Asianet Suvarna News Asianet Suvarna News

ಸೈಬರ್ ವಂಚಕರ ವಿರುದ್ಧ ಸರ್ಕಾರದ ಸಮರ; ಅನುಮಾನಾಸ್ಪದ ಬ್ಯಾಂಕ್ ಖಾತೆ, ಮೊಬೈಲ್ ಬ್ಲಾಕ್ ಗೆ ಚಿಂತನೆ

ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ತಡೆಗೆ ಅನೇಕ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 

Govt considers blocking suspicious accounts handsets to prevent cyber fraud anu
Author
First Published Nov 29, 2023, 2:29 PM IST

ನವದೆಹಲಿ (ನ.29): ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣಕ್ಕೆ ಕೆಂದ್ರ ಸರ್ಕಾರ ಮುಂದಾಗಿದೆ. ಮೊಬೈಲ್ ಸಾಧನಗಳ ವಿಶಿಷ್ಟ ಸಂಖ್ಯೆಯಾದ ಐಎಂಇಐ ಬ್ಲಾಕ್ ಮಾಡೋದು ಹಾಗೂ ಅನುಮಾನಾಸ್ಪದ ಖಾತೆಗಳಿಂದ ಹಣ ವಿತ್ ಡ್ರಾಗೆ ನಿರ್ಬಂಧ ವಿಧಿಸೋದು ಸೇರಿದಂತೆ ಅನೇಕ ಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಯೋಚನೆ ನಡೆಸಿದೆ. ಇದರಿಂದ ಭವಿಷ್ಯದಲ್ಲಿ ಇಂಥ ವಂಚನೆಗಳಿಗೆ ಕಡಿವಾಣ ಹಾಕಬಹುದು ಎಂಬುದು ಸರ್ಕಾರದ ಯೋಚನೆಯಾಗಿದೆ. ಆರ್ ಬಿಐ, ಟ್ರಾಯ್, ರಾಷ್ಟ್ರೀಯ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್ ಪಿಸಿಐ)  ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳ ಸಭೆಯ ಬಳಿಕ ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಷ್ಕ್ರಿಯ ಹಾಗೂ ಮುಲೆ ಬ್ಯಾಂಕ್ ಖಾತೆಗಳನ್ನು ಮೊದಲು ಗುರಿಯಾಗಿಸಿಕೊಳ್ಳಲಾಗಿದೆ. ಈ ಖಾತೆಗಳಲ್ಲಿ ಕಡಿಮೆ ಬ್ಯಾಲೆನ್ಸ್ ಇಉತ್ತದೆ. ಆದರೆ, ದಿಢೀರ್ ಹೆಚ್ಚಳ ಕಂಡುಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಇಂಥ ಖಾತೆಗಳಿಗೆ ಹಣ ವರ್ಗಾವಣೆ ಅಥವಾ ವಿತ್ ಡ್ರಾಗೆ ನಿಗದಿತ ಮಿತಿ ವಿಧಿಸುವ ಆಯ್ಕೆಗಳ ಬಗ್ಗೆ ಕೂಡ ಚರ್ಚಿಸಲಾಗಿದೆ.

ವಂಚಕರು ಹಣ ಸಂಗ್ರಹಿಸಲು ಅಥವಾ ವರ್ಗಾಯಿಸಲು ಮುಲೆ ಬ್ಯಾಂಕ್ ಖಾತೆಗಳನ್ನು ಬಳಸುತ್ತಾರೆ. ಸೈಬರ್ ವಂಚನೆ ಪ್ರಕರಣಗಳಲ್ಲಿ ಒಂದು ಖಾತೆಯಿಂದ ಕನ್ನಾ ಹಾಕಿರುವ ಹಣವನ್ನು ಅನೇಕ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ನಂತರ ಒಂದು ಖಾತೆಯಿಂದ ವಿತ್ ಡ್ರಾ ಮಾಡಲಾಗುತ್ತದೆ. ಹೀಗಾಗಿ ಇಂಥ ಪ್ರಕರಣಗಳಲ್ಲಿ ಬ್ಯಾಂಕ್ ಹಾಗೂ ಪೊಲೀಸರಿಗೆ ವಂಚಕರನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗುತ್ತದೆ.

ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!

ಡಿಜಿಟಲ್ ಲೆಂಡಿಂಗ್ ಆಪ್ ವೈಟ್ ಲಿಸ್ಟ್ 
ಇನ್ನು ಡಿಜಿಟಲ್ ಲೆಂಡಿಂಗ್ ಆಪ್ ಗಳ 'whitelist'ಬಗ್ಗೆ ಕೂಡ ಸಭೆಯಲ್ಲಿ ಚರ್ಚಿಸಲಾಗಿದೆ. ಅಂದರೆ 'ವೈಟ್ ಲಿಸ್ಟ್' ನಲ್ಲಿರುವ ಆಪ್ ಗಳನ್ನು ಮಾತ್ರ ಆಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭಿಸುವಂತೆ ಮಾಡೋದು. ಹೊಸ ಕಾನೂನಿನ ಅನುಷ್ಠಾನ, ಅನಿಯಂತ್ರಿತ ಸಾಲ ನೀಡುವಿಕೆ ಚಟುವಟಿಕೆಗಳ ನಿರ್ಬಂಧ (BULA)ಕಾಯ್ದೆ ಬಗ್ಗೆ ಕೂಡ ಚರ್ಚೆ ನಡೆಸಲಾಗಿದೆ.  

ಪ್ರತಿಕ್ರಿಯಿಗೆ ವಿಳಂಬ ಮಾಡದಂತೆ ಬ್ಯಾಂಕ್ ಗಳಿಗೆ ಮನವಿ
ವಿವಿಧ ಏಜೆನ್ಸಿಗಳು ಆನ್ ಲೈನ್ ಹಣಕಾಸು ವಂಚನೆಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸುವ ಸಮಯಾವಧಿಯನ್ನು ಹೆಚ್ಚಿಸುವಂತೆ ಬ್ಯಾಂಕುಗಳಿಗೆ ಈ ಸಮಯದಲ್ಲಿ ಮನವಿ ಮಾಡಲಾಗಿತ್ತು. ಇನ್ನು ಹಣದ ವರ್ಗಾವಣೆ ಪರಿಶೀಲಿಸಲು ಬ್ಯಾಂಕ್ ಗಳು ಹಾಗೂ ಪೊಲೀಸ್ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಆಧಾರ್ ಮಾಹಿತಿ ಸಂರಕ್ಷಣೆಗೆ ಸೂಚನೆ
ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ (AePS) ಸಂಬಂಧಿಸಿ ವಂಚನೆ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ರಾಜ್ಯ ಸರ್ಕಾರಗಳು ನಾಗರಿಕರ ಆಧಾರ್ ಸಂಬಂಧಿ ಮಾಹಿತಿಗಳನ್ನು ಸುರಕ್ಷಿತವಾಗಿರಿಸಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗಪಡಿಸಬಾರದು ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಈಗಾಗಲೇ ಯುಐಡಿಎಐ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. 

ಕೇಂದ್ರದಿಂದ ಗುಡ್‌ನ್ಯೂಸ್‌: ಸೈಬರ್‌ ವಂಚನೆ ತಡೆಯಲು ಮೊಬೈಲ್ ಚಂದಾದಾರರಿಗೆ ಶೀಘ್ರದಲ್ಲೇ ವಿಶಿಷ್ಟ ಐಡಿ

ಅನುಮಾನಾಸ್ಪದ ಚಟುವಟಿಕೆಗಳಲ್ಲಿ ತೊಡಗಿದ್ದ 70ಲಕ್ಷ ಮೊಬೈಲ್ ಸಂಖ್ಯೆಗಳನ್ನು ಕಳೆದ ಕೆಲವು ತಿಂಗಳಲ್ಲಿ ಟೆಲಿಕಾಮ್ ಇಲಾಖೆ ಬ್ಲಾಕ್ ಮಾಡಿದೆ. 

ಯುಪಿಐ ವಹಿವಾಟು 4 ಗಂಟೆ ವಿಳಂಬ
ಮೊದಲ ಬಾರಿಗೆ ಇಬ್ಬರು ವ್ಯಕ್ತಿಗಳ ನಡುವೆ ಯುಪಿಐ ವಹಿವಾಟು ನಡೆಯುವಾಗ ನಿರ್ದಿಷ್ಟ ಮೊತ್ತಕ್ಕೆ ಹೆಚ್ಚಿನದಕ್ಕೆ ಕನಿಷ್ಠ ಸಮಯ ಮಿತಿ ವಿಧಿಸಲು ಸರ್ಕಾರ ಯೋಜನೆ ರೂಪಿಸಿದೆ. 2 ಸಾವಿರ ರೂ. ಮೀರಿದ ಮೊತ್ತವನ್ನು ಮೊದಲ ಬಾರಿಗೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸಿ ವರ್ಗಾವಣೆ ಮಾಡುವಾಗ 4 ಗಂಟೆಗಳ ಸಮಯಾವಧಿ ನಿಗದಿಪಡಿಸುವ ಬಗ್ಗೆ ಯೋಚಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸುರಕ್ಷಿತಗೊಳಿಸಲು ಈ ಕ್ರಮ ಅಗತ್ಯ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. 

Follow Us:
Download App:
  • android
  • ios