ಮಗಳಿಗೆ ತಾಯಿಯೇ ಗುರು; ಮುಟ್ಟಿನ ಸ್ವಚ್ಛತೆ ಪಾಠ ಅವಳೇ ಮಾಡಲಿ

By Suvarna NewsFirst Published May 29, 2020, 3:42 PM IST
Highlights

ಮುಟ್ಟಿನ ಕುರಿತು ಮಗಳ ಬಳಿ ತಾಯಿ ಮನಬಿಚ್ಚಿ ಮಾತನಾಡೋದು ಅಗತ್ಯ. ಈ ಸಮಯದಲ್ಲಾಗುವ ದೈಹಿಕ, ಮಾನಸಿಕ ಬದಲಾವಣೆಗಳ ಬಗ್ಗೆ ತಿಳಿಸುವ ಜೊತೆ ಸ್ವಚ್ಛತೆಯ ಪಾಠವನ್ನು ತಾಯಿ ಮಾಡಬೇಕು. 

ಹದಿಹರೆಯಕ್ಕೆ ಕಾಲಿಟ್ಟ ಮಗಳಿಗೆ ತಾಯಿಯೇ ಅತ್ಯುತ್ತಮ ಸ್ನೇಹಿತೆಯಾಗಲು ಪ್ರಯತ್ನಿಸಬೇಕು. ಈ ಹಂತದಲ್ಲಿ ದೇಹದಲ್ಲಾಗುವ ಬದಲಾವಣೆಗಳು, ಅದಕ್ಕೆ ಕಾರಣಗಳನ್ನು ಯಾವುದೇ ಮುಜುಗರವಿಲ್ಲದೆ ಮಗಳ ಮುಂದೆ ಹಂಚಿಕೊಳ್ಳುವ ಕೆಲಸವನ್ನು ತಾಯಿ ಮಾಡಬೇಕು. ಇದ್ರಿಂದ ಮಗಳ ಮನಸ್ಸಿನಲ್ಲಿ ಒಡಮೂಡಿದ ಅನೇಕ ಸಂದೇಹಗಳು, ಕುತೂಹಲಗಳಿಗೆ ಉತ್ತರ ಸಿಗುತ್ತದೆ. ಒಂದು ವೇಳೆ ಆಕೆ ಮನಸ್ಸಿನಲ್ಲಿ ಈ ಕುರಿತು ಏನಾದ್ರೂ ಭಯ, ಅಂಜಿಕೆಗಳಿದ್ರೆ ದೂರವಾಗುತ್ತವೆ. ಋತುಸ್ರಾವದ ಸಮಯದಲ್ಲಿ ಶುಚಿತ್ವ ಕಾಪಾಡೋದು ಎಷ್ಟು ಮುಖ್ಯ ಎಂಬುದನ್ನು ಕೂಡ ತಿಳಿಸಿಕೊಡೋದು ಅಗತ್ಯ. ನಿತ್ಯದ ಬದುಕಿನಲ್ಲಿ ಹಲ್ಲು ಉಜ್ಜೋದು, ಸ್ನಾನ ಮಾಡೋದು, ಶುಚಿಯಾದ ಬಟ್ಟೆ ಧರಿಸೋದಕ್ಕೆ ನೀಡುವಷ್ಟೇ ಮಹತ್ವವನ್ನು ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಲು ನೀಡಬೇಕಾಗುತ್ತದೆ. ಮುಟ್ಟಿನ ಸಮಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿದ್ರೆ ಮೂತ್ರನಾಳದ ಸೋಂಕು, ತುರಿಕೆ ಹಾಗೂ ಗರ್ಭಕಂಠದ ಕ್ಯಾನ್ಸರ್‍ನಂತಹ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ ಹೆಣ್ಣುಮಕ್ಕಳಿಗೆ ತಾಯಿ ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕುರಿತು ಈ ಕೆಳಗಿನ ಸಲಹೆಗಳನ್ನು ನೀಡೋದು ಅಗತ್ಯ.

ಮೆನೆಸ್ಟ್ರುವಲ್ ಹೈಜಿನ್ ಡೇ; ಮುಜುಗರ ಬಿಟ್ಟು ಶುಚಿತ್ವಕ್ಕೆ ಒತ್ತು ನೀಡೋಣ

Latest Videos

ಸಾಂತ್ವನದ ಮಾತುಗಳು
ಮೊದಲು ಮುಟ್ಟಾದಾಗ ಏನೋ ಕಿರಿಕಿರಿ, ಅಸಹನೆ ಮನಸ್ಸಿನಲ್ಲಿ ಮನೆ ಮಾಡಿರುತ್ತೆ. ಕೆಲವು ಬಾಲಕಿಯರಿಗಂತೂ ಏನು ಮಾಡಬೇಕು ಎಂಬುದೇ ತಿಳಿಯೋದಿಲ್ಲ. ಈ ಸಮಯದಲ್ಲಿ ತಾಯಿ ಸಾಂತ್ವನದ ನುಡಿಗಳು ಮನಸ್ಸಿಗೆ ನೆಮ್ಮದಿ ನೀಡಬಲ್ಲವು. ದೇಹದಲ್ಲಾದ ಹೊಸ ಬದಲಾವಣೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯಬೇಕಾಗುತ್ತದೆ. ಅಲ್ಲದೆ, ಇದರಲ್ಲಿ ಅಸಹ್ಯ ಪಡುವಂತದ್ದು ಏನೂ ಇಲ್ಲ. ಜಗತ್ತಿನ ಎಲ್ಲ ಹೆಣ್ಣುಮಕ್ಕಳ ದೇಹದಲ್ಲಿ ಇಂಥ ಬದಲಾವಣೆಯಾಗುತ್ತೆ ಎಂಬುದನ್ನು ತಿಳಿಸೋದ್ರಿಂದ ಅವರ ಮನಸ್ಸಿನಲ್ಲಿರುವ ಗೊಂದಲ ದೂರವಾಗುತ್ತದೆ.

ಸ್ಯಾನಿಟರಿ ಪ್ಯಾಡ್ ಬಗ್ಗೆ
ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಧರಿಸೋದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿ ಕೊಡಬೇಕು. ಅದನ್ನು ಹೇಗೆ ಬಳಸಬೇಕು ಎಂಬುದನ್ನು ಕೂಡ ಕಲಿಸಿ. 4-6 ಗಂಟೆಗೊಮ್ಮೆ ಸ್ಯಾನಿಟರಿ ಪ್ಯಾಡ್ ಬದಲಾಯಿಸುವಂತೆ ತಿಳಿಸಿ. ಒಂದೇ ಪ್ಯಾಡ್ ದಿನವಿಡೀ ಬಳಸೋದ್ರಿಂದ ಸೋಂಕು ಉಂಟಾಗುತ್ತದೆ. ಅಲ್ಲದೆ, ರಕ್ತಸ್ರಾವ ಹೆಚ್ಚಿದ್ರೆ ಬಟ್ಟೆಗೆ ತಾಗಿ ಮುಜುಗರ ಎದುರಿಸಬೇಕಾಗುತ್ತದೆ ಎಂಬುದನ್ನೂ ಮನದಟ್ಟು ಮಾಡಿಸಿ. 

ಈ ಸಮಯದಲ್ಲಿ ಸ್ನಾನದ ಮಹತ್ವ
ಇಂದಿಗೂ ಜಗತ್ತಿನ ಹಲವು ಭಾಗಗಳಲ್ಲಿ ಮುಟ್ಟಿನ ಸಮಯದಲ್ಲಿ ಸ್ನಾನ ಮಾಡೋದು ನಿಷಿದ್ಧ. ಇಂಥ ಕೆಟ್ಟ ಸಂಪ್ರದಾಯಗಳಿಗೆ ಇತಿಶ್ರೀ ಹಾಡುವ ಕೆಲಸ ಮನೆಯಿಂದಲೇ ಆಗಬೇಕು. ಮುಟ್ಟಿನ ಸಮಯದಲ್ಲಿ ಸ್ನಾನ ಮಾಡೋದು ಅತ್ಯಗತ್ಯ. ದಿನಕ್ಕೆರಡು ಬಾರಿ ಯೋನಿ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ನೀರಿನಿಂದ ಸ್ವಚ್ಛಗೊಳಿಸುವಂತೆ ತಿಳಿಸಿ. ಇದ್ರಿಂದ ಅಪಾಯಕಾರಿ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. 

ಮುಟ್ಟನ್ನು ಕಾಯಿಲೆ ಎಂದುಕೊಂಡಿರುತ್ತಾರಂತೆ ಶೇ.38 ಹುಡುಗಿಯರು!

ಒಳ ಉಡುಪಿನ ಸ್ವಚ್ಛತೆ
ಪ್ರತಿದಿನ ಸ್ವಚ್ಛವಾಗಿರುವ ಒಳುಡುಪು ಧರಿಸಬೇಕು. ರಕ್ತಸ್ರಾವದಿಂದ ಒಳುಡುಪು ಒದ್ದೆಯಾದ್ರೆ ತಕ್ಷಣ ಅದನ್ನು ಬದಲಾಯಿಸಬೇಕು. ಸರಿಯಾಗಿ ಸ್ವಚ್ಛಗೊಳಿಸದ ಒಳುಡುಪಿನಿಂದ ಕೆಟ್ಟ ವಾಸನೆ ಬರುತ್ತದೆ. ಅಲ್ಲದೆ, ಇದ್ರಿಂದ ಸೋಂಕು ಉಂಟಾಗುವ ಸಾಧ್ಯತೆಯೂ ಇದೆ. ಕಾಟನ್ ಒಳುಡುಪನ್ನೇ ಬಳಸಲು ತಿಳಿಸಿ. ಇದ್ರಿಂದ ಚರ್ಮಕ್ಕೆ ಯಾವುದೇ ಕಿರಿಕಿರಿ ಉಂಟಾಗೋದಿಲ್ಲ.

ಸ್ಯಾನಿಟರಿ ಪ್ಯಾಡ್ ಸಮರ್ಪಕ ವಿಲೇವಾರಿ
ಮನೆಯಲ್ಲಾಗಲಿ ಅಥವಾ ಸ್ಕೂಲಿನಲ್ಲಾಗಲಿ ಸ್ಯಾನಿಟರಿ ಪ್ಯಾಡ್ ಅನ್ನು ಡಸ್ಟ್‍ಬಿನ್‍ಗೆ ಹಾಕುವ ಮುನ್ನ ಪೇಪರ್‍ನಲ್ಲಿ ಸುತ್ತಿ ಎಸೆಯುವಂತೆ ತಿಳಿಸಿ. ಯಾವುದೇ ಕಾರಣಕ್ಕೂ ಸ್ಯಾನಿಟರಿ ಪ್ಯಾಡ್ ಅನ್ನು ಟಾಯ್ಲೆಟ್‍ನಲ್ಲಿ ಹಾಕಿ ಫ್ಲಶ್ ಮಾಡಬಾರದು ಎಂದು ಹೇಳಿ. ಹೀಗೆ ಮಾಡೋದ್ರಿಂದ ಪೈಪ್‍ನಲ್ಲಿ ಪ್ಯಾಡ್ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಯಿದೆ. ಪ್ಯಾಡ್ ಎಸೆದ ಬಳಿಕ ಕೈಗಳನ್ನು ನೀರು ಹಾಗೂ ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ಅದೇರೀತಿ ಸ್ಯಾನಿಟರಿ ಪ್ಯಾಡ್ ಬಳಸುವ ಮುನ್ನವೂ ಕೈಗಳು ಸ್ವಚ್ಛವಾಗಿರುವಂತೆ ಎಚ್ಚರ ವಹಿಸಲು ತಿಳಿಸಿ.

ಸಮತೋಲಿತ ಆಹಾರ
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನೇ ಈ ಸಮಯದಲ್ಲಿ ನೀಡಿ. ಮುಟ್ಟಿನ ಸಮಯದಲ್ಲಿ ಸಾಕಷ್ಟು ನೀರು ಕುಡಿಯೋದು ಕೂಡ ಮುಖ್ಯ. ದಿನಕ್ಕೆ ಕನಿಷ್ಠ 4 ಲೀಟರ್ ನೀರು ಕುಡಿಯೋದು ಅಗತ್ಯ. 


 

click me!