ಈ ಕಾಲೇಜಿನಲ್ಲಿ ಫೀಸ್ ಬದಲಿಗೆ ತೆಂಗಿನಕಾಯಿ ಕೊಟ್ಟರೆ ಸಾಕು!
ಕಾಲೇಜ್ ಶುಲ್ಕವಾಗಿ ವಿದ್ಯಾರ್ಥಿಗಳು ನೀಡುವ ತೆಂಗಿನಕಾಯಿಗಳಿಂದ ಆಡಳಿತ ಮಂಡಳಿಯು ವರ್ಜಿನ್ ಕೊಬ್ಬರಿ ಎಣ್ಣೆಯನ್ನ ತಯಾರಿಸಿ ಮಾರಾಟ ಮಾಡುತ್ತದೆ.
ಕೊರೊನಾ ಬಂದು ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿಬಿಟ್ಟಿದೆ. ಪ್ರವಾಸೋದ್ಯಮ, ಕೈಗಾರಿಕೆಗಳು, ಕೃಷಿ, ಐಟಿ ಬಿಟಿ ಬಹುತೇಕ ಎಲ್ಲ ಉದ್ಯಮಗಳು ಪಾತಾಳಕ್ಕೆ ಕುಸಿದಿವೆ. ಲಾಕ್ ಡೌನ್ ಸಡಿಲಿಕೆ ಬಳಿಕ ಎಲ್ಲವೂ ಕೊಂಚ ಕೊಂಚ ಚೇತರಿಕೆ ಕಾಣ್ತಿವೆ. ಇದು ಭಾರತ ದೇಶದ್ದೊಂದೇ ಕಥೆಯಲ್ಲ, ವಿಶ್ವದ ಬಹುತೇಕ ರಾಷ್ಟ್ರಗಳ ಸ್ಥಿತಿಯೂ ಹೀಗೆ ಇದೆ.
ಶೈಕ್ಷಣಿಕ ವಲಯ ಕೂಡ ಕೊರೊನಾ ಪೆಟ್ಟಿನಿಂದ ಸಾಕಷ್ಡು ನಲುಗಿದೆ. ಶಿಕ್ಷಣ ಸಂಸ್ಥೆಗಳು ಆದಾಯದ ಮೂಲವಿಲ್ಲದೇ ಸಂಸ್ಥೆ ಗಳನ್ನ ನಡೆಸಲು ಒದ್ದಾಡುತ್ತಿವೆ. ಕೊರೊನಾ ಸಂಕಷ್ಟದಿಂದಾಗಿ ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ಭರಿಸಿಕೊಳ್ಳಲು ಆಗುತ್ತಿಲ್ಲ. ಹಾಗಂತ ಬೋಧಕ ವರ್ಗ, ಇನ್ನಿತರೆ ಸಿಬ್ಬಂದಿ ಹಾಗೂ ಸಂಸ್ಥೆ ನಿರ್ವಹಣೆ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿಯೇ ಇಲ್ಲೊಂದು ಕಾಲೇಜ್, ವಿದ್ಯಾರ್ಥಿಗಳ ಪೋಷಕರಿಗೂ ಹೊರೆಯಾಗದಂತೆ ಹೊಸ ಆದಾಯ ಮೂಲ ಕಂಡುಕೊಂಡಿದೆ. ತಮ್ಮ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಂದ ಫೀಜ್ ಅನ್ನೇ ಪಡೆಯುತ್ತಿಲ್ಲ. ಬದಲಾಗಿ ಪಡೆಯುತ್ತಿರೋದು ತೆಂಗಿನ ಕಾಯಿ ಮಾತ್ರ.
ಈ ಊರು ತುಂಬಾ ಐಐಟಿ ವಿದ್ಯಾರ್ಥಿಗಳೇ! ಹೇಗೆ ಅಂತೀರಾ?
ಹೌದು.. ಇಂಡೋನೇಷ್ಯಾದ ಬಾಲಿಯ ಅಕಾಡೆಮಿಯೊಂದು ಇಂಥ ಹೊಸ ಐಡಿಯಾ ಮಾಡಿದೆ. ಬಾಲಿಯ ಟೆಗಲಲಾಂಗ್ ನಲ್ಲಿರುವ ವೀನಸ್ ಒನ್ ಟೂರಿಸಂ ಅಕಾಡೆಮಿ ತನ್ನ ವಿದ್ಯಾರ್ಥಿಗಳಿಗೆ ಹಣದ ಬದಲಿಗೆ ತೆಂಗಿನಕಾಯಿ ರೂಪದಲ್ಲಿ ಬೋಧನಾ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲ, ಇತರ ಉಷ್ಣವಲಯದ ಸಸ್ಯಗಳಾದ ಮೊರಿಂಗ ಎಲೆಗಳು ಅಥವಾ ಗೊಟು ಕೋಲಾದ ಎಲೆಗಳನ್ನು ಕೂಡ ನೀಡಬಹುದು.
ಕೊರೊನಾದಿಂದ ಆಗಿರುವ ಆರ್ಥಿಕತೆ ನಷ್ಟದಿಂದಾಗಿ ಶುಲ್ಕ ಪಾವತಿಸಲು ಸಾಧ್ಯವಾಗದ ಕುಟುಂಬಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಲ್ಲದೆ, ಈ ಉಪಕ್ರಮವು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಉತ್ಸಾಹವನ್ನು ಹೆಚ್ಚಿಸಿದೆ. ಏಕೆಂದರೆ ಅವರು ತರುವ ತೆಂಗಿನಕಾಯಿಯಿಂದ ವರ್ಜಿನ್ ಕೊಬ್ಬರಿ ಎಣ್ಣೆ ಹಾಗೂ ಎಲೆಗಳಿಂದ ಹರ್ಬಲ್ ಶಾಂಪೂ ಉತ್ಪಾದಿಸಬಹುದು.
ಈ ಕುರಿತಂತೆ ಅಕಾಡೆಮಿಯ ನಿರ್ದೇಶಕ ವಯನ್ ಪಸೆಕ್ ಆದಿ ಪುತ್ರ ಮಾತನಾಡಿ, 'ಈ ಕೋವಿಡ್ ಸಾಂಕ್ರಾಮಿಕದಿಂದಾಗಿ ನಾವು ವಿದ್ಯಾರ್ಥಿ ಸ್ನೇಹಿ ನೀತಿಯನ್ನು ಅಳವಡಿಸಿಕೊಂಡಿದ್ದೇವೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ನಷ್ಟ ಅನುಭವಿಸುತ್ತಿರುವಂತಹ ವಿದ್ಯಾರ್ಥಿಗಳಿಗೆ ಶುಲ್ಕ ರೂಪದಲ್ಲಿ ತೆಂಗಿನ ಕಾಯಿ ತಂದು ಕೊಡುವಂತೆ ವಿನಾಯಿತಿ ನೀಡಿದ್ದೇವೆ. ಹೀಗೆ ವಿದ್ಯಾರ್ಥಿಗಳು ತಂದುಕೊಡುತ್ತಿರುವ ತೆಂಗಿನ ಕಾಯಿಯಿಂದ ವರ್ಜಿನ್ ತೆಂಗಿನ ಎಣ್ಣೆ ಉತ್ಪಾದಿಸಿ, ಆದಾಯ ಗಳಿಕೆಯತ್ತ ಗಮನ ಹರಿಸಲಾಗಿದೆ. ಇದಷ್ಟೇ ಅಲ್ಲದೇ, ಶಾಲೆಯು ಮೊರಿಂಕಾ ಎಲೆಗಳನ್ನು ಶುಲ್ಕವಾಗಿ ಸ್ವೀಕರಿಸುತ್ತದೆ. ಜೊತೆಗೆ ಸ್ಥಳೀಯ ಔಷಧೀಯ ಸಸ್ಯವಾದ ಗೋಟು ಕೋಲಾದಿಂದ ಎಲೆಗಳನ್ನು ಸಹ ಸ್ವೀಕರಿಸುತ್ತದೆ. ತೆಂಗಿನ ಎಣ್ಣೆ ಮತ್ತು ಅಸಾರ್ಟೆಡ್ ಎಲೆಗಳನ್ನು ಗಿಡಮೂಲಿಕೆಯ ಸಾಬೂನು ಉತ್ಪನ್ನಗಳನ್ನಾಗಿ ಬಳಕೆ ಮಾಡಲಾಗುತ್ತಿದೆ. ಇದನ್ನು ಅಕಾಡೆಮಿ ಮಾರಾಟ ಮಾಡಿ, ಹಣ ಸಂಗ್ರಹ ಮಾಡಲಾಗುತ್ತದೆ. ಜೊತೆಗೆ ಅವರ ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮಗೊಳಿಸಲು ನಾವು ಅವರಿಗೆ ಶಿಕ್ಷಣ ನೀಡಬೇಕಾಗಿದೆ ”ಎಂದು ತಿಳಿಸಿದ್ದಾರೆ.
ಸ್ಫೂರ್ತಿಯ ಸೆಲೆ ಡಾಕ್ಟರ್ ಕಲೆಕ್ಟರ್ ಡಾ.ರಾಜೇಂದ್ರ ಭಾರೂಡ್
ಈ ಹೊಸ ಪಾವತಿ ಯೋಜನೆಯ ಅನುಷ್ಠಾನವು ವೀನಸ್ ಒನ್ ಟೂರಿಸಂ ಅಕಾಡೆಮಿಗೆ ಹಾಜರಾಗುವವರಿಗೆ ಶಾಲಾ ಜೀವನವನ್ನು ಹೆಚ್ಚು ನಿರ್ವಹಣಾತ್ಮಕವಾಗಿಸುತ್ತದೆಯಾದರೂ, ಸಾಂಕ್ರಾಮಿಕವು ವಿದ್ಯಾರ್ಥಿ ದೇಹದ ಮೇಲೆ ಪರಿಣಾಮ ಬೀರಿಲ್ಲ ಎಂದಲ್ಲ. ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ನೆಗೆಟಿವ್ ರಿಫೊರ್ಟ್ ತಂದರಷ್ಟೆ ಕ್ಲಾಸ್ ಗೆ ಹಾಜರಾಗಲು ಅನುಮತಿ ನೀಡಲಾಗುತ್ತಿದೆ.
ಅಂದಹಾಗೇ ಕಳೆದ ಶುಕ್ರವಾರ, ಬಾಲಿಯ ಟೆಗಲಾಲಾಂಗ್ ನಲ್ಲಿರುವ ಈ ಅಕಾಡೆಮಿಯ 165 ವಿದ್ಯಾರ್ಥಿಗಳು ಪದವಿ ಪಡೆದರು. ಇದು ಅಕಾಡೆಮಿಯ ಮೂರನೇ ಪದವಿ ತರಗತಿಯಾಗಿದೆ. ಪದವಿ ಮುಗಿಸಿದ ಹಲವು ವಿದ್ಯಾರ್ಥಿಗಳು, ಇದೇ ಅಕಾಡೆಮಿಯಲ್ಲಿ ಅತಿಥಿ ಉಪನ್ಯಾಸಕರಾಗಿ ವೃತ್ತಿಜೀವನವನ್ನು ಮುಂದುವರಿಸಲು ಸಜ್ಜಾಗಿದ್ದಾರಂತೆ.
ಅದೇನೆಯಿರಲಿ, ನೈಸರ್ಗಿಕ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಅದನ್ನೇ ತನ್ನ ಆದಾಯದ ಮೂಲವನ್ನಾಗಿ ಪರಿವರ್ತಿಸುತ್ತಿರುವ ಈ ಕಾಲೇಜಿಗೊಂದು ಹ್ಯಾಟ್ಸ್ ಆಪ್. ನಮ್ಮ ದೇಶದಲ್ಲೂ ಶಿಕ್ಷಣ ಸಂಸ್ಥೆಗಳು ಇಂಥ ಸಮಾಜಮುಖಿ ಕೆಲಸ ಮಾಡಿದ್ರೆ, ಎಷ್ಟೋ ಬಡ ವಿದ್ಯಾರ್ಥಿಗಳು ತಮ್ಮ ಕನಸ್ಸನ್ನ ನನಸಾಗಿಸಿಕೊಳ್ಳಬಹುದು.
ಕೋವಿಡ್-19 ಮುಂಚೆಯೇ ಆನ್‌ಲೈನ್ ಶಿಕ್ಷಣಕ್ಕೆ ಹೋರಾಡಿದ್ದ ವಿದ್ಯಾರ್ಥಿನಿ