ಉದ್ಯೋಗ ಅರಸಿ ವಿದೇಶಕ್ಕೆ ವಲಸೆ ಹೋಗುವ ಭಾರತೀಯರ ಆದಾಯ ಗಳಿಕೆಯಲ್ಲಿ ಶೇ.120 ಹೆಚ್ಚಳ: ವಿಶ್ವ ಅಭಿವೃದ್ಧಿ ವರದಿ
ಉದ್ಯೋಗಕ್ಕಾಗಿ ವಿದೇಶಗಳಿಗೆ ವಲಸೆ ಹೋಗುವ ಭಾರತೀಯರ ಆದಾಯದಲ್ಲಿ ಅಂದಾಜು ಶೇ.120ರಷ್ಟು ಹೆಚ್ಚಳವಾದರೆ,ದೇಶದೊಳಗೆ ಉದ್ಯೋಗ ಅರಸಿ ವಲಸೆ ಹೋಗಿರೋರ ಆದಾಯದಲ್ಲಿ ಶೇ.40ರಷ್ಟು ಏರಿಕೆಯಾಗಿದೆ ಎಂದು ವಿಶ್ವ ಅಭಿವೃದ್ಧಿ ವರದಿ ತಿಳಿಸಿದೆ.
ನವದೆಹಲಿ (ಏ.26): ವಿದೇಶಗಳಿಗೆ ದುಡಿಯಲು ಹೋಗುವ ಭಾರತೀಯರು ಆದಾಯದಲ್ಲಿ ಅಂದಾಜು ಶೇ.120ರಷ್ಟು ಹೆಚ್ಚಳವಾದರೆ, ದೇಶದೊಳಗೆ ಉದ್ಯೋಗ ಅರಸಿ ವಲಸೆ ಹೋಗಿರೋರ ಆದಾಯದಲ್ಲಿ ಶೇ.40ರಷ್ಟು ಏರಿಕೆ ಕಂಡಿದೆ ಎಂದು ವಿಶ್ವ ಅಭಿವೃದ್ಧಿ ವರದಿ ತಿಳಿಸಿದೆ. ಮಂಗಳವಾರ ಬಿಡುಗಡೆಯಾದ ಈ ವರದಿ ಅನ್ವಯ ಹೆಚ್ಚಿನ ಆದಾಯ ಗಳಿಸಲು ಕಡಿಮೆ ಕೌಶಲ್ಯ ಹೊಂದಿರುವ ಭಾರತೀಯರು ಅಮೆರಿಕಕ್ಕೆ ವಲಸೆ ಹೋಗುತ್ತಿದ್ದು,ಆದಾಯದಲ್ಲಿ ಶೇ.500ರಷ್ಟು ಏರಿಕೆ ಕಂಡಿದೆ. ಯುಎಇ ಆದಾಯದಲ್ಲಿ ಸುಮಾರು ಶೇ.300ರಷ್ಟು ಹೆಚ್ಚಳ ಕಂಡುಬಂದಿದೆ. ಸೌದಿ ಅರೇಬಿಯಾ, ಬೆಹ್ರೆನ್, ಒಮನ್, ಕುವೈಟ್ ಹಾಗೂ ಯುಎಇ ಗಾಲ್ಫ್ ಸೌಹಾರ್ದ ಸಮಿತಿ (ಜಿಸಿಸಿ) ರಾಷ್ಟ್ರಗಳಿಗೆ ವಲಸೆ ಹೋಗುವವರ ಗಳಿಕೆ ಕಡಿಮೆಯಿದೆ. ಇನ್ನು ಟೆಕ್ಕಿಗಳು, ವೈದ್ಯರು ಸೇರಿದಂತೆ ಹೆಚ್ಚಿನ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಗಳಿಗೆ ಹೆಚ್ಚಿರುತ್ತದೆ. ಕಡಿಮೆ ಕೌಶಲ್ಯದ ಉದ್ಯೋಗಿಗಳು ಕೂಡ ವೇತನದಲ್ಲಿ ಅನೇಕ ಬಾರಿ ಏರಿಕೆ ಕಂಡಿರುತ್ತಾರೆ. ಕೌಶಲ್ಯಗಳ ಹೊರತಾಗಿಯೂ ಗಳಿಕೆಯು ವಯಸ್ಸು, ಸ್ಥಳ ಹಾಗೂ ಭಾಷಾ ಸಾಮರ್ಥ್ಯವನ್ನು ಅವಲಂಬಿಸಿದೆ. ಹೀಗಾಗಿ ಕೌಶಲ್ಯದ ಜೊತೆಗೆ ಉಳಿದ ಅಂಶಗಳು ಕೂಡ ಗಳಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ವರದಿ ತಿಳಿಸಿದೆ.
'ಕೌಶಲ್ಯಗಳು ಹಾಗೂ ಪರಿಣತಿಯು ಭೇಟಿ ನೀಡುವ ಸ್ಥಳದ ಸಮಾಜದ ಅಗತ್ಯಗಳ ಜೊತೆಗೆ ಹೊಂದಾಣಿಕೆ ಆಗುತ್ತಿದ್ದರೆ ವಲಸೆಯಿಂದ ದೊಡ್ಡ ಪ್ರಮಾಣದಲ್ಲಿ ವೇತನ ಹೆಚ್ಚಳ ನಿರೀಕ್ಷಿಸಬಹುದು. ಈ ಗಳಿಕೆಯು ಸ್ವದೇಶದಲ್ಲಿನ ಗಳಿಕೆಗಿಂತ ಹೆಚ್ಚಿರುತ್ತದೆ. ಅಲ್ಲದೆ, ಇದು ಸ್ವದೇಶದಲ್ಲೇ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಗಳಿಕೆಗಿಂತ ಹೆಚ್ಚಿದೆ. ಪ್ರಸಕ್ತ ಆರ್ಥಿಕ ಬೆಳವಣಿಗೆ ದರದಲ್ಲಿ ಕಡಿಮೆ ಕೌಶಲ್ಯ ಹೊಂದಿರುವ ಕೆಲವು ದೇಶಗಳ ಜನರಿಗೆ ತಮ್ಮ ಸ್ವದೇಶದಲ್ಲಿ ಅಧಿಕ ಆದಾಯದ ದೇಶಕ್ಕೆ ವಲಸೆ ಹೋಗಿ ಗಳಿಸುವ ಆದಾಯವನ್ನು ಗಳಿಸಲು ಕೆಲವು ದಶಕಗಳೇ ಬೇಕಾಗಬಹುದು. ವಿದೇಶದಲ್ಲಿನ ಗಳಿಕೆಯನ್ನು ಅವರು ಆ ಬಳಿಕ ಸ್ವದೇಶದಲ್ಲಿರುವ ಕುಟುಂಬಗಳು ಹಾಗೂ ಸಮುದಾಯಗಳೊಂದಿಗೆ ಹಂಚಿಕೊಳ್ಳಬಹುದು' ಎಂದು ವಿಶ್ವ ಅಭಿವೃದ್ಧಿ ವರದಿ 2023 ತಿಳಿಸಿದೆ.
ಮ್ಯೂಚುವಲ್ ಫಂಡ್ ಲಾಭ-ನಷ್ಟ ಪರಿಶೀಲಿಸೋದು ಹೇಗೆ? ಯಾವಾಗ ಹೂಡಿಕೆ ಹಿಂತೆಗೆಯಬೇಕು?
ಇನ್ನು ವಲಸೆ ಕೂಡ ವೆಚ್ಚವನ್ನು ಒಳಗೊಂಡಿದೆ. ಅಂದರೆ ಆ ದೇಶಕ್ಕೆ ಪ್ರಯಾಣಿಸಲು ತಗಲುವ ವೆಚ್ಚ. ಇದು ಕಡಿಮೆಯಿದ್ದರೂ ಕೂಡ ಉದ್ಯೋಗಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಕತ್ತಾರ್ ಗೆ ಹೋಗಲು ಭಾರತೀಯ ಕಾರ್ಮಿಕ ತನ್ನ ಎರಡು ತಿಂಗಳ ಆದಾಯವನ್ನು ವಲಸೆ ವೆಚ್ಚವನ್ನು ಸರಿದೂಗಿಸಲು ವ್ಯಯಿಸಬೇಕು. ಇನ್ನು ಕುವೈಟ್ ಗೆ ತೆರಳುವವರಿಗೆ ಈ ವಲಸೆ ವೆಚ್ಚ ಸ್ವಲ್ಪ ಹೆಚ್ಚಿರುತ್ತದೆ. ಅಂದರೆ ಅಲ್ಲಿನ ತಮ್ಮ 9 ತಿಂಗಳ ಗಳಿಕೆಯನ್ನು ಈ ವೆಚ್ಚಕ್ಕಾಗಿ ವ್ಯಯಿಸಬೇಕಾಗುತ್ತದೆ. ಈ ವೆಚ್ಚ ಕುವೈಟ್ ಗೆ ತೆರಳುವ ಬಾಂಗ್ಲಾದೇಶಿ ವಲಸೆಗರಿಗೆ ಇನ್ನೂ ಹೆಚ್ಚಾಗುತ್ತದೆ.
ಈ ವರದಿ ಪ್ರಕಾರ ಜಾಗತಿಕವಾಗಿ ವಲಸೆ ಹೋಗುತ್ತಿರುವ ಕಾರ್ಮಿಕರ ಪ್ರಮಾಣ 184 ಮಿಲಿಯನ್. ಅದು ಒಟ್ಟು ಜನಸಂಖ್ಯೆಯ ಶೇ.2.3ರಷ್ಟಿದೆ. ಇದರಲ್ಲಿ 37 ಮಿಲಿಯನ್ ನಿರ್ಗತಿಕರು ಕೂಡ ಸೇರಿದ್ದಾರೆ. ನಾಲ್ಕು ವಿಧದ ವಲಸಿಗರು ಇದ್ದು, ಉತ್ತಮ ಕೌಶಲ್ಯ ಹೊಂದಿರುವ ಆರ್ಥಿಕ ವಲಸಿಗರು, ವಲಸೆ ಹೋಗುವ ದೇಶದಲ್ಲಿ ಬೇಡಿಕೆಯಿರುವ ಕೌಶಲ್ಯ ಹೊಂದಿರುವ ನಿರ್ಗತಿಕರು, ತೊಂದರೆಗೊಳಗಾಗಿರುವ ವಲಸಿಗರು ಹಾಗೂ ನಿರ್ಗತಿಕರು.
ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ವ? ಬದಲಾಯಿಸಲು ಹೀಗೆ ಮಾಡಿ
ಭಾರತ-ಅಮೆರಿಕ, ಭಾರತ-ಜಿಸಿಸಿ ಹಾಗೂ ಬಾಂಗ್ಲಾದೇಶ -ಭಾರತವನ್ನು ಜಾಗತಿಕವಾಗಿ ಟಾಪ್ ವಲಸೆ ಕಾರಿಡಾರ್ ಗಳು ಎಂದು ಗುರುತಿಸಲಾಗಿದೆ. ಇದರ ಜೊತೆಗೆ ಮೆಕ್ಸಿಕೋ-ಅಮೆರಿಕ, ಚೀನಾ-ಅಮೆರಿಕ, ಫಿಲಿಪ್ಪಿನ್ಸ್-ಅಮೆರಿಕ ಹಾಗೂ ಕಜಕಿಸ್ತಾನ್-ರಷ್ಯಾ ಟಾಪ್ ವಲಸೆ ಕಾರಿಡಾರ್ ಗಳಲ್ಲಿ ಸೇರಿವೆ.