ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇಎಂಐ ಆಯ್ಕೆ ಮಾಡಿದ್ರಾ? ಹಾಗಾದ್ರೆ ಈ ವಿಷಯ ತಿಳಿದಿರಲಿ
ಕ್ರೆಡಿಟ್ ಕಾರ್ಡ್ ಬಳಸೋವಾಗ ಇಲ್ಲದ ಟೆನ್ಷನ್ ಬಿಲ್ ಪಾವತಿಸೋವಾಗ ಕಾಡೋದು ಸಹಜ.ಆದ್ರೆ ಬಿಲ್ ಪಾವತಿಸಲು ಹಣವಿಲ್ಲದಿದ್ದಾಗ ಇಎಂಐ ಆಯ್ಕೆ ಮಾಡಿಕೊಳ್ಳೋದು ಅನಿವಾರ್ಯ.
ಆನ್ಲೈನ್ ಶಾಪಿಂಗ್ನಿಂದ ಹಿಡಿದು ದಿನಸಿ ಅಂಗಡಿಗಳಲ್ಲಿ ಖರೀದಿಸಿದ ವಸ್ತುಗಳ ತನಕ ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬಳಸೋದು ಇತ್ತೀಚೆಗೆ ಕಾಮನ್. ಅದೂ ಕೊರೋನಾ, ಲಾಕ್ಡೌನ್ ಸಮಯದಲ್ಲಿ ಕೆಲವರ ಜೇಬು ಮತ್ತು ಅಕೌಂಟ್ ಎರಡೂ ಖಾಲಿಯಿದ್ದ ಕಾರಣ ಕ್ರೆಡಿಟ್ ಕಾರ್ಡ್ ಅಪತ್ಬಾಂಧವನಾಗಿ ಕೈ ಹಿಡಿದಿದ್ದು ಸುಳ್ಳಲ್ಲ. ಖರೀದಿ ಸಮಯದಲ್ಲಿ ಪಾಕೆಟ್ನಲ್ಲಿ ಕ್ರೆಡಿಟ್ ಕಾರ್ಡ್ಯಿದ್ರೆ ಲಕ್ಷಾಂತರ ರೂಪಾಯಿ ಜೇಬಿನಲ್ಲಿದ್ದಷ್ಟೇ ಧೈರ್ಯ. ಆದ್ರೆ ತಿಂಗಳ ಬಳಿಕ ಕ್ರೆಡಿಟ್ ಕಾರ್ಡ್ ಬಿಲ್ ಕ್ಲಿಯರ್ ಮಾಡೋವಾಗ ಮಾತ್ರ ಸಿಕ್ಕಾಪಟ್ಟೆ ಟೆನ್ಷನ್ ಆಗೋದಂತೂ ಗ್ಯಾರಂಟಿ. ಬೇಕಾಬಿಟ್ಟಿ ಕ್ರೆಡಿಟ್ ಕಾರ್ಡ್ ಬಳಸೋದು ಕೂಡ ಹಾಸಿಗೆ ಮೀರಿ ಕಾಲು ಚಾಚಿದಷ್ಟೇ ಅಪಾಯಕಾರಿ. ಕೆಲವರಂತೂ ನಿಗದಿತ ಸಮಯದೊಳಗೆ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಕ್ಲಿಯರ್ ಮಾಡಲು ಸಾಧ್ಯವಾಗದೆ ಹೆಣಗಾಡುತ್ತಾರೆ. ಜೊತೆಗೆ ಆ ಮೊತ್ತಕ್ಕೆ ಇನ್ನೊಂದಿಷ್ಟು ದಂಡ ಬಿದ್ದು, ಡಿಫಾಲ್ಟ್ ಆಗೋ ಜೊತೆ ಕ್ರೆಡಿಟ್ ಸ್ಕೋರ್ ಕೂಡ ತಗ್ಗುತ್ತದೆ. ಹಾಗಾದ್ರೆ ಯಾರ ಬಳಿ ಹೆಚ್ಚು ಹಣವಿರೋದಿಲ್ಲವೋ ಅವರು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಏನ್ ಮಾಡಬಹುದು? ಕ್ರೆಡಿಟ್ ಕಾರ್ಡ್ ಇಎಂಐ ಆಯ್ಕೆ ಆರಿಸಿಕೊಳ್ಳಬಹುದು.
ಪಿಎಫ್ ನಿಯಮಗಳಲ್ಲಿ ಬದಲಾವಣೆ: ಹೀಗ್ಮಾಡದಿದ್ರೆ EPF ಹಣಕ್ಕೆ ಕತ್ತರಿ!
ಹಣದ ಕೊರತೆ ಇರೋರಿಗೆ ವರದಾನ
ಇಎಂಐ ಮೂಲಕ ಬಾಕಿಯಿರೋ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ಅವಕಾಶವಿದೆ. ಅಂದ್ರೆ ಬಾಕಿಯಿರೋ ಬಿಲ್ ಅನ್ನು ಸಾಲವಾಗಿ ಪರಿವರ್ತಿಸಿ, ಇಎಂಐ ಮೂಲಕ ಮರುಪಾವತಿಸೋದು. ಈ ವಿಧಾನದಲ್ಲಿ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸೋದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ. ಏಕೆಂದ್ರೆ ಒಂದು ವೇಳೆ ನೀವು ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದಿದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಂಭೀರ ಹೊಡೆತ ಬೀಳುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಿಲ್ನ ಸಂಪೂರ್ಣ ಮೊತ್ತವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪಾವತಿಸಲು ಸಾಧ್ಯವಾಗದವರಿಗೆ ಈ ಆಯ್ಕೆ ನೆರವಾಗುತ್ತದೆ.
ನಿರ್ದಿಷ್ಟ ಮೊತ್ತ ಆರಿಸಿಕೊಳ್ಳಬಹುದು
ನೀವು ನಿರ್ದಿಷ್ಟ ದಿನಾಂಕದೊಳಗೆ ಕ್ರೆಡಿಟ್ ಕಾರ್ಡ್ ಬಿಲ್ನ ಸಂಪೂರ್ಣ ಮೊತ್ತ ಪಾವತಿಸಿದರೆ, ಅದಕ್ಕೆ ಯಾವುದೇ ಬಡ್ಡಿ ಇರೋದಿಲ್ಲ. ಆದ್ರೆ ನಿಗದಿತ ಸಮಯದೊಳಗೆ ಬಿಲ್ ಪಾವತಿಸಲು ಸಾಧ್ಯವಾಗದೆ ಇಎಂಐ ಮೂಲಕ ಬಾಕಿ ಮೊತ್ತ ಪಾವತಿಸೋದಾದ್ರೆ ಅದಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಬಿಲ್ ಬಾಕಿ ಪಾವತಿಸಲು ಇಎಂಐ ಆಯ್ಕೆ ಮಾಡಿಕೊಳ್ಳೋರು ಬಡ್ಡಿ ಬಗ್ಗೆ ಕೂಡ ಯೋಚಿಸಬೇಕಾಗುತ್ತದೆ. ಆದ್ರೆ ಇಲ್ಲೂ ಒಂದು ಅವಕಾಶವಿದೆ. ನೀವು ಸಂಪೂರ್ಣ ಬಿಲ್ ಮೊತ್ತವನ್ನು ಇಎಂಐ ಮೂಲಕ ಪಾವತಿಸಲು ಅವಕಾಶವಂತೂ ಇದ್ದೇಇದೆ. ಇದರ ಜೊತೆ ನಿರ್ದಿಷ್ಟ ಕಾರ್ಡ್ ಚಲಾವಣೆಯ ಮೊತ್ತವನ್ನು ಆರಿಸಿಕೊಂಡು ಅದನ್ನು ಇಎಂಐ ಮೂಲಕ ಪಾವತಿಸಬಹುದು. ಅಂದ್ರೆ ನೀವು ಆ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಅನೇಕ ವ್ಯವಹಾರ ನಡೆಸಿರುತ್ತೀರಿ. ಅದ್ರಲ್ಲಿ ಹೆಚ್ಚಿನ ಮೊತ್ತದ ವ್ಯವಹಾರವನ್ನು ಮಾತ್ರ ಆರಿಸಿಕೊಂಡು ಅದನ್ನು ಇಎಂಐ ಮೂಲಕ ಪಾವತಿಸಬಹುದು. ಉಳಿದ ಕ್ರೆಡಿಟ್ ಕಾರ್ಡ್ ಬಿಲ್ ಕ್ಯಾಷ್ ಕಟ್ಟಿ ಕ್ಲಿಯರ್ ಮಾಡ್ಬಹುದು. ಹೀಗೆ ಮಾಡೋದ್ರಿಂದ ನೀವು ಇಎಂಐಗೆ ಆಯ್ಕೆ ಮಾಡಿರೋ ವ್ಯವಹಾರದ ಮೊತ್ತಕ್ಕಷ್ಟೇ ಬಡ್ಡಿ ಅನ್ವಯಿಸುತ್ತದೆ.
2022ಕ್ಕೆ ದೇಶದಲ್ಲಿ 30 ಲಕ್ಷ ಐಟಿ ಉದ್ಯೋಗ ನಷ್ಟ?
ಲೆಕ್ಕ ಹಾಕಿ ನೋಡಿ
ಕ್ರೆಡಿಟ್ ಕಾರ್ಡ್ ಮೊತ್ತ ದೊಡ್ಡದಾಗಿದ್ರೆ, ಒಂದೇ ಬಾರಿಗೆ ಕಟ್ಟೋದು ಕಷ್ಟ ಎಂದು ನಿಮಗನಿಸಿ ಇಎಂಐ ಆಯ್ಕೆ ಮಾಡಿಕೊಂಡಿದ್ರೆ, ಈ ಬಗ್ಗೆ ನೀವು ಮರುಚಿಂತನೆ ನಡೆಸೋದು ಅಗತ್ಯ. ನೀವು ದೀರ್ಘಕಾಲಿಕ ಅವಧಿಯ ಇಎಂಐ ಆಯ್ಕೆ ಮಾಡಿದಾಗ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರು ಕಡಿಮೆ ಬಡ್ಡಿ ದರ ವಿಧಿಸೋದು ಸಾಮಾನ್ಯ. ಹಾಗಂತ ನೀವು ಪಾವತಿಸಬೇಕಾದ ಒಟ್ಟು ಬಡ್ಡಿ ಮೊತ್ತ ಕಡಿಮೆ ಎಂದರ್ಥವಲ್ಲ. ಉದಾಹರಣೆಗೆ ನೀವು 3 ತಿಂಗಳ ಅವಧಿಗೆ ಇಎಂಐ ತೆಗೆದುಕೊಂಡಿದ್ರೆ ಬ್ಯಾಂಕ್ ನಿಮಗೆ ವಾರ್ಷಿಕ ಶೇ.20ರಷ್ಟು ಬಡ್ಡಿ ವಿಧಿಸಬಹುದು. ಅದೇ ನೀವು ಒಂದು ವರ್ಷ ಅವಧಿಗೆ ತೆಗೆದುಕೊಂಡ್ರೆ ಬ್ಯಾಂಕ್ ಶೇ.15ರಷ್ಟು ಬಡ್ಡಿ ದರ ವಿಧಿಸಬಹುದು. ಹಾಗಾಗಿ ನೀವು ಒಂದು ವರ್ಷದ ಅವಧಿಗೆ ಬಡ್ಡಿ ದರ ಕಡಿಮೆಯಿದೆ ಎಂದು ಆಯ್ಕೆ ಮಾಡಿಕೊಂಡ್ರೆ ಕೊನೆಯಲ್ಲಿ ಕಟ್ಟಿರೋ ಬಡ್ಡಿ ಲೆಕ್ಕ ಹಾಕಿ ನೋಡಿದ್ರೆ ಆ ಮೊತ್ತ ಹೆಚ್ಚಿರೋದು ಗೊತ್ತಾಗುತ್ತದೆ.
ತುರ್ತು ಸಂದರ್ಭದಲ್ಲಿ ಮಾತ್ರ ಆರಿಸಿಕೊಳ್ಳಿ
ಕ್ರೆಡಿಟ್ ಕಾರ್ಡ್ ಬಿಲ್ ನಿಗದಿತ ಸಮಯದೊಳಗೆ ಪಾವತಿಸಲು ನಿಮ್ಮ ಬಳಿ ಹಣವಿಲ್ಲ ಹಾಗೂ ಬೇರೆ ಯಾವುದೇ ಆಯ್ಕೆಯೂ ಉಳಿದಿಲ್ಲ ಎಂಬ ಸಂದರ್ಭದಲ್ಲಿ ಮಾತ್ರ ಇಎಂಐ ಆಯ್ಕೆ ಮಾಡಿ. ಅಂದ್ರೆ ನಿಮ್ಮ ಬಳಿ ಬೇರೆ ಯಾವುದೇ ಆಯ್ಕೆಯಿಲ್ಲ ಎಂದಾಗ ಮಾತ್ರ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಇಎಂಐ ಆರಿಸಿಕೊಳ್ಳಿ. ಅಷ್ಟೇ ಅಲ್ಲ, ಇಎಂಐ ಆಯ್ಕೆ ಕೋರಿ ಅರ್ಜಿ ಸಲ್ಲಿಸೋ ಮುನ್ನ ಕ್ರೆಡಿಟ್ ಕಾರ್ಡ್ ಇಎಂಐ ಹಾಗೂ ಪರ್ಸ್ನಲ್ ಲೋನ್ ಅಥವಾ ಟಾಪ್-ಅಪ್ ಗೃಹ ಸಾಲಗಳಿಗೆ ವಿಧಿಸೋ ಬಡ್ಡಿ ದರಗಳನ್ನು ತುಲನೆ ಮಾಡಿ ನೋಡಿ. ಆ ಬಳಿಕ ಯಾವುದರ ಬಡ್ಡಿದರ ಕಡಿಮೆಯಿದೆಯೋ ಆ ಆಯ್ಕೆ ಆರಿಸಿಕೊಳ್ಳೋದು ಉತ್ತಮ.
ನಿಮ್ಮ ಕಾರು ಮಾರದೇ ಹಣ ಪಡೆಯಬಹುದು, ಹೇಗೆ ಅಂತೀರಾ?
ಬಡ್ಡಿ ಎಷ್ಟು?
ಕ್ರೆಡಿಟ್ ಕಾರ್ಡ್ ಸಾಲಕ್ಕೆ ಅನುಮತಿ ನೀಡೋ ಮುನ್ನ ಕಾರ್ಡ್ ಒದಗಿಸಿರೋ ಬ್ಯಾಂಕ್ ಅಥವಾ ಇತರ ಸಂಸ್ಥೆ ಗ್ರಾಹಕನ ಕ್ರೆಡಿಟ್ ಕಾರ್ಡ್ ವೆಚ್ಚ ಹಾಗೂ ಮರುಪಾವತಿ ದಾಖಲೆಗಳನ್ನು ಪರಿಶೀಲಿಸುತ್ತದೆ. ಕ್ರೆಡಿಟ್ ಕಾರ್ಡ್ ಸಾಲಗಳ ಮೇಲೆ ವಿಧಿಸೋ ಬಡ್ಡಿ ದರ ಸಾಲ ತೆಗೆದುಕೊಂಡ ವ್ಯಕ್ತಿಯ ಕ್ರೆಡಿಟ್ ಪ್ರೋಫೈಲ್ ಆಧರಿಸಿರೋ ಕಾರಣ ಗ್ರಾಹಕನಿಂದ ಗ್ರಾಹಕನಿಗೆ ಬೇರೆಯಾಗಿರುತ್ತದೆ.