Roti Didi: ರೊಟ್ಟಿ ತಯಾರಿಸಿ 18 ಜನರಿಗೆ ಕೆಲಸ ನೀಡಿದ ಟೀಚರಮ್ಮ!
ಮನಸ್ಸು ಮಾಡಿದ್ರೆ ಎಲ್ಲವೂ ಸಾಧ್ಯ. ನಿರಂತರ ಪ್ರಯತ್ನ, ಕೆಲಸದ ಮೇಲೆ ಶ್ರದ್ಧೆಯಿದ್ರೆ ಯಶಸ್ಸು ಸುಲಭ ಎನ್ನುವುದಕ್ಕೆ ಈ ಮಹಿಳೆ ಸಾಕ್ಷಿ. ಮಕ್ಕಳಿಗೆ ಪಾಠ ಹೇಳಿಕೊಡುವಾಗಿನ ತಾಳ್ಮೆಯನ್ನು ಕೆಲಸದಲ್ಲೂ ತೋರಿಸಿ ಕೋಟ್ಯಾಧಿಪತಿಯಾಗಿದ್ದಾಳೆ.
ಹಣಗಳಿಕೆಗೆ ಈಗಿನ ದಿನಗಳಲ್ಲಿ ಸಾವಿರಾರು ದಾರಿಗಳಿವೆ. ಜನರು ತಮಗೆ ಯಾವುದು ಸೂಕ್ತ ಎಂಬುದನ್ನು ನೋಡಿ ಆ ದಾರಿಯಲ್ಲಿ ಹೋದ್ರೆ ಯಶಸ್ವಿಯಾಗೋದು ಸುಲಭ. ಯಾವ ಕೆಲಸವೂ ಕಠಿಣವಲ್ಲ. ಆದ್ರೆ ಪರಿಶ್ರಮ ಅತ್ಯಗತ್ಯ. ಸ್ವದೇಶಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ಅನೇಕ ಹೊಸ ಹೊಸ ಉದ್ಯೋಗಗಳು ಹುಟ್ಟಿಕೊಳ್ತಿವೆ. ಅನೇಕ ಮಹಿಳೆಯರು ಈ ವ್ಯಾಪಾರ ಕ್ಷೇತ್ರಕ್ಕೆ ಕಾಲಿಡ್ತಿದ್ದಾರೆ. ಮಹಿಳೆಯರೇ ನಡೆಸುತ್ತಿರುವ ಸ್ಟಾರ್ಟ್ ಅಪ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ.
ಮದುವೆ, ಮಕ್ಕಳು ಎಂದು ಬ್ಯುಸಿಯಾಗುವ ಮಹಿಳೆಯರು ಮಕ್ಕಳು ದೊಡ್ಡವರಾಗ್ತಿದ್ದಂತೆ ಮತ್ತೆ ವೃತ್ತಿ (Career) ಶುರುಮಾಡುವ ಮನಸ್ಸು ಮಾಡ್ತಾರೆ. ಆದ್ರೆ ಯಾವ ಕೆಲಸ ಅಥವಾ ಉದ್ಯೋಗ (Employment) ಮಾಡ್ಬೇಕೆಂಬ ಗೊಂದಲ ಅವರನ್ನು ಕಾಡುತ್ತದೆ. ಅಂಥವರಿಗೆ ಅನೇಕ ಕಂಪನಿಗಳು ಉದ್ಯೋಗ ನೀಡ್ತಿವೆ. ನೀವೂ ಸ್ವಂತ ವ್ಯವಹಾರ ಶುರು ಮಾಡ್ಬೇಕು ಎಂಬ ಬಯಕೆಯಲ್ಲಿದ್ದರೆ ಅದಕ್ಕೂ ಸಾಕಷ್ಟು ದಾರಿಗಳಿವೆ. ಗುಜರಾತಿನ ವಡೋದರದ ಈ ಟೀಚರ್ ಅಂತೆ ನೀವು ಸ್ವಂತ ಉದ್ಯೋಗಕ್ಕೆ ಇಳಿದು ಯಶಸ್ವಿಯಾಗ್ಬಹುದು. ನಾವಿಂದು ಬರೋಡದ ಮಹಿಳೆ ಮಾಡ್ತಿರುವ ಉದ್ಯೋಗ ಏನು ಎಂಬುದನ್ನು ಹೇಳ್ತೇವೆ.
ಕೆಲಸಕ್ಕಿಂತ ಭಿಕ್ಷೆ ಬೇಡೋದು ಬೆಸ್ಟಾ? ಭಿಕ್ಷೆ ಬೇಡಿ ಕೋಟ್ಯಧಿಪತಿಯಾಗಿದ್ದಾಳೆ ಈಕೆ!
ರೊಟ್ಟಿ ದೀದಿ : ಗುಜರಾತಿನ ಜನರು ವ್ಯಾಪಾರದಲ್ಲಿ ನಿಪುಣರು ಎಂಬ ಸಂಗತಿ ನಿಮಗೆ ತಿಳಿದಿದೆ. ಇಲ್ಲಿನ ಮಹಿಳೆಯರೂ ಹಿಂದೆ ಬಿದ್ದಿಲ್ಲ. ವಡೋದರ ಮಹಿಳೆಯರು ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದಾರೆ. ಅನೇಕ ಮಹಿಳೆಯರು ಉತ್ತಮ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಇದ್ರಲ್ಲಿ ಮೀನಾಬೆನ್ ಶರ್ಮಾ (Meenaben Sharma) ಒಬ್ಬರು. ವಡೋದರದ ಅಕೋಟಾದಲ್ಲಿ ವಾಸವಾಗಿರುವ ಮೀನಾಬೆನ್ ರೊಟ್ಟಿ ದೀದಿ ಎಂದೇ ಹೆಸರು ಪಡೆದಿದ್ದಾರೆ. ಅವರು ರೊಟ್ಟಿ ವ್ಯಾಪಾರವನ್ನು ನಡೆಸುತ್ತಿದ್ದಾರೆ.
ಯಾವಾಗ ಶುರುವಾಯ್ತು ರೊಟ್ಟಿ ತಯಾರಿಕೆ : ಮೀನಾಬೆನ್ ದೀಪಕ್ ಭಾಯಿ ಶರ್ಮಾ 15 ವರ್ಷಗಳಿಂದ ವಡೋದರಾದಲ್ಲಿ ವಾಸಿಸುತ್ತಿದ್ದಾರೆ. ಅವರು ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದರು. ಶಿಕ್ಷಕಿ ವೃತ್ತಿ ತೊರೆದ ಮೇಲೆ ರೊಟ್ಟಿ ಉದ್ಯಮಕ್ಕೆ ಕಾಲಿಟ್ಟರು. ಮೀನಾಬೆನ್ ಶರ್ಮಾ, 2018 ರಲ್ಲಿ ರೊಟ್ಟಿ ತಯಾರಿಸುವ ಕೆಲಸ ಶುರು ಮಾಡಿದರು.
ಈಗ ಮಾರಾಟವಾಗ್ತಿದೆ ಇಷ್ಟೊಂದು ರೊಟ್ಟಿ : ಮೀನಾಬೆನ್ ಶರ್ಮಾ, ರೊಟ್ಟಿಗಳನ್ನು ಕೈನಲ್ಲಿ ತಯಾರಿಸೋದಿಲ್ಲ. ಅವರು ಕಾರ್ಖಾನೆಯಲ್ಲಿ ಯಂತ್ರಗಳನ್ನು ಇಟ್ಟುಕೊಂಡಿದ್ದಾರೆ. ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಹಣದಲ್ಲಿಯೇ ಕಾರ್ಖಾನೆ ಶುರು ಮಾಡಿದ ಅವರು ಆರಂಭದಲ್ಲಿ ಪ್ರತಿ ದಿನ 1 ಸಾವಿರ ರೊಟ್ಟಿಗಳನ್ನು ತಯಾರಿಸಿ, ರೆಡಿ ಟು ಈಟ್ ಮಾದರಿಯಲ್ಲಿ ಮಾರಾಟ ಮಾಡುತ್ತಿದ್ದರು.
ದಿನ ಕಳೆದಂತೆ ಮೀನಾಬೆನ್ ಶರ್ಮಾ ಕಾರ್ಖಾನೆ ದೊಡ್ಡದಾಗಿ ಬೆಳೆದಿದೆ. ಜನರು ಮೀನಾಬೆನ್ ಶರ್ಮಾ ಕಾರ್ಖಾನೆಯಲ್ಲಿ ತಯಾರಾಗುವ ರೊಟ್ಟಿಯನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ. ಹಾಗಾಗಿಯೇ ಅವರ ಕಾರ್ಖಾನೆಯಲ್ಲಿ ಪ್ರತಿ ದಿನ ಐದರಿಂದ ಆರು ಸಾವಿರ ರೊಟ್ಟಿ ತಯಾರಾಗ್ತಿದೆ.
ಕಾರ್ಖಾನೆ ವಹಿವಾಟು : ಆರಂಭದಲ್ಲಿ ಜನರಿಗೆ ಈ ರೊಟ್ಟಿ ದೀದಿ ಬಗ್ಗೆ ತಿಳಿದಿರಲಿಲ್ಲ. ಈಗ ಮೀನಾಬೆನ್ ಶರ್ಮಾ ಪ್ರಸಿದ್ಧಿ ಪಡೆದಿದ್ದಾರೆ. ಅವರ ಕಾರ್ಖಾನೆಯಲ್ಲಿ ಎರಡು ವಾಹನವಿದೆ. ಇದ್ರ ಮೂಲಕ ರೊಟ್ಟಿಗಳನ್ನು ಗ್ರಾಹಕರಿಗೆ ತಲುಪಿಸುವ ಕೆಲಸ ನಡೆಯುತ್ತದೆ. ಈಗ ಕಾರ್ಖಾನಯೆಲ್ಲಿ ಸುಮಾರು 18 ಮಂದಿ ಕೆಲಸ ಮಾಡ್ತಿದ್ದಾರೆ. ಇವರ ಕಾರ್ಪೊರೇಷನ್ ನ ವಹಿವಾಟು ವಾರ್ಷಿಕ 40 ಲಕ್ಷ ರೂಪಾಯಿ ತಲುಪಿದೆ. ಹಿಟ್ಟಿನ ಬೆಲೆ ಏರಿಳಿತವಾಗ್ತಿದ್ದಂತೆ ರೊಟ್ಟಿ ಬೆಲೆಯಲ್ಲೂ ಏರಿಳಿತ ಮಾಡಲಾಗುತ್ತದೆ ಎಂದು ಮೀನಾಬೆನ್ ಶರ್ಮಾ ಹೇಳ್ತಾರೆ. ಈಗ ಅವರು ಒಂದು ರೊಟ್ಟಿಗೆ ಮೂರುವರೆ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ ರೊಟ್ಟಿ ಖರೀದಿ ಮಾಡಿದ್ರೆ ಮೂರು ರೂಪಾಯಿಗೆ ಒಂದು ರೊಟ್ಟಿ ನೀಡ್ತಿದ್ದಾರೆ.