ಯುಪಿಎಸ್‌ಸಿ, ನೀಟ್‌ ಪರೀಕ್ಷೆಗಳು ಚೆನ್ನಾಗಿ ನಡೆಯುವಾಗ ನಮ್ಮ ರಾಜ್ಯದಲ್ಲೇಕೆ ಇಷ್ಟೊಂದು ಅಧ್ವಾನ?

ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆ ನಡೆಸದೆ ನಿರ್ವಾಹವಿಲ್ಲ. ಲಕ್ಷಾಂತರ ಮಂದಿ ಸ್ಪರ್ಧಿಸುವ ಕೇಂದ್ರ ಸೇವಾ ಆಯೋಗ ಹಾಗೂ ನೀಟ್‌ ಪರೀಕ್ಷೆಗಳನ್ನು ಅಕ್ರಮಗಳಿಲ್ಲದೆ ನಡೆಸಲು ಸಾಧ್ಯವಾಗುತ್ತಿರುವಾಗ ನಮ್ಮ ರಾಜ್ಯದಲ್ಲಿ ಮಾತ್ರ ಅದೆಷ್ಟುಗೋಜಲು ಇದೆ. 

Explained why Competitive Exam scam Happened in Karnataka hls

ಯಾವುದೇ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಇಟ್ಟುಕೊಳ್ಳಬೇಕಾದ ಕನಿಷ್ಠ ನೈತಿಕತೆ ಎಂದರೆ ಓದಿ ಕಲಿತು ತನಗೆ ಗೊತ್ತಿದ್ದಷ್ಟನ್ನೇ ಬರೆಯುವುದು. ಅಕ್ಕಪಕ್ಕದವರ ಉತ್ತರ ಪತ್ರಿಕೆಗಳಿಂದ ನಕಲು ಮಾಡಿ ಬರೆಯುವುದಲ್ಲ. ಅಥವಾ ಚೀಟಿಯಲ್ಲಿ ಬರೆದು ತಂದು ನೋಡಿ ಬರೆಯುವುದಲ್ಲ. ಪರೀಕ್ಷೆ ಇರುವುದೇ ಪಠ್ಯ ನೀಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಅಂತರ್ಗತೀಕರಿಸಿಕೊಂಡಿದ್ದಾರೆಂಬುದರ ಮೌಲ್ಯಮಾಪನಕ್ಕಾಗಿ. ಹಾಗಾಗಿ ನಕಲು ಮಾಡಿ ಬರೆಯುವುದೆಂಬುದು ಅನೈತಿಕತೆ.

ಈ ಅನೈತಿಕತೆಯ ಪತ್ತೆ ಮತ್ತು ಶಿಕ್ಷೆ ಪರೀಕ್ಷಾ ಕೊಠಡಿಯಿಂದ ವಿದ್ಯಾರ್ಥಿಯು ಹೊರಡುವ ಮೊದಲೇ ಆಗಬೇಕು. ಆದರೆ ಇತ್ತೀಚೆಗೆ ವರದಿಯಾದಂತೆ ಪಿ.ಎಸ್‌.ಐ. ಹುದ್ದೆಗಳಿಗಾಗಿ ನಡೆದ ಆಯ್ಕೆ ಪರೀಕ್ಷೆಯಲ್ಲಿ ಹಾಗೂ ಕಾಲೇಜು ಪ್ರಾಧ್ಯಾಪಕರ ಹುದ್ದೆಗಳಿಗಾಗಿ ಆಯ್ಕೆ ನಡೆಸಲು ಏರ್ಪಟ್ಟಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದು ಅದು ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಹಂತದಲ್ಲಿ ಬಯಲಾಗಿದೆ. ಆಮೇಲೆ ತನಿಖೆಯು ಆಳಕ್ಕಿಳಿದಂತೆ ಪರೀಕ್ಷೆಗಳ ನಿರ್ವಹಣೆಯ ಹಂತದಲ್ಲೇ ಅಕ್ರಮವಾಗಿ ಪ್ರಶ್ನೆಪತ್ರಿಕೆಗಳನ್ನು ಬಯಲು ಮಾಡಿದ ಮೂಲಗಳನ್ನು ಪತ್ತೆಹಚ್ಚಿದ್ದಾರೆ.

ಒಬ್ಬೊಬ್ಬ ಅಪರಾಧಿಯನ್ನು ಹಿಡಿದು ಬಾಯಿ ಬಿಡಿಸಿದಾಗ ಮತ್ತಷ್ಟುಅಪರಾಧಿಗಳ ಜಾಡು ಸಿಕ್ಕತೊಡಗಿದೆ. ಅಕ್ರಮವಾಗಿ ಪ್ರಶ್ನೆಪತ್ರಿಕೆಯನ್ನು ಮುಂದಾಗಿ ಪಡೆದು ಉತ್ತರಿಸಿದವರೆಲ್ಲರೂ ಅಪರಾಧಿಗಳೇ. ಏಕೆಂದರೆ ಇವರು ಒಂದು ವೇಳೆ ಸಿಕ್ಕಿ ಬೀಳದೆ ತೇರ್ಗಡೆಯಾಗಿ ಅಧಿಕಾರ ಪಡೆದಿದ್ದರೆ ಮತ್ತೆ ಅವರು ಮಾಡುವುದು ಅಪರಾಧಗಳನ್ನೇ. ಹೀಗಾಗಿ ಈ ಪರೀಕ್ಷಾ ಅಕ್ರಮಗಳ ಪತ್ತೆ ಹಾಗೂ ಶಿಕ್ಷೆ ಸೂಕ್ತವಾಗಿ ಆಗಲೇಬೇಕಾಗಿದೆ.

ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದಾಗಿ ಬಡ ಮಕ್ಕಳಿಗೆ ಶಿಕ್ಷಣವೇ ಸವಾಲು: ಸಿಎಂ ಬೊಮ್ಮಾಯಿ

ನಕಲು ಮಾಡುವ ಪ್ರವೃತ್ತಿ

ವಿದ್ಯಾರ್ಥಿಯೊಬ್ಬ ತನಗಾಗಿ ಅಂಕಗಳನ್ನು ಪಡೆಯುವುದಾದರೆ ಆತ ನಕಲು ಮಾಡುವುದಿಲ್ಲ. ಏಕೆಂದರೆ ಆತನಿಗೆ ತನ್ನ ಅರಿವಿನ ಪರೀಕ್ಷೆ ಆಗಬೇಕಾಗುತ್ತದೆ. ಅದು ತನ್ನ ಸಾಧನೆಯ ದಾರಿ ಮತ್ತು ಗುರಿಯನ್ನು ನಿರ್ಧರಿಸಲು ಸಹಾಯಕವಾಗುತ್ತದೆ. ಆದರೆ ಪೋಷಕರಿಗಾಗಿ ಅಥವಾ ಕುಟುಂಬದ ಪ್ರತಿಷ್ಠೆಗಾಗಿ ವಿದ್ಯಾರ್ಥಿಗೆ ಅಂಕಗಳು ಬೇಕಾಗುವುದಾದರೆ ಆಗ ಆತ ನಕಲಿನ ಮೊರೆ ಹೋಗಬೇಕಾಗುತ್ತದೆ. ಅದಕ್ಕಾಗಿ ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾನೆ. ಮುಖ್ಯವಾಗಿ ಮಾಡಬೇಕಾದ್ದು ಸಿಕ್ಕಿ ಬೀಳದಂತಹ ವ್ಯವಸ್ಥೆಗಳು. ಅದಕ್ಕೆ ತಗಲುವ ವೆಚ್ಚಕ್ಕೆ ಆತನಲ್ಲಿ ಹೊನ್ನು ಇರುತ್ತದೆ. ಹಾಗಾಗಿ ಅಂಕಗಳ ಖರೀದಿ ಮತ್ತು ಗೋಪ್ಯದ ಅವಕಾಶಗಳಿರುವುದೇ ಪರೀಕ್ಷೆಗಳಲ್ಲಿ ಅಕ್ರಮಕ್ಕೆ ಕಾರಣವಾಗುತ್ತದೆ. ವಾಸ್ತವಿಕವಾಗಿ ಇದರ ಪ್ರಯೋಗವು ಶಾಲಾ ಮಟ್ಟದಿಂದಲೇ ಆರಂಭವಾಗುತ್ತದೆ.

ವಿದ್ಯಾರ್ಥಿಗಳಲ್ಲಿರುವ ನಕಲು ಪ್ರವೃತ್ತಿಯನ್ನು ತಡೆ ಹಿಡಿಯಬೇಕಾದವರು ಶಿಕ್ಷಕರು. ಸಾಮಾನ್ಯವಾಗಿ ಶಿಕ್ಷಕರು ಪರೀಕ್ಷಾ ಕೊಠಡಿಗಳಲ್ಲಿ ಪೋಲೀಸ್‌ ಡ್ಯೂಟಿಯನ್ನೇ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಕಲು ಮಾಡಲು ಆಸಕ್ತಿಯುಳ್ಳವರೂ ತಮ್ಮ ಪ್ರಯತ್ನವನ್ನು ಕೈಬಿಡುತ್ತಾರೆ. ಆದರೆ ತಮ್ಮ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬೇಕಾದ ಅವಶ್ಯಕತೆ ಶಿಕ್ಷಕರಿಗೆ ಇದ್ದರೆ ಅವರು ನಕಲು ಮಾಡಲು ಅವಕಾಶ ನೀಡುತ್ತಾರೆ. ಶಿಕ್ಷಕರಿಗೇಕೆ ಈ ಅನಿವಾರ್ಯತೆ ಎಂದರೆ ಅದಕ್ಕೆ ಅನೇಕ ಉತ್ತರಗಳಿವೆ.

ಒಂದು ಕಾರಣವೆಂದರೆ ಕೆಲವು ಶಿಕ್ಷಕ/ಶಿಕ್ಷಕಿಯರಿಗೆ ತಮ್ಮ ವಿದ್ಯಾರ್ಥಿಗಳು ಗಳಿಸಿದ ಹೆಚ್ಚಿನ ಅಂಕಗಳೇ ಅವರ ಕಲಿಸುವ ಸಾಮರ್ಥ್ಯದ ಮಾಪಕಗಳಾಗಿ ಬಿಂಬಿಸಿಕೊಳ್ಳಲು ಬೇಕಾಗುತ್ತವೆ. ಇನ್ನು ಕೆಲವರಿಗೆ ತಾನು ವಿದ್ಯಾರ್ಥಿಗಳ ಒಲವಿನ ಶಿಕ್ಷಕ/ಶಿಕ್ಷಕಿ ಎಂದೆನಿಸಿಕೊಳ್ಳಲು ಅವರಿಗೆ ಅಂಕಗಳು ಸಿಕ್ಕುವಂತೆ ಮಾಡುವ ಅಗತ್ಯವಿರುತ್ತದೆ. ಇದು ತಮ್ಮ ಪ್ರಗತಿಗೆ ಮಾರಕ ಎಂದು ತಿಳಿಯದ ವಿದ್ಯಾರ್ಥಿಗಳು ಶಿಕ್ಷಕ/ಶಿಕ್ಷಕಿಯರ ಸಹಕಾರದ ಅಭ್ಯಾಸಕ್ಕೆ ಬಿದ್ದು ಅಧ್ಯಯನದ ಅಭ್ಯಾಸ ಬಿಡುತ್ತಾರೆ. ಅಂಥವರು ಪಿ.ಎಸ್‌.ಐ. ಪರೀಕ್ಷೆಯ ಅಭ್ಯರ್ಥಿಗಳಾದರೆ ನಕಲು ಮಾಡುವುದರ ಸಾಧ್ಯತೆಗಳನ್ನು ಹುಡುಕುವಷ್ಟುಅಧ್ಯಯನಕ್ಕಾಗಿ ಪಠ್ಯಗಳನ್ನು ಹುಡುಕುವುದಿಲ್ಲ.

Ukraine ನಿಂದ ಮರಳಿದ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ಸಿದ್ದಗಂಗಾ ಮಠ ನೆರವು

ಪರೀಕ್ಷೆ ನಡೆಸುವ ಸಂಸ್ಥೆ ಇರುವುದೇಕೆ?

ಪ್ರಸ್ತುತ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ ಪಿ.ಎಸ್‌.ಐ. ಹುದ್ದೆಗಳಿಗೆ ನಡೆದ ಪರೀಕ್ಷೆಯ ಅಕ್ರಮವಷ್ಟೇ ಅಲ್ಲ. ಒಟ್ಟು ಹತ್ತು ಪ್ರಕರಣಗಳ ಪಟ್ಟಿಇದೆ. ಪಿ.ಎಸ್‌.ಐ. 540, 402 ಮತ್ತು 200 ಹುದ್ದೆಗಳ ಮೂರು ಪ್ರಕರಣಗಳು, ಅಸಿಸ್ಟೆಂಟ್‌ ಪ್ರೊಫೆಸರ್‌ 1242 ಹುದ್ದೆಗಳ ಪರೀಕ್ಷೆ, 1010 ಹುದ್ದೆಗಳ ಎಫ್‌ಡಿಎ, ನಾನ್‌ ಟೆಕ್ನಿಕಲ್‌ ಹುದ್ದೆಗಳು, ಅಬಕಾರಿ ಎಸ್‌.ಐ. ಮತ್ತು ಇತರ ಹುದ್ದೆಗಳು ಹೀಗೆ ವಿವಿಧ ಹುದ್ದೆಗಳಿಗಾಗಿ ನಡೆಸಲಾದ ಪರೀಕ್ಷೆಗಳಲ್ಲೆಲ್ಲಾ ಅಕ್ರಮವಿರುವುದು ಬಯಲಾಗಿದೆ. ಹಾಗಿದ್ದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಂಬ ಸಂಸ್ಥೆ ಇರುವುದಾದರೂ ಯಾಕೆ? ಇದೇನೂ ಹೊಸ ಪ್ರಕರಣವಲ್ಲ.

ಕೆ.ಪಿ.ಎಸ್‌.ಸಿ. ನಡೆಸುವ ಪರೀಕ್ಷೆಗಳ ಅಕ್ರಮಗಳು ಬಯಲಾಗುವುದು, ಕೆಲವರು ಕೋರ್ಚ್‌ಗಳಿಗೆ ಹೋಗುವುದು, ನಂತರ ಫಲಿತಾಂಶ ರದ್ದಾಗುವುದು, ನೇಮಕಾತಿಗಳು ಬಾಕಿ ಉಳಿಯುವುದು ಇತ್ಯಾದಿ ನಡೆಯುತ್ತಲೇ ಬಂದಿದೆ. ಈ ಮಧ್ಯೆ ಅಕ್ರಮ ನೇಮಕಾತಿ ಪಡೆದವರು ಕೂಡಾ ಹತ್ತು ಹನ್ನೆರಡು ವರ್ಷ ಅಧಿಕಾರ ನಡೆಸಿ ಅಮಾನತಾದ ಪ್ರಕರಣಗಳೂ ನಡೆದಿವೆ. ತಮ್ಮ ಅಧಿಕಾರಾವಧಿಯಲ್ಲಿ ಅವರು ಮಾಡಿದ ತೀರ್ಮಾನಗಳು ಮತ್ತು ನೀಡಿದ ಆದೇಶಗಳು ಜಾರಿಯಲ್ಲಿ ಉಳಿಯುವುದೂ ಅಕ್ರಮವಲ್ಲವೆ? ಈ ಬಗ್ಗೆ ಯಾವ ನಿರ್ಧಾರಗಳೂ ಇಲ್ಲದೆ, ಅನುಕಂಪದ ಆಧಾರದಲ್ಲಿ ತಪ್ಪಿತಸ್ಥರು ಪುನರ್‌ ನೇಮಕಾತಿಯಾಗಿ ಅದೇ ಅಕ್ರಮಗಳು ಮುಂದುವರಿದಿರುವ ಉದಾಹರಣೆಗಳಿರುವಾಗ ಪರೀಕ್ಷೆಯಲ್ಲಿ ನಕಲು ಮಾಡಿ ತೇರ್ಗಡೆಯಾಗಿ ಚಾನ್ಸ್‌ ನೋಡುವ ಆಸೆಯೇ ಈ ಪರೀಕ್ಷಾ ಅಕ್ರಮಗಳಿಗೆ ಕಾರಣವಾಗಿದೆ.

Udupi:ವಯಸ್ಸಿಗೆ ಡೋಂಟ್‌ ಕೇರ್ ಹೇಳಿ ಡಾಕ್ಟರೇಟ್ ಪಡೆದ ಮಹಿಳೆ

ಸರ್ಕಾರಿ ನೌಕರರ ಸುರಕ್ಷಿತ ವಲಯ

ನಾವು ಅಧಿಕಾರಿಗಳ ಕರ್ತವ್ಯಲೋಪದ ಎಷ್ಟೋ ವಾರ್ತೆಗಳನ್ನು ಕೇಳುತ್ತೇವೆ, ಟಿ.ವಿ.ಗಳಲ್ಲಿ ತೋರಿಸುತ್ತಾರೆ. ಭ್ರಷ್ಟಅಧಿಕಾರಿಗಳು ಖೆಡ್ಡಾಕ್ಕೆ ಬಿದ್ದ ವಾರ್ತೆಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. ಆದರೆ ಮತ್ತೆ ಕೆಲವು ಸಮಯದ ಬಳಿಕ ಆ ಅಧಿಕಾರಿಗಳು ಅದೇ ಕುರ್ಚಿಗಳಲ್ಲಿರುತ್ತಾರೆ. ಕೆಲವೊಮ್ಮೆ ಇನ್ನೂ ಉನ್ನತ ಕುರ್ಚಿಗಳಿಗೇರುವುದೂ ಇದೆ. ಸಾರ್ವಜನಿಕ ವಿತರಣೆಗೆ ಇರುವ ಅಕ್ಕಿಯು ಗೋದಾಮಿನಲ್ಲಿ ಕೊಳೆತು ನಾರುತ್ತಿರುವ ಚಿತ್ರಣ ಟಿ.ವಿ.ಗಳಲ್ಲಿ ಪ್ರಸಾರವಾಗುತ್ತದೆ. ಆದರೆ ಅದಕ್ಕೆ ಕಾರಣರಾದವರ ಹುದ್ದೆಗಾಗಲೀ ವೇತನಕ್ಕಾಗಲೀ ಯಾವುದೇ ಅಪಾಯವಾಗುವುದಿಲ್ಲ.

ಏಕೆಂದರೆ ಅದು ಸಾರ್ವಜನಿಕ ಬೊಕ್ಕಸದಿಂದ ಕೊಡುವ ಹಣ. ಅದನ್ನು ಮುಗಿಸುವ ಬಗ್ಗೆ ಯಾರಿಗೂ ನೋವಿಲ್ಲ. ಒಂದು ವೇಳೆ ಒಬ್ಬ ಸರ್ಕಾರಿ ನೌಕರ ಯಾವುದಾದರೂ ಅಪರಾಧಕ್ಕಾಗಿ ಅಮಾನತ್ತಾದರೆ ಆತನಿಗೆ ಮನೆಗೆ ಕುಳಿತಲ್ಲಿಗೆ ಅರ್ಧ ಸಂಬಳ ಬರುತ್ತದೆ. ಆರು ತಿಂಗಳ ಬಳಿಕ ಮುಕ್ಕಾಲು ಪಾಲು ವೇತನ ಕೈ ಸೇರುತ್ತದೆ.

ವರ್ಷ ಕಳೆದರೂ ದೂರು ವಿಚಾರಣೆಯಾಗದಿದ್ದರೆ ಪೂರ್ತಿ ಸಂಬಳ ಸಿಗುತ್ತದಂತೆ. ಹಾಗಿದ್ದರೆ ಈ ಅಮಾನತು ಎಂಬ ನಾಟಕ ಯಾಕಾಗಿ? ಕೆಲವೊಮ್ಮೆ ಅಮಾನತ್ತಾದ ನೌಕರರೂ ಯಾವುದೇ ನಾಚಿಕೆ ಇಲ್ಲದೆ ತಮ್ಮದೆ ಕಚೇರಿಯ ಏಜೆಂಟರಾಗಿಯೂ ಕೆಲಸ ಮಾಡುತ್ತಾರೆ. ಅಂದರೆ ಅವರು ತಮ್ಮ ವೇತನಕ್ಕಿಂತಲೂ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಅಮಾನತುಗೊಳ್ಳುವುದು ನಾಚಿಕೆಯ ವಿಷಯವಲ್ಲ. ಬದಲಾಗಿ ಅವರಿಂದ ಉಪಕೃತರಾದವರು ಪಾಪ! ಹೇಗೆ ಸಿಕ್ಕಿಬಿದ್ದಿರಿ? ಎಂಬ ಅನುಕಂಪ ತೋರಿಸುತ್ತಾರೆ.

ಸರ್ಕಾರಿ ಸೇವೆಯಲ್ಲಿ ನೇಮಕಾತಿ ಪಡೆದ ಬಳಿಕ ವೇತನಕ್ಕೂ, ಅಕ್ರಮ ಆದಾಯಕ್ಕೂ, ಸಾರ್ವಜನಿಕ ಗೌರವಕ್ಕೂ ತೊಂದರೆ ಇಲ್ಲವೆಂಬುದು ಖಾತ್ರಿ ಇರುವಾಗ ನೇಮಕಾತಿಗಾಗಿ ಪರೀಕ್ಷಾ ಅಕ್ರಮ ನಡೆಸಿದರೇನು ಎಂಬ ಮನೋಧರ್ಮ ರೂಪುಗೊಳ್ಳುವುದರಲ್ಲಿ ಅಚ್ಚರಿ ಇಲ್ಲ. ಇದಕ್ಕೆ ನಮ್ಮ ರಾಜಕೀಯ ನಾಯಕರುಗಳೇ ತುಪ್ಪ ಸುರಿಯುತ್ತಾರೆಂಬುದು ಸದ್ಯ ನಡೆದಿರುವ ಎಲ್ಲಾ ಅಕ್ರಮ ಪರೀಕ್ಷಾ ಪ್ರಕರಣಗಳು ಬಹಿರಂಗಗೊಂಡಂತೆ ತಿಳಿದುಬರುವ ವಾಸ್ತವ.

4-5 ನೇ ತರಗತಿ ಲೆಸ್‌ ಹೋಂ ವರ್ಕ್, ಮೇ 3 ನೇ ವಾರದೊಳಗೆ SSLC Result

ಈ ಅಕ್ರಮಗಳಿಗೆ ಪರಿಹಾರವೇನು?

ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪರೀಕ್ಷೆ ನಡೆಸದೆ ನಿರ್ವಾಹವಿಲ್ಲ. ಲಕ್ಷಾಂತರ ಮಂದಿ ಸ್ಪರ್ಧಿಸುವ ಕೇಂದ್ರ ಸೇವಾ ಆಯೋಗ ಹಾಗೂ ನೀಟ್‌ ಪರೀಕ್ಷೆಗಳನ್ನು ಅಕ್ರಮಗಳಿಲ್ಲದೆ ನಡೆಸಲು ಸಾಧ್ಯವಾಗುತ್ತಿರುವಾಗ ನಮ್ಮ ರಾಜ್ಯದಲ್ಲಿ ಮಾತ್ರ ಅದೆಷ್ಟುಗೋಜಲು ಇದೆ. ಇದಕ್ಕೆ ಮುಖ್ಯ ಕಾರಣವೆಂದರೆ ನಮ್ಮ ರಾಜ್ಯದಲ್ಲಿ ಆಡಳಿತ ಹಿಡಿದ ರಾಷ್ಟ್ರೀಯ ಪಕ್ಷಗಳಲ್ಲಾಗಲೀ ಪ್ರಾದೇಶಿಕ ಪಕ್ಷದಲ್ಲಾಗಲೀ ಇರುವ ರಾಜಕಾರಣಿಗಳಿಗೆ ರಾಜನೈತಿಕತೆಯ ಹಾಗೂ ಸಮಾಜ ಸೇವೆಯ ಬದ್ಧತೆ ಇಲ್ಲ. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕೆಂದು ಸಾರ್ವಜನಿಕವಾಗಿ ಹೇಳುತ್ತಲೇ ಗುಟ್ಟಿನಲ್ಲಿ ಅವರ ನೆರವಿಗೆ ನಿಲ್ಲುತ್ತಾರೆ. ಹೀಗಾಗಿ ಸರ್ಕಾರಿ ನೌಕರರ ಅಪರಾಧ ಪ್ರಕರಣಗಳು ವಿಚಾರಣೆ ಮತ್ತು ತೀರ್ಮಾನಗಳಿಲ್ಲದೆ ಹಳ್ಳ ಹಿಡಿಯುವುದು ಸಾಮಾನ್ಯವಾಗಿದೆ.

ಹೀಗಾಗಿ ಇದಕ್ಕೆ ಪರಿಹಾರವೆಂದರೆ, ಸರ್ಕಾರಿ ಅಧಿಕಾರಿಗಳನ್ನೆಲ್ಲ ಪ್ರತಿ ಐದು ವರ್ಷಗಳಿಗೊಮ್ಮೆ ಮೌಲ್ಯಮಾಪನ ಮಾಡಬೇಕು. ಅವರು ಏನೂ ಮಾಡದಿದ್ದರೂ ಏನೂ ಆಗುವುದಿಲ್ಲ ಎಂಬ ಸ್ಥಿತಿ ಇರಬಾರದು. ಈ ಮೌಲ್ಯಮಾಪನವನ್ನು ಮೇಲಧಿಕಾರಿಗಳ ಬದಲು ಸಾರ್ವಜನಿಕರು ಮಾಡಬೇಕು. ಅದಕ್ಕಾಗಿ ಏನಾದರೂ ಹೊಸ ವಿಧಾನವನ್ನು ಕಂಡು ಹಿಡಿಯಲು ಸಾಧ್ಯವಿದೆ. ಕೆಲಸ ಮಾಡದಿದ್ದರೆ, ಕರ್ತವ್ಯಚ್ಯುತಿ ಮಾಡಿದರೆ, ಹಾಗೂ ಅಕ್ರಮ ಸಂಭಾವನೆಯಂತಹ ಭ್ರಷ್ಟತೆಗೆ ಕೈಹಾಕಿದರೆ ಹುದ್ದೆಯನ್ನು ಕಳಕೊಳ್ಳಬೇಕಾದ ಭೀತಿಯನ್ನು ಹುಟ್ಟುಹಾಕದ ಹೊರತು ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮವಾಗುವುದನ್ನು ತಡೆಯುವುದು ಕಷ್ಟ. ಇದು ಕಾಲೇಜು ಪ್ರೊಫೆಸರ್‌ಗಳಿಗೂ ಅನ್ವಯವಾಗುವ ನಿಯಮವಾದಾಗ ಉನ್ನತ ಶಿಕ್ಷಣದ ಗುಣಮಟ್ಟವೂ ಹೆಚ್ಚಬಹುದು.

- ಡಾ. ಚಂದ್ರಶೇಖರ ದಾಮ್ಲೆ

Latest Videos
Follow Us:
Download App:
  • android
  • ios