ಮತ್ತೊಬ್ಬನೊಂದಿಗೆ ಸಲುಗೆ ಸಹಿಸದೆ ತಾಯಿ-ಮಗನ ಕೊಂದ ಪ್ರಿಯಕರ!
ಮಂಗಳವಾರ ನಗರದಲ್ಲಿ ನಡೆದ ತಾಯಿ-ಮಗನ ಜೋಡಿ ಕೊಲೆ ಪ್ರಕರಣ ಸಂಬಂಧ ಮೃತಳ ಪ್ರಿಯಕರನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಸೆ.8) : ಮಂಗಳವಾರ ನಗರದಲ್ಲಿ ನಡೆದ ತಾಯಿ-ಮಗನ ಜೋಡಿ ಕೊಲೆ ಪ್ರಕರಣ ಸಂಬಂಧ ಮೃತಳ ಪ್ರಿಯಕರನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುವೆಂಪುನಗರ ನಿವಾಸಿ ಶೇಖರ್ ಅಲಿಯಾಸ್ ಶೇಖರಪ್ಪ (38) ಬಂಧಿತ. ಆರೋಪಿ ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ರಾತ್ರಿ ಬಾಗಲಗುಂಟೆಯ ರವೀಂದ್ರನಗರದ ಗುಡ್ಡೆ ನಿವಾಸಿ ನವನೀತಾ (35) ಮತ್ತು ಆಕೆಯ ಪುತ್ರ ಸಾಯಿ ಸೃಜನ್(8)ನನ್ನು ಕೊಲೆಗೈದು ಪರಾರಿಯಾಗಿದ್ದ. ಘಟನಾ ಸ್ಥಳದಲ್ಲಿನ ತಾಂತ್ರಿಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಮನೆಗೆ ನುಗ್ಗಿ ತಾಯಿ-ಮಗನ ಭೀಕರ ಕೊಲೆ; ಕೊಂದಿದ್ದು ಪತಿಯಾ? ಪರಿಚಿತನಾ? ತನಿಖೆ
ಆಂಧ್ರಪ್ರದೇಶದ ಅನಂತಪುರ ಮೂಲದ ನವನೀತಾ ಮತ್ತು ಚಂದ್ರು ದಂಪತಿಗೆ ಸಾಯಿ ಸೃಜನ್ ಮತ್ತು ಸಾಯಿ ಅಭಿಷೇಕ್ ಪುತ್ರರಿದ್ದರು. ಎಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಟಿ.ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪುತ್ರ ಸಾಯಿ ಅಭಿಷೇಕ್‌ನನ್ನು ಆಂಧ್ರಪ್ರದೇಶದಲ್ಲಿ ಹಾಸ್ಟೆಲ್‌ಗೆ ಸೇರಿದ್ದರು. ಪತಿ ಚಂದ್ರು ಮದ್ಯ ವ್ಯಸನಿಯಾಗಿದ್ದ. ಹೀಗಾಗಿ ಎರಡು ವರ್ಷದಿಂದ ನವನೀತಾ ತನ್ನ ಪುತ್ರ ಸಾಯಿ ಸೃಜನ್ ಜತೆಗೆ ಪ್ರತ್ಯೇಕವಾಗಿ ರವೀಂದ್ರನಗರ ಗುಡ್ಡೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಖಾಸಗಿ ಕಾಲ್ ಸೆಂಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಮತ್ತೊಬ್ಬನೊಂದಿಗೆ ಸಲುಗೆ ಬೆಳೆಸಿದ್ದಕ್ಕೆ ಕೊಲೆ:
ಈ ನಡುವೆ ನವನೀತಾಗೆ ಎಲೆಕ್ಟ್ರಿಷಿಯನ್ ಶೇಖರ್ ಪರಿಚಯವಾಗಿ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಸಂಬಂಧ ಇರಿಸಿಕೊಂಡಿದ್ದರು. ಇತ್ತೀಚೆಗೆ ನವನೀತಾಗೆ ಲೋಕೇಶ್ ಎಂಬಾತನ ಪರಿಚಯವಾಗಿ ಆತನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಈ ವಿಚಾರ ಶೇಖರ್‌ಗೆ ಗೊತ್ತಾಗಿ ನವನೀತಾಗೆ ಜತೆಗೆ ಜಗಳ ಮಾಡುತ್ತಿದ್ದ. ಮಂಗಳವಾರ ರಾತ್ರಿ ನವನೀತಾ ಮನೆಗೆ ಬಂದಿರುವ ಶೇಖರ್, ಲೋಕೇಶ್ ವಿಚಾರ ಪ್ರಸ್ತಾಪಿಸಿ ಜಗಳ ಮಾಡಿದ್ದಾನೆ. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಶೇಖರ್ ಚಾಕುವಿನಿಂದ ನವನೀತಾಳ ಕತ್ತು ಕುಯ್ದು ಬಳಿಕ ಆಕೆಯ ಮಗ ಸಾಯಿ ಸೃಜನ್‌ನನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಅಡುಗೆ ಮನೆಯಲ್ಲಿ ಗ್ಯಾಸ್ ಸ್ಟೌವ್ ಆನ್ ಮಾಡಿ ಮನೆಗೆ ಹೊರಗಡೆಯಿಂದ ಲಾಕ್ ಮಾಡಿಕೊಂಡು ಪರಾರಿಯಾಗಿದ್ದ.
ಗೆಳೆಯನೆಂದು ಮನೆಯೊಳಗೆ ಬಿಟ್ಟುಕೊಂಡಿದ್ದೇ ತಪ್ಪಾಯ್ತು, ಪಾಲಿಕೆ ಸದಸ್ಯ ಮಾಡಿದ್ದೇನು ಗೊತ್ತಾ?
ಬುಧವಾರ ಮಧ್ಯಾಹ್ನ ಮನೆಯಿಂದ ಗ್ಯಾಸ್ ಸೋರಿಕೆ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಅನುಮಾನಗೊಂಡು ನೋಡಿದಾಗ ಜೋಡಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಮೃತ ನವನೀತಾ ತಾಯಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿ ಶೇಖರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.