2024ಕ್ಕೆ ಮತ್ತೊಂದು ಯುದ್ಧ ಕಾದಿದೆಯಾ? ಹಮಾಸ್ ದಾಳಿ ಹಿಂದಿದೆ ಸೌದಿ - ಇಸ್ರೇಲ್‌ ದೋಸ್ತಿ ತರ್ಕ!

By Kannadaprabha News  |  First Published Oct 23, 2023, 9:35 AM IST

2024ರ ವೇಳೆಗೆ, ಮಧ್ಯ ಪೂರ್ವದಲ್ಲಿ ಇನ್ನಷ್ಟು ವಿಶಾಲವಾದ ಯುದ್ಧ ಆರಂಭಗೊಳ್ಳುವ ಸಾಧ್ಯತೆಗಳಿದ್ದು, ಪ್ರತಿಯೊಬ್ಬರೂ ಉಕ್ರೇನ್ ಯುದ್ಧವನ್ನು ಮರೆತೇ ಬಿಡಬಹುದು. ಇರಾನ್ ಒಂದು ವಿಭಿನ್ನ ರಾಷ್ಟ್ರವಾಗಿದ್ದು, ಉತ್ತರ ಕೊರಿಯಾ, ವಿಯೆಟ್ನಾಂ ಅಥವಾ ಕೊಸೊವೋಗಳ ರೀತಿಯದಾಗಿಲ್ಲ. ಆದ್ದರಿಂದ ಈ ಪ್ರದೇಶದಲ್ಲಿ ಅತ್ಯಂತ ಉಗ್ರವಾದ ಕದನ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. 


- ಗಿರೀಶ್ ಲಿಂಗಣ್ಣ (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಸ್ತುತ ಮುಂದುವರೆಯುತ್ತಿರುವ ಇಸ್ರೇಲ್ - ಪ್ಯಾಲೆಸ್ತೀನ್ ಕದನ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ. ಪ್ಯಾಲೆಸ್ತೀನ್‌ನ ಉಗ್ರಗಾಮಿ ಗುಂಪು ಹಮಾಸ್ ಪಡೆಗಳು ಇಸ್ರೇಲಿನ ಯಹೂದಿ ನೆಲೆಗಳ ಮೇಲೆ ಅಕ್ಟೋಬರ್ 7ರ ಬೆಳಗಿನ ಜಾವದಲ್ಲಿ ಕೈಗೊಂಡ ದಾಳಿಯಲ್ಲಿ ನೂರಾರು ಜನರು ಸಾವನ್ನಪ್ಪಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಗಾಜಾ ಪಟ್ಟಿಯನ್ನು ಬಹುತೇಕ ನಿರ್ಬಂಧಕ್ಕೊಳಪಡಿಸಿ, ಗಾಜಾ ಪಟ್ಟಿಯ ಮೇಲೆ ಬಾಂಬ್‌ಗಳ ಸುರಿಮಳೆಗೈದಿತು. ಈ ಬಾಂಬ್ ದಾಳಿಗಳಲ್ಲಿ ನೂರಾರು ಅಮಾಯಕ ಜನರು ಸಾವಿಗೀಡಾದರು.

Tap to resize

Latest Videos

ಪ್ರಸ್ತುತ ಕದನದ ಆರಂಭಿಕ ಬೇರುಗಳು
ಈಗ ಪ್ಯಾಲೆಸ್ತೀನ್, ಇಸ್ರೇಲ್ ಹಾಗೂ ಜೋರ್ಡಾನ್ ಆಗಿರುವ ಪ್ರದೇಶಗಳು ಮೊದಲನೇ ಮಹಾಯುದ್ಧದ ಕೊನೆಯಿಂದ, ಎರಡನೇ ಮಹಾಯುದ್ಧದ ಕೊನೆಯ ತನಕ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದವು. ಆದರೆ, 1947ರಲ್ಲಿ ಈ ಪ್ರದೇಶಗಳಿಗೆ ಸ್ವಾತಂತ್ರ್ಯ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಜೋರ್ಡಾನ್ ಹೆಚ್ಚೇನೂ ತೊಂದರೆಗಳಿಲ್ಲದೆ ಸ್ವತಂತ್ರವಾಯಿತಾದರೂ, ಅರಬ್ ಮತ್ತು ಯಹೂದಿಗಳಿಗೆ ಒಂದೇ ಪ್ರಾಂತ್ಯವನ್ನು ಹಂಚಿಕೊಳ್ಳುವುದು ಅಸಾಧ್ಯವೇ ಆಗಿತ್ತು.

ಇದನ್ನು ಓದಿ: ಉತ್ತರ ಗಾಜಾ ತೊರೆಯಲು ಇಸ್ರೇಲ್‌ ಎಚ್ಚರಿಕೆ: ದಕ್ಷಿಣಕ್ಕೆ ಹೋಗದಿದ್ದರೆ ಉಗ್ರರೆಂದು ಪರಿಗಣಿಸುತ್ತೇವೆ ಎಂದು ವಾರ್ನಿಂಗ್‌!

ಕಳೆದ 75 ವರ್ಷಗಳ ಅವಧಿಯಲ್ಲಿ, ಪ್ಯಾಲೆಸ್ತೀನಿಯನ್ನರು ಇಸ್ರೇಲ್ ವಿರುದ್ಧ ಅರಬ್ ಸರ್ಕಾರಗಳ ನೆರವಿನೊಂದಿಗೆ ಸಾಕಷ್ಟು ಯುದ್ಧಗಳನ್ನು ಮಾಡಿದ್ದಾರೆ. ಅವುಗಳಲ್ಲಿ 1967ರ ಆರು ದಿನಗಳ ಯುದ್ಧ ಮತ್ತು 1973ರ ಯೋಮ್ ಕಿಪ್ಪುರ್ ಯುದ್ಧಗಳು ಹೆಚ್ಚು ಪ್ರಸಿದ್ಧವಾದವು. ಇಸ್ರೇಲ್ ತಾನು ಹೊಂದಿದ್ದ ತಾಂತ್ರಿಕ ಸಾಮರ್ಥ್ಯದ ಕಾರಣದಿಂದ ಬಹುತೇಕ ಯುದ್ಧಗಳಲ್ಲಿ ಮೇಲುಗೈ ಸಾಧಿಸಿದೆ. ಈ ಗೆಲುವುಗಳ ಕಾರಣದಿಂದ, ಇಸ್ರೇಲ್ ತಾನು ರಾಷ್ಟ್ರ ಸ್ಥಾಪನೆಯ ಅವಧಿಯಲ್ಲಿ ಪಡೆದ ಪ್ರದೇಶಕ್ಕಿಂತಲೂ ಹೆಚ್ಚಿನ ಭೂಭಾಗವನ್ನು ಹೊಂದಿದೆ.

ಭೂಮಿ, ಸಂಪನ್ಮೂಲ, ನಂಬಿಕೆ ಸ್ಪರ್ಧೆ
ಐತಿಹಾಸಿಕವಾಗಿ, ಯುದ್ಧದಲ್ಲಿ ತೊಡಗಿರುವ ಪಕ್ಷಗಳು ನೆಲ ಮತ್ತು ವಿವಿಧ ಧರ್ಮಗಳಿಗೆ ಸೇರಿದ ಪವಿತ್ರ ಭೂಮಿಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಿಕೊಳ್ಳಲು ವಿಫಲವಾಗಿವೆ. ಪ್ಯಾಲೆಸ್ತೀನ್ ತಾನು ಇಸ್ರೇಲನ್ನು ಅಧಿಕೃತವಾಗಿ ಮಾನ್ಯ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಯುದ್ಧಗಳಲ್ಲಿ ಇಸ್ರೇಲ್ ತನ್ನಿಂದ ವಶಪಡಿಸಿಕೊಂಡಿರುವ ಭೂಮಿಯನ್ನು ಮರಳಿಸಿ, ಸ್ವತಂತ್ರ ರಾಷ್ಟ್ರವನ್ನಾಗಿಸಬೇಕು ಎಂದಿದೆ. ಈ ಬೇಡಿಕೆಯನ್ನು ಜಗತ್ತಿನಾದ್ಯಂತ ಬಹುತೇಕ ಸರ್ಕಾರಗಳು ಮಾನ್ಯ ಮಾಡಿವೆ.

ಇದನ್ನು ಓದಿ: ಗಾಜಾ - ಈಜಿಪ್ಟ್‌ ಗಡಿ ಓಪನ್‌: ಆಹಾರ, ನೀರು, ಔಷಧ ಇಲ್ಲದೆ ಪರದಾಡುತ್ತಿದ್ದ ಗಾಜಾ ನಿವಾಸಿಗಳು ನಿರಾಳ

ಪೂರ್ವ ಜೆರುಸಲೇಂನಲ್ಲಿರುವ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಟೆಂಪಲ್ ಮೌಂಟ್, ಪಶ್ಚಿಮ ಗೋಡೆ, ಅಲ್-ಅಕ್ಸಾ ಮಸೀದಿ ಮತ್ತು ಚರ್ಚ್ ಆಫ್ ದ ಸೇಕ್ರೆಡ್ ಸೆಪೂಲ್ಕ್‌ರ್ ಎಲ್ಲವೂ ಈ ಪ್ರದೇಶದಲ್ಲಿಯೇ ಇದ್ದು, ಯಹೂದಿಗಳು, ಕ್ರೈಸ್ತರು ಮತ್ತು ಮುಸ್ಲಿಂ ಮೂರು ಸಮುದಾಯಗಳಿಗೂ ಪವಿತ್ರವಾಗಿವೆ. ವಿಶ್ವಸಂಸ್ಥೆ ಈ ಪ್ರದೇಶ ಪ್ಯಾಲೆಸ್ತೀನ್‌ನ ರಾಜಧಾನಿಯಾಗಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ ಇಸ್ರೇಲ್ ದೇಶ ಜೆರುಸಲೇಂ ವಿಭಜನೆಯ ವಿರುದ್ಧವಿದ್ದು, ಸಂಪೂರ್ಣ ಜೆರುಸಲೇಂ ಮೇಲೆ ತನ್ನ ಸಂಪೂರ್ಣ ಸಾರ್ವಭೌಮತ್ವವನ್ನು ಹೊಂದಿದೆ.

ಹಾಗೆ ನೋಡಿದರೆ, ಪ್ರಸ್ತುತ ನಡೆಯುತ್ತಿರುವ ಯುದ್ಧ ಎರಡೂ ದೇಶಗಳ ನಡುವಿನ ಸಂಪನ್ಮೂಲಗಳಿಗಾಗಿ ನಡೆಯುವ ಸ್ಪರ್ಧೆಯೂ ಹೌದು. ಗಾಜಾ ಪಟ್ಟಿಯ ಕಡಲ ತೀರದಾದ್ಯಂತ ಮತ್ತು ವೆಸ್ಟ್ ಬ್ಯಾಂಕಿನ ಜೋರ್ಡಾನ್ ನದಿ ತೀರದಾದ್ಯಂತ ನೈಸರ್ಗಿಕ ಅನಿಲ ಮತ್ತು ತೈಲಕ್ಕಾಗಿ ಅನ್ವೇಷಣೆಗಳು ನಡೆಯುತ್ತಿವೆ.

ಇದನ್ನು ಓದಿ: ಉಗ್ರರ ಸರ್ವನಾಶಕ್ಕೆ ರೆಡಿ! ಅಮೆರಿಕ, ಯುಕೆ ಬಲದ ಬಳಿಕ ಗಾಜಾದಲ್ಲಿ ದಾಳಿಗೆ ಸಿದ್ಧರಾಗುವಂತೆ ಭೂಸೇನೆಗೆ ಇಸ್ರೇಲ್‌ ಸೂಚನೆ!

ಗಾಜಾ ಪಟ್ಟಿಯ ಮಹತ್ವದ ಅಂಕಿ-ಅಂಶಗಳು
ಪ್ರಸ್ತುತ ಪ್ಯಾಲೆಸ್ತೀನ್ ಪ್ರದೇಶ ಇಸ್ರೇಲ್ ಒಳಗಿರುವ ಎರಡು ಸಣ್ಣ ಪ್ರದೇಶಗಳಿಗೆ ಸೀಮಿತವಾಗಿದೆ. ಮೊದಲನೆಯ ಭಾಗ 40 ಕಿಲೋಮೀಟರ್ ಉದ್ದನೆಯ ಗಾಜಾ ಪಟ್ಟಿಯಾಗಿದ್ದು, ಇದು ಮೆಡಿಟರೇನಿಯನ್ ಸಮುದ್ರ ತೀರದಾದ್ಯಂತ ಹರಡಿದೆ. ಪಾಶ್ಚಾತ್ಯ ಜಗತ್ತು ಉಗ್ರಗಾಮಿ ಸಂಘಟನೆ ಎಂದು ಪರಿಗಣಿಸಿರುವ ಹಮಾಸ್ ಎಂಬ ಇಸ್ಲಾಮಿಕ್ ಸಂಘಟನೆ ಗಾಜಾ ಪಟ್ಟಿಯಲ್ಲಿ ಅಧಿಕಾರ ಹೊಂದಿದೆ. ವೆಸ್ಟ್ ಬ್ಯಾಂಕ್ ಎನ್ನುವುದು ಪ್ಯಾಲೆಸ್ತೀನಿ ಆಡಳಿತದ ಇನ್ನೊಂದು ಪ್ರದೇಶವಾಗಿದೆ. 

ಇದನ್ನು ಪ್ಯಾಲೆಸ್ತೀನಿಯನ್ ಸಿವಿಲ್ ಅಡ್ಮಿನಿಸ್ಟ್ರೇಷನ್ ಆಳುತ್ತಿದ್ದು, ಈ ಪ್ರದೇಶದಲ್ಲಿ ಬೈಬಲ್ ಉಲ್ಲೇಖಿತ ಪ್ರಸಿದ್ಧ ತಾಣಗಳಾದ ಬೇತ್ಲೆಹೆಂ ಮತ್ತು ಜೆರಿಕೊಗಳು ಇವೆ. ಅಂದಾಜು 2.5 ಮಿಲಿಯನ್ ಜನರು ಪ್ಯಾಲೆಸ್ತೀನ್‌ನ ಉತ್ತರ ಮತ್ತು ದಕ್ಷಿಣ ಪ್ರಾಂತ್ಯಗಳನ್ನು ತಮ್ಮ ಮ‌ನೆ ಎನ್ನುತ್ತಾರೆ. ಅಂದಾಜು 5 ಮಿಲಿಯನ್ ಜನರು ಪ್ಯಾಲೆಸ್ತೀನ್‌ನಲ್ಲಿ ವಾಸಿಸಿದರೆ, 9 ಮಿಲಿಯನ್ ಜ‌ನರು ಇಸ್ರೇಲಿನಲ್ಲಿ ವಾಸಿಸುತ್ತಾರೆ.

ಇದನ್ನೂ ಓದಿ: ಮೋದಿ ಮಾತು ಕೊಟ್ಟಂತೆ ಪ್ಯಾಲೆಸ್ತೀನ್‌ಗೆ ಮಾನವೀಯ ನೆರವು ಕಳಿಸಿದ ಭಾರತ ಸರ್ಕಾರ: 6.5 ಟನ್ ಔಷಧಿ, ಅಗತ್ಯ ವಸ್ತು ರವಾನೆ

ಹಮಾಸ್‌ನಿಂದ ಈಗ ದಾಳಿ ಏಕೆ?
ಹಮಾಸ್ ಈ ಸಮಯದಲ್ಲಿ ದಾಳಿ ನಡೆಸಿರುವುದರ ಹಿಂದೆ ಒಂದು ತರ್ಕವೂ ಇದೆ. ಅಮೆರಿಕ ಇತ್ತೀಚೆಗೆ ಸೌದಿ ಅರೇಬಿಯಾ ಮತ್ತು ಇಸ್ರೇಲ್ ನಡುವೆ ಶಾಂತಿ ಸ್ಥಾಪಿಸಲು ಪ್ರಯತ್ನ ನಡೆಸಿದೆ. ಈಗ ಸೌದಿಗಳು ಇಸ್ರೇಲನ್ನು ಅದು ಹೊಂದಿರುವ ಗಡಿಗಳ ಸಮೇತ ಒಪ್ಪಿಕೊಂಡಿರುವುದರಿಂದ, ತಾನು ಕಳೆದುಕೊಂಡಿರುವ ಪ್ರದೇಶಗಳನ್ನು ಮರಳಿ ಗಳಿಸಬೇಕೆಂಬ ಪ್ಯಾಲೆಸ್ತೀನ್‌ನ ಪ್ರಯತ್ನಗಳು ಈಗ ಮುಗಿದು ಹೋದ ಅಧ್ಯಾಯ ಎಂಬಂತೆ ಕಾಣುತ್ತಿದೆ. ಅತ್ಯಂತ ಶ್ರೀಮಂತ ಮತ್ತು ಶಕ್ತಿಶಾಲಿ ಅರಬ್ ರಾಷ್ಟ್ರ ಪ್ರಸ್ತುತ ಗಡಿಯನ್ನು ಒಪ್ಪಿಕೊಂಡಿರುವಂತೆ ಕಂಡುಬರುತ್ತಿದೆ.

ಆದರೆ, ಈ ಬಿಕ್ಕಟ್ಟಿನಿಂದ ಇಸ್ರೇಲ್ ಸುಲಭವಾಗಿ ಹೊರಬರಬಾರದೆಂದು ಹಮಾಸ್ ಪ್ರಯತ್ನ ನಡೆಸಿದಂತೆ ಕಂಡುಬರುತ್ತಿದೆ. ಈಗಿನ ಭಯೋತ್ಪಾದನಾ ದಾಳಿಗಳಿಗೆ ವಿರುದ್ಧವಾಗಿ ಇಸ್ರೇಲ್ ಏನಾದರೂ ಮಿಲಿಟರಿ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ಇಸ್ರೇಲ್ ಮೇಲೆ ಇನ್ನಷ್ಟು ದಾಳಿಗಳು ಖಂಡಿತವಾಗಿಯೂ ನಡೆಯಲಿವೆ. ಒಂದು ವೇಳೆ ಇಸ್ರೇಲ್ ಏನಾದರೂ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಮೇಲೆ ನಿಯಂತ್ರಣ ಸಾಧಿಸಲು ಬಲಪ್ರಯೋಗ ನಡೆಸಿದರೆ, ಬಹಳಷ್ಟು ಅಮಾಯಕ ಜನರು ಸಾವಿಗೀಡಾಗುವ ಅಪಾಯವಿದೆ. ಹಾಗೇನಾದರೂ ಆದರೆ, ಮುಸ್ಲಿಂ ಜಗತ್ತು ಕೋಪಗೊಳ್ಳಬಹುದು. ಆಗ ಇಸ್ರೇಲಿಗೆ ಬೇರೆ ಯಾವುದೇ ಮಧ್ಯ ಪೂರ್ವದ ರಾಷ್ಟ್ರದೊಡನೆ ಸಂಬಂಧ ಸ್ಥಾಪಿಸುವುದು ಬಹುತೇಕ ಅಸಾಧ್ಯವಾಗಲಿದೆ.

ಇಸ್ರೇಲ್‌ಗೆ ಶಸ್ತ್ರಸಜ್ಜಿತ ಹಮಾಸ್ ಉಗ್ರಗಾಮಿ ಗುಂಪನ್ನು ನಾಶಪಡಿಸಲು ಸಾಧ್ಯವಾಗಬಹುದು. ಆದರೆ ಅದು ಪ್ಯಾಲೆಸ್ತೀನ್‌ನ ಪ್ರತಿರೋಧವನ್ನು ಕೊನೆಯಾಗಿಸುವುದಿಲ್ಲ.ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಉದ್ವಿಗ್ನತೆ ದಶಕಗಳಿಂದಲೂ ಹೆಚ್ಚಾಗುತ್ತಲೇ ಬಂದಿದ್ದು, ಈಗಂತೂ ಅದು ಸರಿಹೋಗಬಹುದು ಎಂದು ಭಾವಿಸುವುದೂ ಅಸಂಭವವಾಗಿದೆ.

ಇಸ್ರೇಲ್ ಗುಪ್ತಚರರಿಗೆ ಯಾಕೆ ತಿಳಿಯಲಿಲ್ಲ?
ಇಸ್ರೇಲಿ ಗುಪ್ತಚರ ಸಮುದಾಯ, ಅದರಲ್ಲೂ ಮೊಸಾದ್ ಸಂಸ್ಥೆಗೆ ಜಗತ್ತಿನಾದ್ಯಂತ ಉತ್ತಮ ಹೆಸರಿದೆ. ಇದಕ್ಕೆ ಅದರ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಯಶಸ್ಸು ಕಾರಣವಾಗಿದೆ. ನಾಜಿ ಯುದ್ಧಾಪರಾಧಿಯಾದ ಅಡಾಲ್ಫ್ ಏಯ್ಚ್‌ಮನ್‌ನನ್ನು ಅರ್ಜೆಂಟೀನಾದಲ್ಲಿ ಬಂಧಿಸಿ, ಇಸ್ರೇಲಿಗೆ ರವಾನಿಸಿ, ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದ ಬಳಿಕ ಮೊಸಾದ್ ಹೆಚ್ಚು ಪ್ರಸಿದ್ಧವಾಯಿತು. 

ಅದರೊಡನೆ, ಇಸ್ರೇಲಿ ಗುಪ್ತಚರ ಸಂಸ್ಥೆ ನಿರಂತರವಾಗಿ ಇರಾನಿನ ಅಣ್ವಸ್ತ್ರ ಕಾರ್ಯಕ್ರಮದ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ಅದರಲ್ಲೂ ಯಶಸ್ಸು ಸಂಪಾದಿಸಿದೆ. ಇರಾನಿನ ಪರಮಾಣು ಭೌತಶಾಸ್ತ್ರಜ್ಞರು ಗುಪ್ತಚರ ಸಂಸ್ಥೆಗಳ ಕಾರ್ಯಾಚರಣೆಗಳ ಗುರಿಯಾಗಿದ್ದರು.

ಆದರೆ, ಅಕ್ಟೋಬರ್ ತಿಂಗಳ ಆರಂಭದಲ್ಲಿ ಹಮಾಸ್ ಉಗ್ರರು ನಡೆಸಿದ ದಾಳಿ ಇಸ್ರೇಲಿ ಗುಪ್ತಚರ ಸಂಸ್ಥೆಗಳ ಪ್ರಮುಖ ವೈಫಲ್ಯವಾಗಿದ್ದು, ಇಸ್ರೇಲನ್ನು ತಬ್ಬಿಬ್ಬಾಗಿಸಿತ್ತು. ಈ ವೈಫಲ್ಯಕ್ಕೆ ಕಾರಣಗಳನ್ನು ಇನ್ನಷ್ಟು ಅನ್ವೇಷಣೆಗಳಿಗೆ ಒಳಪಡಿಸಬೇಕಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ, ವಿಶ್ಲೇಷಕರು ಈ ವೈಫಲ್ಯಕ್ಕೆ ಇಸ್ರೇಲಿನ ಆಂತರಿಕ ರಾಜಕೀಯ ಉದ್ವಿಗ್ನತೆಯನ್ನು ದೂರುತ್ತಿದ್ದಾರೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಜಾರಿಗೆ ತಂದ ನ್ಯಾಯಾಂಗ ಸುಧಾರಣೆಗಳು ದೇಶದಲ್ಲಿ ಧ್ರುವೀಕರಣಕ್ಕೆ ಕಾರಣವಾಗಿದ್ದು, ಮೊಸಾದ್‌ನ ಉನ್ನತ ವರ್ಗ ಇದಕ್ಕೆ ವಿರುದ್ಧವಾಗಿತ್ತು ಎನ್ನಲಾಗಿದೆ. ಈ ಆಂತರಿಕ ಪ್ರಕ್ಷುಬ್ಧತೆಯ ಕಾರಣದಿಂದ ಗುಪ್ತಚರ ವಲಯದ ಸಾಮರ್ಥ್ಯ, ಗಮನ ವಿಚಲಿತವಾಗಿತ್ತು.

ಗುಪ್ತಚರ ವೈಫಲ್ಯಕ್ಕೆ ಇನ್ನೊಂದು ಅಂಶವೆಂದರೆ, ಗುಪ್ತಚರ ಸಮುದಾಯ ತನ್ನ ಸಾಮರ್ಥ್ಯಗಳ ಕುರಿತು ಹೊಂದಿದ್ದ ಅತಿಯಾದ ಆತ್ಮವಿಶ್ವಾಸ. ಒಂದು ವೇಳೆ ತನಗೆ ಪ್ರತಿಸ್ಪರ್ಧಿಯೇ ಇಲ್ಲದಿದ್ದರೆ ಮಾಡುವ ಕೆಲಸಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವುದಿಲ್ಲ ಎನ್ನುವಂತೆ, ಮೊಸಾದ್‌ನಲ್ಲಿ ಎಲ್ಲವೂ ಸರಿಯಾಗಿದೆ ಎಂಬ ಭಾವನೆಯಿದ್ದಾಗ, ಯಾಕೆ ತಲೆ ಕೆಡಿಸಿಕೊಳ್ಳಬೇಕು ಎಂಬಂತೆ ಮೊಸಾದ್ ಕುಳಿತಿತ್ತು.

ಯುದ್ಧದಿಂದ ಅಮೆರಿಕಕ್ಕೆ ತಲೆನೋವು
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಯುದ್ಧ ಅಮೆರಿಕಕ್ಕೆ ಎರಡನೆಯ ಯುದ್ಧಭೂಮಿಯನ್ನು ತೆರೆದಿದೆ. ಏಕಕಾಲದಲ್ಲಿ ಇಸ್ರೇಲ್ ಮತ್ತು ಉಕ್ರೇನ್ ಎರಡಕ್ಕೂ ಬೆಂಬಲ ನೀಡುವುದು ಅಮೆರಿಕಕ್ಕೆ ಕಷ್ಟಕರವಾಗಿದೆ. ಅದಕ್ಕೂ ಹೆಚ್ಚಾಗಿ, ಅಮೆರಿಕದೊಳಗೇ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಸದಸ್ಯರು ನಿರಂತರವಾಗಿ ಅಮೆರಿಕದ ಕಾಂಗ್ರೆಸ್‌ನಲ್ಲಿ ಪ್ರತಿಯೊಂದು ಡಾಲರ್ ವೆಚ್ಚಕ್ಕೂ ಪರಸ್ಪರ ಕಿತ್ತಾಡುತ್ತಿದ್ದಾರೆ.

2024ರ ವೇಳೆಗೆ, ಮಧ್ಯ ಪೂರ್ವದಲ್ಲಿ ಇನ್ನಷ್ಟು ವಿಶಾಲವಾದ ಯುದ್ಧ ಆರಂಭಗೊಳ್ಳುವ ಸಾಧ್ಯತೆಗಳಿದ್ದು, ಪ್ರತಿಯೊಬ್ಬರೂ ಉಕ್ರೇನ್ ಯುದ್ಧವನ್ನು ಮರೆತೇ ಬಿಡಬಹುದು. ಇರಾನ್ ಒಂದು ವಿಭಿನ್ನ ರಾಷ್ಟ್ರವಾಗಿದ್ದು, ಉತ್ತರ ಕೊರಿಯಾ, ವಿಯೆಟ್ನಾಂ ಅಥವಾ ಕೊಸೊವೋಗಳ ರೀತಿಯದಾಗಿಲ್ಲ. ಆದ್ದರಿಂದ ಈ ಪ್ರದೇಶದಲ್ಲಿ ಅತ್ಯಂತ ಉಗ್ರವಾದ ಕದನ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಒಂದು ವೇಳೆ ಈ ಯುದ್ಧವೇನಾದರೂ ನಡೆದರೆ, ಸಂಪೂರ್ಣ ಜಗತ್ತು ಅಪಾಯಕ್ಕೆ ಸಿಲುಕಲಿದೆ!

click me!