Turkey Syria Earthquake: 9500ರ ಗಡಿ ದಾಟಿದ ಸಾವಿನ ಸಂಖ್ಯೆ!

By Santosh Naik  |  First Published Feb 8, 2023, 4:47 PM IST


ಟರ್ಕಿ ಹಾಗೂ ಸಿರಿಯಾ ದೇಶದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೂ 9655 ಮಂದಿ ಸಾವು ಕಂಡಿದ್ದು, ಈ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ. ಆದರೆ, ಶೀತಗಾಳಿಯ ಕಾರಣದಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣವಾಗಿದೆ. ಭಾರತ 'ಆಪರೇಷನ್‌ ದೋಸ್ತ್‌' ಹೆಸರಿನಲ್ಲಿ ಸಹಾಯಹಸ್ತ ಚಾಚಿದೆ.


ನವದೆಹಲಿ (ಫೆ.8): ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿದೆ. ಇಲ್ಲಿಯವರೆಗೆ ಒಟ್ಟು 9,655 ಜನರು ಸಾವನ್ನಪ್ಪಿದ್ದು, ಈ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಗಾಯಗೊಂಡವರ ಸಂಖ್ಯೆ 35 ಸಾವಿರ ದಾಟಿದೆ. ಎರಡೂ ದೇಶಗಳಿಗೆ ಸಹಾಯ ಮಾಡಲು 70ಕ್ಕೂ ಹೆಚ್ಚು ದೇಶಗಳು ಮುಂದೆ ಬಂದಿವೆ. ‘ಆಪರೇಷನ್ ದೋಸ್ತ್’ ಅಡಿಯಲ್ಲಿ ಭಾರತವೂ ಸಹಾಯ ಕಳುಹಿಸುತ್ತಿದೆ. ಟರ್ಕಿಶ್‌ ಹಾಗೂ ಹಿಂದಿ ಭಾಷೆಗಳಲ್ಲಿ 'ದೋಸ್ತ್‌' ಎಂದರೆ ಸ್ನೇಹಿತ ಎನ್ನುವ ಅರ್ಥ. ಹಾಗಾಗಿ ಈ ಕಾರ್ಯಾಚರಣೆಗೆ ಆಪರೇಷನ್‌ ದೋಸ್ತ್‌ ಎಂದು ಹೆಸರಿಡಲಾಗಿದೆ. ಇದರ ನಡುವೆ,  ಟರ್ಕಿಯ ಅನೇಕ ನಗರಗಳಲ್ಲಿ, ತಾಪಮಾನವು 9 ರಿಂದ ಮೈನಸ್ 2 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಹೈಪೋಥರ್ಮಿಯಾ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

NDRF teams carry out search and rescue operations in Gaziantep, Turkiye. pic.twitter.com/O9FvNmxeuT

— All India Radio News (@airnewsalerts)

ಹೈಪೋಥರ್ಮಿಯಾ  ಅಥವಾ ಲಘೂಷ್ಣತೆ ಉಂಟಾದರೆ ದೇಹದಲ್ಲಿ ಶಾಖವು ಉತ್ಪತ್ತಿಯಾಗುವುದಿಲ್ಲ, ಇದರಿಂದಾಗಿ ದೇಹದ ಉಷ್ಣತೆಯು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಿಮಪಾತ ಮತ್ತು ಮಳೆಯಿಂದಾಗಿ ಭೂಕಂಪ ಪೀಡಿತ ಎರಡೂ ದೇಶಗಳಲ್ಲಿ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ತುರ್ತು ಸೇವೆಗಳ ತಂಡಗಳು ರಕ್ಷಣಾ ಕಾರ್ಯದಲ್ಲಿ ಸಾಕಷ್ಟು ತೊಂದರೆ ಎದುರಿಸುತ್ತಿವೆ. ದುರಂತ ಸಂಭವಿಸಿದ 12 ಗಂಟೆಗಳ ನಂತರವೂ ಸಹಾಯವು ತಮ್ಮನ್ನು ತಲುಪಿಲ್ಲ ಎಂದು ಕೇಂದ್ರಬಿಂದು ನಗರವಾದ ಗಾಜಿಯಾಂಟೆಪ್‌ನ ನಿವಾಸಿಗಳು ಹೇಳಿದ್ದಾರೆ.

ಸಾವಿನ ಸಂಖ್ಯೆ ಇನ್ನಷ್ಟು ಏರಿಕೆ ಸಾಧ್ಯತೆ: ಸಾವಿನ ಸಂಖ್ಯೆ 20 ಸಾವಿರ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಟರ್ಕಿಯಲ್ಲಿ 7,108 ಜನರು ಸಾವನ್ನಪ್ಪಿದ್ದಾರೆ ಮತ್ತು 34 ಸಾವಿರದ 810 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪತ್ರಿಕಾ ವರದಿ ತಿಳಿಸಿದೆ. ಇನ್ನು ಸಿರಿಯಾದಲ್ಲಿ, 2,547 ಜನರು ಸಾವನ್ನಪ್ಪಿದ್ದಾರೆ ಮತ್ತು 3,849 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಟರ್ಕಿಯಲ್ಲಿ 8 ಸಾವಿರ ಜನರನ್ನು ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ 24 ಸಾವಿರಕ್ಕೂ ಹೆಚ್ಚು ರಕ್ಷಕರನ್ನು ನಿಯೋಜಿಸಲಾಗಿದೆ. ಇಲ್ಲಿ ಸುಮಾರು 3 ಲಕ್ಷದ 80 ಸಾವಿರ ಜನರು ಸರ್ಕಾರಿ ಶಿಬಿರ ಮತ್ತು ಹೋಟೆಲ್‌ಗಳಲ್ಲಿ ಆಶ್ರಯ ಪಡೆದಿದ್ದಾರೆ.

Tap to resize

Latest Videos

ಮಹಾ ಭೂಕಂಪಕ್ಕೆ ಟರ್ಕಿ & ಸಿರಿಯಾ ತತ್ತರ: 4 ಸಾವಿರ ಜನರು ಬಲಿ

ಭೂಕಂಪದ ಕೇಂದ್ರಬಿಂದು ಟರ್ಕಿ ಆಗಿತ್ತು. ಇದರ ದೃಷ್ಟಿಯಲ್ಲಿ ಹೇಳುವುದಾದರೆ, ಇಲ್ಲಿನ ಟೆಕ್ಟೋನಿಕ್ ಪ್ಲೇಟ್‌ಗಳು 10 ಅಡಿ (3 ಮೀಟರ್) ವರೆಗೆ ಸ್ಥಳಾಂತರಗೊಂಡಿವೆ ಎಂದು ತಜ್ಞರು ಹೇಳಿದ್ದಾರೆ. ವಾಸ್ತವವಾಗಿ, ಟರ್ಕಿ 3 ಟೆಕ್ಟೋನಿಕ್ ಪ್ಲೇಟ್‌ಗಳ ನಡುವೆ ಇದೆ. ಈ ಫಲಕಗಳು ಅನಾಟೋಲಿಯನ್ ಟೆಕ್ಟೋನಿಕ್ ಪ್ಲೇಟ್, ಯುರೇಷಿಯನ್ ಮತ್ತು ಅರೇಬಿಯನ್ ಪ್ಲೇಟ್‌ಗಳಾಗಿವೆ.
ತಜ್ಞರ ಪ್ರಕಾರ, ಅನಾಟೋಲಿಯನ್ ಟೆಕ್ಟೋನಿಕ್ ಪ್ಲೇಟ್ ಮತ್ತು ಅರೇಬಿಯನ್ ಪ್ಲೇಟ್ ಪರಸ್ಪರ 225 ಕಿಲೋಮೀಟರ್ ದೂರದಲ್ಲಿವೆ. ಈ ಕಾರಣದಿಂದಾಗಿ, ಟರ್ಕಿ ತನ್ನ ಭೌಗೋಳಿಕ ಸ್ಥಳದಿಂದ 10 ಅಡಿ ಸ್ಥಳಾಂತರಗೊಂಡಿದೆ. ಇಟಲಿಯ ಭೂಕಂಪಶಾಸ್ತ್ರಜ್ಞ ಡಾ. ಕಾರ್ಲೋ ಡೊಗ್ಲಿಯೊನಿ ಅವರು ಟೆಕ್ಟೋನಿಕ್ ಪ್ಲೇಟ್‌ಗಳಲ್ಲಿನ ಈ ಬದಲಾವಣೆಯಿಂದಾಗಿ, ಟರ್ಕಿಯು ಸಿರಿಯಾಕ್ಕಿಂತ 5 ರಿಂದ 6 ಮೀಟರ್ (ಸುಮಾರು 20 ಅಡಿ) ಹೆಚ್ಚು ಮುಳುಗಿರಬಹುದು ಎಂದು ಹೇಳಿದ್ದಾರೆ. ಈ ಮಾಹಿತಿಯನ್ನು ಆರಂಭಿಕ ಡೇಟಾದಿಂದ ಸ್ವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಉಪಗ್ರಹ ಚಿತ್ರಗಳಿಂದ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಭೂಕಂಪ ಪೀಡಿತ ಟರ್ಕಿಗೆ ಭಾರತ ಸಹಾಯ ಹಸ್ತ: ಟರ್ಕಿಯತ್ತ ಹೊರಟ ರಕ್ಷಣಾ ತಂಡ

ಮೂರು ಭೂಕಂಪಕ್ಕೆ ನಲುಗಿದ್ದ ಟರ್ಕಿ, ಸಿರಿಯಾ: ಟರ್ಕಿ ಮತ್ತು ಸಿರಿಯಾದಲ್ಲಿ ಫೆಬ್ರವರಿ 6 ರಂದು ಬೆಳಿಗ್ಗೆ 3 ಬಾರಿ ದೊಡ್ಡ ಭೂಕಂಪಗಳು ಸಂಭವಿಸಿದ್ದವು. ಟರ್ಕಿಯ ಸಮಯದ ಪ್ರಕಾರ, ಮೊದಲ ಭೂಕಂಪವು ಬೆಳಿಗ್ಗೆ 4 ಗಂಟೆಗೆ (7.8), ಎರಡನೆಯದು ಸುಮಾರು 10 ಗಂಟೆಗೆ (7.6) ಮತ್ತು ಮೂರನೆಯದು ಮಧ್ಯಾಹ್ನ 3 ಗಂಟೆಗೆ (6.0) ಸಂಭವಿಸಿದೆ. ಇದಲ್ಲದೆ, ಭೂಕಂಪ ನಂತರದ 243 ಕಂಪನಗಳು ಸಹ ದಾಖಲಾಗಿವೆ. ಅವುಗಳ ತೀವ್ರತೆ 4 ರಿಂದ 5 ಆಗಿದೆ.  ಟರ್ಕಿಯಲ್ಲಿ ಫೆಬ್ರವರಿ 7 ರಂದು ಬೆಳಿಗ್ಗೆ 8.53 ಕ್ಕೆ ಮತ್ತೊಂದು ಭೂಕಂಪ ಸಂಭವಿಸಿದೆ. ಇದರ ಬೆನ್ನಲ್ಲೇ ಮಧ್ಯಾಹ್ನ 12.41ಕ್ಕೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.

click me!