12ನೇ ತರಗತಿ ಅನುತ್ತೀರ್ಣನಾದ ವಿದ್ಯಾರ್ಥಿ ಇಂದು ಭಾರತದ ಶ್ರೀಮಂತ ಉದ್ಯಮಿ; 1,30,000 ಕೋಟಿ ಮೌಲ್ಯದ ಕಂಪನಿ ಒಡೆಯ!
ಶಾಲಾ ಪರೀಕ್ಷೆಗಳಲ್ಲಿ ಫೇಲಾದವರು ಬದುಕಿನ ಪರೀಕ್ಷೆಗಳಲ್ಲೂ ಸೋಲುತ್ತಾರೆ ಎಂಬುದು ಶುದ್ಧ ಸುಳ್ಳು.ಇದಕ್ಕೆ ದಿವಿ ಲ್ಯಾಬ್ಸ್ ಸ್ಥಾಪಕ ಮುರಳಿ ದಿವಿ ಅತ್ಯುತ್ತಮ ನಿದರ್ಶನ.12ನೇ ತರಗತಿಯಲ್ಲಿ ಫೇಲಾಗಿದ್ದ ಮುರಳಿ ಇಂದು 1.3 ಲಕ್ಷ ಕೋಟಿ ರೂ. ಮೌಲ್ಯದ ಕಂಪನಿ ಒಡೆಯರು.
Business Desk:ಶಾಲೆಯಲ್ಲಿ ಉತ್ತಮ ಅಂಕ ಗಳಿಸಿ ಬುದ್ಧಿವಂತರಾದವರು ಮಾತ್ರ ಜೀವನದಲ್ಲಿ ಮುಂದೆ ಬರುತ್ತಾರೆ ಅನ್ನೋದು ಖಂಡಿತಾ ಸುಳ್ಳು. ಹಾಗೆಯೇ ಪರೀಕ್ಷೆಯಲ್ಲಿ ಫೇಲಾದವರೆಲ್ಲ ಬದುಕಿನ ಹಾದಿಯಲ್ಲೂ ಹಿಂದೆ ಬೀಳುತ್ತಾರೆ ಅನ್ನೋದು ಕೂಡ ಶುದ್ಧ ತಪ್ಪು. ಶೈಕ್ಷಣಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಬದುಕಿನ ಎಕ್ಸಾಂನಲ್ಲಿ ಉನ್ನತ ಶ್ರೇಣೆಯಲ್ಲಿ ಪಾಸಾದವರು ಹಲವರಿದ್ದಾರೆ. ಭಾರತದ ಜನಪ್ರಿಯ ಲ್ಯಾಬೋರೇಟರಿ ಹಾಗೂ ಫಾರ್ಮಾ ಕಂಪನಿಗಳಲ್ಲಿ ಒಂದಾದ ದಿವಿ ಲ್ಯಾಬ್ಸ್ ಸ್ಥಾಪಕ ಮುರಳಿ ದಿವಿ ಕೂಡ ಇಂಥವರಲ್ಲಿ ಒಬ್ಬರು. ಇಂದು ದಿವಿ ಲ್ಯಾಬ್ಸ್ ಸಕ್ರಿಯ ಫಾರ್ಮಾಸ್ಯುಟಿಕಲ್ ಸಾಮಗ್ರಿಗಳ (ಎಪಿಐ) ಮಾರಾಟದಲ್ಲಿ ಅಗ್ರ ಮೂರು ಉತ್ಪಾದಕರಲ್ಲಿ ಒಂದಾಗಿದೆ. ಈ ಸಂಸ್ಥೆ ಸುಮಾರು 1.3 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ಆಂಧ್ರ ಪ್ರದೇಶದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಮುರಳಿ ತಂದೆ ಸರ್ಕಾರಿ ನೌಕರರಾಗಿದ್ದರು. ಇವರ ಕುಟುಂಬದ ಮಾಸಿಕ ಆದಾಯ ಕೇವಲ 10 ಸಾವಿರ ರೂ. ಆಗಿತ್ತು. ಮುರಳಿ ದಿವಿ 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. ಆದರೂ ಛಲ ಬಿಡದೆ ಶಿಕ್ಷಣ ಮುಂದುವರಿಸಿ ಇಂದು ಭಾರತದ ಶ್ರೀಮಂತ ಫಾರ್ಮಾ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.
ತನ್ನ ಹಿರಿಯ ಸಹೋದರನಂತೆ ಮುರಳಿ ದಿವಿ ಕೆಮಿಸ್ಟ್ ಆಗುವ ಗುರಿ ಹೊಂದಿದ್ದರು. ಆದರೆ, ಫಾರ್ಮಸಿಯಲ್ಲಿ ಪದವಿ ಪಡೆದ ಬಳಿಕ 1976ರಲ್ಲಿ ಅಮೆರಿಕಕ್ಕೆ ತೆರಳುವ ನಿರ್ಧಾರ ಕೈಗೊಂಡರು ಹಾಗೂ ಅಲ್ಲಿ ಫಾರ್ಮಾಸ್ಟಿಸ್ಟ್ ಆಗಿ ವೃತ್ತಿ ಪ್ರಾರಂಭಿಸಿದರು. ಕೇವಲ 25ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದ ಇವರ ಕೈಯಲ್ಲಿ ಆ ಸಮಯದಲ್ಲಿ ಕೇವಲ 500ರೂ. ಇತ್ತು. ಅನೇಕ ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ ಇವರು, ವರ್ಷಕ್ಕೆ ಸುಮಾರು 65 ಸಾವಿರ ಡಾಲರ್ ಗಳಿಸುತ್ತಿದ್ದರು. ವಾರ್ನರ್ಸ್ ಹಿಂದೂಸ್ತಾನ ಕಂಪನಿಯಲ್ಲಿ ವೃತ್ತಿ ಪ್ರಾರಂಭಿಸಿದ ಮುರಳಿ ಪ್ರಾರಂಭಿಕ ವೇತನ ಕೇವಲ 250ರೂ. ಆಗಿತ್ತು.
ತಾಯಿಯಿಂದ ಪಡೆದ 2000 ರೂ. ನಿಂದ ವ್ಯಾಪಾರ ಪ್ರಾರಂಭ: ಹೇರ್ ಆಯಿಲ್ ಮಾರಾಟ ಮಾಡಿ 1651 ಕೋಟಿ ಗಳಿಸಿದ ಯಶಸ್ವಿ ಉದ್ಯಮಿ!
ಇನ್ನು ಅಮೆರಿಕದಲ್ಲಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ 40,000 ಅಮೆರಿಕನ್ ಡಾಲರ್ ಜೊತೆಗೆ ಭಾರತಕ್ಕೆ ಹಿಂತಿರುಗುವ ನಿರ್ಧಾರವನ್ನು ಮುರಳಿ ತೆಗೆದುಕೊಂಡರು. ಆದರೆ, ಈ ಸಮಯದಲ್ಲಿ ಮುಂದಿನ ಹಾದಿಯ ಕುರಿತು ಅವರಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ.
1984ರಲ್ಲಿ ಚೆಮಿನರ್ ಎಂಬ ಸಂಸ್ಥೆ ಸ್ಥಾಪಿಸಲು ಕಲಾಂ ಅಂಜಿ ರೆಡ್ಡಿ ಅವರ ಜೊತೆ ಮುರಳಿ ಕೈಜೋಡಿಸುತ್ತಾರೆ. 2000ರಲ್ಲಿ ಈ ಸಂಸ್ಥೆ ಡಾ. ರೆಡ್ಡಿ ಲ್ಯಾಬೋರೇಟರಿ ಜೊತೆಗೆ ವಿಲೀನವಾಯಿತು. ಡಾ.ರೆಡ್ಡಿ ಲ್ಯಾಬ್ಸ್ ಜೊತೆಗೆ ಕೂಡ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಳಿಕ ಮುರಳಿ 1990ರಲ್ಲಿ ದಿವಿ ಲ್ಯಾಬೋರೇಟರಿ ಪ್ರಾರಂಭಿಸುತ್ತಾರೆ. ಹಾಗೆಯೇ ಎಪಿಐ ಹಾಗೂ ಇಂಟರ್ ಮಿಡಿಯೇಟ್ಸ್ ಉತ್ಪಾದಿಸಲು ವಾಣಿಜ್ಯ ಪ್ರಕ್ರಿಯೆಗಳನ್ನು ಆರಂಭಿಸುತ್ತಾರೆ. 1995ರಲ್ಲಿ ಮುರಳಿ ದಿವಿ ತೆಲಂಗಾಣದ ಚೌಟುಪ್ಪಲ್ ನಲ್ಲಿ ಮೊದಲ ಉತ್ಪಾದನಾ ಘಟಕ ಪ್ರಾರಂಭಿಸುತ್ತಾರೆ. 2002ರಲ್ಲಿ ಕಂಪನಿಯ ಎರಡನೇ ಉತ್ಪಾದನಾ ಘಟಕವನ್ನು ವಿಶಾಖಪಟ್ಟಣಂ ಬಳಿ ಪ್ರಾರಂಭಿಸುತ್ತಾರೆ. ಹೈದರಾಬಾದ್ ಮೂಲದ ದಿವಿ ಲ್ಯಾಬ್ಸ್ ಆದಾಯ 2022ರ ಮಾರ್ಚ್ ನಲ್ಲಿ 88 ಬಿಲಿಯನ್ ರೂ. ಇದೆ.
ಕಿರಿಯ ವಯಸ್ಸಿನಲ್ಲೇ 29,199 ಕೋಟಿ ಮೌಲ್ಯದ ಫಿನ್ ಕಾರ್ಪ್ ಸಂಸ್ಥೆ ಎಂಡಿ; ಯಾರು ಈ ಅಭಯ ಭೂತದ?
ಮುರಳಿ ದಿವಿ ಬುದ್ಧಿವಂತ ವಿದ್ಯಾರ್ಥಿಯೇನೂ ಆಗಿರಲಿಲ್ಲ. ಮಚಲಿಪಟ್ಟಣಂನಲ್ಲಿ ಪಿಯುಸಿ ಪೂರ್ಣಗೊಳಿಸಿ ಆ ಬಳಿಕ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನಲ್ಲಿ ಪದವಿ ಪೂರ್ಣಗೊಳಿಸಿದರು. ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸ್ ನಲ್ಲಿ ಫಾರ್ಮಸಿಯಲ್ಲಿ ಪದವಿ ಪಡೆಯುತ್ತಾರೆ.
ಫೋರ್ಬ್ಸ್ ಇಂಡಿಯಾದ ಮಾಹಿತಿ ಪ್ರಕಾರ ಮುರಳಿ ದಿವಿ ಅವರ ಅಂದಾಜು ನಿವ್ವಳ ಸಂಪತ್ತು 5.8 ಬಿಲಿಯನ್ ಡಾಲರ್.