ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿಂದು ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ಆಫ್ಘಾನಿಸ್ತಾನ ತಂಡಗಳು ಇಲ್ಲಿನ ಗ್ರಾಸ್ ಐಲೆಟ್‌ನ ಡ್ಯಾರೆನ್ ಸ್ಯಾಮಿ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ತಂಡವು ಸಿಡಿಲಬ್ಬರದ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು.
ಸೇಂಟ್ ಲೂಸಿಯಾ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಹಲವು ದಾಖಲೆಗಳು ನಿರ್ಮಾಣವಾಗುತ್ತಲೇ ಬಂದಿದೆ. ಈ ಪಟ್ಟಿಗೆ ಇದೀಗ ಹೊಸ ಸೇರ್ಪಡೆಯಾಗಿದ್ದು, ಆಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಪವರ್ ಪ್ಲೇನಲ್ಲಿ ಅತಿಹೆಚ್ಚು ರನ್ ಸಿಡಿಸಿದ ತಂಡ ಎನ್ನುವ ಕೀರ್ತಿಗೆ ಪಾತ್ರವಾಗಿದೆ.
ಹೌದು, ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿಂದು ಆತಿಥೇಯ ವೆಸ್ಟ್ ಇಂಡೀಸ್ ಹಾಗೂ ಆಫ್ಘಾನಿಸ್ತಾನ ತಂಡಗಳು ಇಲ್ಲಿನ ಗ್ರಾಸ್ ಐಲೆಟ್‌ನ ಡ್ಯಾರೆನ್ ಸ್ಯಾಮಿ ಮೈದಾನದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ತಂಡವು ಸಿಡಿಲಬ್ಬರದ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ವಿಂಡೀಸ್ ತಂಡವು ಎರಡನೇ ಓವರ್‌ನಲ್ಲಿ ಆರಂಭಿಕ ಬ್ಯಾಟರ್ ಬ್ರೆಂಡನ್ ಕಿಂಗ್ ಅವರ ವಿಕೆಟ್ ಕಳೆದುಕೊಂಡಿತಾದರೂ, ಆ ಬಳಿಕ ಜತೆಯಾದ ಜಾನ್ಸನ್ ಚಾರ್ಲ್ಸ್ ಹಾಗೂ ನಿಕೋಲಸ್ ಪೂರನ್ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಮೊದಲ ಆರು ಓವರ್‌ನಲ್ಲಿ ದಾಖಲೆಯ ರನ್ ಕಲೆಹಾಕುವಲ್ಲಿ ಯಶಸ್ವಿಯಾದರು.
ಈ ಜೋಡಿ ಮೊದಲ 6 ಅಂತ್ಯದ ವೇಳೆಗೆ 92 ರನ್ ಚಚ್ಚುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲೇ ಪವರ್ ಪ್ಲೇ ನಲ್ಲಿ ಗರಿಷ್ಠ ರನ್ ಗಳಿಸಿದ ತಂಡ ಎನ್ನುವ ದಾಖಲೆ ನಿರ್ಮಿಸಿದೆ. ಈ ಮೂಲಕ 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ಎದುರು ನೆದರ್‌ಲ್ಯಾಂಡ್ಸ್ ತಂಡವು ಬಾರಿಸಿದ್ದ 91 ರನ್ ದಾಖಲೆಯನ್ನು ಅಳಿಸಿ ಹಾಕುವಲ್ಲಿ ವಿಂಡೀಸ್ ತಂಡವು ಯಶಸ್ವಿಯಾಗಿದೆ.
ಪಾಕಿಸ್ತಾನ, ನ್ಯೂಜಿಲೆಂಡ್ ಸೇರಿ 2026ರ ಟಿ20 ವಿಶ್ವಕಪ್‌ಗೆ 12 ತಂಡಗಳಿಗೆ ನೇರ ಅರ್ಹತೆ..!
ವಿಂಡೀಸ್‌ಗೆ ಸುಲಭ ಜಯ:
ಆಫ್ಘಾನ್ ಎದುರು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು, ಎಡಗೈ ಬ್ಯಾಟರ್ ನಿಕೋಲಸ್ ಪೂರನ್ ಬಾರಿಸಿದ ಶತಕವಂಚಿತ(98) ಅರ್ಧಶತಕ ಹಾಗೂ ಜಾನ್ಸನ್ ಚಾರ್ಲ್ಸ್(43) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಿತು.
ಇನ್ನು ಕಠಿಣ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನ ತಂಡವು, ವಿಂಡೀಸ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಹೋಗುವ ಮೂಲಕ ಕೇವಲ 16.2 ಓವರ್‌ಗಳಲ್ಲಿ 114 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ರಶೀದ್ ಖಾನ್ ಪಡೆ 104 ರನ್ ಅಂತರದಲ್ಲಿ ಸೋಲೊಪ್ಪಿಕೊಂಡಿತು.
4 ಓವರ್, 4 ಮೇಡನ್, 3 ವಿಕೆಟ್: ಲಾಕಿ ಫರ್ಗ್ಯೂಸನ್ ಬೆಂಕಿ ಬೌಲಿಂಗ್ ಗುಣಗಾನ ಮಾಡಿದ ವಿಲಿಯಮ್ಸನ್..!
ವೆಸ್ಟ್ ಇಂಡೀಸ್ ಪರ ಒಬೆಡ್ ಮೆಕಾಯ್ 14 ರನ್ ನೀಡಿ 3 ವಿಕೆಟ್ ಪಡೆದರೆ, ಗುದಕೇಶ್ ಮೋಟಿ ಹಾಗೂ ಅಕೇಲ್ ಹೊಸೈನ್ ತಲಾ 2 ಮತ್ತು ಆಂಡ್ರೆ ರಸೆಲ್ ಹಾಗೂ ಅಲ್ಜಾರಿ ಜೋಸೆಫ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
