Asianet Suvarna News Asianet Suvarna News

ಸಾಲಗಾರರಿಗೆ ಶುಭಸುದ್ದಿ; ಸತತ 5ನೇ ಬಾರಿ ರೆಪೋದರ ಏರಿಸದ ಆರ್ ಬಿಐ

ಈ ಬಾರಿ ಕೂಡ ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ.ಹೀಗಾಗಿ ರೆಪೋದರ ಶೇ.6.5ರಷ್ಟೇ ಇರಲಿದೆ. 
 

Monetary policy actively disinflationary RBI keeps repo rate unchanged at 65percent anu
Author
First Published Dec 8, 2023, 1:41 PM IST

ಮುಂಬೈ (ಡಿ.8): ನಿರೀಕ್ಷೆಯಂತೆ ಈ ಬಾರಿ ಕೂಡ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.ಹೀಗಾಗಿ ರೆಪೋದರ ಈ ಹಿಂದಿನ ಶೇ.6.5ರಷ್ಟೇ ಇರಲಿದೆ. ಈ ಮೂಲಕ ಸತತ ಐದನೇ ಬಾರಿಗೆ ಆರ್ ಬಿಐ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಎರಡು ದಿನಗಳ ಕಾಲ ನಡೆದ ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯ ನಿರ್ಧಾರಗಳನ್ನು ಶುಕ್ರವಾರ ಪ್ರಕಟಿಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ಈ ಬಾರಿ ಕೂಡ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಎಂಬ ಮಾಹಿತಿ ನೀಡಿದ್ದಾರೆ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಕಡೆಗೆ ಆರ್ ಬಿಐ ಗಮನ ಕೇಂದ್ರೀಕರಿಸಿರೋದಾಗಿಯೂ ಅವರು ತಿಳಿಸಿದರು. ರೆಪೋದರ ಯಥಾಸ್ಥಿತಿಯಲ್ಲಿರುವ ಕಾರಣ ಗೃಹಸಾಲ ಸೇರಿದಂತೆ ವಿವಿಧ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗೋದಿಲ್ಲ. ಇದು ಸಾಲಗಾರರಿಗೆ ತುಸು ನೆಮ್ಮದಿ ಮೂಡಿಸಿದ್ದರೂ ಬಡ್ಡಿದರ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ತುಸು ನಿರಾಸೆ ಮೂಡಿಸಿರೋದು ಸುಳ್ಳಲ್ಲ.

ಆರ್ ಬಿಐ ಹಣಕಾಸು ನೀತಿ ಸಮಿತಿಯ  6 ಸದಸ್ಯರಲ್ಲಿ 5 ಮಂದಿ ರೆಪೋದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರ್ಣಯಕ್ಕೆ ಬೆಂಬಲ ಸೂಚಿಸಿದ್ದರು. ಹಣದುಬ್ಬರವು ಆರ್ ಬಿಐ ನಿಗದಿತ ಗುರಿಯಾದ ಶೇ.4ಕ್ಕೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನು ಶಕ್ತಿಕಾಂತ ದಾಸ್ ನೀಡಿದ್ದಾರೆ. ಅಕ್ಟೋಬರ್ ನಲ್ಲಿ ಹಣದುಬ್ಬರವನ್ನು ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ.4.87ಕ್ಕೆ ಇಳಿಕೆ ಕಂಡಿದೆ. ಆದರೂ ಇದು ಆರ್ ಬಿಐ ನಿಗದಿತ ಗುರಿಯಾದ ಶೇ.4ಕ್ಕಿಂತ ಮೇಲೆಯೇ ಇದೆ ಎಂಬುದು ಗಮನಾರ್ಹ.

ಮುಂದಿನ ಕೇಂದ್ರ ಬಜೆಟ್‌ ಲೇಖಾನುದಾನ ಮಾತ್ರ; ಅದ್ಭುತ ಘೋಷಣೆಗಳಿಗೆ ಜುಲೈವರೆಗೆ ಕಾಯಬೇಕು: ನಿರ್ಮಲಾ ಸೀತಾರಾಮನ್

ಈ ಹಿಂದೆ ಆರ್ ಬಿಐ ನಿರಂತರವಾಗಿ ರೆಪೋ ದರದಲ್ಲಿ ಏರಿಕೆ ಮಾಡಿರೋದ್ರಿಂದ ಬಡ್ಡಿದರದಲ್ಲಿ ಏರಿಕೆಯಾಗಿದ್ದು, ಅದು ಈಗ ಕೆಲಸ ಮಾಡುತ್ತಿರೋದು ಗೋಚರಿಸುತ್ತಿದೆ'ಎಂದು ದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು 2024ರ ಹಣಕಾಸು ವರ್ಷಕ್ಕೆ ಚಿಲ್ಲರೆ ಹಣದುಬ್ಬರ ಶೇ. 5.4 ಇರಲಿದೆ ಎಂದು ಆರ್ ಬಿಐ ಅಂದಾಜಿಸಿದೆ.

ಹಾಗೆಯೇ ಪ್ರಸಕ್ತ ಹಣಕಾಸು ಸಾಲಿನಲ್ಲಿ ಜಿಡಿಪಿ ಮುನ್ನೋಟವನ್ನು  ಶೇ. 6.5 ರಿಂದ ಶೇ. 7ಕ್ಕೆ ಏರಿಕೆ ಮಾಡಲಾಗಿದೆ. ಭಾರತದ ಆರ್ಥಿಕತೆಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 7.6ರಷ್ಟು ಬೆಳವಣಿಗೆ ಸಾಧಿಸಿದೆ. ಈ ಮೂಲಕ ಆರ್ಥಿಕ ತಜ್ಞರು ಅಂದಾಜಿಸಿದ್ದ ಶೇ. 6.8ಕ್ಕಿಂತ ಅಧಿಕ ವೇಗದಲ್ಲಿ ಬೆಳವಣಿಗೆ ದಾಖಲಿಸಿದೆ. ಹೀಗಾಗಿ ಈ ವರ್ಷ ಬೆಳವಣಿಗೆ ದರ ನಿಗದಿತ ಗುರಿಗಿಂತ ಹೆಚ್ಚುವ ನಿರೀಕ್ಷೆ ಕೂಡ ಇದೆ. 

ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕಲು 2022ರ ಮೇನಿಂದ 2023ರ ಫೆಬ್ರವರಿ ತನಕ ಆರ್ ಬಿಐ ರೆಪೋದರದಲ್ಲಿ 250 ಬೇಸಿಸ್ ಪಾಯಿಂಟ್ಸ್ ಹೆಚ್ಚಳ ಮಾಡಿತ್ತು. ಆ ಬಳಿಕ ಅಂದರೆ ಏಪ್ರಿಲ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆ ಬಳಿಕ ರೆಪೋದರ ಏರಿಕೆಗೆ ಬ್ರೇಕ್ ಹಾಕಿತ್ತು. 

ಅಬ್ಬಬ್ಬಾ.. 2 ಸಾವಿರ ರೂ. ನೋಟು ಪ್ರಿಂಟ್‌ ಮಾಡೋಕೆ ಆರ್‌ಬಿಐ ಖರ್ಚು ಮಾಡಿದ್ದು ಇಷ್ಟೊಂದಾ?

ಸಾಲಗಾರರು ನಿರಾಳ?
ರೆಪೋ ದರ ಅನ್ನೋದು ಆರ್ ಬಿಐ  ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆಯಿಂದ ಸಾಲಗಾರರು ಕಂಗೆಟ್ಟಿದ್ದರು. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚುತ್ತದೆ. ಇಲ್ಲವಾದರೆ ಸಾಲದ ಅವಧಿ ವಿಸ್ತರಣೆಯಾಗುತ್ತದೆ. ಹೀಗಾಗಿ ಈ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರೋದು ಸಾಲಗಾರರಿಗೆ ತುಸು ನೆಮ್ಮದಿ ನೀಡಿದೆ. ಆದರೆ, ಕಳೆದ 4 ತಿಂಗಳಿಂದ ರೆಪೋದರ ಯಥಾಸ್ಥಿತಿಯಲ್ಲಿದ್ದ ಕಾರಣ ಈ ಬಾರಿ ಇಳಿಕೆಯಾಗುವ ಮೂಲಕ ಸಾಲದ ಬಡ್ಡಿದರ ಕೂಡ ಇಳಿಕೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ ಕೂಡ. 
 

Follow Us:
Download App:
  • android
  • ios