ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಹಾಗೂ ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಕಿವೀಸ್‌ಗೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ
ಬೆಂಗಳೂರು: ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಖಾನ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಈ ಮೂಲಕ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ತಿರುಗೇಟು ನೀಡುವತ್ತ ಟೀಂ ಇಂಡಿಯಾ ದಿಟ್ಟ ಹೆಜ್ಜೆಯಿಟ್ಟಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ, 3 ವಿಕೆಟ್ ಕಳೆದುಕೊಂಡು 231 ರನ್ ಬಾರಿಸಿದ್ದು, ಇನ್ನೂ 125 ರನ್‌ಗಳ ಹಿನ್ನಡೆಯಲ್ಲಿದೆ. ಸರ್ಫರಾಜ್ ಖಾನ್ 70 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 356 ರನ್‌ಗಳ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ದಿಟ್ಟ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ 72 ರನ್‌ಗಳ ಜತೆಯಾಟವಾಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಝಾಜ್ ಪಟೇಲ್ ಯಶಸ್ವಿಯಾದರು. ಜೈಸ್ವಾಲ್ 35 ರನ್ ಬಾರಿಸಿದ್ದಾಗ ಮುನ್ನುಗ್ಗಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಸ್ಟಂಪ್ ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ಇನ್ನು ಇದರ ಬೆನ್ನಲ್ಲೇ ಮತ್ತೊಂದು ತುದಿಯಲ್ಲಿ ಆಕ್ರಮಣಕಾರಿ ಆಟವಾಡಿದ ನಾಯಕ ರೋಹಿತ್ ಶರ್ಮಾ 63 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 52 ರನ್ ಗಳಿಸಿ ಅಝಾಜ್ ಪಟೇಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. 95 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಸೆಹ್ವಾಗ್, ಲಾರಾ ಅಪರೂಪದ ದಾಖಲೆ ಮುರಿದ ಟಿಮ್ ಸೌಥಿ!
ಕೊಹ್ಲಿ-ಸರ್ಫರಾಜ್ ಜುಗಲ್ಬಂದಿ: 100 ರನ್‌ಗಳೊಳಗಾಗಿ ಆರಂಭಿಕರಿಬ್ಬರ ವಿಕೆಟ್ ಕಳೆದುಕೊಂಡ ಬಳಿಕ ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಸರ್ಫರಾಜ್ ಖಾನ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಈ ಇಬ್ಬರು ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಜವಾಬ್ದಾರಿಯುತ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸರ್ಫರಾಜ್ ಖಾನ್ ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ನಡೆಸಿದರೆ, ವಿರಾಟ್ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರು. 2014ರ ಬಳಿಕ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು ಶತಕದ ಜತೆಯಾಟ ನಿಭಾಯಿಸುವಲ್ಲಿ ಯಶಸ್ವಿಯಾಯಿತು. ಈ ಮೊದಲು 2014ರಲ್ಲಿ ಆಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಮೂರನೇ ವಿಕೆಟ್‌ಗೆ ಶತಕದ ಜತೆಯಾಟ ನಿಭಾಯಿಸಿದ್ದರು.
ಬೆಂಗಳೂರಿನ ಪಿಚ್‌ನಲ್ಲಿ ಆಕರ್ಷಕ ಕವರ್ ಡ್ರೈವ್ ಹಾಗೂ ಸಿಕ್ಸರ್ ಮೂಲಕ ವಿರಾಟ್ ಕೊಹ್ಲಿ, ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಸರ್ಫರಾಜ್ ಹಾಗೂ ವಿರಾಟ್ ಜೋಡಿ ಮೂರನೇ ವಿಕೆಟ್‌ಗೆ 163 ಎಸೆತಗಳನ್ನು ಎದುರಿಸಿ 136 ರನ್‌ಗಳ ಜತೆಯಾಟ ನಿಭಾಯಿಸಿದರು. ದಿನದಾಟ ಮುಕ್ತಾಯಕ್ಕೆ ಕೆಲವೇ ಎಸೆತಗಳು ಬಾಕಿ ಇದ್ದಾಗ ವಿರಾಟ್ ಕೊಹ್ಲಿ, ಗ್ಲೆನ್ ಫಿಲಿಫ್ಸ್‌ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್ ಒಪ್ಪಿಸುವ ಮುನ್ನ 102 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 70 ರನ್ ಗಳಿಸಿದರು.
ಬೆಂಗಳೂರು ಟೆಸ್ಟ್‌ನಲ್ಲಿ ಕಿವೀಸ್‌ಗೆ ಬೃಹತ್ ಮುನ್ನಡೆ; ಟೀಂ ಇಂಡಿಯಾಗೆ ವಿಲನ್ ಆದ ಬೆಂಗಳೂರು ಹುಡುಗ!
ಇನ್ನು ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಮುಂಬೈ ಮೂಲದ ಸರ್ಫರಾಜ್ ಖಾನ್, ಕಿವೀಸ್ ಬೌಲರ್‌ಗಳನ್ನು ಚೆಂಡಾಡಿದರು. ಸರ್ಫರಾಜ್ ಖಾನ್ 78 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 70 ರನ್ ಗಳಿಸಿದ್ದು, ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
9000 ರನ್ ಕ್ಲಬ್‌ಗೆ ಸೇರಿದ ವಿರಾಟ್ ಕೊಹ್ಲಿ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 9000 ರನ್ ಬಾರಿಸಿದ ಬ್ಯಾಟರ್‌ಗಳ ಕ್ಲಬ್‌ಗೆ ಸೇರಿದ್ದಾರೆ. ಕಿವೀಸ್ ಎದುರಿನ ಎರಡನೇ ಇನ್ನಿಂಗ್ಸ್‌ನಲ್ಲಿ 53 ರನ್ ಬಾರಿಸುತ್ತಿದ್ದಂತೆಯೇ 9000 ಟೆಸ್ಟ್ ರನ್ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿಗೂ ಮೊದಲು ಸಚಿನ್ ತೆಂಡುಲ್ಕರ್(15,921), ರಾಹುಲ್ ದ್ರಾವಿಡ್(13,265) ಹಾಗೂ ಸುನಿಲ್ ಗವಾಸ್ಕರ್(10,122) ಈ ಸಾಧನೆ ಮಾಡಿದ್ದಾರೆ.
ಇನ್ನು ಇದಕ್ಕೂ ಮೊದಲು ರಚಿನ್ ರವೀಂದ್ರ ಬಾರಿಸಿದ ಆಕರ್ಷಕ ಶತಕ(134)ದ ನೆರವಿನಿಂದ ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 402 ರನ್ ಬಾರಿಸಿ ಸರ್ವಪತನ ಕಂಡಿತು. ಇದರೊಂದಿಗೆ 356 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಿತು.
