸೇರಿದಂತೆ ಎಲ್ಲ ಕೆಲಸಕ್ಕೂ ಮುಂದಾಗಿದ್ದರು.

ಮಾನಸಿಕವಾಗಿ ಸೊರಗಿಹೋಗಿರುವ ಅತಿಥಿ ಉಪನ್ಯಾಸಕರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಮಾತ್ರ ಇವರನ್ನು ಇನ್ನೂ ಅಸಡ್ಡೆಯಿಂದಲೇ ನೋಡುತ್ತಿದೆ. ಸಕಾಲಕ್ಕೆ ವೇತನ, ಸೇವೆಗೆ ಭದ್ರತೆಗೆ ಆಗ್ರಹಿಸಿ ಹೋರಾಟಕ್ಕಿಳಿದಾಗಲೆಲ್ಲ ಸರ್ಕಾರ ಇವರಿಗೆ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಮಾಡುತ್ತಲೇ ಬಂದಿವೆಯೇ ಹೊರತು, ಇದುವರೆಗೂ ಇವರಿಗೆ ನಿಶ್ಚಲ ಬದುಕು ಕಟ್ಟಿಕೊಡಲು ಸಾಧ್ಯವಾಗಿಲ್ಲ. ಕಳೆದ ವರ್ಷ ಅರ್ಧ ಜನರನ್ನು ಸೇವೆಯಿಂದ ವಜಾಗೊಳಿಸಿದರು. ಇದ್ದವರಿಗೆ ಸಂಬಳ ಸ್ವಲ್ಪ ಹೆಚ್ಚು ಮಾಡಿದರೂ, ಜೊತೆಗೆ ಕೆಲಸದ ಒತ್ತಡವನ್ನೂ ಹೆಚ್ಚು ಮಾಡಿದರು.

ಯಾವ ಸರ್ಕಾ​ರ​ಗಳೂ ಸ್ಪಂದಿ​ಸು​ತ್ತಿ​ಲ್ಲ:

ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುತ್ತಿಲ್ಲ. ಮೂರು ತಿಂಗಳಿಂದಲೂ ಇವರಿಗೆ ವೇತನ ಬಿಡುಗಡೆ ಆಗಿಲ್ಲ. ಹಾಗಾಗಿ, ಜೀವನಕ್ಕಾಗಿ ಅವರಿವರ ಬಳಿ ಸಾಲ ಮಾಡಿ, ಜೀವನ ನಿರ್ವಹಣೆ ಮಾಡುವಂಥ ಪರಿಸ್ಥಿತಿ ಬಂದಿದೆ. ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಶೇ.70ರಷ್ಟುಅತಿಥಿ ಉಪನ್ಯಾಸಕರ ಸೇವೆಯನ್ನು ಸರ್ಕಾರ ಅವಲಂಬಿಸಿದೆ. ಜೊತೆಗೆ ಅತಿಥಿ ಉಪನ್ಯಾಸಕರು ವೇತನ ರಹಿತವಾಗಿ ಪರೀಕ್ಷಾ ಮೇಲ್ವಿಚಾರಣೆ, ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೆಮೈಸೂರು ವಿವಿ ಮೌಲ್ಯಮಾಪನ, ಕಾರ್ಯಕ್ಕೆ ಸಂಭಾವನೆ ನೀಡಲು ಸಾಧ್ಯವಿಲ್ಲ ಎಂದಿದೆ. ಜೊತೆಗೆ ಕೆಲವು ವಿವಿಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಮೌಲ್ಯಮಾಪನ ಪರೀಕ್ಷಾ ಕೊಠಡಿ ಮೇಲ್ವಿಚಾರಣೆಗೆ ನೀಡುವ ಸಂಭಾವನೆ ಅತ್ಯಂತ ಕಡಿಮೆ ಇದೆ ಎಂದು ಅತಿಥಿ ಉಪನ್ಯಾಸಕರು ಅಳಲು ತೋಡಿಕೊಳ್ಳುತ್ತಾರೆ.

ಕನಿಷ್ಠ ಗೌರ​ವ​ಧ​ನಕ್ಕೆ ಬದುಕು ತೇಯು​ವ​ವರು

ರಾಜ್ಯದ 426 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 20 ವರ್ಷಗಳ ಲಾಗಾಯ್ತಿನಿಂದ ಕನಿಷ್ಠ ಗೌರವಧನ ಪಡೆದು, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಾ. ಸೋಮಶೇಖರ್‌ ಎಚ್‌. ಶಿಮೊಗ್ಗಿ ಹೇಳುತ್ತಾರೆ.

ಕಳೆದ ಬಾರಿ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಸಂಬಂಧ ಸರ್ಕಾರ ಉನ್ನತಮಟ್ಟದ ಇಲಾಖಾ ಅಧಿಕಾರಿಗಳ ನೇತೃತ್ವದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಿತ್ತು. ಆ ಸಮಿತಿ ಅತಿಥಿ ಉಪನ್ಯಾಸಕರನ್ನು ಮೂರು ವರ್ಷಗಳ ಕಾಲ ವರ್ಷಕ್ಕೆ 10 ತಿಂಗಳ ಸೇವೆ ನೀಡಿ ನೇಮಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆ ಕಾಲೇಜು ಶಿಕ್ಷಣ ಇಲಾಖೆ ಈ ವರ್ಷ ಫೆಬ್ರವರಿ 9 ರಂದು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡಿದೆ. ನೇಮಕ ಮಾಡಿಕೊಂಡು 5-6 ತಿಂಗಳ ಒಳಗೆ ಕೆಲವು ವಿಶ್ವ ವಿದ್ಯಾಲಯದ ಶೈಕ್ಷಣಿಕ ಅವಧಿ ಮುಗಿದಿದೆ. ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೆಲವು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಅವಧಿ ಪೂರ್ಣಗೊಂಡಿರುವ ಕಾರಣ ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಮುಂದಾಗಿವೆ ಎಂದರು.

ಅತಿಥಿ ಉಪನ್ಯಾಸಕರ ಹಿತ ಕಾಯಲು ಬದ್ಧ: ಸಚಿವ ಅಶ್ವತ್ಥ ನಾರಾಯಣ

ಈ ಹಿಂದೆ ದಾವಣಗೆರೆ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಅವಧಿ ಜುಲೈ 8 ಕ್ಕೆ ಮುಗಿದ ಕಾರಣ ಕೆಲವು ಕಾಲೇಜಿನ ಪ್ರಾಚಾರ್ಯರು ದಿನ ನಿತ್ಯದ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿಸಿಕೊಳ್ಳದೆ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಇದರ ವಿರುದ್ಧ ಪ್ರತಿಭಟಿಸಿ ಅತಿಥಿ ಉಪನ್ಯಾಸಕರು ಪರೀಕ್ಷಾ ಕಾರ್ಯ ಮೌಲ್ಯಾಮಾಪನ ಮಾಡಲು ನಿರಾಕರಿಸಿದ ನಂತರ ಆಗಸ್ಟ್‌ 14 ರವರಗೆ ಶೈಕ್ಷಣಿಕ ಅವಧಿ ಮುಂದುವರಿಸಿದೆ ಎಂದು ಡಾ. ಸೋಮಶೇಖರ್‌ ತಿಳಿ​ಸಿ​ದರು.

ಬೇಡಿಕೆಗಳೇನು?

ಪರೀಕ್ಷಾ ಕೊಠಡಿ ಮೇಲ್ವಿಚಾರಣೆ, ಆತಂರಿಕ ಮೌಲ್ಯಮಾಪನ ಕಾರ್ಯ, ವಾರ್ಷಿಕ ಮೌಲ್ಯಮಾಪನ ಇತ್ಯಾದಿ ಕಾರ್ಯಭಾರದ ಜವಾಬ್ದಾರಿ ಅತಿಥಿ ಉಪನ್ಯಾಸಕರ ಮೇಲೆ ಹೇರಲಾಗುತ್ತದೆ. ಆದ್ದರಿಂದ ಅತಿಥಿ ಉಪನ್ಯಾಸಕರು ಖಾಯಂ ಪ್ರಾಧ್ಯಾಪಕರಂತೆ 12 ತಿಂಗಳು ಕಾರ್ಯಭಾರವಿರುತ್ತದೆ. ಹೀಗಾಗಿ ಅತಿಥಿ ಉಪನ್ಯಾಸಕರಿಗೆ 12 ತಿಂಗಳು ಅಗತ್ಯ ಸೇವೆ ಎಂದು ಪರಿಗಣಿಸಿ ವೇತನ ನೀಡಬೇಕು.

- ಶೈಕ್ಷಣಿಕ ಅವಧಿ ಪೂರ್ವದಲ್ಲಿ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ಬಿಡುಗಡೆ ಮಾಡಬಾರದು
- ಪ್ರತಿ ತಿಂಗಳು 10ರೊಳಗೆ ಗೌರವಧನ ವೇತನ ಬಿಡಗಡೆ ಮಾಡಬೇಕು
- ಹಲವು ವರ್ಷ ಸೇವೆಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 14ರಂತೆ ಸೇವೆಯಲ್ಲಿ ವಿಲೀನಗೊಳಿಸಬೇಕು
- ಎಲ್ಲ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಅವಧಿಯ ದಿನಾಂಕ ಒಂದೇ ಮಾದರಿಯಲ್ಲಿ ನಿಗದಿ ಮಾಡಬೇಕು

Latest Videos
Follow Us:
Download App:
  • android
  • ios