ಕಾನ್ಪುರ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ 95 ರನ್ ಗುರಿ ಸಿಕ್ಕಿದೆ. ಬುಮ್ರಾ, ಅಶ್ವಿನ್ ಹಾಗೂ ಜಡೇಜಾ ತಲಾ 3 ವಿಕೆಟ್ ಕಬಳಿಸಿ ಮಿಂಚಿದ್ದಾರೆ

ಕಾನ್ಪುರ: ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಕ್ರಿಕೆಟ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 146 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಕಾನ್ಪುರ ಟೆಸ್ಟ್ ಪಂದ್ಯ ಗೆಲ್ಲಲು ಭಾರತಕ್ಕೆ ಕೇವಲ 95 ರನ್ ಗುರಿ ಸಿಕ್ಕಿದೆ. ರವಿಚಂದ್ರನ್ ಅಶ್ವಿನ್ ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 3 ಹಾಗೂ ಆಕಾಶ್‌ ದೀಪ್ ಒಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.

ಇಲ್ಲಿನ ಗ್ರೀನ್‌ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 27 ರನ್ ಗಳಿಸಿದ್ದ ಬಾಂಗ್ಲಾದೇಶ ತಂಡಕ್ಕೆ 5ನೇ ದಿನದಾಟದ ಆರಂಭದಲ್ಲೇ ಅಶ್ವಿನ್, ಮೊಮಿನುಲ್ ಹಕ್ ವಿಕೆಟ್ ಕಬಳಿಸಿ ಆರಂಭದಲ್ಲೇ ಶಾಕ್ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ಏಕಾಂಗಿಯಾಗಿ ಅಜೇಯ ಶತಕ ಸಿಡಿಸಿದ್ದ ಮೊಮಿನುಲ್ ಹಕ್ ಅವರನ್ನು ಬಲಿ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾದರು. 

Scroll to load tweet…

ಒಂದೇ ದಿನ 5 ವಿಶ್ವದಾಖಲೆ; ಕುತೂಹಲಘಟ್ಟದಲ್ಲಿ ಕಾನ್ಪುರ ಟೆಸ್ಟ್‌!

ಇನ್ನು ಇದಾದ ಬಳಿಕ 4ನೇ ವಿಕೆಟ್‌ಗೆ ನಾಯಕ ನಜ್ಮುಲ್ ಹೊಸೈನ್ ಶಾಂತೋ ಹಾಗೂ ಶದ್ಮನ್ ಇಸ್ಲಾಂ ಆಕರ್ಷಕ ಜತೆಯಾಟವಾಡುವ ಮೂಲಕ ಪ್ರತಿರೋಧ ತೋರಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಜಡೇಜಾ ಯಶಸ್ವಿಯಾದರು. ಶಾಂತೋ 19 ರನ್ ಬಾರಿಸಿ ಜಡೇಜಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರ ಬೆನ್ನಲ್ಲೇ ಆರಂಭಿಕ ಬ್ಯಾಟರ್ ಶದ್ಮನ್ ಇಸ್ಲಾಂ ಕೂಡಾ ಪೆವಿಲಿಯನ್ ಹಾದಿ ಹಿಡಿದರು. ಬಾಂಗ್ಲಾದೇಶ ಪರ ದಿಟ್ಟ ಹೋರಾಟ ನಡೆಸಿದ ಶದ್ಮನ್ ಇಸ್ಲಾಂ 101 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 50 ರನ್ ಬಾರಿಸಿ ಆಕಾಶ್‌ ದೀಪ್‌ ಬೌಲಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಹಿಡಿದ ಅದ್ಭುತ ಕ್ಯಾಚ್‌ಗೆ ಪೆವಿಲಿಯನ್ ಹಾದಿ ಹಿಡಿದರು. ಶದ್ಮನ್ ಇಸ್ಲಾಂ, ಭಾರತದ ನೆಲದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಬಾಂಗ್ಲಾದೇಶ ತಂಡದ ಮೊದಲ ಆರಂಭಿಕ ಬ್ಯಾಟರ್ ಎನಿಸಿಕೊಂಡರು. 

Scroll to load tweet…

ಸರ್ಕಾರ ಒಪ್ಪಿಗೆ ನೀಡಿದರೆ ಭಾರತ ತಂಡ ಪಾಕ್‌ಗೆ: ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ

ಇನ್ನು ಶಾಂತೋ, ಶದ್ಮನ್ ಇಸ್ಲಾಂ ವಿಕೆಟ್ ಪತನವಾಗುತ್ತಿದ್ದಂತೆಯೇ ಬಾಂಗ್ಲಾದೇಶ ತಂಡವು ನಾಟಕೀಯ ಕುಸಿತ ಕಂಡಿತು. ವಿಕೆಟ್ ಕೀಪರ್ ಲಿಟನ್ ದಾಸ್ ಒಂದು ರನ್ ಗಳಿಸಿದರೆ, ಕೊನೆಯ ಟೆಸ್ಟ್ ಪಂದ್ಯವನ್ನಾಡಿದ ಶಕೀಬ್ ಅಲ್ ಹಸನ್ ಶೂನ್ಯ ಸುತ್ತಿ ಜಡೇಜಾಗೆ ಮೂರನೇ ಬಲಿಯಾದರು. ಇನ್ನು ಬಾಲಂಗೋಚಿಗಳಾದ ಮೆಹದಿ ಹಸನ್ ಮಿರಜ್ ಹಾಗೂ ತೈಜುಲ್ ಇಸ್ಲಾಂ ಅವರನ್ನು ಬಲಿ ಪಡೆಯುವಲ್ಲಿ ಬುಮ್ರಾ ಯಶಸ್ವಿಯಾದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಮುಷ್ಫಿಕುರ್ ರಹೀಂ 63 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 37 ರನ್ ಗಳಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.