ಡಿ.31ರೊಳಗೆ ತೆರಿಗೆ ಉಳಿತಾಯದ ಹೂಡಿಕೆ ಪೂರ್ಣಗೊಳಿಸಿ, ವೇತನದಿಂದ ಟಿಡಿಎಸ್ ಕಡಿತ ತಪ್ಪಿಸಿ
2022-23ನೇ ಆರ್ಥಿಕ ಸಾಲಿನ ತೆರಿಗೆ ಉಳಿತಾಯದ ಹೂಡಿಕೆಗಳನ್ನು ಮಾಡಲು 2023ರ ಮಾರ್ಚ್ 31ರ ತನಕ ಕಾಲಾವಕಾಶವಿದೆ. ಆದರೆ, ಬಹುತೇಕ ಕಚೇರಿಗಳು ಡಿ.31ರೊಳಗೆ ಈ ಹೂಡಿಕೆ ದಾಖಲೆಗಳನ್ನು ಸಲ್ಲಿಕೆ ಮಾಡದಿದ್ರೆ ಮುಂದಿನ ಮೂರು ತಿಂಗಳು ನಿಮ್ಮ ವೇತನದಿಂದ ಟಿಡಿಎಸ್ ಕಡಿತಗೊಳಿಸುತ್ತವೆ.
ನವದೆಹಲಿ (ಡಿ.30): ಹಳೆಯ ಆದಾಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ತೆರಿಗೆ ಉಳಿತಾಯ ಹೂಡಿಕೆಗಳನ್ನು ಮಾಡಲು ತೆರಿಗೆದಾರರಿಗೆ 2023ರ ಮಾರ್ಚ್ 31ರ ತನಕ ಕಾಲಾವಕಾಶವಿದೆ. ಆದರೆ, ನಿಮ್ಮ ಕಚೇರಿಯ ಅಕೌಂಟ್ ವಿಭಾಗ ನಿಮ್ಮ ತೆರಿಗೆ ಪಾವತಿಗಳನ್ನು ಹೊಂದಾಣಿಕೆ ಮಾಡಲು ಮಾರ್ಚ್ 31ರ ತನಕ ಕಾಯುವುದಿಲ್ಲ. 2022ರ ಡಿಸೆಂಬರ್ 31ರೊಳಗೆ ಹೂಡಿಕೆ ಮಾಡಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡದಿದ್ರೆ ಟಿಡಿಎಸ್ ರೂಪದಲ್ಲಿ ನಿಮ್ಮ ವೇತನದಿಂದ ಹೆಚ್ಚಿನ ತೆರಿಗೆ ಕಡಿತ ಮಾಡಲಿದೆ. ಹೀಗಾಗಿ ನೀವು 2022-23ನೇ ಆರ್ಥಿಕ ಸಾಲಿನ ಪ್ರಾರಂಭದಲ್ಲಿ ಘೋಷಿಸಿದ ತೆರಿಗೆ ಉಳಿತಾಯದ ಹೂಡಿಕೆಗಳನ್ನು 2022ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸಲು ವಿಫಲರಾದ್ರೆ ಹಾಗೂ ನಿಮ್ಮ ಕಚೇರಿಯ ಅಕೌಂಟ್ ವಿಭಾಗಕ್ಕೆ ದಾಖಲೆಗಳನ್ನು ಸಲ್ಲಿಕೆ ಮಾಡಲು ಸಾಧ್ಯವಾಗದಿದ್ರೆ ನಿಮ್ಮ ಯೋಜಿತ ಹೂಡಿಕೆಗಳಿಗೆ ವೇತನವನ್ನು ಹೊಂದಾಣಿಕೆ ಮಾಡಲು ಸಾಧ್ಯವಾಗೋದಿಲ್ಲ. ಸಾಮಾನ್ಯವಾಗಿ ಎಲ್ಲ ಕಚೇರಿಗಳು ಈ ನಿಯಮವನ್ನು ಪಾಲಿಸುತ್ತವೆ. ಹೀಗಾಗಿ ನಿಮ್ಮ ವೇತನದಿಂದ ಕಡಿತವಾದ ಹೆಚ್ಚುವರಿ ತೆರಿಗೆಗಳನ್ನು (ಟಿಡಿಎಸ್) ನೀವು ಆ ನಂತರ ಕ್ಲೈಮ್ ಮಾಡಿಕೊಳ್ಳಬಹುದು.
ನೀವು ಈ ಆರ್ಥಿಕ ವರ್ಷದ ಪ್ರಾರಂಭದಲ್ಲಿ ಘೋಷಿಸಿದ ಹೂಡಿಕೆ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ರೆ ಮುಂದಿನ ಮೂರು ತಿಂಗಳು ಅಂದ್ರೆ ಜನವರಿ, ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ನಿಮ್ಮ ವೇತನದಿಂದ ಹೆಚ್ಚುವರಿ ಮೊತ್ತ ಕಡಿತವಾಗಲಿದೆ. ಈ ಮೂರು ತಿಂಗಳು 2022-23ನೇ ಆರ್ಥಿಕ ಸಾಲಿನ ಕೊನೆಯ ಮೂರು ತಿಂಗಳು ಕೂಡ ಆಗಿವೆ.
ನಿಮ್ಮಎನ್ ಪಿಎಸ್ ಖಾತೆ ನಿಷ್ಕ್ರಿಯವಾಗಿದೆಯಾ? ಸಕ್ರಿಯಗೊಳಿಸಲು ಹೀಗೆ ಮಾಡಿ
ಇನ್ನು ಈ ಆರ್ಥಿಕ ಸಾಲಿನ ಪ್ರಾರಂಭದಲ್ಲಿ ಘೋಷಿಸಿದ ಹೂಡಿಕೆ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂದು ಚಿಂತಿಸಬೇಡಿ. 2023 ಮಾರ್ಚ್ 31ರ ತನಕ ಹೂಡಿಕೆ ಮಾಡಲು ಅವಕಾಶವಿದೆ. ಆದರೆ, ಹೂಡಿಕೆ ಹಾಗೂ ದಾಖಲೆಗಳನ್ನು ಸಲ್ಲಿಕೆ ಮಾಡಲು ವಿಳಂಬವಾದ ಕಾರಣ ನಿಮ್ಮ ಕಚೇರಿ ಟಿಡಿಎಸ್ ರೂಪದಲ್ಲಿ ವೇತನದಿಂದ ಕಡಿತಗೊಳಿಸಿರುವ ಹೆಚ್ಚುವರಿ ಮೊತ್ತವನ್ನು ನೀವು ಐಟಿಆರ್ ಕ್ಲೈಮ್ ಮಾಡಿ ತೆರಿಗೆ ಮರುಪಾವತಿಯಾಗುವ ತನಕ ಮರಳಿ ಪಡೆಯಲು ಸಾಧ್ಯವಾಗೋದಿಲ್ಲ. ಹೀಗಾಗಿ 2022 ಡಿಸೆಂಬರ್ 31ರೊಳಗೆ ಹೂಡಿಕೆ ಮಾಡಿ ಆ ಮೂಲಕ ನಿಮ್ಮ ವೇತನದಿಂದ ಟಿಡಿಎಸ್ ಕಡಿತವಾಗೋದನ್ನು ತಪ್ಪಿಸಿ.
ಸಾಮಾನ್ಯವಾಗಿ ತೆರಿಗೆ ಉಳಿತಾಯದ ಹೂಡಿಕೆಗಳನ್ನು ದೀರ್ಘಾವಧಿ ಗುರಿಗಳನ್ನು ಪೂರ್ಣಗೊಳಿಸಲು ಮಾಡಲಾಗುತ್ತದೆ. ಹೀಗಾಗಿ ಟಿಡಿಎಸ್ ಕಡಿತವಾಗದಂತೆ ಮಾಡಲು ತರಾತುರಿಯಲ್ಲಿ ಹೂಡಿಕೆ ಮಾಡುವಾಗ ಉತ್ತಮ ಯೋಜನೆಗಳನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಹೋಗಬಹುದು ಕೂಡ.
ತೆರಿಗೆ ಉಳಿತಾಯ ಮಾಡುವಂಥ ಅನೇಕ ಹೂಡಿಕೆ ಯೋಜನೆಗಳು ಲಭ್ಯವಿವೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS), ಸಾರ್ವಜನಿಕ ಭವಿಷ್ಯ ನಿಧಿ ((PPF), ಸುಕನ್ಯಾ ಸಮೃದ್ಧಿ ಯೋಜನೆ, ತೆರಿಗೆ ಉಳಿತಾಯದ ಸ್ಥಿರ ಠೇವಣಿ, ಜೀವ ವಿಮೆಗಳು, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮುಂತಾದವುಗಳಲ್ಲಿ ಹೂಡಿಕೆ ಮಾಡೋದ್ರಿಂದ ತೆರಿಗೆ ಉಳಿತಾಯ ಮಾಡಬಹುದು. ಈ ಬಹುತೇಕ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80 ಸಿ ಅಡಿಯಲ್ಲಿ ಗರಿಷ್ಠ 1.5ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು.
ಪ್ಯಾನ್- ಆಧಾರ್ ಲಿಂಕ್ ಗೆ 2023ರ ಮಾರ್ಚ್ 31 ಗಡುವು; ಮತ್ತೊಮ್ಮೆ ನೆನಪಿಸಿದ ಐಟಿ ಇಲಾಖೆ
ವಿಳಂಬ ಐಟಿಆರ್ ಸಲ್ಲಿಕೆಗೆ ಡಿ.31 ಅಂತಿಮ ಗಡುವು
2021-22 ನೇ ಆರ್ಥಿಕ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಗಡುವು (2022ರ ಜುಲೈ 31) ಮುಗಿದಿದ್ದರೂ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ 2022ರ ಡಿ.31ರ ತನಕ ಕಾಲಾವಕಾಶ ನೀಡಲಾಗಿದೆ. ಹೀಗಾಗಿ 2021-22 ನೇ ಆರ್ಥಿಕ ಸಾಲಿನ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದೆ. ಆದಾಯ ತೆರಿಗೆ ವ್ಯಾಪ್ತಿಗೊಳಪಡುವವರು ಐಟಿಆರ್ ಸಲ್ಲಿಕೆ ಮಾಡೋದು ಅತ್ಯಗತ್ಯ. ಒಂದು ವೇಳೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.