Asianet Suvarna News Asianet Suvarna News

ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣನೆ

  • 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ  ರದ್ದು
  • ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೊರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ
  • ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ  ಮಾಹಿತಿ
CET score is the only consideration for admission to professional courses snr
Author
Bengaluru, First Published Jun 8, 2021, 1:54 PM IST

ಬೆಂಗಳೂರು ((ಜೂ.08): 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ  ರದ್ದು ಮಾಡಿರುವುದರಿಂದ ಎಂಜಿನಿಯರಿಂಗ್ ಸೇರಿದಂತೆ ಎಲ್ಲ ವೃತ್ತಿಪರ ಕೊರ್ಸುಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಅಂಕಗಳನ್ನು ಮಾತ್ರ ಪರಿಗಣನೆ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು. 

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು ಈ ವಿಚಾರ ತೀಳಿಸಿದರು. 

ಸಿಇಟಿ, ನೀಟ್ ಸೇರಿ ರಾಜ್ಯದಲ್ಲಿ ನಡೆಯುವ ಎಲ್ಲ ವೃತ್ತಿಪರ ಕೋರ್ಸುಗಳಿಗೆ ಪಿಯುಸಿ ಅಂಕವನ್ನು ಪರಿಗಣನೆ ಮಾಡದಿರಲು ನಿರ್ಧರಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಈ ನಿಟ್ಟಿನಲ್ಲಿ ನೀಡಿದ್ದ ಸಲಹೆಯನ್ನು ಪರಿಗಣಿಸಲಾಗಿದೆ ಎಂದು  ಹೇಳಿದರು. 

ಈಗಾಗಲೇ ಘೋಷಣೆ ಮಾಡಿರುವಂತೆ ಅಗಸ್ಟ್‌ 28, 29 ಹಾಗೂ 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ದ್ವಿತೀಯ ಪಿಯುಸಿ (ವಿಜ್ಞಾನ) ಪಾಸಾದ ಪ್ರತೀ ವಿದ್ಯಾರ್ಥಿಯೂ ಸಿಇಟಿ ಬರೆಯಲು ಅವಕಾಶವಿದೆ ಎಂದು ಅವರು ತಿಳಿಸಿದರು. 

PUC ಫಲಿತಾಂಶಕ್ಕೆ ಏನೇನು ಪರಿಗಣನೆ : ಶಿಕ್ಷಣ ಇಲಾಖೆಗೆ ರುಪ್ಸಾ 3 ಪ್ರಮುಖ ಸಲಹೆ .

"ಎಲ್ಲ ಐಚ್ಛಿಕ ವಿಷಯಗಳ ಪರೀಕ್ಷೆ 28 ಮತ್ತು 29ರಂದು ನಡೆಯುತ್ತದೆ. ಉಳಿದಂತೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಆಗಸ್ಟ್ 30ರಂದು ಪರೀಕ್ಷೆ ನಡೆಯಲಿದೆ. ಮೊದಲು ಯಾವ ಪದ್ಧತಿಯಲ್ಲಿ ಪರೀಕ್ಷೆ ನಡೆಯುತ್ತಿತ್ತೋ ಅದೇ ರೀತಿ ಪರೀಕ್ಷೆ ನಡೆಯುತ್ತದೆ. ಪ್ರತಿ ವಿಷಯಕ್ಕೆ 60 ಅಂಕ ಇರುತ್ತದೆ. ಮೊದಲ ದಿನ ಗಣಿತ, ಜೀವವಿಜ್ಞಾನ ಹಾಗೂ ಎರಡನೇ ದಿನ ಭೌತವಿಜ್ಞಾನ & ರಸಾಯನಿಕ ವಿಜ್ಞಾನ ಇರುತ್ತದೆ ಎಂದರು.

ಅಂಕಗಳ ಮಿತಿ ಇಲ್ಲ, ವಿನಾಯಿತಿಯ ವಿವರ: 

ಸಿಇಟಿಯಲ್ಲಿ ಎಂಜಿನಿಯರಿಂಗ್, ಪಶುವೈದ್ಯ, ಕೃಷಿ ವಿಜ್ಞಾನ, ಆರ್ಕಿಟೆಕ್ಟ್, ಫಾರ್ಮಸಿ ಪ್ರವೇಶ ಪರೀಕ್ಷೆಗೆ ಇದ್ದ  ಅರ್ಹ ಅಂಕಗಳ ಷರತ್ತನ್ನು ತೆಗೆದು ಹಾಕಲಾಗಿದೆ. ಕೇವಲ ಸಿಇಟಿ ಅಂಕಗಳ ಆಧಾರದ ಮೇಲೆ ಮಾತ್ರ ರ‍್ಯಾಂಕ್  ಕೊಡಲಾಗುವುದು. ವೃತ್ತಿಪರ ಎಂಜಿನಿಯರಿಂಗ್ ಕೋರ್ಸ್ಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳಲ್ಲಿ ಸಿಇಟಿ ಬರೆಯಲು ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ ಶೇ.45 ಹಾಗೂ ಪರಿಶಿಷ್ಟ ಜಾತಿ-ವರ್ಗದ ಅಭ್ಯರ್ಥಿಗಳು ಶೇ.40ರಷ್ಟು ಅಂಕಗಳನ್ನು ಗಳಿಸಬೇಕೆಂಬ ಷರತ್ತು ಇತ್ತು. ಆದರೆ ಈಗ ಬದಲಿಸಿದ್ದು, ಪಿಸಿಎಂ ಹಾಗೂ ನಿಗದಿತ ಐಚ್ಛಿಕ ವಿಷಯಗಳಲ್ಲಿ ಉತ್ತೀರ್ಣರಾಗಿರುವ ಎಲ್ಲ, ಅಂದರೆ ಜಸ್ಟ್ ಪಾಸ್ ಆಗಿರುವ ವಿದ್ಯಾರ್ಥಿಗಳು ಕೂಡ ಸಿಇಟಿ ಬರೆಯಲು ಅರ್ಹತೆ ಹೊಂದಿರುತ್ತಾರೆ. ಅಂಕಗಳ ಮಿತಿ ಸಡಿಲಿಕೆ ಮಾಡಿರುವ ಬಗ್ಗೆ ಎಲ್ಲ ಸಂಬಂಧಿತ ಪರೀಕ್ಷಾ ಮಂಡಳಿಗಳು, ಇನ್ನಿತರೆ ಸಂಬಂಧಿತ ಎಲ್ಲ ಸಂಸ್ಥೆಗಳಿಗೆ ಸರಕಾರ ಪತ್ರ ಬರೆಯಲಿದೆ ಎಂದು ಡಿಸಿಎಂ ಇದೇ ವೇಳೆ ತಿಳಿಸಿದರು. 

"

ದ್ವಿತೀಯ ಪಿಯು ಫಲಿತಾಂಶ ಯಾವ ಮಾದರಿಯಲ್ಲಿರುತ್ತೆ..? ...

2021-22ನೇ ವರ್ಷಕ್ಕೆ ಮಾತ್ರ: 

ಎಂಜಿನಿಯರಿಂಗ್ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ರ‍್ಯಾಂಕ್ ನಿರ್ಧರಿಸಲು ಪ್ರಸ್ತುತ ನಿಯಮದಲ್ಲಿ ಇರುವಂತೆ ಅರ್ಹತಾ ಪರೀಕ್ಷೆ ಮತ್ತು ಸಿಇಟಿ ಪರೀಕ್ಷೆಯಲ್ಲಿ ಪಡೆದ ಪಿಸಿಎಂ ವಿಷಯಗಳ ಅಂಕಗಳನ್ನು ಸಮನಾಗಿ ಪರಿಗಣಿಸಿ ಸಿಇಟಿ ರ‍್ಯಾಂಕ್ ನೀಡಲಾಗುತ್ತಿತ್ತು. ಅದರ ಬದಲಿಗೆ ಈಗ ಕೇವಲ ಸಿಇಟಿ ಪರೀಕ್ಷೆಯಲ್ಲಿನ ಪಿಸಿಎಂ ವಿಷಯಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ ಎಂಜಿನಿಯರಿಂಗ್ ರ‍್ಯಾಂಕ್ ಕೊಡಲಾಗುವುದು. ಈ ಬದಲಾವಣೆ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು. 

ಜೂನ್ 15ರಿಂದ ನೋಂದಣಿ: 

ಸಿಇಟಿ ಬರೆಯಲಿಚ್ಛಿಸುವ ವಿದ್ಯಾರ್ಥಿಗಳು ಜೂನ್ 15ರಿಂದಲೇ ಆನ್ ಲೈನ್ ಮೂಲಕ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು. 

ಸಿಇಟಿಗೂ ನೀಟ್ ನಂತೆ ಅಂಕ ಮಿತಿ?: 

ಇದೇ ವೇಳೆ ನೀಟ್ ನಲ್ಲಿ ಇಂತಿಷ್ಟು ಅಂಕ ಗಳಿಸಿದರೆ ಮಾತ್ರ ವೈದ್ಯ ಕೋರ್ಸುಗಳಿಗೆ ಪ್ರವೇಶ ಇದೆ. ಅದೇ ಪದ್ಧತಿಯನ್ನು ಸಿಇಟಿಯಲ್ಲೂ ತರುವ ಉದ್ದೇಶವಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಗುಣಮಟ್ಟದ ದೃಷ್ಟಿಯಲ್ಲಿ ಸರಕಾರ ಈ ನಿಟ್ಟಿನಲ್ಲಿ ಚಿಂತಿಸುತ್ತಿದೆ. ಪಾಸಾದವರೆಲ್ಲ ಎಂಜಿನಿಯರಿಂಗ್ ಸೇರುತ್ತಿದ್ದಾರೆ. ಆದ್ದರಿಂದ ಗುಣಮಟ್ಟಕ್ಕೆ ಧಕ್ಕೆಯಾಗುತ್ತಿದೆ ಎಂದರು.

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕುಮಾರ್ ನಾಯಕ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟರಾಜ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ ಅವರು ಸಭೆಯಲ್ಲಿ‌ ಹಾಜರಿದ್ದರು.
 
ವಿಜ್ಞಾನ ಪದವಿ ಕೋರ್ಸುಗಳಿಗೂ ಸಿಇಟಿ ಚಿಂತನೆ
 
2021ನೇ ಸಾಲಿನಲ್ಲಿ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸಾಗಿದ್ದಾರೆ. 6ರಿಂದ 7ಲಕ್ಷ ವಿದ್ಯಾರ್ಥಿಗಳು ಪಿಯುಸಿಯಿಂದ ಹೊರಬರುತ್ತಿದ್ದಾರೆ. ಮೊದಲು ಕೊನೆ ಪಕ್ಷ 4 ಲಕ್ಷ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ವಿದ್ಯಾರ್ಥಿಗಳು ಮಾತ್ರ ಪಾಸಾಗುತ್ತಿದ್ದರು. ಈ ಬಾರಿ 30% ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಇವರಲ್ಲಿ ಅನೇಕರು ಪದವಿ ಕಾಲೇಜುಗಳಿಗೆ ಸೇರಲಿದ್ದು, ಅಲ್ಲಿನ ವ್ಯವಸ್ಥೆ ಹೆಚ್ಚಿಸುವ ಕೆಲಸ ಮಾಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು. 

ವಿಜ್ಞಾನ ವಿಭಾಗದಲ್ಲಿ ಗುಣಮಟ್ಟಕ್ಕೆ ಆದ್ಯತೆ ಕೊಡುವ ಉದ್ದೇಶದಿಂದ ಅದಕ್ಕೆ ಸಂಬಂಧಿಸಿದ ಎಲ್ಲ ಪದವಿ ಕೋರ್ಸುಗಳಿಗೆ ಸಿಇಟಿ ಮೂಲಕವೇ ಪ್ರವೇಶಾತಿ ನೀಡುವ ಯೋಚನೆ ಮಾಡಲಾಗುತ್ತಿದೆ. ಈ ಬಗ್ಗೆ ವಿಸ್ತೃತವಾಗಿ ಚಿಂತಿಸಲಾಗುತ್ತಿದೆ. ಯಾವುದೂ ಅಂತಿಮವಾಗಿಲ್ಲ ಎಂದು ಅವರು ಹೇಳಿದರು.

Follow Us:
Download App:
  • android
  • ios