ಇವಳ ಕತೆ ಅಂತಿಂಥದ್ದಲ್ಲ. ಹಳ್ಳಿಯಲ್ಲಿ ಹುಟ್ಟಿ, ಮೂರನೇ ವಯಸ್ಸಿನಲ್ಲೇ ಮದುವೆಯಾಗಿ, ಹದಿನೆಂಟರಲ್ಲಿ ಗರ್ಭಕೋಶದ ಕ್ಯಾನ್ಸರ್‌ಗೆ ತುತ್ತಾಗಿ...ಸಾಧನೆಯ ಹಾದಿಯನ್ನು ನನಸಾಗಿಸಿಕೊಂಡವಳು.
ಕೆಲವರ ಜೀವನ ಸ್ಫೂರ್ತಿಯುತವಾಗಿರುತ್ತದೆ. ನಾನಾ ಕಷ್ಟಗಳನ್ನು ಎದುರಿಸಿದರೂ ಅವರು ಜೀವನದಲ್ಲಿ ಸಂತೋಷ ನೆಮ್ಮದಿಗಳನ್ನು ಹೇಗೋ ಕಂಡುಕೊಂಡು ಇತರರಿಗೂ ನೆಮ್ಮದಿ ನೀಡುತ್ತ ಸಾಧನೆ ಮಾಡುತ್ತಾರೆ. ಇದು ಅಂಥ ಒಬ್ಬ ಹೆಣ್ಣು ಮಗಳ ಜೀವನ ಕತೆ. ಹ್ಯೂಮನ್ಸ್ ಆಫ್ ಬಾಂಬೇ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಕಟವಾದುದು.
ಈಕೆ ಮಧ್ಯಪ್ರದೇಶದ ಒಂದು ಹಳ್ಳಿಯ ಒಂದು ಸಮುದಾಯದ ಹೆಣ್ಣು ಮಗಳು. ಈಕೆ ಮೂರು ವರ್ಷದ ಮಗುವಿದ್ದಾಗಲೇ ಈಕೆಯನ್ನು ಪಕ್ಕದ ಹಳ್ಳಿಯ ಇನ್ನೊಬ್ಬ ಹುಡುಗನ ಜೊತೆ ಬಾಲ್ಯವಿವಾಹ ಮಾಡಲಾಯಿತು. ಆದರೂ ಈಕೆ ತವರು ಮನೆಯಲ್ಲಿಯೇ ಉಳಿದಳು. 18 ವರ್ಷವಾದ ಬಳಿಕ ಈಕೆ ಗಂಡನ ಮನೆಗೆ ಹೋಗಬೇಕಿತ್ತು. ಆದರೆ ಈಕೆಗೆ ಶಿಕ್ಷಣದ ಮೇಲೆ ಆಸೆ. ನಾನು ಕಲಿತು ಆಫೀಸರ್ ಆಗುತ್ತೇನೆ ಎಂದು ತಂದೆಯ ಜೊತೆ ಹೇಳುತ್ತಲೇ ಇದ್ದಳು. ತಂದೆ ಈಕೆಯ ಕನಸಿಗೆ ಪ್ರೋತ್ಸಾಹಕನಾಗಿದ್ದ. ಈಕೆಗೆ ಐದು ವರ್ಷ ಆದಾಗ ಇವಳ ಹಳ್ಳೀಯಲ್ಲಿ ಮೊತ್ತಮೊದಲ ಪ್ರಾಥಮಿಕ ಶಾಲೆ ಶುರುವಾಯಿತು. ಈಕೆ ತಂದೆಯ ಬಳಿ ಹೋಗಿ, ನಾನು ಆಫೀಸರ್ ಆಗಬೇಕು, ನನ್ನನ್ನು ಶಾಲೆಗೆ ಕಳಿಸು ಎಂದು ಕೇಳಿಕೊಂಡಳು. ತಂದೆ ಒಪ್ಪಿ ಶಾಲೆಗೆ ಸೇರಿಸಿದ. ಈಕೆಯ ಸಮುದಾಯದಲ್ಲಿ ಶಾಲೆಗೆ ಹೋದವರಲ್ಲಿ ಈಕೆಯೇ ಪ್ರಥಮ. ಇವಳ ಮನೆ ಬಡತನದ್ದು. ಮನೆಯಲ್ಲಿ ವಿದ್ಯುತ್ ಇರಲಿಲ್ಲ. ಇವಳು ಲಾಟೀನು ಬೆಳಕಿನಲ್ಲಿ ಓದಿಕೊಳ್ಳಬೇಕಾಗಿತ್ತು. ಶಾಲೆ ಮುಗಿದ ಬಳಿಕ ಹೊಲದ ಕೆಲಸಗಳನ್ನು ಮಾಡಬೇಕಿತ್ತು, ಮನೆಗೆಲಸಗಳೂ ಧಾರಾಳ ಇದ್ದವು. ಎಲ್ಲವುಗಳನ್ನೂ ಮಾಡಿ, ಶಾಲೆಯಲ್ಲೂ ಓದಿನಲ್ಲೂ ಸೈ ಎನ್ನಿಸಿಕೊಂಡಳು. ತರಗತಿಗೇ ಫಸ್ಟ್ ಬರುತ್ತಿದ್ದಳು.
“I was barely 3 when I was married off to a boy from a nearby village. In our community, child marriages are common; I...
Posted by Humans of Bombay on Friday, April 2, 2021
ಐದನೇ ಕ್ಲಾಸ್ ಆದ ಬಳಿಕ ಆರನೇ ತರಗತಿಗಾಗಿ ಪಕ್ಕದ ಹಳ್ಳಿಗೆ ಆಕೆ ಹೋಗಬೇಕಿತ್ತು. ಹಾಗೆ ಹೋಗಿ ಬರುವಾಗಲೆಲ್ಲ ಗ್ರಾಮಸ್ಥರ, ನೆಂಟರ ವ್ಯಂಗ್ಯದ ಮಾತುಗಳನ್ನು ಆಕೆ ಕೇಳಬೇಕಾಗಿ ಬರುತ್ತಿತ್ತು- ಇಷ್ಟೊಂದು ಓದಿ ನೀನು ಏನು ಮಾಡುವುದಕ್ಕಿದೆ? ನೀನೇನು ಆಫೀಸರ್ ಆಗ್ತೀಯಾ? ಎಷ್ಟು ಓದಿದರೂ ಗಂಡನ ಮನೆಯಲ್ಲಿ ಪಾತ್ರೆ ತೊಳೆಯುವುದು ತಪ್ಪೋಲ್ಲ ತಾನೆ? ಹೀಗೆ. ಈಕೆ ಅದನ್ನು ಕೇಳಿ ಸುಮ್ಮನೆ ನಕ್ಕು ಮುಂದೆ ಸಾಗುತ್ತಿದ್ದಳು. ಈಕೆ ಹತ್ತನೇ ಕ್ಲಾಸಿನಲ್ಲಿ ಡಿಸ್ಟಿಂಕ್ಷನ್ ತಗೊಂಡು ಪಾಸಾಗಿ, ಇನ್ನೂ ಹೆಚ್ಚಿನ ಕಲಿಕೆಗಾಗಿ ಪೇಟೆಗೆ ಬಂದಳು.
ಅಷ್ಟರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಕರೆ ಬಂತು. ಈಕೆ ರಿಟನ್ ಟೆಸ್ಟ್ ಬರೆದಳು. ಟೆಸ್ಟ್ ಬರೆದ ಐವತ್ತು ಮಂದಿಯಲ್ಲಿ ಪಾಸಾದ ಏಕೈಕ ಮಹಿಳೆ ಇವಳಾಗಿದ್ದಳು. ತಂದೆಗೆ ಹೇಳಲು ಭಯವಾಯಿತು. ಆದರೂ ಹೇಳಿದಳು. ತಂದೆಯ ಉತ್ತರ- ಆಫೀಸರ್ ಆಗುವ ನಿನ್ನ ಕನಸು ಪೂರ್ತಿಯಾಗುವವರೆಗೆ ನಾನು ಬಿಡೋಲ್ಲ!
9 ತಿಂಗಳ ಕಠಿಣ ತರಬೇತಿಯ ಬಳಿಕ ಈಕೆ ಪೊಲೀಸ್ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡಳು. ಈಕೆ ಪೊಲೀಸ್ ಇಲಾಖೆ ಸೇರಿದ ತನ್ನ ಹಳ್ಳಿಯ ಮೊದಲ ವ್ಯಕ್ತಿಯಾಗಿದ್ದಳು. ಇವಳು ಊರಿಗೆ ಬರುವಾಗ ಎಲ್ಲರೂ ಸೆಲ್ಯೂಟ್ ಮಾಡಿ 'ಪೊಲೀಸ್ ಸಾಹಿಬ್ ಬರ್ತಿದಾರೆ' ಎಂದು ಗೌರವ ತೋರಿದರು. ಕಲಿಕೆಗಾಗಿ ವ್ಯಂಗ್ಯ ಕೇಳುತ್ತಿದ್ದ ದಿನಗಳಿಂದ, ಪೊಲೀಸ್ ಆಗಿ ಗೌರವ ಪಡೆದ ದಿನಗಳವರೆಗೆ ಆಕೆಯ ಪಯಣ ಹೀಗಿತ್ತು.
ಅಷ್ಟರಲ್ಲಿ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಲು ಆರಂಭವಾಯಿತು. ಪರೀಕ್ಷಿಸಿದಾಗ, ಆಕೆಯ ಗರ್ಭಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ತನ್ನ ಕನಸನ್ನು ನನಸು ಮಾಡಿಕೊಳ್ಳುವ ಹಂತದಲ್ಲಿಯೇ ಆಕೆಯನ್ನು ವಿಧಿ ನುಚ್ಚುನೂರು ಮಾಡಲು ಹೊರಟಿತ್ತು. ತಂದೆ ಹಾಗೂ ಗಂಡನ ಸಹಕಾರದಿಂದ ಆರು ತಿಂಗಳ ಕಾಳ ಕೀಮೋಥೆರಪಿ ಮಾಡಿಸಿಕೊಂಡಳು. ತಲೆಕೂದಲೆಲ್ಲಾ ಉದುರಿ ಬೋಳಾಯಿತು. ಒಂದು ಹಂತದಲ್ಲಿ ಆಕೆಯ ದೇಹದ ತೂಕ ಕೇವಲ 35 ಕಿಲೋದಷ್ಟಾಯಿತು. ತಂದೆ ಈಕೆಯ ಮೇಲೆ ನಾಲ್ಕು ಲಕ್ಷ ಖರ್ಚು ಮಾಡಿದರು. ಹೆಣ್ಣುಮಗಳ ಮೇಲೆ ಇಷ್ಟೊಂದು ಖರ್ಚು ಯಾಕೆ ಮಾಡ್ತಾ ಇರುವೆ ಅಂತ ಕೆಲವರು ಕೇಳಿದರು.
ಮಾವಿನ ರುಚಿಗೆ ಸೋಲದವರಿಲ್ಲ, ಆರೋಗ್ಯಕ್ಕೆ ಇದರ ಕೊಡುಗೆ ಕಡಿಮೆ ಏನಿಲ್ಲ ...
ಚೇತರಿಸಿಕೊಂಡ ನಂತರ ಈಕೆ ಕೆಲಸಕ್ಕೆ ಹೋಗಲು ಆರಂಭಿಸಿದಳು. ಆಗಲೂ ಕ್ಯಾಪ್ ಹಾಕಿಕೊಂಡೇ ಇರಬೇಕಿತ್ತು. ಉತ್ಸಾಹವೆಲ್ಲ ಇಳದಿತ್ತು. ಜೀವನೋತ್ಸಾಹ ಉಳಿಸಿಕೊಳ್ಳಲು ಒಂದು ಮ್ಯೂಸಿಕ್ ಕ್ಲಾಸಿಗೆ ಸೇರಿದಳು. ಈಕೆಗೆ ಇನ್ನು ಮುಂದೆ ಮಗುವಾಗುವ ಸಾಧ್ಯತೆ ಇಲ್ಲ ಎಂಬುದು ಗೊತ್ತಾಗಿತ್ತು. ಆದರೆ ನಿಯಮದಂತೆ ಈಕೆ ಈಗ ಗಂಡನ ಮನೆ ಸೇರಬೇಕಿತ್ತು. ಆಕೆಯ ಗಂಡ ಆಕೆ ಹೇಗಿದ್ದಾಳೋ ಆಕೆಯನ್ನು ಹಾಗೆಯೇ ಸ್ವೀಕರಿಸಿದ. ಈಕೆ ತನ್ನ ಬದುಕನ್ನು ಸಾಮಾಜಿಕ ಸೇವೆಗೂ ಮೀಸಲಿಡಲು ನಿರ್ಧರಿಸಿದಳು. ಶಾಲೆ ಮಕ್ಕಳಿಗೆ ಅನೇಕ ವಿಷಯಗಳನ್ನು ತಿಳಿಸಿಕೊಡಲು ಆರಂಭಿಸಿದಳು. ಎಲ್ಲರೂ ಆಕೆಯನ್ನು ಪೊಲೀಸ್‌ವಾಲಿ ದೀದಿ ಎಂದೇ ಈಗ ಕರೆಯುವುದು. ಈಕೆಯ ಸೇವೆಗಾಗಿ ಇವಳು ಕಮಿಷನರ್ ಪ್ರಶಸ್ತಿಯನ್ನೂ ಸ್ವೀಕರಿಸಿದ್ದಾಳೆ. ಈಕೆಯ ಸಂಗೀತದ 25 ಆಲ್ಬಂಗಳನ್ನೂ ತಂದಿದ್ದಾಳೆ.
ಈಕೆಯ ಬದುಕು ಸಾವಿರಾರು ಹೆಣ್ಣುಮಕ್ಕಳಿಗೆ ಪ್ರೇರಕವಾಗಿದೆ.
ನನ್ನಂಥವರಿಗೆ ಸ್ಫೂರ್ತಿಯಾಗಲಿ ಎಂದು ಆತ್ಮಕತೆ ಬರೆದೆ: ವಿನುತಾ ವಿಶ್ವನಾಥ್! ...