ಭಾರತೀಯರಿಗೆ ಏಕದಿನ ವಿಶ್ವಕಪ್ ಸ್ವಲ್ಪದರಲ್ಲಿ ಮಿಸ್ ಮಾಡಿಕೊಂಡ ದುಃಖ ಟಿ20 ವಿಶ್ವಕಪ್ ಗೆದ್ದು ಕಂಪನ್ಸೇಟ್ ಆಗಿದೆ. ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಲ್ಲದೇ, ಕೋಚ್ ದ್ರಾವಿಡ್ ಕಾಂಟ್ರ್ಯಾಕ್ಟ್ ಕೂಡಾ ಮುಕ್ತಾಯವಾಗಿದೆ. ಸದಾ ಶ್ರೀ ಕೃಷ್ಣನಂತೆ ಸ್ಥಿತ ಪ್ರಜ್ಞಾನಾಗಿರೋ ರಾಹುಲ್ ದ್ರಾವಿಡ್ ನಿನ್ನೆ ಕಪ್ ಗೆದ್ದಾಗ ಸಂಭ್ರಮಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಬೆಂಗಳೂರು: ಕ್ರಿಕೆಟ್ ಪ್ರೇಮಿಗಳಿಗೆ ನಿನ್ನೆ ರಾತ್ರಿ ಇಡೀ ನಿದ್ರೆಯೇ ಬಂದಿಲ್ಲ. ಇನ್ನೇನು ಟಿ20 ವಿಶ್ವಕಪ್ ಸೌತ್ ಆಫ್ರಿಕಾ ಪಾಲಾಗುತ್ತದೆ ಎಂದು ಭಾರವಾದ ಉಸಿರು ಬಿಟ್ಟು, ಹೊದ್ದು ಮಲಗಿದವರೆಷ್ಟೋ ಮಂದಿ. ಆದರೆ, ಕಳೆದ ಐದು ಓವರ್ಸ್ ನಲ್ಲಿ ಭಾರತೀಯ ಬೌಲರ್ಸ್ ತೋರಿದ ಕಮಾಲ್ ಕಪ್ ಈ ಸಾರಿ ನಮ್ಮ ಕೈ ಸೇರುವಂತೆ ಮಾಡಿದೆ. ಆ ರೋಮಾಂಚನ ಪಂದ್ಯ ನೋಡಿದ ಕ್ರಿಕೆಟ್ ಪ್ರೇಮಿಗಳಿನ್ನೂ ಆ ಗುಂಗಿನಿಂದ ಹೊರ ಬಂದಿಲ್ಲ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನಿವೃತ್ಥಿ ಘೋಷಿಸುವುದರೊಂದಿಗೆ ತಮ್ಮ ಕಡೆಯ ಪಂದ್ಯದಲ್ಲಿ ಕೈಯ್ಯಲ್ಲಿ ಕಪ್ ಹಿಡಿದ ಸಾರ್ಥಕತೆ ಕಂಡರು. ಸದಾ ಅಗ್ರೆಸಿವ್ ಆಗಿರೋ ವಿರಾಟ್ ಕೊಹ್ಲಿ ನಿನ್ನ ತಮ್ಮ ನಿವೃತ್ತಿ ಘೋಷಿಸುವಾಗ ತೋರಿದ ಪ್ರಬುದ್ಧತೆ, ಆಡಿದ ಮಾತುಗಳು ಅವರ ಅಭಿಮಾನಿಗಳಲ್ಲಿ ಆಶ್ಚರ್ಯ ಹುಟ್ಟಿಸಿದೆ.ಅಷ್ಟು ಕೂಲ್ ಆಗಿ ಯಾವತ್ತೂ ಮಾತನಾಡಿದವರಲ್ಲ ಕೊಹ್ಲಿ. ಹೋಗಲಿ ಕೈಯಲ್ಲಿ ಕಪ್ ಹಿಡಿದು ಸಂಭ್ರಮಿಸುವಾಗಲೂ ಕೊಹ್ಲಿ ಎಂದಿಗಿಂತ ವಿಭಿನ್ನವಾಗಿ ನಡೆದುಕೊಂಡಿದ್ದು ವಿಶೇಷ ಎನಿಸಿತು.
ಟಿ20 ವಿಶ್ವಕಪ್ ಗೆಲುವಿನ ಸೂತ್ರಧಾರ ಮಹಾಗುರು ರಾಹುಲ್ ದ್ರಾವಿಡ್!
ಕುಣಿದು ಕುಪ್ಪಳಿಸಬೇಕಾಗಿದ್ದ ವಿರಾಟ್ ತಮ್ಮ ಪೌರುಷವನ್ನೇ ತೋರಲಿಲ್ಲ. ಕೂಲ್ ಆಗಿಯೇ ಕಪ್ ಹಿಡಿದು ಸಂಭ್ರಮಿಸಿದ್ದು ತಮ್ಮ ಮುಖ ಭಾವದಲ್ಲಿ ಮಾತ್ರ ಕಾಣಿಸುತಿತ್ತೇ ಹೊರತು, ಆಂಗೀಕ ಭಾಷೆಯಲ್ಲಿ ತೋರ್ಪಡಿಸಲಿಲ್ಲ. ಆದರೆ, ಆ ಕಪ್ ಅನ್ನು ದ್ರಾವಿಡ್ ಕೈಗೆ ಖುದ್ದು ಕೊಹ್ಲಿಯೇ ಕೊಟ್ಟಾಗ ದ್ರಾವಿಡ್ ನಡೆದುಕೊಂಡ ರೀತಿ ಮಾತ್ರ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಲಿಟರಲಿ ಆ ಗೆಲುವನ್ನು ಕುಣಿದು ಸಂಭ್ರಮಿಸಿದ ಕ್ರಿಕೆಟ್ ವಾಲ್ ಎಂದೇ ಪ್ರಸಿದ್ಧವಾದ ದ್ರಾವಿಡ್. ಸದಾ ಅಗ್ರೆಸಿವ್ ಆಗಿರೋ ವಿರಾಟ್ ಕೊಹ್ಲಿ ತಣ್ಣಗೆ ಹಂಬಲ್ಲಾಗಿ ಬಂದು, ಕಪ್‌ಗೆ ಮುತ್ತಿಟ್ಟರೆ, ಯಾವತ್ತೂ ತಾಳ್ಮೆ ಕಳೆದುಕೊಳ್ಳದ ದ್ರಾವಿಡ್, ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡೋದು ಕ್ರಿಕೆಟ್ ಪ್ರೇಮಿಗಳ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಭಾರತ ತನ್ನ ಕನಸಿನ ಟಿ20 ವಿಶ್ವಕಪ್ ಗೆದ್ದಿದ್ದು, ಆಟಗಾರರು ಎಲ್ಲರ ಕಣ್ಣಿಗೂ ಹೀರೋಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತಿಮ ಕ್ಷಣದವರೆಗೂ ಕುತೂಹಲವಿದ್ದ ಮ್ಯಾಚಿನಲ್ಲಿ ಕಡೆಯ ಕೆಲವೇ ಕೆಲವು ಓವರ್ಸ್‌ನಲ್ಲಿ ಬೌಲರ್ಸ್ ಮಾರಕ ದಾಳಿಗೆ ಸೋತು ಆಫ್ರಿಕಾ ಸೋಲಿಗೆ ಶರಣಾಯಿತು. ಕೇವಲ 7 ರನ್‌ಗಳಲ್ಲಿ ಭಾರತ ಗೆಲುವಿನ ನಗೆ ಬೀರಿತು. ಪದೆ ಪದೇ ಬಂದು, ಟೀಂಗೆ ಸಲಹೆ ನೀಡುತ್ತಿದ್ದ ಕೋಚ್ ರಾಹುಲ್ ದ್ರಾವಿಡ್ ಗೆಲುವಿನ ರೂವಾರಿ ಎನ್ನೋದ್ರಲ್ಲಿ ಅನುಮಾನವೇ ಇಲ್ಲ. ಒಂದು ಸಿನಿಮಾ ಹಿಟ್ ಆಗಲು ಡೈರೆಕ್ಟರ್‌ನಂತೆ ಕಾರ್ಯ ನಿರ್ವಹಿಸಿದ ಭಾರತಕ್ಕೆ ಟಿ20 ವಿಶ್ವಕಪ್ ಕಿರೀಟ ಗೆಲ್ಲಿಸಿಕೊಡುವ ಮೂಲಕ ದ್ರಾವಿಡ್ ಕೋಚ್ ಹುದ್ದೆಯ ಕ್ಲೈಮ್ಯಾಕ್ಸ್ ಅನ್ನು ಕಲರ್‌ಫುಲ್ ಮಾಡಿದರು. ಕನ್ನಡಿಗ ದ್ರಾವಿಡ್ ಜಾಗತಿಕ ಮಟ್ಟದ ಟೂರ್ನಿಗೆ ತಂಡವನ್ನು ಸಿದ್ಧಗೊಳಿಸಿದ ರೀತಿ, ರೂಪಿಸಿದ ರಣತಂತ್ರವೀಗ ಪ್ರಶಂಸೆಗೆ ಪಾತ್ರವಾಗಿದೆ.
9ನೇ ಆವೃತ್ತಿ ಟಿ20 ವಿಶ್ವ ಸಮರಕ್ಕೆ ಅದ್ಧೂರಿ ತೆರೆ..! ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಪ್ರತಿಭೆಗೆ ತಕ್ಕ ಹೊಣೆಗಾರಿಕೆ
ಏಕದಿನ ವಿಶ್ವಕಪ್ ಕೈ ತಪ್ಪಿದ ಭಾರತಕ್ಕೆ ಈ ಕಪ್ ನೈಜ ಸಂತೋಷ ಕೊಟ್ಟಿದೆ. ರಾಹುಲ್ ದ್ರಾವಿಡ್ ಗರಡಿಯಲ್ಲೇ ಪಳಗಿದ್ದ ಹಲವು ಯುವ ಆಟಗಾರರು ತಂಡದಲ್ಲಿದ್ದರು. ಇವೆರೆಲ್ಲರ ಪ್ಲಸ್ ಹಾಗೂ ಮೈನಸ್ ಗೊತ್ತಿದ್ದ ರಾಹುಲ್ ಯಾರನ್ನು ಹೇಗೆ ಬಳಸಿಕೊಳ್ಳಬೇಕೆಂಬ ಅರಿವಿನಿಂದ ತಂಡವನ್ನು ಮುನ್ನಡೆಸಿದ್ದರು. ಆ ಕಾರಣಕ್ಕೆ ರಾಹುಲ್‌ಗೆ ತಂಡವನ್ನು ನಿಭಾಯಿಸುವುದು ಸುಲಭವಾಯಿತು. ಪ್ರತಿಭೆಗೆ ತಕ್ಕಂತೆ ಜವಾಬ್ದಾರಿ ಕೊಟ್ಟ ರಾಹುಲ್ ತಂತ್ರಗಾರಿಕೆ ಯಶ ಕಂಡಿತು. ಆಟಗಾರರಿಗೆ ಯಾವುದೇ ಒತ್ತಡ ಹೇರದೆ, ಸ್ವತಂತ್ರವಾಗಿ ಆಡಲು ಪ್ರೇರೇಪಿಸದಿದ್ದು ಯಶಸ್ಸಿಗೆ ಮತ್ತೊಂದು ಕಾರಣ. ಅದಕ್ಕೆ ಎಂಟಕ್ಕೆ ಎಂಟೂ ಮ್ಯಾಚನ್ನು ಗೆದ್ದ ಭಾರತ, ಟ್ರೋಫಿ ಮುಡಿಗೇರಿಸಿಕೊಂಡಿತು. ಯಾರೂ ಕುಗ್ಗದಂತೆ ನೋಡಿಕೊಂಡ ದ್ರಾವಿಡ್, ಸ್ಕ್ರೀನ್ ಹಿಂದಿದ್ದೇ ಟೀಂ ಅನ್ನು ನಿಭಾಯಿಸಿದ ರೀತಿ ಅದ್ಭುತವಾಗಿತ್ತು.
ಆಗಲೂ ಎಲ್ಲ ಮ್ಯಾಚ್ ಗೆದಿದ್ದ ಭಾರತ, ಕಪ್ ತಂದಿರಲಿಲ್ಲ
ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿಯೂ ಎಲ್ಲ ಪಂದ್ಯಗಳನ್ನೂ ಸೋತು, ಫೈನಲ್ಸ್‌ನಲ್ಲಿ ಮುಗ್ಗರಿಸಿತು. ಆಗ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಪ್ರಯೋಗ ಮಾಡಿದ್ದ ರಾಹುಲ್ ದ್ರಾವಿಡ್ ತಂತ್ರದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅವರ ರಾಜೀನಾಮೆಗೂ ಒತ್ತಾಯಿಸಲಾಗಿತ್ತು. ಆದರೆ ಈ ಸಲ ಟಿ20 ವಿಶ್ವಕಪ್‌ಗೂ ಮುನ್ನ ಐಪಿಎಲ್‌ನಲ್ಲಿ ಆಟಗಾರರ ಪ್ರದರ್ಶನ ಗಮನಿಸಿದ್ದ ದ್ರಾವಿಡ್, ನೇರವಾಗಿ ಟಿ20 ವಿಶ್ವಕಪ್‌ನಲ್ಲಿ ಅದನ್ನು ಪ್ರಯೋಗಿಸಿದರು. ವಿರಾಟ್ ಕೊಹ್ಲಿಯನ್ನು ಓಪನರ್ ಆಗಿ, ಆಡಿಸಿದ ಪ್ರಯೋಗ ಕೈ ಕೊಟ್ಟರು ರಿಷಭ್ ಪಂತ್‌ರನ್ನು 3ನೇ ಕ್ರಮಾಂಕದಲ್ಲಿ ಆಡಿಸಿ ಯಶಸ್ವಿಯಾದರು. ಹೆಚ್ಚುವರಿ ಸ್ಪಿನ್ನರ್ಸ್ ವಿಶ್ವಕಪ್ ತಂಡಕ್ಕೆ ಸೇರ್ಪಡೆಗೊಳಿಸುವ ನಿರ್ಧಾರ ಟೀಕೆಗೆ ಎಡೆ ಮಾಡಿಕೊಟ್ಟರೂ, ಸ್ಪಿನ್ನರ್‌ಗಳೇ ಟ್ರೋಫಿ ಗೆಲುವಿನ ರೂವಾರಿಗಳು ಎಂಬುದನ್ನು ತೋರಿಸಿಕೊಟ್ಟರು. ಇನ್ನು ಶಿವಂ ದುಬೆ ಅವರ ಆಯ್ಕೆಯೂ ಹಲವರಿಗೆ ತೃಪ್ತಿ ತಂದಿರಲಿಲ್ಲ. ಆದರೆ, ನಿರ್ಣಾಯಕ ಹಂತಗಳಲ್ಲಿ ಕ್ರೀಸ್‌ನಲ್ಲಿ ನೆಲೆಯೂರಿ ದುಬೆ ರನ್ ಕೊಡುಗೆ ತಂಡದ ಗೆಲುವಿಗೆ ಕಾರಣವಾಯಿತು.
ದ್ರಾವಿಡ್ ವಿರುದ್ಧ ಟೀಕೆಗಳು ಕಡಿಮೆಯೇ. ಇತ್ತೀಚೆಗೆ ಅವರು ವಿರುದ್ಧ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿತ್ತು. ಕೆಲವು ಪ್ರಮುಖ ಆಟಗಾರರಿಗೆ ಕೊಕ್ ನೀಡಿದ್ದು, ಹಲವರ ಕೆಂಗಣ್ಣಿಗೆ ಗುರಿಯಗುವಂತೆ ಮಾಡಿತ್ತು. ಆದರೆ, ಯಾವದಕ್ಕೂ ಜಗ್ಗದ ರಾಹುಲ್, ತಾವು ಕೋಚ್ ಆಗಿಯೂ ಗೋಡೆಯಂತೆ ಸ್ಥಿರವಾಗಿದ್ದರು. ಆದರೆ, ಅವರ ಮನಸ್ಸಿನಲ್ಲಿದ್ದ ಆತಂಕ, ಒತ್ತಡ ಮಾತ್ರ ಕಪ್ ಹಿಡಿದ ಮಗುವಿನಂತೆ ಸಂಭ್ರಮಿಸಿದಾಗ ಎದ್ದು ಕಾಣಿಸಿತ್ತು. ತಾವಷ್ಟೇ ಅಲ್ಲ, ತಮ್ಮ ಆಟಗಾರರು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್, ಕ್ರಿಕೆಟ್ ತಜ್ಞರ ಆಕ್ರೋಶ, ಟೀಕೆ, ಟಿಪ್ಪಣಿಗೆ ಒಳಗಾಗದಂತೆ ಎಚ್ಚರ ವಹಿಸಿದ್ದರು.
ಐಸಿಸಿ ಟ್ರೋಫಿ ಗೆಲ್ಲಿಸಬೇಕೆಂಬ ಷರತ್ತಿನೊಂದಿಗೆ ಕೋಚ್ ಹುದ್ದೆಯನ್ನು ಅಲಂಕರಿಸಿದ್ದ ದ್ರಾವಿಡ್, 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಎದುರಾದ ಸೋಲಿನಿಂದಲೇ ಕಂಗೆಡುವಂತಾಗಿತ್ತು. ಕಳೆದ ವರ್ಷದ ಏಕದಿನ ವಿಶ್ವಕಪ್ ಸೋಲು ಅವರನ್ನು ಮತ್ತಷ್ಟು ಕುಗ್ಗಿಸಿತ್ತು . ಆದರೀಗ ಕೋಚ್ ಆಗಿ ಕೊನೆ ಟೂರ್ನಿಯಾಗಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡಕ್ಕೆ ಸಮರ್ಥ ರೀತಿಯಲ್ಲಿ ಗೈಡ್ ಮಾಡಿ, ಟ್ರೋಫಿ ಗೆಲ್ಲಿಸಿಕೊಟ್ಟರು.2007ರಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಭಾರತ ವಿಶ್ವಕಪ್‌ನ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು. 17 ವರ್ಷ ಬಳಿಕ ದ್ರಾವಿಡ್ ಕೋಚ್ ಆಗಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ನಾಯಕನಾಗಿ ಸಾಧಿಸಲಾಗದ್ದನ್ನು ಕೋಚ್ ಆಗಿ ಸಾಧಿಸಿದ ದ್ರಾವಿಡ್ ನಿರಾಳವಾಗಿದ್ದು, ಅವರ ಖುಷಿಯಲ್ಲಿ ಕಂಗೊಳಿಸುತ್ತಿತ್ತು.
