Asianet Suvarna News Asianet Suvarna News

ಮನೆಗೆ ನುಗ್ಗಿ ತಾಯಿ-ಮಗನ ಭೀಕರ ಕೊಲೆ; ಕೊಂದಿದ್ದು ಪತಿಯಾ? ಪರಿಚಿತನಾ? ತನಿಖೆ

ತಾಯಿ ಹಾಗೂ ಎಂಟು ವರ್ಷದ ಮಗನನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆಗೈದಿರುವ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರವೀಂದ್ರನಾಥ ಗುಡ್ಡೆ ನಿವಾಸಿ ನವನೀತಾ (35) ಮತ್ತು ಆಕೆಯ ಪುತ್ರ ಸಾಯಿ ಸೃಜನ್‌ (8) ಕೊಲೆಯಾದವರು. 

Terrible murder of mother-son in bagalagunte at bengaluru rav
Author
First Published Sep 7, 2023, 5:04 AM IST

ಬೆಂಗಳೂರು (ಸೆ.7) :  ತಾಯಿ ಹಾಗೂ ಎಂಟು ವರ್ಷದ ಮಗನನ್ನು ದುಷ್ಕರ್ಮಿಗಳು ಅಮಾನುಷವಾಗಿ ಕೊಲೆಗೈದಿರುವ ಘಟನೆ ಬಾಗಲಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರವೀಂದ್ರನಾಥ ಗುಡ್ಡೆ ನಿವಾಸಿ ನವನೀತಾ (35) ಮತ್ತು ಆಕೆಯ ಪುತ್ರ ಸಾಯಿ ಸೃಜನ್‌ (8) ಕೊಲೆಯಾದವರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಈ ಘಟನೆ ಬೆಳಕಿಗೆ ಬಂದಿದೆ. ಕೊಲೆಗೆ ಸದ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪರಿಚಿತ ವ್ಯಕ್ತಿಗಳೇ ಈ ಕೃತ್ಯ ಎಸೆಗಿರುವ ಶಂಕೆಯಿದೆ. ವಿಶೇಷ ತಂಡ ದುಷ್ಕರ್ಮಿಗಳ ಪತ್ತೆಗೆ ಕಾರ್ಯ ಪ್ರವೃತ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರ ಮೂಲದ ನವನೀತಾ ಮತ್ತು ಚಂದ್ರು ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಸಾಯಿ ಸೃಜನ್‌ ಎಂಬ ಪುತ್ರನಿದ್ದ. ಎಂಟು ವರ್ಷಗಳ ಬೆಂಗಳೂರಿಗೆ ಬಂದು ಬಾಗಲಗುಂಟೆಯ ರವೀಂದ್ರನಾಥ ಗುಡ್ಡೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆರಂಭದಲ್ಲಿ ದಂಪತಿ ಪೇಟಿಂಗ್‌ ಕೆಲಸ ಮಾಡುತ್ತಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಎರಡು ವರ್ಷದ ಹಿಂದೆ ದಂಪತಿ ದೂರವಾಗಿದ್ದರು.

13 ದಿನ ಬಳಿಕ ಮತ್ತೆ ಮಣಿಪುರದಲ್ಲಿ ಹಿಂಸೆ: ಕೈ ಕಾಲು ಕತ್ತರಿಸಿ ಮೂವರು ಯುವಕರ ಭೀಕರ ಕೊಲೆ

ಪತಿಯಿಂದ ಆಗಾಗ ಮನೆ ಬಳಿ ಗಲಾಟೆ:

ನವನೀತಾ ತಮ್ಮ ಪುತ್ರನೊಂದಿಗೆ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಖಾಸಗಿ ಕಾಲ್‌ ಸೆಂಟರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಆಗಾಗ ಪತಿ ಚಂದ್ರು ಮದ್ಯ ಸೇವಿಸಿ ಮನೆ ಬಳಿ ಬಂದು ಪತ್ನಿ ನವನೀತಾ ಜತೆಗೆ ಗಲಾಟೆ ಮಾಡುತ್ತಿದ್ದ ಎಂಬ ವಿಚಾರ ತಿಳಿದು ಬಂದಿದೆ. ಇದೀಗ ಕೊಲೆ ಹಿನ್ನೆಲೆಯಲ್ಲಿ ಪೊಲೀಸರು ಚಂದ್ರುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಗ್ಯಾಸ್‌ ವಾಸನೆ:

ಮಂಗಳವಾರ ಮಧ್ಯಾಹ್ನ ನವನೀತಾ ಮನೆ ಬಳಿ ಅಡುಗೆ ಅನಿಲ ಸೋರಿಕೆಯಾಗಿದ್ದು, ವಾಸನೆ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ನವನೀತಾ ಅವರ ಮನೆಯ ಬಾಗಿಲು ಬಡಿದಿದ್ದಾರೆ. ಈ ವೇಳೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮಾನಗೊಂಡು ಕಿಟಕಿ ಗಾಜು ಒಡೆದು ಇಣುಕಿ ನೋಡಿದಾಗ ಹಾಸಿಗೆ ಮೇಲೆ ನವನೀತಾ ಮತ್ತು ಆಕೆಯ ಮಗ ಸೃಜನ್‌ ಮೃತದೇಹ ಪತ್ತೆಯಾಗಿದೆ. ಇದೇ ಸಮಯಕ್ಕೆ ನವನೀತಾ ತಾಯಿ ಮನೆ ಬಳಿ ಬಂದಿದ್ದು, ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ ಜೋಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಮನೆ ಪ್ರವೇಶಿಸಿ ನೋಡಿದಾಗ ದುಷ್ಕರ್ಮಿಗಳು ಹರಿತವಾದ ವಸ್ತುವಿನಿಂದ ನವನೀತಾ ಅವರ ಕುತ್ತಿಗೆ ಕೊಯ್ದು ಮತ್ತು ಆಕೆಯ ಪಕ್ಕದಲ್ಲೇ ಸೃಜನ್‌ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಗೊತ್ತಾಗಿದೆ.

ಪತಿ ಚಂದ್ರು ಪೊಲೀಸರ ವಶಕ್ಕೆ?

ಮಗಳು ಮತ್ತು ಅಳಿಯ ಕೌಟುಂಬಿಕ ಕಲಹದಿಂದ ಕಳೆದ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿರುವ ವಿಚಾರ ಹಾಗೂ ಚಂದ್ರು ಆಗಾಗ ಮದ್ಯ ಸೇವಿಸಿ ಮನೆ ಬಳಿ ಬಂದು ಮಗಳ ಜತೆಗೆ ಗಲಾಟೆ ಮಾಡುತ್ತಿದ್ದ ವಿಚಾರದ ಬಗ್ಗೆ ನವನೀತಾ ತಾಯಿ ಮಾಹಿತಿ ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಚಂದ್ರುನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಈವರೆಗೂ ಈ ಜೋಡಿ ಕೊಲೆಯಲ್ಲಿ ಆತನ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಪೊಲೀಸರು ಆತನ ವಿಚಾರಣೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.

ಪರಿಚಿತನಿಂದಲೇ ಕೃತ್ಯ?

ಕೊಲೆಯಾದ ನವನೀತಾ ಪತಿಯಿಂದ ದೂರವಾದ ಬಳಿಕ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಾಮಾಜಿಕ ಜಾಲಾತಾಣ ಇನ್ಸ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಈ ವೇಳೆ ಪರಿಚಯವಾಗಿದ್ದ ಕೆಲ ಪುರುಷರ ಜತೆಗೆ ನವನೀತಾ ಆತ್ಮೀಯವಾಗಿದ್ದರು. ಕೆಲವು ಪುರುಷರು ಆಗಾಗ ನವನೀತಾ ಮನೆಗೆ ಬಂದು ಹೋಗುತ್ತಿದ್ದರು ಎಂಬ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಪರಿಚಿತ ವ್ಯಕ್ತಿಯೇ ನವನೀತಾ ಮನೆಗೆ ಬಂದು ಜೋಡಿ ಕೊಲೆ ಮಾಡಿರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಾಂತ್ರಿಕ ಸುಳಿವು ಆಧರಿಸಿ ತನಿಖೆ ಮುಂದುವರೆಸಿದ್ದಾರೆ. 

ಅಪ್ಪನ ತೀಟೆಗೆ ಹೊರಟೋಯ್ತು ಪುಟ್ಟ ಮಗನ ಪ್ರಾಣ: ತಂದೆಯ ಲೀವಿಂಗ್ ಪಾರ್ಟನರ್‌ನಿಂದ ಮಗನ ಕೊಲೆ

ಕಿಚನ್‌ನಲ್ಲಿ ಗ್ಯಾಸ್‌ ಆನ್‌ ಮಾಡಿ ಪರಾರಿ

ದುಷ್ಕರ್ಮಿ ನವನೀತಾ ಮತ್ತು ಸೃಜನ್‌ನನ್ನು ಕೊಲೆ ಮಾಡಿದ ಬಳಿಕ ಅಡುಗೆ ಮನೆಯಲ್ಲಿ ಗ್ಯಾಸ್‌ ಸ್ಟೌವ್‌ ಆನ್‌ ಮಾಡಿದ್ದಾನೆ. ಗ್ಯಾಸ್‌ ಸೋರಿಕೆಯಿಂದ ತಾಯಿ-ಮಗ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ದುಷ್ಕರ್ಮಿ ಗ್ಯಾಸ್‌ ಸ್ಟೌವ್‌ ಆನ್‌ ಮಾಡಿರುವ ಸಾಧ್ಯತೆಯಿದೆ.

Follow Us:
Download App:
  • android
  • ios