ಈ ಹಿಂದೆ ಭಾರತ ಕಡೇ ಮ್ಯಾಚಲ್ಲಿ ಸೋತು, ಏಕದಿನ ವಿಶ್ವಕಪ್ ಗೆಲ್ಲೋದರಿಂದ ವಂಚಿತವಾಗಿತ್ತು. ಆಗ, ನಟ ಅಹಿಂಸಾ ಚೇತನ್ ಅವರು ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಬೇಕೆಂದು ಮಾಡಿದ ಪೋಸ್ಟ್ ವೈರಲ್ ಆಗಿ, ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ ಬ್ರಾಹ್ಮಿನ್ ಕೋಚ್, ಕ್ಯಾಪ್ಟನ್ ಟಿ20 ವಿಶ್ವಕಪ್ ಗೆದ್ದಿದೆ ಎಂಬೊಂದು ಪೋಸ್ಟ್ ಸದ್ದು ಮಾಡುತ್ತಿದೆ.
ಬೆಂಗಳೂರು: ವೆಸ್ಟ್ ಇಂಡೀಸ್‌ನ ಬಾರ್ಬಡೊಸ್‌ನಲ್ಲಿ ಶನಿವಾರ ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ರೋಚಕ 7 ರನ್‌ಗಳಿಂದ ಮಣಿಸಿದ ಭಾರತ, ಟಿ20 ವಿಶ್ವ ಚಾಂಪಿಯನ್ ಆಗಿದೆ. ಈ ಮೂಲಕ ಭಾರತ 17 ವರ್ಷಗಳ ಬಳಿಕ 2ನೇ ಬಾರಿ ಟಿ20 ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿದೆ. ಐಸಿಸಿ ಟೂರ್ನಿಗಳಲ್ಲಿ ಒಂದೂ ಕಪ್ ಗೆಲ್ಲದೇ 11 ವರ್ಷಗಳಿಂದ ಅನುಭವಿಸಿದ್ದ ಬರವನ್ನು ನೀಗಿಸಿಕೊಂಡು, ಸಂಭ್ರಮಿಸಿದೆ.ರೋಚಕ ಪಂದ್ಯವನ್ನು ಗೆದ್ದ ಭಾರತದ ಪ್ರತಿಯೊಬ್ಬ ಆಟಗಾರನೂ ಸಂತೋಷವನ್ನು ಸಂಭ್ರಮಿಸಿದ್ದಾನೆ. ಕ್ರಿಕೆಟ್ ಪ್ರೇಮಿಗಳಿಗಂತೂ ಹಬ್ಬವೋ ಹಬ್ಬ. ಆ ಖುಷಿಯನ್ನು ವರ್ಣಿಸಲಸಾಧ್ಯ. ಭಾರತ ಗೆದ್ದಿದೆ. ಕ್ರೀಡಾ ಗೆಲವು ಸಹಜವಾಗಿ ಸಂಭ್ರಮಿಸುವಂತೆ ಮಾಡುತ್ತೆ. ದೇಶದ ಗೆಲುವನ್ನು ನೈಜ ಕ್ರೀಡಾ ಪ್ರೇಮಿಗಳಿಗೆ ಖುಷಿ ತಂದಿದೆ.
ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವೆಂದು ಪರಿಗಣಿಸಲಾಗುತ್ತದೆ. ಇಂಗ್ಲೆಂಡಲ್ಲಿ ಜನ್ಮ ತಾಳಿದ ಈ ಕ್ರಿಕೆಟ್ ಭಾರತದಲ್ಲಿ ಜನರು ಹುಚ್ಚೆದ್ದು ನೋಡುವಂತೆ ಮಾಡಿದೆ. ಆಡುವ ಪ್ರತಿ ಪಂದ್ಯವೂ ಗೆಲ್ಲಬೇಕೆಂಬ ಹಪಾಹಪಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ. ಆದರೆ, ಆಟದಲ್ಲಿ ಸೋಲು, ಗೆಲವು ಕಾಮನ್. ಈ ಹಿಂದೆ ಟೂರ್ನಮೆಂಟ್‌ನ ಎಲ್ಲ ಪಂದ್ಯವನ್ನೂ ಗೆದ್ದ ಭಾರತ, ಏಕದಿನ ವಿಶ್ವಕಪ್ ಮುಡಿಗೇರಿಸುಕೊಳ್ಳುವಲ್ಲಿ ಮುಗ್ಗರಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ಅಂತಿಮ ಹಣಾಹಣಿಯಲ್ಲಿ ಭಾರತ ಆರು ವಿಕೆಟ್ ಸೋಲುಂಡಿತ್ತು. ಆ ನೋವು ಇನ್ನೂ ಮನಸ್ಸಲ್ಲಿ ಕೊರೆಯುತ್ತಿತ್ತು. ಆ ಸೋಲಿನ ಪರಾಮರ್ಶೆ ಸಾಕಷ್ಟು ನಡೆದಿದ್ದು. ಅಲ್ಲಿ ನಡೆಸಿದ ಪ್ರಯೋಗಗಳನ್ನು ಕೈ ಬಿಟ್ಟು, ಈ ಬಾರಿ ಪ್ರತಿಯೊಬ್ಬ ಆಟಗಾರನಿಗೂ ವೀಕ್ನೆಸ್ ಹಾಗೂ ಸ್ಟ್ರೆಂಥ್ ಗೊತ್ತು ಮಾಡುವಂತೆ ಮಾಡ್ಕೊಂಡು, ವಿಭಿನ್ನ ಹೊಣೆ ನೀಡಿದ್ದರಿಂದ ಎಲ್ಲ ಪಂದ್ಯಗಳನ್ನೂ ಗೆದ್ದು ಕಪ್ ಮುಡಿಗೇರಿಸಿಕೊಂಡಿದೆ. ಆದರೆ ಹೋದ ವರ್ಷ ಒನ್ ಡೇ ವಿಶ್ವಕಪ್ ಸೋತಾಗ ಸಾಕಷ್ಟು ಸೋಲಿನ ಪರಾಮರ್ಶೆಗಳು ನಡೆದಿದ್ದು. ಕೋಚ್ ರಾಹುಲ್ ದ್ರಾವಿಡ್ ಅವರನ್ನೇ ಸೋಲಿಗೆ ಪ್ರಮುಖ ಕಾರಣವೆಂದು ಬಿಂಬಿಸಲಾಗಿತ್ತು. ಆ ನಡುವೆಯೇ ಕನ್ನಡ ನಟ ಅಹಿಂಸಾ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡ ಪೋಸ್ಟ್ ಒಂದು ಸಾಕಷ್ಟು ಚರ್ಚೆಗೆ ಎಡೆ ಮಾಡಿ ಕೊಟ್ಟಿತ್ತು.
ಟಿ20 ವಿಶ್ವಕಪ್ ಗೆದ್ದ ಭಾರತ: ದ್ರಾವಿಡ್ ಆದ ವಿರಾಟ್ ಕೊಹ್ಲಿ, ಕೊಹ್ಲಿಯಾದ ಕೋಚ್ ದ್ರಾವಿಡ್!
ಭಾರತ ಕ್ರಿಕೆಟ್ ತಂಡ ಹೋದ ವರ್ಷದ ಪಂದ್ಯದಲ್ಲಿ ಎಡವಿದ್ದೆಲ್ಲಿ, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗಲ್ಲಿ ಎಲ್ಲಿ ಎಡವಿದೆ ಎಂಬುದು ಚರ್ಚೆಯಾಗುವುದರ ಜೊತೆ ಜೊತೆಯಲ್ಲಿ ಕ್ರಿಕೆಟಲ್ಲೂ ಮೀಸಲಾತಿ ತರಬೇಕೆಂದು ಚೇತನ್ ಆಗ್ರಹಿಸಿದ್ದು, ಸದ್ದು ಮಾಡಿತ್ತು. ಸಾಮಾಜಿಕ ಕಾರ್ಯಕರ್ತರೂ ಆದ ಚೇತನ್, ತಮ್ಮ ಎಕ್ಸ್ ಅಕೌಂಟಿನಲ್ಲಿ ಮಾಡಿದ ಪೋಸ್ಟ್ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಂಡ 6 ವಿಕೆಟ್ ಸೋಲು ಕಂಡ ಬೆನ್ನಲ್ಲೇ ಸೋಷಿಯಲ್ ಮೀಡಿಯಾ ಪೋಸ್ಟ್ (Social Media Post) ಹಾಕಿದ ಚೇತನ್, ಭಾರತ ಕ್ರಿಕೆಟ್ ತಂಡದಲ್ಲೂ ಮೀಸಲಾತಿ ಅಗತ್ಯವಿದೆ ಎಂದಿದ್ದರು. 'ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಬೇಕು. ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವಕಪ್ ಗೆಲ್ಲುತ್ತಿತ್ತು,' ಎಂದಿದ್ದರು.
ಪಂದ್ಯ ಆರಂಭಕ್ಕೂ ಮುನ್ನವೂ ಒಂದು ಪೋಸ್ಟ್ ಹಾಕಿದ್ದು ಚೇತನ್, 'ಭಾರತೀಯ ಕ್ರಿಕೆಟಿಗರು ಇಂದು ಚೆಂಡನ್ನು ಎಸೆಯಬಹುದು/ಹಿಡಿಯಬಹುದು/ಹೊಡೆಯಬಹುದು ಆದರೆ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡುವುದಿಲ್ಲ. 100+ ವರ್ಷಗಳ ಹಿಂದೆ, ಪಲ್ವಾಂಕರ್ ಬಾಲೂ-ಧಾರವಾಡ ಮೂಲದ ಬೌಲರ್ ಮತ್ತು ಭಾರತದ 1ನೇ ದಲಿತ ಕ್ರಿಕೆಟಿಗ-ಬಾಬಾಸಾಹೇಬ್ ಅವರ ಕಾರ್ಯಕರ್ತ ಮತ್ತು ಪರಿಚಯದವರಾಗಿದ್ದರು. ಭಾರತಕ್ಕೆ ಸಮಾಜದ ಕಾಳಜಿ ವಹಿಸುವ ಕ್ರಿಕೆಟಿಗರು ಬೇಕು. ಹಣ ಮತ್ತು ವೈಭವವಲ್ಲ,' ಎನ್ನುವುದೂ ಅವರ ಅಭಿಪ್ರಾಯವಾಗಿತ್ತು. ಇವರ ಪೋಸ್ಟಿಗೆ ಸಾಕಷ್ಟು ವಿರೋಧ ವ್ಯಕ್ತವಾಗುವುದರ ಜೊತೆಗೆ ಕೆಲವೇ ಕೆಲವರು ಬೆಂಬಲಿಸಿದ್ದರು. ಆಟ ಮತ್ತು ಕಲೆಯಲ್ಲಿ ಜಾತಿ ನೋಡುವುದು ತಪ್ಪೆಂದು ಹಲವರ ಅಭಿಪ್ರಾಯವಾಗಿತ್ತು.
ದಶಕದ ಬಳಿಕ ವಿಶ್ವಕಪ್ ಗೆದ್ದ ಭಾರತ, ದರ್ಶನ್ ಜೈಲಿಗೆ ಹೋಗಿದ್ದಕ್ಕೆ ಲಿಂಕ್ ಮಾಡಿದ ಫ್ಯಾನ್ಸ್!
ಇದೀಗ ಬ್ರಾಹ್ಮಣ ಕೂಗು:
ಭಾರತ ಟಿ20 ವಿಶ್ವಕಪ್ ಗೆದ್ದು ವಿಜಯದ ಮಾಲೆಯನ್ನು ಮುಡಿಗೇರಿಸಿಕೊಂಡಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಪೋಸ್ಟ್ ವೈರಲ್ ಆಗಿದ್ದು ಬ್ರಾಹ್ಮಣ ಕ್ಯಾಪ್ಟನ್ ಮತ್ತು ಕೋಚ್ ಎಂದು, ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಸಾಂಪ್ರಾದಾಯಿಕ ಉಡುಗೆ ತೊಟ್ಟು, ದೇವಸ್ಥಾನಕ್ಕೆ ವಿಸಿಟ್ ಮಾಡಿದ ಫೋಟೋವೊಂದನ್ನು ದೇವಿ ಉವಾಂಚಲ್ ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಮತ್ತದೇ ಮೀಸಲಾತಿ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಭಾರತದಲ್ಲಿ ಜಾತಿಯಿಂದ ಜನರ ಪ್ರತಿಭೆಯನ್ನು ಗುರುತಿಸುವ ಕಾಲ ಹೋಗಿದ್ದು, ಇದೀಗ ಮತ್ತೆ ಆ ಜಾತಿ ವಿಷಯ ಮಾತನಾಡುವುದು ಅನಗತ್ಯ ಎಂಬುವುದು ಹಲವರ ಅಭಿಪ್ರಾಯವಾಗಿದೆ.
ಮನುಷ್ಯನ ಹುಟ್ಟಿನ ಜಾತಿಯಿಂದ ಗೌರವ ನೀಡುವ ಬದಲು, ಅವನ ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಸ್ಥಾನಮಾನ ದಕ್ಕಬೇಕು ಎಂಬುವುದು ಹಲವರ ಅಭಿಪ್ರಾಯ. ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾದ ಧೋನಿ ತಮ್ಮ ಅವಧಿಯಲ್ಲಿ ಹಲವು ಟ್ರೋಫಿ ಗೆದ್ದು ತಂದಿದ್ದೂ ಈ ಟ್ವೀಟಿನ ಕಮೆಂಟಿನಲ್ಲಿ ಚರ್ಚಿತವಾಗಿದೆ. ಅಲ್ಲದೇ ಬೇರೆ ಜನಾಂಗದವರು ಆರಂಭಿಕ ಹಂತದಲ್ಲೇ ಕ್ರಿಕೆಟ್ ಟೀಂಗೆ ಸೆಲೆಕ್ಟ್ ಆಗೋದು ಕಷ್ಟ. ಆ ಕಾರಣದಿಂದ ಹಲವು ಬ್ರಾಹ್ಮಣರು ಭಾರತೀಯ ತಂಡದಲ್ಲಿ ಇರದಂತಾಗಿದೆ, ಎಂಬುವುದೂ ಚರ್ಚಿತವಾಗಿದೆ. ಬ್ರಾಹ್ಮಣರಾಗಿ ರೋಹಿತ್ ಶರ್ಮಾ ಹಾಗೂ ರಿಷಭ್ ಪಂತ್ ಎಷ್ಟು ಸ್ಕೋರ್ ಮಾಡಿದ್ದಾರೆಂದು ಒಬ್ಬರು ಪ್ರಶ್ನಿಸಿದರೆ, ಸೂರ್ಯ ಕುಮಾರ್ ಯಾದವ್ ನಿನ್ನೆಯ ಮ್ಯಾಚಲ್ಲಿ ಅದ್ಭುತ ಕ್ಯಾಚ್ ಹಿಡಿಯದೇ ಹೋದರೆ, ಪಂದ್ಯ ಸೋಲುತ್ತಿತ್ತು ಎನ್ನುವ ಮೂಲಕ ಮತ್ತದೇ ಆಟಗಾರರ ಜಾತಿ ಚರ್ಚಿತವಾಗಿದೆ. ಬ್ರಾಹ್ಮಣರಿಂದಲೇ ಹಿಂದೂ ಧರ್ಮ ಒಡೆದು ಚೂರಾಗಿದೆ ಎಂಬೊಂದು ಅಭಿಪ್ರಾಯವನ್ನು ಮತ್ತೊಬ್ಬ ಸೋಷಿಯಲ್ ಮೀಡಿಯಾ ಯೂಸರ್ ಮಾಡಿದ್ದಾರೆ. ಸಾಲದೆಂಬಂತೆ ಧೀರಜ್ ಸಿಂಗ್ ಎನ್ನುವರರು 2007ರಲ್ಲಿ ರಜಪೂತ ಕ್ಯಾಪ್ಟನ್ ಹಾಗೂ ಕೋಚ್ ನೇತೃತ್ವದಲ್ಲಿ ಕಪ್ ಮುಡಿಗೇರಿಸಿಕೊಂಡಿತ್ತೆಂದು ಮಹೇಂದ್ರ ಸಿಂಗ್ ಧೋನಿ ಹಾಗೂ ಲಾಲ್ ಚಂದ್ ರಜಪೂತ್ ಅವರ ಫೋಟೋ ಶೇರ್ ಮಾಡಿ ಕೊಂಡಿದ್ದಾರೆ.
ಒಟ್ಟಿನಲ್ಲಿ ಆಟವಿರಲಿ, ಕೆಲಸ ಇರಲಿ ಜಾತಿ, ಧರ್ಮವನ್ನು ಥಳಕು ಹಾಕಬಾರದು. ಆದರೆ, ಕೆಲವು ವಿಕೃತ ಮನಸುಗಳು ಅದರಲ್ಲಿಯೂ ಇಂಥವನ್ನು ಹುಡುಕುತ್ತಿರುವುದು ಮಾತ್ರ ದುರಾದೃಷ್ಟಕರ. ಎಲ್ಲವನ್ನೂ ಮೀರಿದ ದೇಶ ಎಂಬ ಭಾವನೆ. ಆ ದೇಶಕ್ಕೆ ಸದಾ ಗೆಲವು ತಂದು ಕೊಡುವುದು ಎಂಬುವುದು ನೈಜ ಕ್ರಿಕೆಟ್ ಅಭಿಮಾನಿಗಳು ಅಭಿಪ್ರಾಯ.
