ಐಐಟಿಯ ಮೊದಲ ಮಹಿಳಾ ನಿರ್ದೇಶಕಿಯಾಗಿ ಪ್ರೀತಿ ಆಘಾಲಯಂ ನೇಮಕ
ಐಐಟಿ ಮದ್ರಾಸ್ ವಿದೇಶಿ ಕ್ಯಾಂಪಸ್ ಝಂಝಿಬಾರ್ ನಿರ್ದೇಶಕಿಯಾಗಿ ಪ್ರೀತಿ ಅಘಾಲಯಂ ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಇವರು ಐಐಟಿಯ ಮೊದಲ ಮಹಿಳಾ ನಿರ್ದೇಶಕಿ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಪ್ರೀತಿ ಅಘಾಲಯಂ ಅವರು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿನಿ ಕೂಡ ಹೌದು.
ನವದೆಹಲಿ (ಜು.11): ಪ್ರೀತಿ ಅಘಾಲಯಂ ಅವರನ್ನು ಐಐಟಿ ಮದ್ರಾಸ್ ಝಂಝಿಬಾರ್ ಕ್ಯಾಂಪಸ್ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಇದು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೊದಲ ವಿದೇಶಿ ಕ್ಯಾಂಪಸ್ ಕೂಡ ಆಗಿದೆ. ಪ್ರೀತಿ ಅಘಾಲಯಂ ಅವರು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿನಿ ಆಗಿದ್ದು, ಈಗ ಐಐಟಿಯ ಮೊದಲ ಮಹಿಳಾ ನಿರ್ದೇಶಕಿ ಕೂಡ ಆಗಿದ್ದಾರೆ. ಪ್ರೀತಿ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಐಐಟಿ ಮದ್ರಾಸ್ ಬೆರಳೆಣಿಕೆಯ ಮಹಿಳಾ ಪ್ರಾಧ್ಯಾಪಕರಲ್ಲಿ ಪ್ರೀತಿ ಕೂಡ ಒಬ್ಬರು. ಇವರು ಐಐಟಿ ಮದ್ರಾಸ್ ನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ 1995ರಲ್ಲಿ ಬಿ.ಟೆಕ್ ಪದವಿ ಪೂರ್ಣಗೊಳಿಸಿದ್ದರು. ಆ ಬಳಿಕ ಅವರು 2000ನೇ ಇಸವಿಯಲ್ಲಿ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಪಿ.ಎಚ್ ಡಿ ಪದವಿ ಪೂರ್ಣಗೊಳಿಸಿದ್ದರು. ಅಘಾಲಯಂ ಮ್ಯಾರಥಾನ್ ಓಟಗಾರ್ತಿ ಕೂಡ ಹೌದು. ಕೇಂಬ್ರಿಜ್ ಎಂಐಟಿಯಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧಕಿಯಾಗಿ ಕೂಡ ಇವರು ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಐಐಟಿ ಮುಂಬೈಯಲ್ಲಿ ಪ್ರಾಧ್ಯಾಪಕಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.2010ರಲ್ಲಿ ಐಐಟಿ ಮದ್ರಾಸ್ ಸೇರಿದ ಅಘಾಲಯಂ, ಪ್ರಸ್ತುತ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
'ಅಘಾಲಯಂ ಐಐಟಿ ನಿರ್ದೇಶಕಿಯಾಗುತ್ತಿರುವ ಮೊದಲ ಮಹಿಳೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಇಂಥ ಅನೇಕ ಪ್ರೋತ್ಸಾಹದಾಯಕ ಕ್ರಮಗಳನ್ನು ಎದುರು ನೋಡುತ್ತಿದ್ದೇವೆ. ನಾವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪಾಲಿಸುತ್ತಿದ್ದೇವೆ ಹಾಗೂ ಲಿಂಗ ಸಾಮರಸ್ಯವನ್ನು ತರುವುದು ಕೂಡ ನಮ್ಮ ಪ್ರಮುಖ ಗುರಿಗಳಲ್ಲಿ ಒಂದಾಗಿತ್ತು' ಎಂದು ಐಐಟಿ ಮದ್ರಾಸ್ ನಿರ್ದೇಶಕ ವಿ. ಕಾಮಕೋಟಿ ತಿಳಿಸಿದ್ದಾರೆ.
ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿ ಪ್ರಕಟ; ನಾಲ್ವರು ಭಾರತೀಯ ಮೂಲದ ಮಹಿಳೆಯರಿಗೆ ಸ್ಥಾನ
ಐಐಟಿಯ ಮೊದಲ ಮಹಿಳಾ ನಿರ್ದೇಶಕಿಯಾಗಿ ನೇಮಕಗೊಂಡಿರುವ ವಿದ್ಯಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀತಿ ಅಘಾಲಯಂ, ' ಇದು ನನಗೆ ಸಿಗುತ್ತಿರುವ ಅತೀದೊಡ್ಡ ಗೌರವ. ನಾನು ಐಐಟಿ ಮದ್ರಾಸ್ ಹಳೆಯ ವಿದ್ಯಾರ್ಥಿನಿ. ಸಂಸ್ಥೆ ಹಾಗೂ ದೇಶಕ್ಕಾಗಿ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸೋದು ನಿಜಕ್ಕೂ ದೊಡ್ಡ ಗೌರವ. ಐಐಟಿ ಮದ್ರಾಸ್ ಕಾರ್ಯದ ಸಲುವಾಗಿ ಝಂಝಿಬಾರ್ ಗೆ ಪ್ರತಿ ಬಾರಿ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಮಹಿಳೆಯರ ಪ್ರಾತಿನಿಧ್ಯ ತುಸು ಹೆಚ್ಚಿರೋದನ್ನು ಗಮನಿಸಿದ್ದೆವು' ಎಂದು ಹೇಳಿದ್ದಾರೆ.
ಮೊದಲ ವಿದೇಶಿ ಐಐಟಿ ಕ್ಯಾಂಪಸ್ ಝಂಝಿಬಾರ್
ಝಂಝಿಬಾರ್ ಭಾರತದ ಹೊರಗಿರುವ ಐಐಟಿಯ ಮೊದಲ ಕ್ಯಾಂಪಸ್ ಆಗಿದೆ. ಇದಕ್ಕೆ ಸಂಬಂಧಿಸಿ ಇತ್ತೀಚೆಗೆ ಭಾರತ ಹಾಗೂ ತಾಂಜಾನಿಯಾ ಒಪ್ಪಂದಕ್ಕೆ ಸಹಿ ಮಾಡಿವೆ. ಕಳೆದ ವಾರ ತಾಂಜಾನಿಯಾಕ್ಕೆ ಭೇಟಿ ನೀಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, 'ಜಾಗತಿಕ ದಕ್ಷಿಣಕ್ಕೆ ಭಾರತದ ಬದ್ಧತೆಯನ್ನು ಈ ಐತಿಹಾಸಿಕ ಹೆಜ್ಜೆ ನಿರೂಪಿಸಿದೆ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇನ್ನು ಝಂಝಿಬಾರ್ ಕ್ಯಾಂಪಸ್ ನಲ್ಲಿ ಶೈಕ್ಷಣಿಕ ಕಾರ್ಯಕ್ರಮ ಅಕ್ಟೋಬರ್ ನಿಂದ ಪ್ರಾರಂಭವಾಗಲಿದೆ.
ಅಂದು ದೇಶ ತೊರೆಯುತ್ತಿದ್ದರು ಇಂದು ಇಲ್ಲೇ ಸ್ಟಾರ್ಟ್ಅಪ್ ಸ್ಥಾಪಿಸ್ತಿದ್ದಾರೆ: ಐಐಟಿ ಕಾನ್ಪುರ ನಿರ್ದೇಶಕ
ಮಧ್ಯ ಪ್ರಾಚ್ಯ ಹಾಗೂ ದಕ್ಷಿಣ ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ಕ್ಯಾಂಪಸ್ ಪ್ರಾರಂಭಿಸುವಂತೆ ಅನೇಕ ಐಐಟಿಗಳಿಗೆ ಮನವಿ ಬರುತ್ತಲಿದೆ. ಅದರ ಭಾಗವಾಗಿಯೇ ಐಐಟಿ ಮದ್ರಾಸ್ ತಾಂಜಾನಿಯಾದಲ್ಲಿ ಕ್ಯಾಂಪಸ್ ಪ್ರಾರಂಭಿಸುತ್ತಿದೆ. ಇನ್ನು ಐಐಟಿ ದೆಹಲಿ ಯುಎಇಯಲ್ಲಿ ಕ್ಯಾಂಪಸ್ ಪ್ರಾರಂಭಿಸಿದೆ. ಈಜಿಪ್ಟ್, ಥೈಲ್ಯಾಂಡ್, ಮಲೇಷ್ಯಾ ಹಾಗೂ ಇಂಗ್ಲೆಂಡ್ ನಲ್ಲಿ ಐಐಟಿ ಕ್ಯಾಂಪಸ್ ತೆರೆಯಲು ಕೂಡ ಯೋಜನೆ ರೂಪಿಸಲಾಗಿದೆ.
ಐಐಟಿ ಝಂಝಿಬಾರ್ ನಲ್ಲಿ ಪ್ರಾರಂಭದಲ್ಲಿ ಎರಡು ಪೂರ್ಣಾವಧಿ ಕೋರ್ಸ್ ಗಳನ್ನು ಪರಿಚಯಿಸಲಾಗುತ್ತದೆ. ಒಟ್ಟು 70 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಇದರಲ್ಲಿ 50 ಮಂದಿ ಪದವಿಗೆ ಹಾಗೂ 20 ಮಂದಿಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡಲಾಗುವುದು.