ಕಲಬುರಗಿ: ಕಾಂಗ್ರೆಸ್ ಶಾಸಕ ಎಂ.ವೈ ಪಾಟೀಲ ಆಪ್ತನ ಭೀಕರ ಹತ್ಯೆ, ಶವದ ಸುತ್ತ ಕುಣಿದು ವಿಕೃತಿ
ಜನನಿಬಿಡ ಚವಡಾಪುರ ಕ್ರಾಸ್ ಬಸ್‌ನಿಲ್ದಾಣದ ಎದುರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ। ಶವದ ಸುತ್ತ ಕುಣಿದು ಕೇಕೆ ಹಾಕಿ ವಿಕೃತಿ ಮೆರೆದ ಪುಂಡರು। ಕೊಲೆ ಹಿಂದೆ ಹಳೆ ವೈಷಮ್ಯ, ರಾಜಕೀಯವಿದೆ: ಎಂ.ವೈ.ಪಾಟೀಲ
ಕಲಬುರಗಿ(ಅ.14): ಜಿಲ್ಲೆಯ ಅಫಜಲ್ಪುರ ತಾಲೂಕಿನ ಚವಡಾಪೂರ ಕ್ರಾಸ್ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಹಾಡು ಹಗಲೇ ಬೆಳಗಿನ 9. 15 ರ ಹೊತ್ತಿಗೆ ಮದರಾ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ಹಾಲಿ ಅಫಜಲ್ಪುರ ಕಾಂಗ್ರೆಸ್ ಶಾಸಕರಾದ ಎಂ.ವೈ ಪಾಟೀಲರ ಆಪ್ತರಾಗಿದ್ದ ಗೌಡಪ್ಪಗೌಡ ಪಾಟೀಲ್ ಅವರನ್ನು ದುಷ್ಕರ್ಮಿಗಳು ಸುತ್ತುವರಿದು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಎಲ್ಲರೊಟ್ಟಿಗೆ ಮಾತನಾಡುತ್ತ ಚವಡಾಪೂರ ಬಸ್ ನಿಲ್ದಾಣದ ಬಳಿ ನಿಂತಾಗಲೇ 2 ಬೊಲೆರೋ ವಾಹನಗಳಲ್ಲಿ ಬಂದಿಳಿದ ಹಂತಕರು ಮಾರಕಾಸ್ತ್ರಗಳನ್ನು ಝಳಪಿಸುತ್ತ ಗೌಡಪ್ಪಗೌಡ ಮೇಲೆ ದಾಳಿ ಮಾಡಿದ್ದಾರೆ. ಕುತ್ತಿಗೆಗೆ ತಲ್ವಾರ್‌ನಿಂದ ಹೊಡೆದು, ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೊಲೆ ಮಾಡಿದ ಪುಂಡರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೊಡ್ಡಪ್ಪಗೌಡರ ಶವದ ಸುತ್ತ ಒಂದು ಸುತ್ತು ಕುಣಿದು ಕೇಕೆ ಹಾಕಿ ವಿಕೃತಿ ಮೆರೆದಿದ್ದಾರೆ. ಸ್ಥಳದಲ್ಲಿದ್ದ ನೂರಾರು ಜನ ತಮ್ಮ ಕಣ್ಣೆದುರೆ ನಡೆದ ಭೀಕರ ಕೊಲೆ ಘಟನೆಯಿಂದಾಗಿ ಗಾಬರಿಗೊಂಡು ಅಲ್ಲಿಂದ ಓಡಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಸುಪಾರಿ ಕೊಟ್ಟು ಮಗನನ್ನೇ ಕೊಲ್ಲಿಸಿದ ತಾಯಿ: ಹೆತ್ತ ಮಗನಿಗೇ ಮುಹೂರ್ತ ಇಟ್ಟಿದ್ಯಾಕೆ ?
ಕೊಲೆಯಿಂದಾಗಿ ಜನರಲ್ಲಿ ಭೀತಿ:
ಚವಡಾಪುರ ಕ್ರಾಸ್ ತುಂಬ ಜನ, ವಾಹನ ದಟ್ಟಣೆಯ ಸ್ಥಳವಾಗಿದೆ. ಇಲ್ಲೇ ಬಸ್‌ನಿಲ್ದಾಣ ಇರುವುದರಿಂದ ಹಂತಕರು ಹೊಂಚು ಹಾಕಿ ಗೌಡಪ್ಪ ಗೌಡನ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಿ ಕೊಂದು ಹಾಕಿರುವುದು ಚವಡಾಪೂರ ಭಾಗದಲ್ಲಿ ಭೀತಿಯ ಅಲೆ ಹುಟ್ಟುಹಾಕಿದೆ.
ಗೌಡಪ್ಪಗೌಡ ಪಾಟೀಲ್ ಗ್ರಾಪಂ ಅಧ್ಯಕ್ಷ:
ಗೌಡಪ್ಪ ಪಾಟೀಲ್ ಇತ್ತೀಚೆಗಷ್ಟೇ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮದರಾ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಜೊತೆಗೆ ಅಫಜಲ್ಪುರದ ಹಾಲಿ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲರ ಸಂಬಂಧಿಯೂ ಆಗಿದ್ದಾರೆ. ಗೊಡಪ್ಪಗೌಡ ಪಾಟೀಲ್ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕಲಬುರಗಿಗೆ ಪೊಲೀಸರು ರವಾನಿಸಿದ್ದಾರೆ. ಗಾಣಗಾಪುರ ಠಾಣೆ ವ್ಯಾಪ್ತಿಯಲ್ಲಿ ಈ ಕೊಲೆ ಘಟನೆ ನಡೆದಿದ್ದು ಸ್ಥಳಕ್ಕೆ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು, ಗಾಣಗಾಪೂರ ಪಿಎಸ್‌ಐ, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಘಟನೆಯನ್ನು ದಾಖಲಿಸಿಕೊಂಡಿರುವ ಗಾಣಗಾಪುರ ಪೊಲೀಸರು ಹಂತಕರ ಪತ್ತೆಗೆ ತಂಡ ರಚಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆಂದು ತಿಳಿದು ಬಂದಿದೆ.
ಶಾಸಕ ಎಂವೈ ಪಾಟೀಲ್ ಉನ್ನತ ತನಿಖೆಗೆ ಆಗ್ರಹ
ತಾವು ಪ್ರತಿನಿಧಿಸುತ್ತಿರುವ ಅಫಜಲ್ಪುರ ಕ್ಷೇತ್ರದ ಹೃದಯಭಾಗವಾದ ಚವಡಾಪುರದ ಬಸ್ ನಿಲ್ದಾಣದಲ್ಲಿ ಹಾಡಹಗಲೆ ತಮ್ಮ ಆಪ್ತರಾದ ಗೊಡಪ್ಪಗೌಡರ ಭೀಕರ ಕೊಲೆಯಾಗಿರುವ ಘಟನೆಯನ್ನು ಶಾಸಕ ಎಂ.ವೈ. ಪಾಟೀಲ್ ಉಗ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಉನ್ನತ ಮಟ್ಟದ ತನಿಖೆಗೂ ಆಗ್ರಹಿಸಿದ್ದಾರೆ.
ಮನುಷ್ಯರ ಮಿದುಳು ಬಗೆದು ಸೂಪ್ ಮಾಡ್ತಿದ್ದ ಡೆಡ್ಲಿ ಕಿಲ್ಲರ್: ಬೆಚ್ಚಿ ಬೀಳಿಸುವ ಮರ್ಡರ್ ಸ್ಟೋರಿ ಇದು
ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ನಮ್ಮ ಪಕ್ಷದವರಿಗೆ ಈ ರೀತಿ ಹಾಡಹಗಲೆ ಹೊಂಚುಹಾಕಿ ಕೊಲೆ ಮಾಡಿದ್ದಾರೆ. ಉದ್ದಿಮೆ, ವಹಿವಾಟಿನ ವೈಷಮ್ಯ, ರಾಜಕೀಯ, ಹಳೆ ವೈಷಮ್ಯಗಳೆಲ್ಲವೂ ಈ ಕೊಲೆ ಸಂಚಿನ ಹಿಂದೆ ಅಡಗಿವೆ. ಪೊಲೀಸರು ತಕ್ಷಣ ಹಂತಕರ ಪತ್ತೆಗೆ ಮುಂದಾಗಬೇಕು. ಪ್ರತ್ಯಕ್ಷದರ್ಶಿಗಳು ಅನೇಕರು ಕೊಲೆ ಮಾಡಿದವರು ಯಾರೆಂದು ಕಣ್ಣಾರೆ ಕಂಡಿದ್ದಾರೆ. ಪೊಲೀಸರು ಹಂತಕರ ಹೆಡಮುರಿ ಕಟ್ಟಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿ ಪ್ರಕರಣದ ಉನ್ನತ ತನಿಖೆಗೆ ಆಗ್ರಹಿಸುವೆ ಎಂದು ಶಾಸಕ ಎಂ ವೈ ಪಾಟೀಲ್ ಹೇಳಿದ್ದಾರೆ.
ಮತ್ತೆ ಸುದ್ದಿಯ ಮುನ್ನೆಲೆಗೆ ಬಂತು ಚವಡಾಪುರ ಕ್ರಾಸ್:
ಅಫಜಲ್ಪುರ ತಾಲೂಕಿನ ಚವಡಾಪುರ ಕ್ರಾಸ್‌ಗೆ ಅದರದ್ದೆ ಮಹತ್ವ, ಈ ತಾಲೂಕಿನ ಮಹತ್ವದ ರಾಜಕೀಯ ಘಟನಾವಳಿಗಳಿಗೆ ಇದೇ ಸಾಕ್ಷಿ ಎನ್ನಬಹುದು. ಹಿಂದೆ ಇದೇ ಕ್ರಾಸ್‌ನಲ್ಲಿ ದಿ. ವಿಠ್ಟಲ ಹೆರೂರ್ ಮೇಲೆ ಕೊಲೆ ಯತ್ನವಾಗಿತ್ತು. ಇದಲ್ಲದೆ ಈ ಘಟನೆ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದಾದ ನಂತರ ಮಾಜಿ ಸಚಿವರಾದ ಮಾಲೀಕಯ್ಯಾ ಗುತ್ತೇದಾರ್ ರಾಜಕೀಯ ಬದುಕಿಗೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳಿಗೂ ಇದೇ ಚವಡಾಪೂರ ಕ್ರಾಸ್ ವೇದಿಕೆಯಾಗಿತ್ತು. ಇದೀಗ ಗೌಡಪ್ಪಗೌಡ ಕೊಲೆಯೊಂದಿಗೆ ಮತ್ತೆ ಚವಡಾಪುರ ಕ್ರಾಸ್ ಸುದ್ದಿಯ ಮುನ್ನೆಲೆಗೆ ಬಂದು ನಿಂತಿದೆ.