Kodagu: ಹಳೇ ವೈಷಮ್ಯಕ್ಕೆ ಕಾರು ಹತ್ತಿಸಿ ಹತ್ಯೆ, ಕೊಲೆಗಾರನ ರಹಸ್ಯ ಬಿಚ್ಚಿಟ್ಟ ಸಿಸಿ ಕ್ಯಾಮೆರಾ
ಮೀನು ಮಾರಾಟ ಮಾಡಿ ಮುಗಿಸಿ ಅಂಗಡಿ ಬಂದ್ ಮಾಡಿ ಮನೆಗೆ ಹೊರಟಿದ್ದ ತಾಸಿರ್ ಅಪಘಾತದಲ್ಲಿ ಮೃತಪಟ್ಟಿದ್ದ. ಆದರೆ ಅಪಘಾತ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾವನ್ನು ಪೊಲೀಸರು ಪರಿಶೀಲಸಿದಾಗ ಅದು ವೈಷಮ್ಯದ ಕೊಲೆ ಎನ್ನುವ ರಹಸ್ಯ ಬಯಲಾಗಿದೆ.
ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.17): ಆತ ಮೀನು ಮಾರಾಟ ಮಾಡಿ ಮುಗಿಸಿ ಅಂಗಡಿ ಬಂದ್ ಮಾಡಿ ಮನೆಗೆ ಹೊರಟಿದ್ದ. ಕತ್ತಲ ರಾತ್ರಿ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಾಸಿರ್ ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಅಪಘಾತವಾಗಿದ್ದ ತಾಸಿರ್ ಮನೆಯವರೆಲ್ಲಾ ಆಕಸ್ಮಿಕವಾಗಿ ನಡೆದ ಅಪಘಾತದಲ್ಲಿ ಸತ್ತಿರಬಹುದು ಎಂದು ಕೊಂಡಿದ್ದರು. ಆದರೆ ಅಲ್ಲಿದ್ದ ಸಿಸಿ ಕ್ಯಾಮೆರಾ ಸತ್ಯವನ್ನು ಬಯಲು ಮಾಡಿತ್ತು. ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದಲ್ಲಿ ಡಿಸೆಂಬರ್ 10 ರ ರಾತ್ರಿ ಹಿಂದಿನಿಂದ ಬಂದ ಕಾರೊಂದು ಅಲ್ಲಿನ ನಿವಾಸಿ ಮಹಮ್ಮದ್ ತಾಸಿರ್ ಎಂಬಾತನಿಗೆ ಹಿಂದಿನಿಂದ ಬಂದು ರಭಸವಾಗಿ ಆಕ್ಸಿಡೆಂಟ್ ಮಾಡಿತ್ತು. ಅಪಘಾತ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾವನ್ನು ಪೊಲೀಸರು ಪರಿಶೀಲಸಿದಾಗ ನಡೆದದ್ದು ಅಪಘಾತವಲ್ಲ, ಅದು ಕೊಲೆ ಎನ್ನುವ ರಹಸ್ಯ ಬಯಲಾಗಿತ್ತು.
ಅಪಘಾತ ಮಾಡಿದ್ದಾತ ಮೃತಪಟ್ಟ ಮೀನು ವ್ಯಾಪಾರಿ ಮಹಮ್ಮದ್ ತಾಸಿರ್ ಎಂಬಾತನ ಜೊತೆ ಜಗಳವಾಡಿ ದ್ವೇಷ ಕಟ್ಟಿಕೊಂಡಿದ್ದ ಪಾಲಿಬೆಟ್ಟದ ನಿವಾಸಿ ನೌಷದ್ ಉದ್ದೇಶ ಪೂರ್ವಕವಾಗಿ ಕಾರು ಹತ್ತಿಸಿ ಹತ್ಯೆ ಮಾಡಿದ್ದ ಎನ್ನುವುದು ಬಟಾಬಯಲಾಗಿತ್ತು. ಒಂದು ವಾರದ ಹಿಂದೆ ನಡೆದ ಪ್ರಕರಣವನ್ನು ಬೇಧಿಸಿದ ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದ ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರ ತಂಡ ಆರೋಪಿ ನೌಷದ್ನನ್ನು ಬಂಧಿಸಿದೆ. ಹಲವು ವರ್ಷಗಳಿಂದ ಪಾಲಿಬೆಟ್ಟದಲ್ಲಿ ವ್ಯಾಪಾರ ಮಾಡುತ್ತಿದ್ದ ತಾಸಿರ್ನ ಜೊತೆ ಕೆಲವು ತಿಂಗಳ ಹಿಂದೆ ನೌಷದ್ ಜಗಳ ಮಾಡಿಕೊಂಡಿದ್ದ. ಮೀನನ್ನು ಸರಿಯಾಗಿ ಕ್ಲೀನ್ ಮಾಡಿಲ್ಲ ಎಂಬ ವಿಷಯಕ್ಕೆ ತೀವ್ರ ಜಗಳವಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ತಾಸಿರ್ ನೌಷದ್ಗೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.
ಮದುವೆ ಮನೆಗೆ ಬಂದು ಮದುಮಗನನ್ನೇ ಅರೆಸ್ಟ್ ಮಾಡಿದ ಪೊಲೀಸ್, ಆತ ಮಾಡಿದ್ದೇನು?
ಇದರಿಂದ ತುಳಿಸಿಕೊಂಡ ಸರ್ಪದಂತೆ ಹೆಡೆಬಿಚ್ಚಿದ್ದ ನೌಷದ್ ತಾಸಿರ್ನನ್ನು ಮುಗಿಸುವುದಕ್ಕೆ ಯೋಚನೆ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಕೆಲವು ದಿನಗಳ ನಂತರ ಬೆಳಿಗ್ಗೆಯಿಂದ ಸಂಜೆವರೆಗೆ ಮೀನು ಮಾರಾಟ ಮುಗಿಸಿ ರಾತ್ರಿ ಮನೆ ಹೋಗುತ್ತಿದ್ದವನ ಮೇಲೆ ಆರೋಪಿ ನೌಷದ್ ವೇಗವಾಗಿ ಬಂದು ಹಿಂದಿನಿಂದ ಕಾರು ಹತ್ತಿಸಿದ್ದ. ವೇಗವಾಗಿ ಕಾರು ಗುದ್ದಿಸಿದ್ದರಿಂದ ತಾಸಿರ್ ಗಂಭೀರವಾಗಿ ಗಾಯಗೊಂಡಿದ್ದ. ಪಾಲಿಬೆಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಮೈಸೂರು ಆಸ್ಪತ್ರೆಗೆ ತಾಸಿರ್ ನನ್ನು ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಸಿರ್ ಕೊನೆಯುಸಿರು ಎಳೆದಿದ್ದ.
YADAGIRI CRIME: ಹತ್ತಿ ಹೊಲದಲ್ಲಿ ಮೈ ಮರೆತಿದ್ದ ಜೋಡಿಯನ್ನು ಕೊಡಲಿಯಿಂದ ಕತ್ತರಿಸಿ ಕೊಂದ ಪತಿ
ಹತ್ಯೆ ಮಾಡಿದ ಬಳಿಕ ಪಾಲಿಬೆಟ್ಟದಿಂದ ಸುಮಾರು 50 ಕಿಲೋ ಮೀಟರ್ ವರೆಗೆ ಕಾರು ಚಲಾಯಿಸಿಕೊಂಡು ಹೋಗಿದ್ದ ಖತರ್ನಾಕ್ ನೌಷದ್ ಬಳಿಕ ಕಾರನ್ನು ಮಡಿಕೇರಿ ವಿರಾಜಪೇಟೆ ಹೆದ್ದಾರಿ ಮಧ್ಯದಲ್ಲಿ ಬರುವ ಮೂರ್ನಾಡು ಬಳಿ ಅಪಘಾತ ಎಸಗಿದ್ದ ಕಾರನ್ನು ನಿಲ್ಲಿಸಿ ಅಲ್ಲಿಂದ ತಲೆ ಮರೆಸಿಕೊಂಡಿದ್ದ. ಬಳಿಕ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರು ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಸಿದ್ದಾಪುರ ಪೊಲೀಸರ ತಂಡವನ್ನು ರಚಿಸಿ ಪ್ರಕರಣ ಭೇದಿಸುವ ಜವಾಬ್ದಾರಿ ನೀಡಿದ್ದರು. ಒಂದು ವಾರದಿಂದ ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರು ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನೌಷದ್ನನ್ನು ಹೆಡೆಮುರಿಕಟ್ಟಿದ್ದಾರೆ. ಒಟ್ಟಿನಲ್ಲಿ ಮೀನು ಕ್ಲೀನ್ ಮಾಡುವ ವಿಷಯದಲ್ಲಿ ಶುರುವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯ ಆಗಿದ್ದಂತು ನಿಜಕ್ಕೂ ವಿಪರ್ಯಾಸ.