ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ
ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ರೋಚಕ ಘಟ್ಟದತ್ತ ಸಾಗುತ್ತಿದೆ. 356 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ, ಸರ್ಫರಾಜ್ ಖಾನ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 344 ರನ್ ಬಾರಿಸಿದ್ದು, ಮೊದಲ ಇನ್ನಿಂಗ್ಸ್ ಬಾಕಿ ಚುಕ್ತಾ ಮಾಡಲು ಭಾರತಕ್ಕೆ ಕೇವಲ 12 ರನ್ ಅಗತ್ಯವಿದೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವು ಇದೀಗ ಸಾಕಷ್ಟು ರೋಚಕತೆಯತ್ತ ಸಾಗುತ್ತಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿತ್ತು. ಈ ಮೂಲಕ ಇನ್ನೂ 125 ರನ್‌ಗಳ ಹಿನ್ನಡೆಯಲ್ಲಿತ್ತು. ಆದರೆ ನಾಲ್ಕನೇ ದಿನದಾಟದಲ್ಲಿ ರಿಷಭ್ ಪಂತ್ ಹಾಗೂ ಸರ್ಫರಾಜ್ ಖಾನ್ ಅತ್ಯಂತ ಜವಾಬ್ದಾರಿಯುತ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಅಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾದರು.
ಸರ್ಫರಾಜ್ ಶತಕ, ಪಂತ್ ಅರ್ಧಶತಕ: ಮೂರನೇ ದಿನದಾಟದಂತ್ಯಕ್ಕೆ 70 ರನ್ ಗಳಿಸಿ ಅಜೇಯರಾಗುಳಿದಿದ್ದ ಸರ್ಫರಾಜ್ ಖಾನ್, ಇಂದು ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಸರ್ಫರಾಜ್ 110 ಎಸೆತಗಳನ್ನು ಎದುರಿಸಿ ಆಕರ್ಷಕ ಶತಕ ಸಿಡಿಸಿದರು. ಸರ್ಫರಾಜ್ ಖಾನ್ ಸದ್ಯ 154 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 125 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇನ್ನು ಮತ್ತೊಂದು ತುದಿಯಲ್ಲಿ ಎಂದಿನಂತೆ ಚುರುಕಿನ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್, ಸರ್ಫರಾಜ್ ಖಾನ್ ಜತೆ 4ನೇ ವಿಕೆಟ್‌ಗೆ ಮುರಿಯದ ಶತಕ(113)ದ ಜತೆಯಾಟವಾಡುವಲ್ಲಿ ಯಶಸ್ವಿಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ಸದ್ಯ 56 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ ಮೂರು ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಜೇಯ 53 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ: ಭಾರತಕ್ಕೆ ಪಾಕಿಸ್ತಾನ ಕ್ರಿಕೆಟ್ ಹೊಸ ಆಫರ್!
ಫಾರೂಕ್ ಇಂಜಿನಿಯರ್ ದಾಖಲೆ ಸರಿಗಟ್ಟಿದ ಪಂತ್: ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 18ನೇ ಬಾರಿಗೆ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಫಾರೂಕ್ ಇಂಜಿನಿಯರ್ ಅವರ ಗರಿಷ್ಠ 50+ ದಾಖಲೆ ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಫಾರೂಕ್ ಇಂಜಿನಿಯರ್ 87 ಇನ್ನಿಂಗ್ಸ್‌ಗಳನ್ನಾಡಿ 18 ಬಾರಿ 50+ ರನ್ ಬಾರಿಸಿದರೆ, ರಿಷಭ್ ಪಂತ್ ಕೇವಲ 62 ಇನ್ನಿಂಗ್ಸ್‌ಗಳನ್ನಾಡಿ 18ನೇ 50+ ರನ್ ಸಾಧನೆ ಮಾಡಿದ್ದಾರೆ. ಇನ್ನು ಟೀಂ ಇಂಡಿಯಾ ಅತಿಹೆಚ್ಚು ಬಾರಿ 50+ ರನ್ ಬಾರಿಸಿದ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ದಾಖಲೆ ಮಾಜಿ ನಾಯಕ ಎಂ ಎಸ್ ಧೋನಿ ಹೆಸರಿನಲ್ಲಿದೆ. ಧೋನಿ ಭಾರತ ಪರ 144 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿ 39 ಬಾರಿ 50+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.
