Asianet Suvarna News Asianet Suvarna News

ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌: ಪ್ರಮುಖ 3 ಆರೋಪಿಗಳ ಬಂಧನ

ಕೊಲೆ ನಡೆದ 15 ದಿನಗಳ ಬಳಿಕ ಕೇರಳ ಗಡಿಯ ತಲಪ್ಪಾಡಿಯಲ್ಲಿ ಸೆರೆ, ಬಂಧಿತರಿಗೆ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಜತೆ ನಂಟಿನ ಸುಳಿವು

Arrest of 3 Main Accused of Praveen Nettaru Murder Case grg
Author
Bengaluru, First Published Aug 12, 2022, 6:33 AM IST

ಮಂಗಳೂರು(ಆ.12):  ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಸುಳ್ಯದವರೇ ಆದ ಈ ಮೂವರು ಆರೋಪಿಗಳನ್ನು ಕೇರಳ ಗಡಿಯಲ್ಲಿರುವ ರಾಜ್ಯದ ತಲಪಾಡಿ ಸಮೀಪ ಬಂಧಿಸಲಾಗಿದ್ದು, ಇವರಿಗೆ ಎಸ್‌ಡಿಪಿಐ-ಪಿಎಫ್‌ಐ ಜತೆ ಸಂಪರ್ಕ ಇರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಳ್ಯದ ಸಿಯಾಬುದ್ದೀನ್‌ (33), ರಿಯಾಜ್‌ ಅಂಕತ್ತಡ್ಕ (27), ಬಶೀರ್‌ ಎಲಿಮಲೆ (29) ಬಂಧಿತರು. ಈ ಮೂಲಕ ಪ್ರವೀಣ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಈ ಮೂವರು ಪ್ರಮುಖ ಆರೋಪಿಗಳು ಸೇರಿ ಒಟ್ಟಾರೆ ಈವರೆಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.

ಕ್ಯಾಂಪ್ಕೊ ಕಂಪನಿಗೆ ಸಿಯಾಬುದ್ದೀನ್‌ ಕೊಕ್ಕೊ ಪೂರೈಕೆ ಮಾಡುತ್ತಿದ್ದ, ರಿಯಾಜ್‌ ಅಂಕತ್ತಡ್ಕ ಕೋಳಿ ಮಾಂಸ ಪೂರೈಕೆ ಕೆಲಸ ಮಾಡುತ್ತಿದ್ದರೆ ಇನ್ನು, ಬಶೀರ್‌ ಎಲಿಮಲೆ ಹೊಟೇಲ್‌ವೊಂದರಲ್ಲಿ ಕೆಲಸಕ್ಕಿದ್ದ. ಇವರನ್ನು ಕೋರ್ಚ್‌ಗೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪ್ರವೀಣ್ ಹತ್ಯೆ ಕೇಸ್, ಪೊಲೀಸ್ರಿಗೆ ಪ್ರಮುಖ ಆರೋಪಿ ಸುಳಿವು, ಆಸ್ತಿ ಮುಟ್ಟುಗೋಲಿಗೆ ಸಜ್ಜು

ತಲಪಾಡಿಯಲ್ಲಿ ಸೆರೆ:

ಪ್ರಮುಖ ಆರೋಪಿಗಳ ಬಗ್ಗೆ ಮೊದಲೇ ಮಾಹಿತಿ ಇತ್ತು. ಆದರೆ ಇವರು ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದುದರಿಂದ ಬಂಧನಕ್ಕೆ 15 ದಿನ ಬೇಕಾಯಿತು. ಗುರುವಾರ ಬೆಳಗ್ಗೆ 8 ಗಂಟೆ ವೇಳೆಗೆ ಇವರನ್ನು ತಲಪಾಡಿ ಚೆಕ್‌ಪೋಸ್ಟ್‌ ಬಳಿ ಬಂಧಿಸಲಾಯಿತು ಎಂದು ತಿಳಿಸಿದರು.

ಪಿಎಫ್‌ಐ, ಎಸ್‌ಡಿಪಿಐ ಸಂಪರ್ಕ:

ಆರೋಪಿಗಳಿಗೆ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಜತೆ ಸಂಪರ್ಕ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕೃತ್ಯ ನಡೆಸಿದ ಬಳಿಕ ಇವರು ಎಲ್ಲೆಲ್ಲಿ ಬಚ್ಚಿಟ್ಟುಕೊಂಡಿದ್ದರು, ಯಾರಾರ‍ಯರು ಇವರಿಗೆ ಸಹಕಾರ ನೀಡಿದ್ದಾರೆ, ಯಾರು ಆಶ್ರಯ ನೀಡಿದ್ದರು ಇತ್ಯಾದಿ ವಿಚಾರಗಳ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಿ ಆರೋಪಿಗಳಿಗೆ ಸಹಕಾರ ನೀಡಿದ ಎಲ್ಲರನ್ನೂ ಬಂಧಿಸಲಾಗುವುದು. ಮುಖ್ಯವಾಗಿ ಯಾವ ಉದ್ದೇಶಕ್ಕಾಗಿ ಕೊಲೆ ಕೃತ್ಯ ಎಸಗಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಪೊಲೀಸ್‌ ಕಸ್ಟಡಿಗೆ ಪಡೆದ ಬಳಿಕ ಈ ಎಲ್ಲ ವಿಚಾರಗಳು ಗೊತ್ತಾಗಲಿವೆ ಎಂದು ಎಡಿಜಿಪಿ ಹೇಳಿದರು.

ಹಂತಕರ ಮೇಲೆ ಈ ಹಿಂದೆ ದೊಡ್ಡಮಟ್ಟದ ಅಪರಾಧ ಪ್ರಕರಣಗಳು ದಾಖಲಾಗಿಲ್ಲ. ಪ್ರಕರಣದಲ್ಲಿ ಈ ಹಿಂದೆ ಬಂಧಿತ ಸುಳ್ಯದ ಶಫೀಕ್‌ನ ತಂದೆ ಇಬ್ರಾಹಿಂ ಮೂರು ತಿಂಗಳ ಕಾಲ ಪ್ರವೀಣ್‌ ನೆಟ್ಟಾರು ಕೋಳಿ ಅಂಗಡಿಯಲ್ಲಿ ಕೆಲಸಕ್ಕಿದ್ದು, ಪರಸ್ಪರ ಪರಿಚಯಸ್ಥರಾಗಿದ್ದರು. ಆದರೆ ಹಂತಕರಿಗೆ ಪ್ರವೀಣ್‌ ಜತೆ ಯಾವ ರೀತಿಯ ಸಂಪರ್ಕ ಇತ್ತು, ಪ್ರವೀಣ್‌ ಅವರನ್ನೇ ಯಾಕೆ ಆರೋಪಿಗಳು ಟಾರ್ಗೆಟ್‌ ಮಾಡಿದರು ಎನ್ನುವುದು ತನಿಖೆ ಮೂಲಕ ಗೊತ್ತಾಗಬೇಕಿದೆ ಎಂದರು.

ಎನ್‌ಐಎಗೆ ಹಸ್ತಾಂತರ:

ಪ್ರವೀಣ್‌ ಹತ್ಯೆಗೆ ಕಪ್ಪು ಬಣ್ಣದ ಸ್ಪೆ$್ಲಂಡರ್‌ ಬೈಕ್‌ ಬಳಕೆ ಮಾಡಿದ್ದರು. ಹತ್ಯೆ ಬಳಿಕ ತಲೆಮರೆಸಿಕೊಳ್ಳಲು ಐದು ದ್ವಿಚಕ್ರ ವಾಹನಗಳು, ಒಂದು ಆಲ್ಟೊಕಾರನ್ನು ಬಳಸಿದ್ದಾರೆ. ಈ ಎಲ್ಲ ವಾಹನಗಳು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಬೇಕಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಎಲ್ಲ ಬಗೆಯ ತನಿಖೆ, ಪಂಚನಾಮೆ ನಡೆಸಿದ ಬಳಿಕ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರ ಮಾಡಲಾಗುವುದು ಎಂದು ಎಡಿಜಿಪಿ ತಿಳಿಸಿದರು.

ಬೇಕಲ್‌ ಮಸೀದಿಗೆ ತೆರಳಿದ್ದ ಹಂತಕರು!

ಪ್ರವೀಣ್‌ ಹತ್ಯೆ ಆರೋಪಗಳಿಗೆ ಮತೀಯ ಸಂಘಟನೆಗಳ ಜತೆ ಸಂಪರ್ಕ ಇರುವುದರೊಂದಿಗೆ ಕೇರಳದ ಲಿಂಕ್‌ ಕೂಡ ಇರುವುದು ತನಿಖೆಯಲ್ಲಿ ಗೊತ್ತಾಗಿದೆ. ಜು.26ರಂದು ರಾತ್ರಿ 8.30ರ ವೇಳೆಗೆ ಪ್ರವೀಣ್‌ ನೆಟ್ಟಾರು ಅವರನ್ನು ಅವರ ಕೋಳಿ ಅಂಗಡಿ ಎದುರು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಮೂವರು ಹಂತಕರು ನೇರವಾಗಿ ಕೇರಳದ ಕಾಸರಗೋಡಿನ ಬೇಕಲ್‌ ಮಸೀದಿಗೆ ತೆರಳಿದ್ದರು. ನಂತರ ವಿವಿಧ ಕಡೆಗಳಿಗೆ ಸ್ಥಳಾಂತರ ಆಗುತ್ತಾ ತಲೆಮರೆಸಿಕೊಂಡಿದ್ದರು ಎಂದು ಎಡಿಜಿಪಿ ತಿಳಿಸಿದ್ದಾರೆ.

Praveen Nettaru Murder: ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಆರೋಪಿಗಳು?

ಸಂಘಟನೆ ಮುಖಂಡರ ಬಂಧನ ಸಾಧ್ಯತೆ

ಪ್ರವೀಣ್‌ ಹತ್ಯೆಯ ಪ್ರಮುಖ ಆರೋಪಿಗಳ ಬಂಧನದ ಬೆನ್ನಲ್ಲೇ ಮತೀಯ ಸಂಘಟನೆಯ ಹಲವು ಮುಖಂಡರಿಗೆ ಬಂಧನದ ಭೀತಿ ಉಂಟಾಗಿದೆ. ಸಂಘಟನೆ ಕಚೇರಿಯಲ್ಲಿ ಹತ್ಯೆ ಸಂಚು ರೂಪಿಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಆರೋಪಿಗಳನ್ನು ಕಚೇರಿಗೆ ಕರೆದೊಯ್ದು ಮಹಜರು ನಡೆಸಲಾಗಿತ್ತು. ಈಗ ಪ್ರಮುಖ ಆರೋಪಿಗಳೇ ಸಿಕ್ಕಿಬಿದ್ದಿರುವುದರಿಂದ ಸಂಘಟನೆಗಳ ಹಲವು ಮುಖಂಡರು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಬಂಧಿತರಿಗೆ ಪಿಎಫ್‌ಐ, ಎಸ್‌ಡಿಪಿಐ ಸಂಪರ್ಕ

ಪದೇಪದೇ ಸ್ಥಳ ಬದಲಾಯಿಸುತ್ತಿದ್ದ ಕಾರಣ ಈ ಮೂವರ ಬಂಧನಕ್ಕೆ 15 ದಿನ ಬೇಕಾಯಿತು. ಬಂಧಿತರಿಗೆ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಜತೆ ಸಂಪರ್ಕ ಇರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಅಂತ ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios