ಗರ್ಭಿಣಿ ಉಪವಾಸ ಮಾಡೋದ್ರಿಂದ ಮಗುವಿನ ಮೇಲಾಗುವ ಪರಿಣಾಮ ಗೊತ್ತೇ ?

By Suvarna News  |  First Published Oct 13, 2022, 3:36 PM IST

ಹಬ್ಬಗಳು ಬಂದಾಗ ಸಾಮಾನ್ಯವಾಗಿ ಎಲ್ಲರೂ ಉಪವಾಸ ಮಾಡುತ್ತಾರೆ. ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದ್ರೆ ಹೀಗೆ ಗರ್ಭಿಣಿಯರು ಸಹ ಫಾಸ್ಟಿಂಗ್ ಮಾಡಬಹುದಾ ? ಗರ್ಭಿಣಿಯರು ಉಪವಾಸ ಮಾಡೋದ್ರಿಂದ ಆರೋಗ್ಯಕ್ಕೇನು ತೊಂದ್ರೆಯಿಲ್ವಾ ? ಇಲ್ಲಿದೆ ಹೆಚ್ಚಿನ ಮಾಹಿತಿ.


ಗರ್ಭಧಾರಣೆಯು ಪ್ರತಿಯೊಬ್ಬ ಪೋಷಕರಿಗೆ ತುಂಬಾ ವಿಶೇಷವಾದ ಸಮಯ. ಆದರೆ ಈ ಸಮಯ ತಾಯಿಗೆ ನಾವು ನೋಡಿರೋವಷ್ಟು ಸುಲಭವಾಗಿರಲ್ಲ, ಅವಳು ಅನೇಕ ದೈಹಿಕ ಮತ್ತು ಹಾರ್ಮೋನುಗಳ ಬದಲಾವಣೆಗಳಿಗೆ ಒಳಗಾಗುತ್ತಾಳೆ. ಇದಲ್ಲದೆ, ಸ್ವಚ್ಛತೆ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸದಿದ್ದರೆ, ಅನೇಕ ಗಂಭೀರ ರೋಗಗಳನ್ನು ಸಹ ಎದುರಿಸಬೇಕಾಗುತ್ತೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಏನೇನೂ ಮಾಡಬೇಕು? ಏನೇನು ಮಾಡಬಾರದು ಅನ್ನೋದರ ಬಗ್ಗೆ ಈಗಾಗಲೆ ಸಾಕಷ್ಟು ಮಾಹಿತಿಯನ್ನು ನೀಡಲಾಗಿದೆ. ಆದ್ರೆ ಗರ್ಭಿಣಿ ಉಪವಾಸ ಮಾಡಬಹುದಾ ಅಥವಾ ಮಾಡಬಾರದಾ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಆ ಬಗ್ಗೆ ತಿಳಿಯೋಣ.

ಗರ್ಭಾವಸ್ಥೆಯ ಅವಧಿಯಲ್ಲಿ ಕೆಲ ಮಹಿಳೆಯರು (Woman) ಧಾರ್ಮಿಕ ಆಚರಣೆಗೆ ಕಟ್ಟುಬಿದ್ದು ಉಪವಾಸ ಮಾಡಲು ಮುಂದಾಗುತ್ತಾರೆ. ಹೀಗೆ ಮಾಡುವುದರಿಂದ ಮಗುವಿನ ಆರೋಗ್ಯ (Health) ಚೆನ್ನಾಗಿರಲಿ ಎಂದೋ ಅಥವಾ ದೇವರ ಬಗ್ಗೆ ಇರುವ ಭಕ್ತಿಯಿಂದಲೂ ಉಪವಾಸಕ್ಕೆ (Fasting) ಮುಂದಾಗುತ್ತಾರೆ. ಹೀಗೆ ಗರ್ಭಾವಸ್ಥೆಯಲ್ಲಿ ಉಪವಾಸ ಮಾಡುವುದು ಒಳ್ಳೆಯದೇ? ಅಥವಾ ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ? ಈ ಬಗ್ಗೆ ಸಾಕಷ್ಟು ಅನುಮಾನಗಳು ಗರ್ಭಿಣಿ (Pregnant)ಯರಲ್ಲಿ ಮನೆ ಮಾಡಿರುತ್ತದೆ. ಈ ಬಗ್ಗೆ ಇರುವ ಗೊಂದಲದ ಬಗ್ಗೆ ಫೊರ್ಟಿಸ್‌ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸೌಮ್ಯಾ ಕೃಷ್ಣಯ್ಯ ಅವರು ವಿವರಿಸಿದ್ದಾರೆ.

Latest Videos

undefined

ಲೇಟ್‌ ಪ್ರೆಗ್ರೆನ್ಸಿ ಪ್ಲಾನ್‌ ಮಾಡಿದ್ದೀರಾ ? ಹಾಗಿದ್ರೆ ಈ ಟೆಸ್ಟ್ ಮರೀದೆ ಮಾಡಿಸ್ಕೊಳ್ಳಿ

* ಗರ್ಭಿಣಿಯರಿಗೆ ಉಪವಾಸ ಒಳ್ಳೆಯದಲ್ಲ:
ಸಾಮಾನ್ಯವಾಗಿ ಉಪವಾಸ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿರುತ್ತದೆ. ಆದರೆ, ಗರ್ಭಾವಸ್ಥೆಯಲ್ಲಿ ಈ ಉಪವಾಸ ಒಳ್ಳೆಯದಲ್ಲ. ಇದನ್ನು ಯಾವ ವೈದ್ಯರೂ ಶಿಫಾರಸು ಮಾಡುವುದಿಲ್ಲ. ಅದರಲ್ಲೂ ಕೆಲವರು ನೀರು ಸಹ ಸೇವಿಸದೇ ಉಪವಾಸ ಕೈಗೊಳ್ಳುತ್ತಾರೆ. ಇದು ಮಗು (Baby) ಹಾಗೂ ತಾಯಿ (Mother) ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ತಾಯಿಯಲ್ಲಿ ನಿರ್ಜಲೀಕರಣ ಉಂಟಾಗಬಹುದು, ಇದು ಮಗುವಿನ ಬೆಳವಣಿಗೆ ಮೇಲೂ ಪರಿಣಾಮ ಬೀರಬಹುದು. ಜೊತೆಗೆ, ಉಪವಾಸದಿಂದ ಕಡಿಮೆ ರಕ್ತದೊತ್ತಡ ಉಂಟಾಗಿ ಮಗುವಿನಲ್ಲಿ ಹೈಪರ್ಗ್ಲೈಸೀಮಿಯಾ ಮತ್ತು ಹೈಪೋಕ್ಸಿಯಾಕ್ಕೆ ಕಾರಣವಾಗಬಹುದು. 

ಮಗುವಿನ ಮೇಲಾಗುವ ಪರಿಣಾಮದ ಬಗ್ಗೆ ಗಮನವಿರಲಿ: 
ಕೆಲ ಧಾರ್ಮಿಕ ಆಚರಣೆಗಳಾದ ಪವಿತ್ರ ರಂಜಾನ್‌, ಹಿಂದೂಗಳಲ್ಲಿ ಪ್ರತಿ ಶುಕ್ರವಾರ ಅಥವಾ ಸಂಕಷ್ಟ ಚತುರ್ಥಿ ಹಾಗೂ ಇತರೆ ಹಬ್ಬಗಳಲ್ಲೂ ಉಪವಾಸ ಕೈಗೊಳ್ಳುತ್ತಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಇಂತಹ ಆಚರಣೆ ಸಾಮಾನ್ಯವಾಗಿದೆ. ಮಗುವಿನ ಬೆಳವಣಿಗೆ (Growth) ದೃಷ್ಟಿಯಿಂದ ಇದು ಅತ್ಯಂತ ಅಪಾಯಕಾರಿ (Dangerous) ಹೌದು. ಮಗುವಿನ ಮೆದುಳಿನ ಬೆಳವಣಿಗೆ ಕುಂಠಿತ, ಮಗುವಿನಲ್ಲಿ ನಿರ್ಲಲೀಕರಣ, ಅಪೌಷ್ಠಕತೆ ಕೊರತೆ ಮೂಡಬಹುದು, ತಾಯಿಯಲ್ಲಿ ಸುಸ್ತು, ಮೂತ್ರದ ಸೋಂಕು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆ ಕಾಡಬಹುದು.  ಒಂದು ವೇಳೆ ಉಪವಾಸ ಮಾಡುವುದು ಅನಿವಾರ್ಯವಾಗಿದ್ದರೆ ಮೊದಲು ವೈದ್ಯರನ್ನು ಸಂಪರ್ಕಿಸಿ, ನಿಮ್ಮ ಆರೋಗ್ಯದ ಸ್ಥಿತಿಯನ್ನು ಪರೀಗಣಿಸಿ ನಂತರ ಮಾಡಬಹುದು. 

ಗರ್ಭಿಣಿಯರಲ್ಲಿ ರಕ್ತದ ಸಕ್ಕರೆ ನಿಯಂತ್ರಿಸಿ, ಅನಾರೋಗ್ಯದ ಅಪಾಯ ತಪ್ಪಿಸಿ

ಈ ಅನುಭವವಾದರೆ ವೈದ್ಯರನ್ನು ಸಂಪರ್ಕಿಸುವುದು ಮರೆಯಬೇಡಿ
* ಬಲಹೀನತೆ, ನಿಶಕ್ತಿ ಅನುಭವವಾದರೆ
* ಗರ್ಭಿಣಿಯರಿಗೆ ರಕ್ತದೊತ್ತಡ ಇದ್ದಾಗ ಅಥವಾ ಲೋ ಬಿಪಿ ಇದ್ದ ಸಂರ್ಭದಲ್ಲಿ
* ಮಗು ಹೊಟ್ಟೆಯಲ್ಲಿ ಚಲಿಸದೇ ಇರುವ ಅನುಭವಾದರೆ.
* ಗರ್ಭಿಣಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ
* ಮೂತ್ರವು ಕಡಿಮೆ ಅಥವಾ ಗಾಢ ಬಣ್ಣದಲ್ಲಿ ಹೋಗುತ್ತಿದ್ದರೆ
* ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಅನುಭವವಾಗುತ್ತಿದ್ದರೆ ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೇ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

click me!