ನಿಷ್ಕ್ರಿಯ ಬ್ಯಾಂಕ್ ಖಾತೆಗಳ ಮಾಹಿತಿಗೆ ವೆಬ್ ಪೋರ್ಟಲ್ ರೂಪಿಸಲಿರುವ RBI ; ಕ್ಲೇಮ್ ಆಗದ ಹಣ ಎಷ್ಟು?
ದೇಶದ ಅನೇಕ ಬ್ಯಾಂಕ್ ಗಳಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ವಹಿವಾಟು ನಡೆಯದ ಕೋಟ್ಯಂತರ ಖಾತೆಗಳಿವೆ. ಇಂಥ ಖಾತೆಯಲ್ಲಿರು ಹಣವನ್ನು ಸಂಬಂಧಪಟ್ಟ ವಾರಸುದಾರರಿಗೆ ತಲುಪಿಸಲು ಆರ್ ಬಿಐ ಮುಂದಾಗಿದ್ದು, ಇಂಥ ಖಾತೆಗಳ ಮಾಹಿತಿ ನೀಡಲು ವೆಬ್ ಪೋರ್ಟಲ್ ಪ್ರಾರಂಭಿಸೋದಾಗಿ ತಿಳಿಸಿದೆ. ಇಂದು 2023-24ನೇ ಆರ್ಥಿಕ ಸಾಲಿನ ಮೊದಲ ದ್ವಿಮಾಸಿಕ ಹಣಕಾಸು ನೀತಿ ಪ್ರಕಟಿಸುವ ಸಂದರ್ಭದಲ್ಲಿ ಆರ್ ಬಿಐ ಗವರ್ನರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನವದೆಹಲಿ (ಏ.6): ದೇಶದ ವಿವಿಧ ಬ್ಯಾಂಕ್ ಗಳಲ್ಲಿ 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯಿಂದ ವಹಿವಾಟು ನಡೆಯದ ಖಾತೆಗಳ ಸಂಖ್ಯೆ ಬಹಳಷ್ಟಿದೆ. ಇಂಥ ಖಾತೆಗಳನ್ನು ನಿಷ್ಕ್ರಿಯ ಖಾತೆಗಳೆಂದು ಪರಿಗಣಿಸಲಾಗುತ್ತದೆ. ಖಾತೆದಾರನ ಮರಣ ಅಥವಾ ಇನ್ನಿತರ ಕಾರಣಗಳಿಂದ ಇಂಥ ಖಾತೆಯಲ್ಲಿರುವ ಹಣವನ್ನು ವಾರಸುದಾರರು ಕ್ಲೇಮ ಮಾಡಿರೋದಿಲ್ಲ. ಠೇವಣಿದಾರರು ಅಥವಾ ಅವರ ವಾರಸುದಾರರಿಂದ ಕ್ಲೇಮ್ ಆಗದ ಇಂಥ ಠೇವಣಿಗಳ ಮಾಹಿತಿಗಳನ್ನು ಒದಗಿಸಲು ಪೋರ್ಟಲ್ ರೂಪಿಸೋದಾಗಿ ಆರ್ ಬಿಐ ಗುರುವಾರ ತಿಳಿಸಿದೆ. 2023-24ನೇ ಆರ್ಥಿಕ ಸಾಲಿನ ಮೊದಲ ದ್ವಿಮಾಸಿಕ ಹಣಕಾಸು ನೀತಿ ಪ್ರಕಟಿಸುವ ಸಂದರ್ಭದಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಮಾಹಿತಿ ನೀಡಿದ್ದಾರೆ. ಹಣಕಾಸು ಸಚಿವಾಲಯದ ಮಾಹಿತಿ ಅನ್ವಯ 2023ರ ಫೆಬ್ರವರಿ ಅಂತ್ಯಕ್ಕೆ ಅನುಗುಣವಾಗಿ ದೇಶದಲ್ಲಿ ಇಂಥ 10.24 ಕೋಟಿ ಬ್ಯಾಂಕ್ ಖಾತೆಗಳಿರುವುದು ಪತ್ತೆಯಾಗಿದೆ. ಇನ್ನು ಇಂಥ ನಿಷ್ಕ್ರಿಯವಾಗಿರುವ ಬ್ಯಾಂಕ್ ಖಾತೆಗಳಲ್ಲಿ ಕೊಳೆಯುತ್ತಿದ್ದ 35,012 ಕೋಟಿ ರೂ. ಠೇವಣಿ ಮೊತ್ತವನ್ನು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಈ ವರ್ಷದ ಫೆಬ್ರವರಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್‌ಬಿಐ) ವರ್ಗಾವಣೆ ಮಾಡಿವೆ.
ಬ್ಯಾಂಕ್ ಗಳು ಆರ್ ಬಿಐಗೆ ವರ್ಗಾವಣೆ ಮಾಡಿರುವ 35,012 ಕೋಟಿ ರೂ. ಹಣದಲ್ಲಿ ಎಸ್ಬಿಐ, ಪಿಎನ್ಬಿ ಮತ್ತು ಕೆನರಾ ಬ್ಯಾಂಕುಗಳ ಪಾಲು ಹೆಚ್ಚಿದೆ. ಎಸ್ ಬಿಐ 8086 ಕೋಟಿ ರೂ., ಪಂಜಾಬ್ ನ್ಯಾಷನಲ್ ಬ್ಯಾಂಕ್ 5340 ಕೋಟಿ ರೂ., ಕೆನರಾ ಬ್ಯಾಂಕ್ 4558 ಕೋಟಿ ರೂ. ಹಾಗೂ ಬ್ಯಾಂಕ್ ಆಫ್ ಬರೋಡಾದಿಂದ 3904 ಕೋಟಿ ರೂ. ಮೊತ್ತ ವರ್ಗಾವಣೆಯಾಗಿದೆ. ನಿಷ್ಕ್ರಿಯ ಖಾತೆಗಳ ಕುರಿತ ಈ ಮಾಹಿತಿಗಳನ್ನು ಸ್ವತಃ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕಾರಡ್ ಅವರು ಲೋಕಸಭೆಗೆ ಏ.3ರಂದು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರೆಪೋ ದರ ಏರಿಕೆ ಮಾಡದ RBI;ವರ್ಷದ ಬಳಿಕ ಸಾಲಗಾರರಿಗೆ ತುಸು ನೆಮ್ಮದಿ
ಬ್ಯಾಂಕ್ ಗಳ ನಿಷ್ಕ್ರಿಯ ಖಾತೆಯಲ್ಲಿರುವ ಹಣದ ವಿವರ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ): 8,086 ಕೋಟಿ ರೂ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ): 5,340 ಕೋಟಿ ರೂ.
ಕೆನರಾ ಬ್ಯಾಂಕ್ : 4,558 ಕೋಟಿ ರೂ.
ಬ್ಯಾಂಕ್ ಆಫ್ ಬರೋಡಾ: 3,904 ಕೋಟಿ ರೂ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: : 3,177 ಕೋಟಿ ರೂ.
ಬ್ಯಾಂಕ್ ಆಫ್ ಇಂಡಿಯಾ: 2,557 ಕೋಟಿ ರೂ.
ಇಂಡಿಯನ್ ಬ್ಯಾಂಕ್: 2,445 ಕೋಟಿ ರೂ.
ಇಂಡಿಯನ್ ಓವರ್ ಸೀಸ್ ಬ್ಯಾಂಕ್: 1,790 ಕೋಟಿ ರೂ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: 1,240 ಕೋಟಿ ರೂ.
ಬ್ಯಾಂಕ್ ಆಫ್ ಮಹಾರಾಷ್ಟ್ರ: 838 ಕೋಟಿ ರೂ.
ಯುಕೋ ಬ್ಯಾಂಕ್ : 583 ಕೋಟಿ ರೂ.
ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ : 494 ಕೋಟಿ ರೂ.
ಭಾರತದ ಜಿಡಿಪಿ ನಿರೀಕ್ಷಿತ ದರ ಕಡಿತಗೊಳಿಸಿದ ವಿಶ್ವ ಬ್ಯಾಂಕ್; ಶೇ.6.6ರಿಂದ ಶೇ.6.3ಕ್ಕೆ ಇಳಿಕೆ
ಬ್ಯಾಂಕ ಗಳಿಗೆ RBI ನಿರ್ದೇಶನ
RBI 'ಬ್ಯಾಂಕ್‌ಗಳಲ್ಲಿ ಗ್ರಾಹಕರ ಸೇವೆ' ಎಂಬ ಸುತ್ತೋಲೆ ಹೊರಡಿಸಿದ್ದು, ಅದ್ರಲ್ಲಿ ಬ್ಯಾಂಕ್ಗಳು ಖಾತೆಗಳ ವಾರ್ಷಿಕ ಪರಿಶೀಲನೆ ನಡೆಸಿ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕ್ರಿಯಾಶೀಲರಾಗಿರದ ಗ್ರಾಹಕರನ್ನು ಸಂಪರ್ಕಿಸಿ ಅವರ ಖಾತೆಯಲ್ಲಿ ಯಾವುದೇ ವ್ಯವಹಾರ ನಡೆದಿಲ್ಲ ಎಂಬ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡೋ ಜೊತೆಗೆ ಕಾರಣವನ್ನೂ ಕೋರುವಂತೆ ಸೂಚನೆ ನೀಡಿದೆ. ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರೋ ಖಾತೆಗಳ ಹಕ್ಕುದಾರರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ಪತ್ತೆಹಚ್ಚಲು ವಿಶೇಷ ಕಾರ್ಯಕ್ರಮ ಪ್ರಾರಂಭಿಸುವಂತೆ ಬ್ಯಾಂಕ್ಗಳಿಗೆ ಸಲಹೆ ನೀಡಲಾಗಿದೆ. ಹಾಗೆಯೇ ಬ್ಯಾಂಕ್ ಗಳು ತಮ್ಮ ವೆಬ್ ಸೈಟ್ ಗಳಲ್ಲಿ ಠೇವಣಿ ಹಿಂಪಡೆಯದ ಅಥವಾ ಯಾವುದೇ ವ್ಯವಹಾರ ನಡೆಸದ ನಿಷ್ಕ್ರಿಯ ಅಥವಾ 10 ವರ್ಷಗಳಿಂದ ಸಕ್ರಿಯವಾಗಿರದ ಖಾತೆಗಳ ಪಟ್ಟಿಯನ್ನುಪ್ರಕಟಿಸಬೇಕು.ಇದ್ರಲ್ಲಿ ಖಾತೆದಾರರ ಹೆಸರು ಹಾಗೂ ವಿಳಾಸ ಕೂಡ ಇರಬೇಕು ಎಂದು ತಿಳಿಸಲಾಗಿದೆ.