Russia Ukraine Crisis: ಯುದ್ಧದಿಂದ ಗ್ಲೋಬಲ್‌ ಎಕಾನಾಮಿ ತಲ್ಲಣ: ಭಾರತದ ಆರ್ಥಿಕತೆಗೂ ಭಾರೀ ಹೊಡೆತ!

By Kannadaprabha News  |  First Published Feb 25, 2022, 9:36 AM IST

*ಕಚ್ಚಾತೈಲ ಬೆಲೆ ಏರಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಪಕ್ಕಾ
*ಷೇರುಪೇಟೆಗೆ ಹೊಡೆತ, ರುಪಾಯಿ ಕುಸಿತ, ಹಣದುಬ್ಬರ ಹೆಚ್ಚಳ
*ರಷ್ಯಾ ಪೂರೈಸುವ ಗೋಧಿ, ಮೆಕ್ಕೆಜೋಳ, ಸೂರ‍್ಯಕಾಂತಿ ಎಣ್ಣೆ ಬೆಲೆ ಏರಿಕೆ
*ಪೆಟ್ರೋಲ್‌ ದರ ಹೆಚ್ಚಳದ ಕಾರಣ ಅಗತ್ಯವಸ್ತು ಬೆಲೆ ಭಾರೀ ಏರಿಕೆ ಸಂಭವ


ನವದೆಹಲಿ (ಫೆ. 25) : ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸಿರುವ ಕಾರಣ ವಿಶ್ವಾದ್ಯಂತ ದೂರಗಾಮಿ ಪರಿಣಾಮ ಬೀರಲಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ದೇಶದಲ್ಲಿ ಪೆಟ್ರೋಲ್‌ ಹಾಗೂ ಅಗತ್ಯವಸ್ತುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರುವ ಸಾಧ್ಯತೆ ಇದೆ. ಇನ್ನು ಹಣದುಬ್ಬರ ಹೆಚ್ಚಿ ಆರ್ಥಿಕತೆಗೆ ಹೊಡೆತ ಬೀಳಲಿದೆ ಹಾಗೂ ಷೇರುಪೇಟೆ ಕುಸಿತ ಕಂಡು, ಹೂಡಿಕೆದಾರರಿಗೆ ಭಾರೀ ನಷ್ಟಉಂಟಾಗುವ ಸಂಭವವಿದೆ. ಇನ್ನು ಮೊದಲೇ ಕೊರೋನಾ ಹೊಡೆತದಿಂದ ನಲುಗುತ್ತಿರುವ ವಿವಿಧ ದೇಶಗಳಲ್ಲಿ ಯುದ್ಧದ ಪರಿಣಾಮವಾಗಿ ಹಣದುಬ್ಬರ ಏರಿಕೆಯಾಗುವುದು, ಮಾರುಕಟ್ಟೆಯಲ್ಲಿ ಏರಿಳಿತವಾಗುವುದು, ಯುರೋಪ್‌ನಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುವುದು, ಚೀನಾದಲ್ಲಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ಮುಳುಗುವುದು, ಆಫ್ರಿಕಾದಲ್ಲಿ ಆಹಾರ ವಸ್ತುಗಳು ದುಬಾರಿಯಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ.

ಪೆಟ್ರೋಲ್‌ ಬೆಲೆ ಏರಿಕೆ ಪಕ್ಕಾ: ರಷ್ಯಾ ವಿಶ್ವದ ಪ್ರಮುಖ ಕಚ್ಚಾತೈಲ ಪೂರೈಕೆದಾರ. ಹೀಗಾಗಿ ಕಚ್ಚಾ ತೈಲ ಬೆಲೆ 2014ರ ಬಳಿಕ ಇದೇ ಮೊದಲ ಬಾರಿ ಬ್ಯಾರಲ್‌ಗೆ 100 ಡಾಲರ್‌ ದಾಟಿದೆ. ಹೀಗಾಗಿ ಈಗಾಗಲೇ ಭಾರತದಲ್ಲಿ 100 ರು. ದಾಟಿರುವ ಪೆಟ್ರೋಲ್‌ ಬೆಲೆ ಇನ್ನಷ್ಟುಏರುವುದು ಖಚಿತ. ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆಯೇ ದರ ಏರಲಿದೆ.

Tap to resize

Latest Videos

ಅಗತ್ಯವಸ್ತು ದರ ಏರಿಕೆ: ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚುವ ಕಾರಣ ಅಗತ್ಯ ವಸ್ತು ಸಾಗಣೆ ದರ ಹೆಚ್ಚಾಗಲಿದೆ. ಇದರ ಪರಿಣಾಮ ಅಗತ್ಯವಸ್ತು ದರ ಏರಲಿದೆ. ಎಲ್‌ಪಿಜಿ ಬೆಲೆ ಏರಿ ಜನರಿಗೆ ಬರೆ ಬೀಳಲಿದೆ. ರಷ್ಯಾ ಗೋಧಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಎಣ್ಣೆಯ ಪ್ರಮುಖ ಪೂರೈಕೆದಾರ. ಹೀಗಾಗಿ ಇವುಗಳ ಬೆಲೆ ಕೂಡ ಏರುವುದು ಖಚಿತವಾಗಿದೆ. ಇವುಗಳ ಬೆಲೆ ಏರಿದರೆ ತನ್ನಿಂತಾನೇ ಹಣದುಬ್ಬರ ಹೆಚ್ಚಿ, ಇಷ್ಟುದಿನ ಅದರ ನಿಯಂತ್ರಣಕ್ಕೆ ನಡೆಸಿದ್ದ ಯತ್ನ ನೀರಿನಲ್ಲಿ ಹೋಮ ಮಾಡಿದಂತಾಗಲಿದೆ.

ಇದನ್ನೂ ಓದಿ: Russia Ukraine Crisis: ಚರ್ನೋಬಿಲ್‌ ಪರಮಾಣು ಸ್ಥಾವರ ವಶಕ್ಕೆ: ಮಹಾಬಾಂಬ್‌ ದಾಳಿಗೆ ರಷ್ಯಾ ಚಿಂತನೆ?

ಲೋಹದ ಬೆಲೆ ಏರಿಕೆ: ರಷ್ಯಾ ‘ಪಲ್ಲಾಡಿಯಂ’ ಎಂಬ ಲೋಹದ ಪ್ರಮುಖ ಪೂರೈಕೆದಾರ. ವಾಹನಗಳ ಹೊಗೆ ಕೊಳವೆ ವ್ಯವಸ್ಥೆಗೆ ಹಾಗೂ ಮೊಬೈಲ್‌ನಲ್ಲಿ ಇದನ್ನು ಬಳಸಲಾಗುತ್ತದೆ. ಹೀಗಾಗಿ ಈ ಉತ್ಪನ್ನಗಳ ಬೆಲೆ ಕೂಡ ಏರಲಿದೆ.

ಟೀ, ರಫ್ತಿಗೆ ಹೊಡೆತ: ಭಾರತ ಟೀ ಸೇರಿದಂತೆ ಹಲವು ವಸ್ತುಗಳನ್ನು ರಷ್ಯಾ ಮತ್ತು ಉಕ್ರೇನ್‌ಗೆ ರಫ್ತು ಮಾಡುತ್ತದೆ. ಹಾಲಿ ಬಿಕ್ಕಟ್ಟು ಈ ರಫ್ತಿಗೆ ಹೊಡೆತ ನೀಡುವ ಸಾಧ್ಯತೆ ಇದೆ.

ಯುದ್ಧದಿಂದ ಜಾಗತಿಕ ಆರ್ಥಿಕತೆಗೆ ದೊಡ್ಡ ಆತಂಕ: ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧದಿಂದ ಜಾಗತಿಕ ಆರ್ಥಿಕತೆಯ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ರಷ್ಯಾ ಹಾಗೂ ಉಕ್ರೇನ್‌ನ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಜಗತ್ತಿನ ಜಿಡಿಪಿಯ ಕೇವಲ ಶೇ.2ರಷ್ಟುಮಾತ್ರ ಇದೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿಕೆಯೇನೂ ಆಗುವುದಿಲ್ಲ. ಆದರೆ, ರಷ್ಯಾವು ಜಗತ್ತಿನ 3ನೇ ಅತಿದೊಡ್ಡ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲದ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವೆರಡೂ ವಸ್ತುಗಳ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ.

ಇದನ್ನೂ ಓದಿ: Russia Ukraine Crisis: ನ್ಯಾಟೋ ಒಕ್ಕೂಟ ಎಂದರೇನು?: ನ್ಯಾಟೋ ಬಗ್ಗೆ ರಷ್ಯಾಕ್ಕೇಕೆ ಸಿಟ್ಟು?

ಅದರಿಂದ ಜಗತ್ತಿನ ಬಹುತೇಕ ದೇಶಗಳಲ್ಲಿ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಬಹುದು. ಇನ್ನು, ಉಕ್ರೇನ್‌ನ ಕೃಷಿ ಉದ್ದಿಮೆಗಳು ಯುರೋಪ್‌ನ ಆಹಾರ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಸರಕು ಪೂರೈಸುತ್ತವೆ. ಜಗತ್ತಿನಲ್ಲೇ ಗೋಧಿ ಉತ್ಪಾದನೆಯಲ್ಲಿ ಉಕ್ರೇನ್‌ 5ನೇ ಸ್ಥಾನ ಪಡೆದಿದೆ. ಹೀಗಾಗಿ ಯುರೋಪ್‌ ಮತ್ತು ವಿವಿಧ ದೇಶಗಳಲ್ಲಿ ಉಕ್ರೇನ್‌ನಿಂದ ಆಮದಾಗುವ ಗೋಧಿ ಉತ್ಪನ್ನಗಳು ಹಾಗೂ ಆಹಾರೋತ್ಪನ್ನಗಳು ದುಬಾರಿಯಾಗುವ ಸಾಧ್ಯತೆಯಿದೆ.

ಈಗಾಗಲೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ದರ ದುಬಾರಿಯಾಗುತ್ತಿರುವುದರಿಂದ ಅನೇಕ ದೇಶಗಳಲ್ಲಿ ವಿದ್ಯುತ್‌ ಕೊರತೆ ಉಂಟಾಗಿ ಕೈಗಾರಿಕೆಗಳು ಉತ್ಪಾದನೆ ಕಡಿತಗೊಳಿಸಿವೆ. ಇದು ಹಣದುಬ್ಬರ ಏರಿಕೆಗೆ ಕಾರಣವಾಗುವ ಸಾಧ್ಯತೆಯಿದೆ.

ಕಚ್ಚಾ ತೈಲ 103 ಡಾಲರ್‌: 8 ವರ್ಷಗಳಲ್ಲೇ ಅತಿ ಹೆಚ್ಚು:  ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರುತ್ತಿದ್ದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ಬೆಲೆ ಒಂದೇ ದಿನ 6.71 ಡಾಲರ್‌ ಏರಿಕೆಯಾಗಿ 103.4 ಡಾಲರ್‌ಗೆ ಹೆಚ್ಚಳಗೊಂಡಿದೆ. ಇದರಿಂದಾಗಿ ಇಡೀ ವಿಶ್ವಕ್ಕೆ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆ ಏರಿಕೆಯ ಆತಂಕ ಕಾಡತೊಡಗಿದೆ.

2014ರ ಆ.14ರ ನಂತರ ಕಚ್ಚಾ ತೈಲ ಬೆಲೆ 103 ಡಾಲರ್‌ಗೆ ತಲುಪುತ್ತಿರುವುದು ಇದೇ ಮೊದಲು. ಕಳೆದ ಹಲವು ದಿನಗಳಿಂದ ಕಚ್ಚಾ ತೈಲ ಬೆಲೆ ಏರುಗತಿಯಲ್ಲೇ ಇದೆಯಾದರೂ ಪಂಚರಾಜ್ಯ ಚುನಾವಣೆ ಕಾರಣ ಸರ್ಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಂಪನಿಗಳು ದರ ಪರಿಷ್ಕರಣೆ ಮಾಡಿರಲಿಲ್ಲ. ಆದರೆ ಈಗ ತೈಲ ಬೆಲೆ ಹೆಚ್ಚಳ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿವೆ.

ವಿಶ್ವದಲ್ಲೇ ಮೂರನೇ ಅತಿದೊಡ್ಡ ತೈಲ ಆಮದು ದೇಶವಾಗಿರುವ ಭಾರತ, ತನ್ನ ಅಗತ್ಯದ ಶೇ.85ರಷ್ಟುತೈಲವನ್ನು ವಿದೇಶಗಳಿಂದ ತರಿಸಿಕೊಳ್ಳುತ್ತದೆ. ಅದನ್ನು ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲವಾಗಿ ಪರಿವರ್ತಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ತೈಲಕ್ಕೆ ಭಾರತವು ಸೌದಿ ಅರೇಬಿಯಾ, ಇರಾಕ್‌, ಮಧ್ಯಪ್ರಾಚ್ಯ ದೇಶಗಳು ಹಾಗೂ ಆಫ್ರಿಕಾ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಉಕ್ರೇನ್‌ ಬಿಕ್ಕಟ್ಟಿನಿಂದ ಸರಬರಾಜು ಮೇಲೆ ಯಾವುದೇ ಪರಿಣಾಮವಾಗದು ಎಂಬ ವಿಶ್ವಾಸದಲ್ಲಿದೆ. ಆದರೆ ಜಾಗತಿಕ ಕಾರಣಗಳಿಂದಾಗಿ ಬೆಲೆ ಏರಿಕೆಯ ಆತಂಕ ಸರ್ಕಾರವನ್ನು ಕಾಡುತ್ತಿದೆ.

click me!