ಆ್ಯಂಟೆನಾ ಸರಿಹೊಂದಿಸುವಿಕೆ: ಮುಂದೂಡಲ್ಪಟ್ಟ ನಿಸಾರ್ ಉಡಾವಣೆ

By Suvarna News  |  First Published Mar 27, 2024, 1:03 PM IST

ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ), ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಯೋಜನೆಯ ನೂತನ ದಿನಾಂಕವನ್ನು ಎಪ್ರಿಲ್ ಅಂತ್ಯದ ವೇಳೆಗೆ ಘೋಷಿಸಲಾಗುವುದು ಎಂದು ತಿಳಿಸಿದೆ.


ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತ ಮತ್ತು ಅಮೆರಿಕಾ ಜಂಟಿಯಾಗಿ ಆಯೋಜಿಸುತ್ತಿರುವ ರೇಡಾರ್ ಬಾಹ್ಯಾಕಾಶ ನೌಕೆಯಲ್ಲಿ ಒಂದಷ್ಟು ಆ್ಯಂಟೆನಾ ಹೊಂದಿಸುವಿಕೆ ನಡೆಸಬೇಕಿರುವುದರಿಂದ, ಯೋಜನೆಯ ಉಡಾವಣೆಯನ್ನು ಈ ವರ್ಷದ ಕೊನೆಯ ಭಾಗದಲ್ಲಿ ನೆರವೇರಿಸುವುದಾಗಿ ನಿರ್ಧರಿಸಲಾಗಿದೆ. ಮಾರ್ಚ್ 22ರಂದು ಈ ಕುರಿತು ಹೇಳಿಕೆ ನೀಡಿದ ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ), ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ (ನಿಸಾರ್) ಯೋಜನೆಯ ನೂತನ ದಿನಾಂಕವನ್ನು ಎಪ್ರಿಲ್ ಅಂತ್ಯದ ವೇಳೆಗೆ ಘೋಷಿಸಲಾಗುವುದು ಎಂದು ತಿಳಿಸಿದೆ.

Tap to resize

Latest Videos

undefined

ಇತ್ತೀಚಿನ ಸಂದರ್ಶನವೊಂದರಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥರಾದ ಎಸ್ ಸೋಮನಾಥ್ ಅವರು ನಿಸಾರ್ ಯೋಜನೆಯ ಉಡಾವಣೆಯನ್ನು ಈ ವರ್ಷದ ಮೊದಲ ತ್ರೈಮಾಸಿಕದಿಂದ ಮುಂದೂಡಲಾಗಿದೆ ಎಂದಿದ್ದರು. ಆದರೆ, ಅವರು ಯೋಜನೆಯ ವಿಳಂಬಕ್ಕೆ ನಿಖರ ಕಾರಣವೇನು ಎನ್ನುವುದನ್ನು ತಿಳಿಸಿರಲಿಲ್ಲ. ಅವರು ಈ ವಿಳಂಬಕ್ಕೂ, ಜಿಎಸ್ಎಲ್‌ವಿ ಮಾರ್ಕ್ 2 ರಾಕೆಟ್‌ಗೂ ಯಾವುದೇ ಸಂಬಂಧವಿಲ್ಲ ಎಂದಷ್ಟೇ ಹೇಳಿದ್ದರು. ಸೋಮನಾಥ್ ಅವರು ನಿಸಾರ್ ಯೋಜನೆ ಇನ್ನೂ ಪರೀಕ್ಷಾ ಹಂತದಲ್ಲಿರುವುದರಿಂದ, ಅದರ ಉಡಾವಣೆಯಲ್ಲಿ ವಿಳಂಬ ಉಂಟಾಗುತ್ತಿದೆ ಎಂದಿದ್ದರು. ಆದ್ದರಿಂದ ನಿಸಾರ್ ಉಡಾವಣೆ ಈ ವರ್ಷದ ದ್ವಿತೀಯ ಭಾಗದಲ್ಲಿ ನಡೆಯಲಿದೆ ಎಂದು ತಿಳಿಸಿದ್ದರು.

ಹಳೆಯದಾಗುತ್ತಿರುವ ಮಿಗ್-29ಕೆ: ಹೊಸ ಯುದ್ಧ ವಿಮಾನಗಳಿಗೆ ನೌಕಾಪಡೆಯ ಹುಡುಕಾಟ

ನಾಸಾ ಅಧಿಕಾರಿಗಳು ಆರಂಭದಲ್ಲಿ ಈ ಯೋಜನೆ ಬೇಸಿಗೆ ವೇಳೆ ನೆರವೇರಲಿದೆ ಎಂದು ಯೋಚಿಸಿದ್ದರು. ಸಭೆಯೊಂದರಲ್ಲಿ ನಡೆದ ಮಾಹಿತಿ ವಿನಿಮಯದ ಪ್ರಕಾರ, ಉಡಾವಣೆ ಮಾರ್ಚ್ ತಿಂಗಳ‌ ಅಂತ್ಯದಲ್ಲಿ ನೆರವೇರಲಿದೆ ಎನ್ನಲಾಗಿತ್ತು. ಬಾಹ್ಯಾಕಾಶ ನೌಕೆಯ ರೇಡಾರ್ ಆ್ಯಂಟೆನಾ ಪ್ರತಿಫಲಕವನ್ನು ರಕ್ಷಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. 12 ಮೀಟರ್‌ಗಳ (ಅಂದಾಜು 39 ಅಡಿ) ಈ ಆ್ಯಂಟೆನಾ ಮಡಿಚಿಟ್ಟ ಸ್ಥಿತಿಯಲ್ಲಿರುವಾಗ ಹೆಚ್ಚಿನ ತಾಪಮಾನದಿಂದ ಸುರಕ್ಷಿತವಾಗಿ ಇಡಬೇಕಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ, ನಾಸಾ ಆ್ಯಂಟೆನಾಗೆ ಒಂದು ವಿಶೇಷ ಲೇಪನ ಅಳವಡಿಸುವ ಉದ್ದೇಶ ಹೊಂದಿದೆ. 

ಈ ಲೇಪನ ಸೂರ್ಯನ ಬೆಳಕನ್ನು ಹಿಂದಕ್ಕೆ ಮರಳಿಸುವ ಸಾಮರ್ಥ್ಯ ಹೊಂದಿದ್ದು, ಆ ಮೂಲಕ ಆ್ಯಂಟೆನಾ ಹೆಚ್ಚಿನ ಉಷ್ಣತೆಗೆ ತುತ್ತಾಗುವುದರಿಂದ ತಪ್ಪಿಸಲಾಗುತ್ತದೆ. ನಾಸಾ ನೀಡಿರುವ ಮಾಹಿತಿಯ ಪ್ರಕಾರ, ವ್ಯಾಪಕ ಪರೀಕ್ಷೆಗಳು ಮತ್ತು ವಿಶ್ಲೇಷಣೆಗಳ ಅನುಸಾರವಾಗಿ, ಬಾಹ್ಯಾಕಾಶ ನೌಕೆಗೆ ಅಳವಡಿಸುವ ಪ್ರತಿಫಲಕಗಳು ಮಡಚಿದ ಸ್ಥಿತಿಯಲ್ಲಿ ಪ್ರಯಾಣಿಸುವಾಗ ಊಹಿಸಿದ್ದಕ್ಕಿಂತಲೂ ಹೆಚ್ಚು ತಾಪಮಾನವನ್ನು ಎದುರಿಸಬೇಕಾಗಿ ಬರುತ್ತದೆ. ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ನಿಸಾರ್ ಉಪಗ್ರಹದಲ್ಲಿರುವ ಪ್ರತಿಫಲಕವನ್ನು ಅಮೆರಿಕಾಗೆ 'ವಿಶೇಷ ಲೇಪನ'ದ ಅಳವಡಿಕೆಗಾಗಿ ಮರಳಿ ಕಳುಹಿಸಲಾಗುತ್ತಿದೆ. 

ಈಗ ಎರಡೂ ಸಂಸ್ಥೆಗಳು ಈ ಭೂ ವೀಕ್ಷಣಾ ಉಪಗ್ರಹದ ಉಡಾವಣೆಗೆ ಹೊಸ ದಿನಾಂಕವನ್ನು ಚಿಂತಿಸುತ್ತಿವೆ. ನಾಸಾದ ಪ್ರಕಾರ, ವಿಶೇಷ ಲೇಪನ ಹೆಚ್ಚಿನ ಸೌರ ವಿಕಿರಣಗಳನ್ನು ಮರಳಿಸುವ ಮೂಲಕ, ಪ್ರತಿಫಲಕದ ಹಾರ್ಡ್‌ವೇರ್  ತಾಪಮಾನವನ್ನು ಕಡಿಮೆಗೊಳಿಸುತ್ತದೆ. ಈ ಉದ್ದೇಶಕ್ಕಾಗಿ, ಪ್ರತಿಫಲಕ ಮತ್ತು ನಿಸಾರ್ ಬಾಹ್ಯಾಕಾಶ ನೌಕೆಯ ಇತರ ಭಾಗಗಳನ್ನು ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರದಿಂದ ಕ್ಯಾಲಿಫೋರ್ನಿಯಾದ ಉಪಗ್ರಹ ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಕ್ಯಾಲಿಫೋರ್ನಿಯಾದ ಈ ಕೇಂದ್ರ ಲೇಪನದ ಅಳವಡಿಕೆಗೆ ಅವಶ್ಯಕ ಪ್ರಾವೀಣ್ಯತೆ ಮತ್ತು ಸಂಪನ್ಮೂಲಗಳನ್ನು ಹೊಂದಿದೆ.

ನಿಸಾರ್ ಯೋಜನೆಯ ಪ್ರಮುಖ ಅಂಶಗಳು: ನಿಸಾರ್ ಇಸ್ರೋ ಮತ್ತು ನಾಸಾ ನಡುವಿನ ಮೊದಲ ಜಂಟಿ ಭೂ ವಿಜ್ಞಾನ ಬಾಹ್ಯಾಕಾಶ ನೌಕೆ ಎಂಬ ವಿಶೇಷ ಮೈಲಿಗಲ್ಲನ್ನು ಈಗಾಗಲೇ ಸಾಧಿಸಿದೆ. ನಿಸಾರ್ ಯೋಜನೆ ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಅತ್ಯಂತ ಮಹತ್ವದ ಮೈತ್ರಿಗಳಲ್ಲಿ ಒಂದಾಗಿದ್ದು, ನಾಸಾ ಯೋಜನೆಯ ವಿನ್ಯಾಸ ಮತ್ತು ಅಭಿವೃದ್ಧಿಗೆ ಮಾತ್ರವೇ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದೆ. ಇದರ ಎಲ್‌ ಬ್ಯಾಂಡ್ ರೇಡಾರ್ ಮತ್ತು ಇಂಜಿನಿಯರಿಂಗ್ ಪೇಲೋಡ್‌ಗಳು ನಾಸಾದಿಂದ ಬರಲಿದ್ದು, ಇಸ್ರೋ ಯೋಜನೆಗೆ ಎಸ್ ಬ್ಯಾಂಡ್ ಪೇಲೋಡ್, ಸ್ಪೇಸ್ ಕ್ರಾಫ್ಟ್ ಬಸ್ ಮತ್ತು ಉಡಾವಣಾ ವಾಹನಗಳನ್ನು ಒದಗಿಸಲಿದೆ.

ನಿಸಾರ್ ಯೋಜನೆ ಎರಡು ವಿಭಿನ್ನ ಮೈಕ್ರೋವೇವ್ ತರಂಗಾಂತರದಲ್ಲಿ ರೇಡಾರ್ ಮಾಹಿತಿಗಳನ್ನು ಕಲೆಹಾಕುವ ಉಪಗ್ರಹವಾಗಿದೆ.

• ಎಲ್ ಬ್ಯಾಂಡ್ (1-2 GHz) ಅನ್ನು ವ್ಯಾಪಕವಾಗಿ ಉಪಗ್ರಹ ಸಂವಹನ ಮತ್ತು ರಿಮೋಟ್ ಸೆನ್ಸಿಂಗ್‌ಗಳಲ್ಲಿ ಬಳಸಲಾಗುತ್ತದೆ.

• ಎಸ್ ಬ್ಯಾಂಡ್ (2-4 GHz) ಅನ್ನು ಸಾಮಾನ್ಯವಾಗಿ ಉಪಗ್ರಹ ಸಂವಹನ ಮತ್ತು ಹಮಾಮಾನ ವೀಕ್ಷಣೆಯ ಉದ್ದೇಶಕ್ಕೆ ಬಳಸಲಾಗುತ್ತದೆ.

ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಒಂದು ವಿನೂತನ, ರಿಮೋಟ್ ಸೆನ್ಸಿಂಗ್ ವಿಧಾನವಾಗಿದ್ದು, ಭೂಮಿಯ ಮೇಲ್ಮೈಯ ಸಮಗ್ರ ಚಿತ್ರಗಳನ್ನು ಸೆರೆಹಿಡಿಯಲು ಸಾಂಪ್ರದಾಯಿಕ ಆಪ್ಟಿಕಲ್ ಸೆನ್ಸರ್‌ಗಳ ಬದಲಿಗೆ ರೇಡಾರ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತದೆ. ಈ ಆಧುನಿಕ ತಂತ್ರಜ್ಞಾನಕ್ಕೆ ಮೋಡಗಳು ಮತ್ತು ದಟ್ಟ ಕಾಡುಗಳ ಮೂಲಕವೂ ವೀಕ್ಷಣೆ ನಡೆಸುವ ಸಾಮರ್ಥ್ಯವಿದ್ದು, ನಿಖರವಾದ ಮತ್ತು ನಂಬಿಕಾರ್ಹವಾದ ಮಾಹಿತಿಯನ್ನು ಒದಗಿಸುತ್ತದೆ. ನಿಸಾರ್ ಯೋಜನೆ ನಿಯಮಿತವಾಗಿ ಭೂಮಿಯ ನೆಲ ಮತ್ತು ಮಂಜುಗಡ್ಡೆಯ ರಾಶಿಯ ಚಿತ್ರಗಳನ್ನು ತೆಗೆಯುವ ಗುರಿ ಹೊಂದಿದೆ. ಬಾಹ್ಯಾಕಾಶ ನೌಕೆ ಪ್ರತಿ 12 ದಿನಗಳಿಗೊಮ್ಮೆ ಸಂಪೂರ್ಣ ಭೂಮಿಯ ನಕಾಶೆಯನ್ನು ರಚಿಸಬಲ್ಲದು. ಇದರಿಂದ ಲಭಿಸುವ ಮಾಹಿತಿ ಕೆಲವೇ ದಿನಗಳಲ್ಲಿ ಬಳಕೆಗೆ ಲಭ್ಯವಾಗಲಿದೆ. ತುರ್ತು ಪರಿಸ್ಥಿತಿಗಳಲ್ಲಂತೂ ಈ ಮಾಹಿತಿಗಳು ಕೆಲವೇ ಗಂಟೆಗಳಲ್ಲಿ ಲಭಿಸಲಿವೆ.

ನಾಸಾ ಮತ್ತು ಇಸ್ರೋ ಏನನ್ನು ಸಾಧಿಸಲು ಬಯಸುತ್ತಿವೆ?
1. ಪ್ರಕೃತಿ ವಿಕೋಪದ ನಕ್ಷೆ ನಡೆಸುವುದು ನಿಸಾರ್‌ನ ಪ್ರಮುಖ ಉದ್ದೇಶವಾಗಿದೆ. ಪ್ರಕೃತಿ ವಿಕೋಪಕ್ಕೂ ಮೊದಲಿನ ಚಿತ್ರಗಳನ್ನು ಬಳಸಿಕೊಂಡು, ನಿಸಾರ್ ಉಪಗ್ರಹ ಪ್ರಕೃತಿ ವಿಕೋಪದ ಪರಿಣಾಮಗಳನ್ನು ನಮಗೆ ಅರ್ಥ ಮಾಡಿಸಿ, ಆ ಮೂಲಕ ಭವಿಷ್ಯದ ಸಮಸ್ಯೆಗಳಿಗೆ ಸಿದ್ಧರಾಗಲು ಅವಶ್ಯಕ ನೀತಿಗಳನ್ನು ಜಾರಿಗೆ ತರಲು ನೆರವಾಗುತ್ತದೆ. ಅದರೊಡನೆ, ಹವಾಮಾನ ಪರಿಸ್ಥಿತಿಗಳಿಂದಲೂ ಉಪಗ್ರಹ ವೀಕ್ಷಣೆಗೆ ಅಡ್ಡಿಯಾಗದಿರುವುದರಿಂದ, ರಕ್ಷಣಾ ಕಾರ್ಯಾಚರಣೆಗಳಿಗೆ ಸಮಯಕ್ಕೆ ಸರಿಯಾಗಿ, ಸೂಕ್ತ ಮತ್ತು ನಂಬಿಕಾರ್ಹ ಮಾಹಿತಿಗಳನ್ನು ರವಾನಿಸಲು ಮತ್ತು ನಷ್ಟವನ್ನು ಅಂದಾಜಿಸಲು ನೆರವಾಗುತ್ತದೆ.

2. ಅರಣ್ಯ ಸಂಪತ್ತು ನಮ್ಮ ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕಾಡುಗಳು ನಮಗೆ ಸೌದೆ, ಇಂಧನ ಮತ್ತು ಇತರ ಉತ್ಪನ್ನಗಳಿಗೆ ಮೂಲವಾಗಿವೆ. ಅವುಗಳು ಇಂಗಾಲದ ಸಿಂಕ್‌ಗಳಾಗಿಯೂ ಕಾರ್ಯಾಚರಿಸಿ, ವಾತಾವರಣದಿಂದ ಹೆಚ್ಚುವರಿ ಇಂಗಾಲವನ್ನು ಹೀರಿಕೊಳ್ಳುತ್ತವೆ. ಇದೇ ವೇಳೆಗೆ ಗಾಳಿ ಮತ್ತು ಜಲ ಸಂಪನ್ಮೂಲಗಳನ್ನು ಶುದ್ಧೀಕರಿಸುತ್ತವೆ. ಅದರೊಡನೆ, ಅರಣ್ಯಗಳು ಅಗಾಧ ಸಂಖ್ಯೆಯ ಪ್ರಾಣಿಗಳು ಮತ್ತು ಸಸ್ಯಗಳಿಗೆ ಆಶ್ರಯತಾಣವೂ ಹೌದು. ನಿಸಾರ್ ಯೋಜನೆಯ ಪ್ರಾಥಮಿಕ ಉದ್ದೇಶ ಜಾಗತಿಕ ಅರಣ್ಯ ಸಂಪತ್ತನ್ನು ಗಮನಿಸಿ, ವಿಶ್ಲೇಷಿಸುವುದಾಗಿದೆ. ಆ ಮೂಲಕ ಸುಸ್ಥಿರ ಅಭಿವೃದ್ಧಿ ಯೋಜನೆಗಳು ಮತ್ತು ಪರಿಣಾಮಕಾರಿ ನಿರ್ವಹಣಾ ಕ್ರಮಗಳಿಗೆ ಪೂರಕವಾಗಿವೆ.

3. ಕೃಷಿ ಮತ್ತು ಆಹಾರ ಭದ್ರತೆ ಪ್ರಮುಖ ವಿಚಾರಗಳಾಗಿದ್ದು, ಎಸ್ಎಆರ್ ಚಿತ್ರಗಳು ಅವುಗಳನ್ನು ಸರಿಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಬಲ್ಲವು. ಬೆಳೆಗಳ ಆವರ್ತನದ ವಿಸ್ತೃತ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಮೂಲಕ, ಎಸ್ಎಆರ್ ತಂತ್ರಜ್ಞಾನ ಕೃಷಿ ಯೋಜನೆಯನ್ನು ವ್ಯವಸ್ಥಿತಗೊಳಿಸಿ, ಹೆಚ್ಚಿನ ಬೆಳೆ ಬೆಳೆಯುವಂತೆ ಮಾಡುತ್ತದೆ. ಅದಲ್ಲದೆ, ಎಸ್ಎಆರ್ ಬೆಳೆಗಳ ಆರೋಗ್ಯವನ್ನು ಗಮನಿಸಲು ಅನುಕೂಲ ಕಲ್ಪಿಸಿ, ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರಬಲ್ಲ ಸಮಸ್ಯೆಗಳನ್ನು ಶೀಘ್ರವಾಗಿ ಗುರುತಿಸಿ, ಪರಿಹರಿಸಲು ನೆರವಾಗುತ್ತದೆ. ಇಂತಹ ಮಾಹಿತಿಗಳು ಕೃಷಿಯನ್ನು ಉತ್ತಮಗೊಳಿಸಿ, ಆಹಾರ ಭದ್ರತೆ ಖಾತ್ರಿಪಡಿಸಲು ಸಹಾಯ ಮಾಡುತ್ತವೆ.

ಹಳೆಯದಾಗುತ್ತಿವೆ ಭಾರತದ ಮಿಗ್-21: ಹಾರಾಡುವ ಶವಪೆಟ್ಟಿಗೆಗಳಿಗೆ 2025ರಲ್ಲಿ ನಿವೃತ್ತಿ?

ನಿಸಾರ್ ಯೋಜನೆಗೆ 2023ರ ಮಧ್ಯಭಾಗದಲ್ಲಿ ಅಂದಾಜು 1.5 ಬಿಲಿಯನ್ ಡಾಲರ್, ಅಂದರೆ ಬಹುತೇಕ 12,505 ಕೋಟಿ ರೂಪಾಯಿಗಳನ್ನು ಒದಗಿಸಲಾಗಿತ್ತು. ಇದು ನಿಸಾರ್ ಅನ್ನು ಜಾಗತಿಕವಾಗಿ ಅತ್ಯಂತ ಹೆಚ್ಚು ಬೆಲೆಬಾಳುವ ಭೂ ಚಿತ್ರಣದ ಉಪಗ್ರಹ ಯೋಜನೆಯನ್ನಾಗಿಸಿದೆ. ಆದರೆ, ಹೆಚ್ಚುವರಿ ಲೇಪನ ಮತ್ತು ಉಡಾವಣೆಗೂ ಮುನ್ನ ನಡೆಸಬೇಕಾದ ಇತರ ಅವಶ್ಯಕ ಮಾರ್ಪಾಡುಗಳ ಕಾರಣದಿಂದಾಗಿ, ಈ ಯೋಜನೆಯ ಒಟ್ಟಾರೆ ವೆಚ್ಚ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

click me!