ಅಮೆರಿಕದಲ್ಲಿ ಅರಳುತ್ತಾ ಕಮಲ? ಮತ್ತೆ ಅಧ್ಯಕ್ಷ ಆಗುವ ಟ್ರಂಪ್‌ ಆಸೆಗೆ ಭಾರತ ಮೂಲದ ಕಮಲಾ ಅಡ್ಡಿ 

By Kannadaprabha News  |  First Published Nov 4, 2024, 11:44 AM IST

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವಿನ ಸ್ಪರ್ಧೆ ತೀವ್ರ ಕುತೂಹಲ ಕೆರಳಿಸಿದೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಗೆದ್ದರೆ, ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಮತ್ತು ಭಾರತೀಯ ಮೂಲದ ಅಧ್ಯಕ್ಷೆ ಎಂಬ ಇತಿಹಾಸ ನಿರ್ಮಾಣವಾಗಲಿದೆ.


ವಾಷಿಂಗ್ಟನ್ ಡಿಸಿ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಅಬ್ಬರ ನ.5ರಂದು ನಡೆಯಲಿದೆ. 74 ವರ್ಷದ ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಪಾರ್ಟಿ ನಾಯಕ ಡೊನಾಲ್ಡ್‌ ಟ್ರಂಪ್‌ ಅವರಿಗೆ ಭಾರತೀಯ ಮೂಲದವರಾದ ಡೆಮಾಕ್ರೆಟಿಕ್‌ ಪಾರ್ಟಿ ಅಭ್ಯರ್ಥಿ ಕಮಲಾ ಹ್ಯಾರಿಸ್ ಸಡ್ಡು ಹೊಡೆದಿದ್ದಾರೆ. ಟ್ರಂಪ್‌ ಗೆಲ್ತಾರಾ ಅಥವಾ ಕಮಲಾ ಗೆದ್ದು, ಅಮೆರಿಕದ ಅಧ್ಯಕ್ಷೆ ಆದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನ್ನಿಸಿಕೊಳ್ಳುತ್ತಾರಾ ಎಂಬ ಎಂಬ ಬಗ್ಗೆ ಕುತೂಹಲವಿದೆ. ಹೀಗಾಗಿ ಜಗತ್ತು, ಅದರಲ್ಲೂ ವಿಶೇಷವಾಗಿ ಭಾರತ ಈ ಚುನಾವಣೆಯ ಬಗ್ಗೆ ಮನಹರಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದರ ಚಿತ್ರಣ ಇಲ್ಲಿದೆ.

ಅಧ್ಯಕ್ಷ ಅಭ್ಯರ್ಥಿಗಳ ಅರ್ಹತೆ ಏನು?
*ಕನಿಷ್ಠ 35 ವರ್ಷ ವಯಸ್ಸಾಗಿರಬೇಕು
*ಅಮೆರಿಕದಲ್ಲಿ ಜನಿಸಿರಬೇಕು/ ತಂದೆ ಅಥವಾ ತಾಯಿ ಅಮೆರಿಕನ್ನರಾಗಿರಬೇಕು
*ಅಮೆರಿಕದಲ್ಲಿ ಕನಿಷ್ಠ 14 ವರ್ಷ ನೆಲೆಸಿರಬೇಕು

Tap to resize

Latest Videos

undefined

538 ಪ್ರತಿನಿಧಿಗಳಿಂದ ಅಧ್ಯಕ್ಷರ ಆಯ್ಕೆ

ಎರಡೂ ರಾಜಕೀಯ ಪಕ್ಷಗಳು ಆಯಾ ರಾಜ್ಯದಲ್ಲಿ ಚುನಾವಣೆಗೂ ಮುನ್ನ ತಮ್ಮ ಚುನಾಯಿತ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತವೆ. ರಾಜ್ಯದ ಜನ ಆಯಾ ಪಕ್ಷದ ಅಭ್ಯರ್ಥಿಗೆ ಅಥವಾ ತಮಗಿಷ್ಟವಾದ ಚುನಾಯಿತ ಪ್ರತಿನಿಧಿಗೆ ಮತಚಲಾಯಿಸುತ್ತಾರೆ. ಅಮೆರಿಕದಲ್ಲಿ ಒಟ್ಟು 50 ರಾಜ್ಯಗಳಿದ್ದು, ಒಟ್ಟು 538 ಮಂದಿ ಚುನಾಯಿತ ಪ್ರತಿನಿಧಿಗಳಿರುತ್ತಾರೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಸೇರುತ್ತವೆ. ಪ್ರತಿಸ್ಪರ್ಧಿಗೆ ಶೂನ್ಯ ಮತ ಲಭಿಸುತ್ತವೆ.

ಚುನಾವಣೆ ಹೇಗೆ ನಡೆಯುತ್ತದೆ?
ಅಮೆರಿಕನ್ನರು ನೇರವಾಗಿ ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಬದಲಾಗಿ ಅಮೆರಿಕದಲ್ಲಿ ರಿಪಬ್ಲಿಕನ್‌ ಮತ್ತು ಡೆಮಾಕ್ರಟ್‌ ಪಕ್ಷ ಎಂಬ ರಾಜಕೀಯ ಪಕ್ಷಗಳಿದ್ದು, ಅಧ್ಯಕ್ಷರನ್ನು ಎಲೆಕ್ಟೋರಲ್‌ ಕಾಲೇಜುಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಮತದಾರರು ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಆಯ್ಕೆಯಾದಂತಹ ಚುನಾಯಿತ ಪ್ರತಿನಿಧಿಗಳು ಅಧ್ಯಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುತ್ತಾರೆ.

ಪ್ರತಿ 4 ವರ್ಷಕ್ಕೊಮ್ಮೆ ಚುನಾವಣೆ
ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರತಿ 4 ವರ್ಷಗಳಿಗೊಮ್ಮೆ ಸಾಮಾನ್ಯವಾಗಿ ನವೆಂಬರ್‌ ಮೊದಲ ಸೋಮವಾರದ ಮಾರನೇ ದಿನ ಅಂದರೆ ಮಂಗಳವಾರ ನಡೆಯುತ್ತದೆ. 1845ರಿಂದಲೂ ಅಮೆರಿಕ ಸಂಸತ್ತು (ಕಾಂಗ್ರೆಸ್‌) ಈ ನಿಯಮ ಪಾಲಿಸಿಕೊಂಡು ಬರುತ್ತಿದೆ. ಜನರು ಇ-ಮೇಲ್‌ ಮೂಲಕ ಮತ ಚಲಾಯಿಸಲೂ ಅವಕಾಶವಿದೆ.

ಒಹಾಯೋ ಗೆದ್ದವರಿಗೆ ಅಧ್ಯಕ್ಷ ಪಟ್ಟ!
ಅಮೆರಿಕದಲ್ಲಿ ಒಹಾಯೋ ಸೇರಿದಂತೆ 6 ಮಹತ್ವದ ರಾಜ್ಯಗಳಿವೆ. ಕಡೆಯ ಕೆಲವು ವಾರಗಳಲ್ಲಿ ಈ ರಾಜ್ಯಗಳತ್ತಲೇ ಸ್ಪರ್ಧಿಗಳ ಗಮನ ಇರುತ್ತದೆ. ಅಲ್ಲಿಯೇ ಇವರ ಪ್ರಚಾರಕ್ಕೆ ಒತ್ತು ನೀಡಲಾಗುತ್ತದೆ. ಇದುವರೆಗೂ ಒಂದು ಬಾರಿ ಬಿಟ್ಟರೆ ಉಳಿದೆಲ್ಲ ಚುನಾವಣೆಗಳಲ್ಲೂ ಒಹಾಯೋದಲ್ಲಿ ಮುನ್ನಡೆ ಸಾಧಿಸಿದವರಿಗೇ ಅಧ್ಯಕ್ಷ ಪಟ್ಟ ಸಿಕ್ಕಿದೆ.

ಮತದಾನ ಹೇಗೆ ನಡೆಯುತ್ತದೆ?
ಈವರೆಗೆ ಬ್ಯಾಲಟ್‌ ಬಾಕ್ಸಿಗೆ ತಮ್ಮ ಮೇಲ್‌ ಕಳಿಸಿರದ ಮತದಾರರು ನ.5ರಂದು ತಮ್ಮ ಅಧ್ಯಕ್ಷನ ಆಯ್ಕೆಗೆ ಮತ ಚಲಾಯಿಸಲು ಮತಪೆಟ್ಟಿಗೆಯತ್ತ ಬರುತ್ತಾರೆ. ಮತದಾನ ಮುಗಿದ 12 ತಾಸಿನೊಳಗೆ ಮುಂದಿನ ಅಧ್ಯಕ್ಷರಾರು ಎಂಬುದು ಸ್ಪಷ್ಟವಾಗತೊಡಗುತ್ತದೆ. ರಾಜ್ಯಗಳಲ್ಲಿ ಬಹುಮತ ಪಡೆದರೆ ಸಾರ್ವಜನಿಕರ ಲೆಕ್ಕದಲ್ಲಿ ಅಧ್ಯಕ್ಷೀಯ ಚುನಾವಣೆ ಮುಗಿದಂತೆಯೇ. ಎಲೆಕ್ಟೋರಲ್‌ ಕಾಲೇಜ್‌ ಪ್ರತಿನಿಧಿಗಳು ತಮ್ಮ ಪಕ್ಷ ಹೇಳಿದ ಅಥವಾ ಗೆಲ್ಲುವ ಅಭ್ಯರ್ಥಿಗೇ ಮತ ಹಾಕಬೇಕೆಂಬ ನಿಯಮವೇನೂ ಇಲ್ಲ. ಆದರೆ ತಮ್ಮದೇ ಪಕ್ಷದ ಅಭ್ಯರ್ಥಿಗೆ ಮತ ಹಾಕದಿರುವ ಘಟನೆಗಳು ತೀರಾ ಅಪರೂಪ. 

ನವೆಂಬರ್‌ 5ಕ್ಕೆ ಮತದಾನ ನಡೆದರೆ ಡಿ.10ರ ಒಳಗಾಗಿ ಮತ ಎಣಿಕೆಯನ್ನು ಪೂರ್ಣಗೊಳಿಸಬೇಕು. ಆಯ್ಕೆಯಾದ ಜನಪ್ರತಿನಿಧಿಗಳು ಅದಾದ 1 ವಾರದ ಬಳಿಕ ಅಧ್ಯಕ್ಷೀಯ ಅಭ್ಯರ್ಥಿಯನ್ನು ಆಯ್ಕೆಮಾಡುತ್ತಾರೆ. ಅಂತಿಮವಾಗಿ ಈ ಚುನಾವಣೆಯಲ್ಲಿ ಗೆದ್ದ ಅಧ್ಯಕ್ಷ ಅಭ್ಯರ್ಥಿ ಮುಂದಿನ ವರ್ಷ ಅಂದರೆ 2025ರ ಜನವರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಕಮಲಾ ಅಭ್ಯರ್ಥಿ ಆಗಿದ್ದೇ ಅನಿರೀಕ್ಷಿತ
ಕಮಲಾ ಹ್ಯಾರಿಸ್‌ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇ ತೀರಾ ಅನಿರೀಕ್ಷಿತ. ಜೋ ಬೈಡೆನ್‌ ಅವರ ಜತೆ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದ ಅವರ ಹೆಸರು ಮೊದಲು ಕೇಳಿಬಂದೂ ನಂತರ 81 ವರ್ಷದ ಬೈಡೆನ್‌ ತಾವೇ ಸ್ಪರ್ಧಿಸುವುದಾಗಿ ಹೇಳಿದ ಕಾರಣ ಕಮಲಾ ಸುಮ್ಮನಾಗಿದ್ದರು. ಆದರೆ ಬೈಡೆನ್‌ಗೆ ವೃದ್ಧಾಪ್ಯದ ಅರಳು ಮರಳು ಆದ ಕಾರಣ ಕೊನೇ ಕ್ಷಣದಲ್ಲಿ ಚಿತ್ರಣ ಬದಲಾಯಿತು. ಬೈಡೆನ್‌ ತಾವು ಸ್ಪರ್ಧಿಸಲ್ಲ ಎಂದು ಘೋಷಿಸಿದರು. ಹೀಗಾಗಿ ಅನಾಯಾಸವಾಗಿ ಕಮಲಾ ಅಭ್ಯರ್ಥಿ ಆದರು. ಇದು ಕಣ ರಂಗೇರುವಂತೆ ಮಾಡಿದ್ದು, ಈ ಸಲ ಬೈಡೆನ್‌ ವಿರುದ್ಧದ ಆಡಳಿತ ವಿರೋಧಿ ಅಲೆ ಬಳಸಿಕೊಂಡು ಗೆಲ್ಲುವ ಟ್ರಂಪ್‌ ಆಸೆಗೆ ಅಡ್ಡಿ ಆಗುವ ಸಾಧ್ಯತೆ ಸೃಷ್ಟಿಸಿದೆ.

ಕಮಲಾ ಗೆದ್ದರೆ ಇತಿಹಾಸ ಸೃಷ್ಟಿ
ಕಮಲಾ ಹ್ಯಾರಿಸ್‌ ಗೆದ್ದರೆ ಅಮೆರಿಕದಲ್ಲಿ ಇತಿಹಾಸ ಸೃಷ್ಟಿ ಆಗಲಿದೆ. ಅವರು ಅಮೆರಿಕ ಅಧ್ಯಕ್ಷೆ ಆದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನ್ನಿಸಿಕೊಳ್ಳಲಿದ್ದಾರೆ.

ಕಮಲಾ ಮೂಲ ತಮಿಳುನಾಡು
ಕಮಲಾ ಹ್ಯಾರಿಸ್‌ ಅವರ ಪೂರ್ವಜರ ಊರು ಚೆನ್ನೈನಿಂದ 300 ಕಿ.ಮೀ. ದೂರ ಇರುವ ತಮಿಳುನಾಡಿನ ತುಳಸೇಂದ್ರಪುರಂ. ಕಮಲಾ ಅವರ ತಾಯಿ ಶಾಮಲಾ ಗೋಪಾಲನ್‌ ಬಯೋಮೆಡಿಕಲ್‌ ವಿಜ್ಞಾನದ ಅಧ್ಯಯನಕ್ಕೆಂದು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅವರು ಜಮೈಕಾದಿಂದ ವಲಸೆ ಬಂದಿದ್ದ ಡೊನಾಲ್ಡ್‌ ಹ್ಯಾರಿಸ್‌ ಅವರನ್ನು ಮದುವೆ ಆದರು. ಈ ದಂಪತಿಗೆ ಜನಿಸಿದ್ದೇ ಕಮಲಾ ಹ್ಯಾರಿಸ್‌. ಅಮೆರಿಕದಲ್ಲೇ ಕಮಲಾ ಜನಿಸಿದರೂ ಆಗಾಗ್ಗೆ ಬಹಿರಂಗ ಭಾಷಣದಲ್ಲಿ ತಮ್ಮ ಪೂರ್ವಜರನ್ನು, ತವರೂರನ್ನು ಜ್ಞಾಪಿಸಿಕೊಳ್ಳುವುದುಂಟು.

ಚುನಾವಣಾ ಸಮೀಕ್ಷೆಯಲ್ಲಿ ಕಮಲಾ-ಟ್ರಂಪ್‌ ಸಮಬಲ
ಅಮೆರಿಕದ ಹಲವು ಸುದ್ದಿ ಮಾಧ್ಯಮಗಳು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಟ್ರಂಪ್‌ ಹಾಗೂ ಕಮಲಾ ಬಹುತೇಕ ಸಮಬಲ ಸಾಧಿಸಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಮಲಾ ಮುನ್ನಡೆ ಸಾಧಿಸಬಹುದು ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಇದು ಕುತೂಹಲ ಸೃಷ್ಟಿಸಿದೆ. ಇದಕ್ಕೂ ಮುನ್ನ ಬೈಡೆನ್‌-ಟ್ರಂಪ್‌ ಸಮರ ಎಂದು ನಿಗದಿ ಆಗಿದ್ದಾಗ ನಡೆದಿದ್ದ ಸಮೀಕ್ಷೆಗಳಲ್ಲಿ ಟ್ರಂಪ್‌ ಮುನ್ನಡೆ ಸಾಧಿದಿದ್ದರು.

ಇದನ್ನೂ ಓದಿ: ಅಮೆರಿಕಾದಲ್ಲಿ ಟ್ರಂಪ್ ಗೆದ್ದರೆ ಭಾರತ, ಇತರ ದೇಶಗಳ ವಲಸಿಗರಿಗೆ ಆಪತ್ತು?

ಟ್ರಂಪ್‌ಗೆ ಇದು ಕೊನೆಯ ಚುನಾವಣೆ
ಡೊನಾಲ್ಡ್‌ ಟ್ರಂಪ್‌ 3ನೇ ಬಾರಿ ಅಮೆರಿಕ ಅಧ್ಯಕ್ಷ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ವಯಸ್ಸು 78 ಆದರೂ ಉತ್ಸಾಹಿ. ಆದರೆ ಮುಂಗೋಪಿ. ಅದಕ್ಕೆಂದೇ ಇವರು ಅಧ್ಯಕ್ಷ ಆಗಲು ಅನ್‌ಫಿಟ್‌ ಎಂದು ವಿರೋಧಿ ಅಭ್ಯರ್ಥಿ ಎಂದು ಕಮಲಾ ಹ್ಯಾರಿಸ್‌ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ಟ್ರಂಪ್‌ ಅವರು, ‘ಕಮಲಾ ಎಡಪಂಥೀಯ ವಿಚಾರಧಾರೆಯವರು. ಅವರು ಅಧ್ಯಕ್ಷೆ ಆಗಲು ಅರ್ಹರಲ್ಲ. ಕಳೆದ 5 ವರ್ಷದ ಆಡಳಿತದಲ್ಲಿ ಕಮಲಾ ಅವರು ಅಮೆರಿಕ ಹಾಳು ಮಾಡುತ್ತಿದ್ದಾರೆ’ ಎಂದು ಟ್ರಂಪ್‌ ಪ್ರಚಾರ ಮಾಡುತ್ತಿದ್ದಾರೆ. ಟ್ರಂಪ್‌ಗೆ ಟೆಸ್ಲಾ ಹಾಗೂ ಟ್ವೀಟರ್‌ ಮಾಲೀಕ ಎಲಾನ್‌ ಮಸ್ಕ್‌, ಡಬ್ಲುಡಬ್ಲುಎಫ್‌ ಕುಸ್ತಿಪಟು ಹಲ್ಕ್‌ ಹಾಗನ್‌ ಸೇರಿ ಅನೇಕರ ಬೆಂಬಲವಿದೆ. ತಮ್ಮ ಹಿಂದಿನ 5 ವರ್ಷದ ಆಡಳಿತವನ್ನೇ ಅವರು ಪ್ರಚಾರ ಬಂಡವಾಳ ಮಾಡಿಕೊಂಡಿದ್ದಾರೆ ಹಾಗೂ ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಿಸಿಕೊಂಡಿದ್ದಾರೆ.

ಟ್ರಂಪ್‌ ಹತ್ಯೆಗೆ ನಡೆದಿತ್ತು ಯತ್ನ
ಅಧ್ಯಕ್ಷೀಯ ಚುನಾವಣೆ ಪ್ರಚಾರದ ವೇಳೆ ಪೆನ್ಸಿಲ್ವೇನಿಯಾದಲ್ಲಿ ಜುಲೈ 14ರಂದು ಟ್ರಂಪ್‌ ಮೇಲೆ ಗುಂಡಿನ ದಾಳಿ ನಡೆದಿದ್ದು ಈ ಸಲದ ಚುನಾವಣೆಯಲ್ಲಿನ ಪ್ರಮುಖ ಘಟನೆ. ಆದರೆ ಕೂದಲೆಳೆ ಅಂತರದಲ್ಲಿ ಟ್ರಂಪ್‌ ಪಾರಾದರು. ಇದಾದ ನಂತರ ಅವರು ತಮ್ಮ ಮನೆಯಲ್ಲಿ ಗಾಲ್ಫ್‌ ಆಡುವಾಗ ಆಗಂತುಕನೊಬ್ಬನಿಂದ ಗುಂಡಿನ ದಾಳಿಯ ಭೀತಿ ಎದುರಿಸಿದ್ದರು. ಆದರೆ ಇದು ಯಶ ಕಾಣಲಿಲ್ಲ. ಈ 2 ಘಟನೆಗಳ ಟ್ರಂಪ್‌ ಪರ ಅನುಕಂಪದ ಅಲೆ ಸೃಷ್ಟಿಸಬಲ್ಲವೇ ಎಂಬದು ಪ್ರಶ್ನೆ.

ಇದನ್ನೂ ಓದಿ: ಅಮೆರಿಕಾ ರಣಭೂಮಿಯಲ್ಲಿ ಮೋದಿ ರಣತಂತ್ರ; ಭಾರತದಲ್ಲಿ ಮೋದಿ ಮಾಡಿದ್ದನ್ನೇ ಅಲ್ಲಿ ಟ್ರಂಪ್ ಮಾಡಿದ್ರಾ?

click me!