ಏರ್ ನ್ಯೂಜಿಲೆಂಡ್ ನಂತರ, ದಕ್ಷಿಣ ಕೊರಿಯಾದ ಅತಿದೊಡ್ಡ ವಿಮಾನಯಾನ ಕೊರಿಯನ್ ಏರ್ ನಲ್ಲಿ ಹಾರುವ ಪ್ರಯಾಣಿಕರು ತಮ್ಮ ವಿಮಾನವನ್ನು ಹತ್ತುವ ಮೊದಲು ತೂಕದ ಸ್ಕೇಲ್ ಮೇಲೆ ನಿಂತ್ಕೋಬೇಕು ಎಂದು ಸೂಚಿಸಿದೆ.
ಸಿಯೋಲ್ (ದಕ್ಷಿಣ ಕೊರಿಯಾ) (ಆಗಸ್ಟ್ 29, 2023): ವಿಮಾನ ಹತ್ತೋ ಮೊದಲು ನಿಮ್ಮ ಲಗೇಜ್ ತೂಕ ಪರೀಕ್ಷೆ ಮಾಡ್ಕೊಳ್ಳೋದು ವಾಡಿಕೆ. ತೂಕ ಹೆಚ್ಚಾಗಿದ್ರೆ ತೂಕ ಕಮ್ಮಿ ಮಾಡೋದು ಅಥವಾ ದಂಡ ಕಟ್ಟೋದನ್ನು ಹಲವು ಫ್ಲೈಟ್ ಪ್ರಯಾಣಿಕರು ಮಾಡ್ತಾರೆ. ಆದ್ರೆ, ಇನ್ಮುಂದೆ ಈ ವಿಮಾನ ಹತ್ತೋಕೆ ಮುಂಚೆ ನಿಮ್ಮ ಲಗೇಜ್ ತೂಕ ಮಾತ್ರವಲ್ಲ, ನಿಮ್ಮ ತೂಕನೂ ಪರೀಕ್ಷೆ ಮಾಡ್ಕೊಬೇಕು.
ಹೌದು, ಏರ್ ನ್ಯೂಜಿಲೆಂಡ್ ನಂತರ, ದಕ್ಷಿಣ ಕೊರಿಯಾದ ಅತಿದೊಡ್ಡ ವಿಮಾನಯಾನ ಕೊರಿಯನ್ ಏರ್ ನಲ್ಲಿ ಹಾರುವ ಪ್ರಯಾಣಿಕರು ತಮ್ಮ ವಿಮಾನವನ್ನು ಹತ್ತುವ ಮೊದಲು ತೂಕದ ಸ್ಕೇಲ್ ಮೇಲೆ ನಿಂತ್ಕೋಬೇಕು ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ. "ಫ್ಲೈಟ್ ಸುರಕ್ಷತೆಗಾಗಿ ಪ್ರಯಾಣಿಕರ ಸರಾಸರಿ ತೂಕವನ್ನು ಅವರ ಕ್ಯಾರಿ-ಆನ್ ಐಟಂಗಳೊಂದಿಗೆ ಅಳೆಯುತ್ತದೆ" ಎಂದು ಕೊರಿಯನ್ ಏರ್ ತನ್ನ ವೆಬ್‌ಸೈಟ್‌ನಲ್ಲಿ ದೃಢಪಡಿಸಿದೆ.
ಇದನ್ನು ಓದಿ: ಬೆಂಗಳೂರಿಂದ ತೆರಳಿದ ವಿಮಾನದಲ್ಲಿ 2 ವರ್ಷದ ಮಗುವಿಗೆ ಹೃದಯ ಸ್ತಂಭನ, ಉಸಿರಾಟ ಸ್ಥಗಿತ: ಮುಂದಾಗಿದ್ದು ದೊಡ್ಡ ಪವಾಡ!
ವಿಮಾನದ ತೂಕದ ವಿತರಣೆಯನ್ನು ನಿರ್ಧರಿಸಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತದೆ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಲೆಕ್ಕಾಚಾರಗಳು ನಡೆಯಬೇಕಾಗುತ್ತದೆ. ಗೇಟ್‌ಗಳ ಮುಂದೆ ಮತ್ತು ಬೋರ್ಡಿಂಗ್ ಮೊದಲು ತೂಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೊರಿಯಾ ಟೈಮ್ಸ್ ವರದಿ ಮಾಡಿದೆ. ಈ ಉಪಕ್ರಮವನ್ನು ಈಗಾಗಲೇ ಆಗಸ್ಟ್ 28 ರಿಂದ ಸೆಪ್ಟೆಂಬರ್ 6 ರವರೆಗೆ ಜಿಂಪೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗೆ ಅರಂಭಿಸಲಾಗಿದೆ. ಹಾಗೂ, ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 19 ರವರೆಗೆ ಇಂಚೆನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರಂಭಿಸಲಾಗುವುದು ಎಂದು ತಿಳಿದುಬಂದಿದೆ.
ಈ ಪ್ರಕ್ರಿಯೆಯ ಬಗ್ಗೆ ಅನಾನುಕೂಲವಾಗಿರುವ ಯಾವುದೇ ಪ್ರಯಾಣಿಕರಿಗೆ, ಪ್ರಯಾಣಿಕರು ಮತ್ತು ಲಗೇಜ್ ಎರಡನ್ನೂ ಅನಾಮಧೇಯವಾಗಿ ತೂಕ ಮಾಡಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿವೆ. ಪ್ರಯಾಣಿಕರಿಗೆ ಇನ್ನೂ ಸಂದೇಹವಿದ್ದರೆ ಮತ್ತು ಈ ತೂಕದ ಮಾಪನಗಳಲ್ಲಿ ಭಾಗವಹಿಸದಿರಲು ನಿರ್ಧರಿಸಿದರೆ, ಅವರು ಸಿಬ್ಬಂದಿ ಸದಸ್ಯರಿಗೆ ತಿಳಿಸುವ ಮೂಲಕ ಆಯ್ಕೆಯಿಂದ ಹೊರಗುಳಿಯಬಹುದು ಎಂದೂ ಹೇಳಲಾಗಿದೆ.
ಇದನ್ನೂ ಓದಿ: ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡಿದ ಪ್ರಖ್ಯಾತ ಏರ್‌ಲೈನ್ಸ್ ಸಿಇಒ!
ಒಮ್ಮೆ ಎಲ್ಲಾ ಡೇಟಾವನ್ನು ಸಂಗ್ರಹಿಸಿದ ನಂತರ ಅದನ್ನು ಕೊರಿಯಾದ ಭೂಮಿ, ಮೂಲಸೌಕರ್ಯ ಮತ್ತು ಸಾರಿಗೆ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುತ್ತದೆ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಎಷ್ಟು ಇಂಧನ ಬೇಕು ಮತ್ತು ತೂಕದ ಆನ್‌ಬೋರ್ಡ್ ವಿಮಾನಗಳನ್ನು ಹೇಗೆ ವಿತರಿಸಬೇಕು ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. "ಅನಾಮಧೇಯವಾಗಿ ಸಂಗ್ರಹಿಸಿದ ಡೇಟಾವನ್ನು ಸಮೀಕ್ಷೆ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ ಮತ್ತು ಅಧಿಕ ತೂಕದ ಪ್ರಯಾಣಿಕರು ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಅರ್ಥವಲ್ಲ’’ ಎಂದೂ ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.
ಈ ವರ್ಷದ ಜುಲೈನಲ್ಲಿ, ಏರ್ ನ್ಯೂಜಿಲೆಂಡ್ ಈ ಕ್ರಮವನ್ನು ಮೊದಲ ಜಾರಿಗೆ ತಂದಿದೆ.
ಇದನ್ನೂ ಓದಿ: 3 ನಿಮಿಷದಲ್ಲಿ 15,000 ಅಡಿ ಕೆಳಕ್ಕಿಳಿದ ವಿಮಾನ: ಭಯಭೀತರಾದ ಪ್ರಯಾಣಿಕರು!