ವಿದೇಶೀ ನೌಕರರಿಗೆ ಅಮೆರಿಕದ ಬಾಗಿಲು ಬಂದ್‌: 5,25,000 ಉದ್ಯೋಗ ಕಸಿದ ನೀತಿ!

By Suvarna News  |  First Published Jun 24, 2020, 9:00 AM IST

ವಿದೇಶೀ ನೌಕರರಿಗೆ ಅಮೆರಿಕದ ಬಾಗಿಲು ಬಂದ್‌!| ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಅಮೆರಿಕದಲ್ಲೇ ಭಾರಿ ವಿರೋಧ| ವಿದೇಶೀಯರ 5,25,000 ಉದ್ಯೋಗ ಕಸಿದ ‘ಅಮೆರಿಕ ಫಸ್ಟ್‌’ ನೀತಿ| ಎಚ್‌1ಬಿ ಸೇರಿ ಎಲ್ಲ ನೌಕರಿ ವೀಸಾ 2020ರ ಅಂತ್ಯದವರೆಗೆ ರದ್ದು| ಭಾರತದ ಟೆಕಿಗಳು, ಇತರ ಉದ್ಯೋಗಾಕಾಂಕ್ಷಿಗಳಿಗೆ ಭಾರಿ ಹೊಡೆತ| ಈಗಾಗಲೇ ಅಮೆರಿಕದಲ್ಲಿರುವ ಗ್ರೀನ್‌ ಕಾರ್ಡ್‌ದಾರರಿಗೆ ಸಮಸ್ಯೆಯಿಲ್ಲ| ಎಚ್‌1ಬಿ ವೀಸಾ ಅವಧಿ ಮುಗಿದವರು ಭಾರತಕ್ಕೆ ಮರಳಬೇಕು


ವಾಷಿಂಗ್ಟನ್‌(ಜೂ.24): ಅಮೆರಿಕದ ಉದ್ಯೋಗದ ಮೇಲೆ ಕಣ್ಣಿಟ್ಟಿರುವ ಭಾರತದ ಸಾಫ್ಟ್‌ವೇರ್‌ ಎಂಜಿನಿಯರ್‌ಗಳೂ ಸೇರಿದಂತೆ ವಿದೇಶಿ ಉದ್ಯೋಗಾಕಾಂಕ್ಷಿಗಳಿಗೆ ಭಾರಿ ಹೊಡೆತ ನೀಡಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ವರ್ಷದ ಅಂತ್ಯದವರೆಗೆ ಎಚ್‌1ಬಿ ಸೇರಿದಂತೆ ಎಲ್ಲ ನೌಕರಿ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಿದ್ದಾರೆ. ಆದರೆ, ಈಗಾಗಲೇ ಅಮೆರಿಕದ ನಾಗರಿಕತ್ವ ಪಡೆದಿರುವ ಗ್ರೀನ್‌ಕಾರ್ಡ್‌ ಹೋಲ್ಡರ್‌ಗಳು, ಅವರ ಪತ್ನಿ ಹಾಗೂ ಮಕ್ಕಳು, ಸದ್ಯ ಚಾಲ್ತಿಯಲ್ಲಿರುವ ಎಚ್‌1ಬಿ ಸೇರಿದಂತೆ ಇತರ ನೌಕರಿಗಳ ವೀಸಾದಾರರಿಗೆ ಇದರಿಂದ ಸಮಸ್ಯೆಯಾಗುವುದಿಲ್ಲ. ಆದರೆ, ನೌಕರಿ ವೀಸಾಗಳ ನವೀಕರಣಕ್ಕೆ ಕಾಯುತ್ತಿರುವವರು ಸ್ವದೇಶಕ್ಕೆ ಮರಳಬೇಕಾಗುತ್ತದೆ.

ಸೋಂಕಿತರು ಹೆಚ್ಚಾಗುತ್ತಾರೆ, ಕೊರೋನಾ ಪರೀಕ್ಷೆ ಕಡಿಮೆ ಮಾಡಿ: ಟ್ರಂಪ್

Tap to resize

Latest Videos

ಕೊರೋನಾ ವೈರಸ್‌ ಬಿಕ್ಕಟ್ಟು ಮತ್ತು ಆರ್ಥಿಕ ಹಿಂಜರಿಕೆಯಿಂದಾಗಿ ಕಳೆದ ಕೆಲ ತಿಂಗಳಲ್ಲಿ 4 ಕೋಟಿಗೂ ಹೆಚ್ಚು ಅಮೆರಿಕನ್ನರು ಉದ್ಯೋಗ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬರುವ (ನ.3) ಅಧ್ಯಕ್ಷೀಯ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಟ್ರಂಪ್‌, ತಮ್ಮ ‘ಅಮೆರಿಕ ಫಸ್ಟ್‌’ ನೀತಿಯ ಅಂಗವಾಗಿ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ವಿದೇಶೀಯರಿಗೆ ನೀಡುವ ಎಚ್‌1ಬಿ ಮುಂತಾದ ನೌಕರಿ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸುವುದರಿಂದ 5,25,000 ಉದ್ಯೋಗಗಳು ಅಮೆರಿಕನ್ನರಿಗೆ ಲಭಿಸಲಿವೆ ಎಂದು ಹೇಳಲಾಗಿದೆ.

ವಲಸಿಗರನ್ನು ಗುರಿಯಾಗಿಸಿ ಕೈಗೊಂಡ ಈ ನಿರ್ಧಾರಕ್ಕೆ ಅಮೆರಿಕದಲ್ಲೇ ಸಂಸದರು, ಉದ್ಯಮಿಗಳು, ಮಾನವ ಹಕ್ಕು ಸಂಘಟನೆಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ಮುಖ್ಯಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ನೀತಿಯಿಂದ ಅಮೆರಿಕದ ಆರ್ಥಿಕತೆಗೆ ಅನುಕೂಲವಾಗುವುದರ ಬದಲು ಇನ್ನಷ್ಟುನಷ್ಟವೇ ಆಗಲಿದೆ ಎಂದು ವಿವಿಧ ವಲಯಗಳ ತಜ್ಞರು ಕಿಡಿಕಾರಿದ್ದಾರೆ.

ಅಮೆರಿಕ ಔದ್ಯೋಗಿಕ ವೀಸಾದಲ್ಲಿ ಹೊಸ ಬದಲಾವಣೆ: ಟೆಕ್ಕಿಗಳಿಗೆ ಉದ್ಯೋಗ ಅಭದ್ರತೆ..!

ಸಾವಿರಾರು ನೌಕರರು ಸ್ವದೇಶಕ್ಕೆ ವಾಪಸ್‌:

ಹೊಸ ವೀಸಾ ನೀತಿಗೆ ಸೋಮವಾರ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದಾರೆ. ಈ ನೀತಿ ಜೂ.24ರಿಂದ ಈ ವರ್ಷದ ಅಂತ್ಯದವರೆಗೆ ಜಾರಿಯಲ್ಲಿರಲಿದೆ. ಮುಖ್ಯವಾಗಿ ಭಾರತದ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಹಾಗೂ 2021ರಲ್ಲಿ ಅಮೆರಿಕಕ್ಕೆ ಕರೆಸಿಕೊಳ್ಳಲು ವಿವಿಧ ದೇಶಗಳ ಉದ್ಯೋಗಾಕಾಂಕ್ಷಿಗಳಿಗೆ ಈ ವರ್ಷದ ಅಕ್ಟೋಬರ್‌ 1ರಿಂದ ಅನ್ವಯವಾಗುವಂತೆ ಎಚ್‌1ಬಿ ವೀಸಾ ನೀಡಿರುವ ಅಮೆರಿಕ ಮತ್ತು ಭಾರತೀಯ ಕಂಪನಿಗಳಿಗೆ ಇದರಿಂದ ದೊಡ್ಡ ನಷ್ಟವಾಗಲಿದೆ. ಇವರೆಲ್ಲ ತಮಗೆ ದೊರೆತಿರುವ ಎಚ್‌1ಬಿ ವೀಸಾಕ್ಕೆ ಅಮೆರಿಕ ಸರ್ಕಾರದ ಮೊಹರು ಹಾಕಿಸಿಕೊಳ್ಳಲು ಈ ವರ್ಷ ಮುಗಿಯುವವರೆಗೆ ಕಾಯಬೇಕಾಗುತ್ತದೆ. ಅದೇ ರೀತಿ, ಈಗಾಗಲೇ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್‌ ಎಂಜಿನಿಯರ್‌ಗಳೇ ಮೊದಲಾದ ವಲಸೆ ಉದ್ಯೋಗಿಗಳ ವೀಸಾ ಅವಧಿ ಮುಗಿದಿದ್ದರೆ ಅದನ್ನು ನವೀಕರಣ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಅವರೆಲ್ಲ ಸ್ವದೇಶಕ್ಕೆ ವಾಪಸಾಗಬೇಕಾಗುತ್ತದೆ.

ಹಲವು ರೀತಿಯ ವೀಸಾಗಳು ರದ್ದು:

ಈ ವರ್ಷದ ಏಪ್ರಿಲ್‌ನಲ್ಲಿ ಟ್ರಂಪ್‌ ಅವರು ಅಮೆರಿಕಕ್ಕೆ ನೌಕರಿಗೆಂದು ಬರುವ ವಲಸಿಗರಿಗೆ ಕೆಲ ನಿರ್ಬಂಧಗಳನ್ನು ವಿಧಿಸಿ ಆದೇಶವೊಂದನ್ನು ಹೊರಡಿಸಿದ್ದರು. ಅದರ ಅವಧಿ ಮುಗಿಯುತ್ತಾ ಬಂದಿದ್ದು, ಸೋಮವಾರ ಅದನ್ನು ಈ ವರ್ಷಾಂತ್ಯದವರೆಗೆ ವಿಸ್ತರಿಸಿ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ ಎಚ್‌1ಬಿ ವೀಸಾ, ಅಂತರ-ಕಂಪನಿ ವರ್ಗಾವಣೆಯ ಎಲ್‌-1 ವೀಸಾ, ವೀಸಾದಾರರ ಸಂಗಾತಿಗೆ ನೀಡುವ ಎಚ್‌-4 ವೀಸಾ, ಕೃಷಿಯೇತರ ತಾತ್ಕಾಲಿಕ ಕೆಲಸಗಾರರಿಗೆ ನೀಡುವ ಎಚ್‌-2ಬಿ ವೀಸಾ ಹಾಗೂ ವಿನಿಮಯ ಕಾರ್ಯಕ್ರಮಗಳಡಿ ಭೇಟಿ ನೀಡುವವರಿಗೆ ನೀಡುವ ಜೆ-1 ವೀಸಾವನ್ನೂ ಸೇರಿಸಿದ್ದಾರೆ. ಅಂದರೆ, ಈ ಎಲ್ಲ ವೀಸಾ ನೀಡುವುದನ್ನು ಅಮೆರಿಕ ಸದ್ಯಕ್ಕೆ ಸ್ಥಗಿತಗೊಳಿಸಲಿದೆ. ಅಮೆರಿಕದ ಹೊರಗಿರುವವರಿಗೆ ಮಾತ್ರ ಈಗಿನ ಆದೇಶ ಅನ್ವಯಿಸಲಿದೆ.

ಟ್ರಂಪ್‌ಗೆ ಏನಾಗಿದೆ, ಗುಟುಕು ನೀರು ಕುಡಿಯಲು ಹರಸಾಹಸ!

ಏನಿದು ಎಚ್‌1ಬಿ ವೀಸಾ?

ಎಚ್‌1ಬಿ ವೀಸಾ ಅಂದರೆ ಅಮೆರಿಕಕ್ಕೆ ವಿದೇಶೀಯರು ಉದ್ಯೋಗ ಮಾಡಲು ತೆರಳುವುದಕ್ಕೆ ಅಲ್ಲಿನ ಸರ್ಕಾರ ನೀಡುವ ತಾತ್ಕಾಲಿಕ ನೌಕರಿ ವೀಸಾ. ವಿಶೇಷವಾಗಿ ತಾಂತ್ರಿಕ ಪರಿಣತಿ ಹೊಂದಿರುವ ವಿದೇಶಿ ಪ್ರತಿಭಾವಂತರನ್ನು ನೇಮಿಸಿಕೊಳ್ಳಲು ಅಮೆರಿಕದಲ್ಲಿರುವ ಕಂಪನಿಗಳು ಈ ವೀಸಾ ಕೊಡಿಸಿ ಅವರನ್ನು ಅಮೆರಿಕಕ್ಕೆ ಕರೆಸಿಕೊಳ್ಳುತ್ತವೆ. ಭಾರತ, ಚೀನಾದಂತಹ ದೇಶಗಳಿಂದ ಪ್ರತಿವರ್ಷ ಹತ್ತಾರು ಸಾವಿರ ಪ್ರತಿಭಾವಂತರು ಈ ವೀಸಾ ಪಡೆದು ಅಮೆರಿಕಕ್ಕೆ ಹೋಗುತ್ತಾರೆ.

ಟ್ರಂಪ್‌ ನಿರ್ಧಾರಕ್ಕೆ ಅಮೆರಿಕದಲ್ಲೇ ವಿರೋಧ:

ವಿದೇಶಿ ನೌಕರರಿಗೆ ವೀಸಾ ನೀಡದಿರುವ ಟ್ರಂಪ್‌ ನಿರ್ಧಾರಕ್ಕೆ ಅಮೆರಿಕದಲ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಸಂಸದರು, ಕಾರ್ಪೊರೇಟ್‌ ಕಂಪನಿಗಳು, ಮಾನವ ಹಕ್ಕು ಸಂಘಟನೆಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಈ ನಿರ್ಧಾರವನ್ನು ವಿರೋಧಿಸಿದ್ದು, ಇದರಿಂದ ಅಮೆರಿಕದ ಆರ್ಥಿಕತೆಗೆ ಇನ್ನಷ್ಟುನಷ್ಟವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತೀಯ ಮೂಲದ ಅಮೆರಿಕ ಸಂಸದ ರಾಜಾ ಕೃಷ್ಣಮೂರ್ತಿ, ‘ಎಚ್‌-1ಬಿ ವೀಸಾದಿಂದ ಅಮೆರಿಕಕ್ಕೆ ಅತ್ಯಗತ್ಯವಾಗಿ ಬೇಕಾದ ವೈದ್ಯಕೀಯ ತಜ್ಞರೂ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಪ್ರತಿಭಾವಂತ ನೌಕರರು ದೊರೆಯುತ್ತಾರೆ. ಅವರು ಕೇವಲ ಇಲ್ಲಿ ನೌಕರಿ ಪಡೆಯುವುದಷ್ಟೇ ಅಲ್ಲ, ಹೊಸ ನೌಕರಿಯನ್ನೂ ಸೃಷ್ಟಿಸುತ್ತಾರೆ. ಹೀಗಾಗಿ ಇದನ್ನು ನಿಲ್ಲಿಸುವುದರಿಂದ ಅಮೆರಿಕದ ಆರ್ಥಿಕತೆ ದುರ್ಬಲವಾಗುತ್ತದೆ’ ಎಂದು ಹೇಳಿದ್ದಾರೆ. ಸಂಸದರಾದ ಡಿಕ್‌ ಡರ್ಬಿನ್‌, ಬಿಲ್‌ ಪಾಸ್ಕೆ್ರಲ್‌, ರೋ ಖನ್ನಾ ಮುಂತಾದವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೂಗಲ್‌ ಕಂಪನಿಯ ಸಿಇಒ ಆಗಿರುವ ಭಾರತೀಯ ಮೂಲದ ಸುಂದರ್‌ ಪಿಚೈ, ‘ಅಮೆರಿಕದ ಆರ್ಥಿಕ ಯಶಸ್ಸಿನಲ್ಲಿ ವಲಸಿಗರ ಪಾತ್ರ ಬಹಳ ದೊಡ್ಡದು. ಗೂಗಲ್‌ ಇಂದು ಈ ಮಟ್ಟಕ್ಕೆ ಬೆಳೆಯಬೇಕಾದರೆ ವಲಸಿಗರ ಕೊಡುಗೆ ದೊಡ್ಡದಿದೆ. ನಾವು ಈಗಲೂ ವಲಸಿಗರ ಪರವಾಗಿ ನಿಲ್ಲುತ್ತೇವೆ’ ಎಂದು ಹೇಳಿದ್ದಾರೆ.

ಅಮೆರಿಕದ ಉದ್ಯೋಗ ಮಾರುಕಟ್ಟೆಯ ಮೇಲೆ ವಿದೇಶಿ ಕೆಲಸಗಾರರಿಂದ ಆಗುತ್ತಿರುವ ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮೆರಿಕದ ಜನರು ದೇಶದ ಆರ್ಥಿಕತೆಯ ಪ್ರತಿಯೊಂದು ಕ್ಷೇತ್ರದಲ್ಲೂ ಇಂದು ವಿದೇಶೀಯರ ಜೊತೆ ಸ್ಪರ್ಧೆ ನಡೆಸುವಂತಾಗಿದೆ. ಪ್ರತಿ ವರ್ಷ ವಿದೇಶಗಳಿಂದ ಲಕ್ಷಾಂತರ ಜನರು ತಾತ್ಕಾಲಿಕ ಕೆಲಸಕ್ಕಾಗಿ ಅಮೆರಿಕಕ್ಕೆ ಬರುತ್ತಾರೆ. ಅವರ ಹೆಂಡತಿ, ಮಕ್ಕಳ ಜೊತೆಗೂ ಅಮೆರಿಕನ್ನರು ಸ್ಪರ್ಧಿಸಬೇಕಾಗಿ ಬಂದಿದೆ.

- ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ

ಯಾವ್ಯಾವ ವೀಸಾ ರದ್ದು?

- ಎಚ್‌-1ಬಿ

- ಎಲ್‌-1

- ಎಚ್‌-4

- ಎಚ್‌-2ಬಿ

- ಜೆ-1

click me!