ವಾಟ್ಸ್ಆ್ಯಪ್, FB, ಇನ್ಸ್ಟಾಗ್ರಾಮ್‌ನಲ್ಲಿ ಹೊಸ ಫೀಚರ್!

By Suvarna NewsFirst Published May 23, 2020, 4:12 PM IST
Highlights

ದಿನೇದಿನೆ ನಮಗಿಂತ ವೇಗವಾಗಿ ತಂತ್ರಜ್ಞಾನಗಳು ಅಪ್ಡೇಟ್ ಆಗುತ್ತಲಿವೆ. ಕಾರಣ, ನಮ್ಮ ಅಗತ್ಯತೆ ಹಾಗೂ ಅನಿವಾರ್ಯಗಳೂ ಅದೇ ಪ್ರಮಾಣದಲ್ಲಿ ಹೆಚ್ಚುತ್ತಾ ಸಾಗುತ್ತದೆ. ಈಗಲೂ ಹಾಗೇ ಕೋವಿಡ್-19 ಸಂದರ್ಭದಲ್ಲಿ ವರ್ಕ್ ಫ್ರಂ ಹೋಂ ಸೇರಿದಂತೆ ಹಲವಾರು ಅನಿವಾರ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಹೊತ್ತಿನಲ್ಲಿ ಮನೆಯಲ್ಲೇ ಇದ್ದು ಕೆಲಸ ಮಾಡುವವರಿಗೆ, ಸಣ್ಣ ಉದ್ದಿಮೆದಾರರಿಗೆ, ಸಾರ್ವಜನಿಕರ ಕೆಲವು ಅಗತ್ಯಕ್ಕಣುಗುಣವಾಗಿ ಈಗ ಫೇಸ್‌ಬುಕ್, ವಾಟ್ಸ್‌ಆ್ಯಪ್‌ ಹಾಗೂ ಇನ್ಸ್ಟಾಗ್ರಾಂ ಮುಂದಾಗಿವೆ. ಏನೇನಿವೆ ಅಪ್ಡೇಟ್‌ಗಳು ನೋಡೋಣ.

ಕೋವಿಡ್- 19 ಎಂಬ ಸೋಂಕು ವಿಶ್ವಕ್ಕೆ ಅಂಟಿಕೊಂಡು ಎಲ್ಲಿಲ್ಲದಂತೆ ಕಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ. ಇಂಥ ಸಂದರ್ಭದಲ್ಲಿ ಜನರು ಲಾಕ್‌ಡೌನ್ ಶಿಕ್ಷೆಯನ್ನು ಅನಿವಾರ್ಯವಾಗಿ ಅನುಭವಿಸುವಂತಾಗಿದೆ. ಇದು ಭಾರತ ಮಾತ್ರವಲ್ಲದೆ ಎಲ್ಲ ಕಡೆಯೂ ಇರುವ ಸಮಸ್ಯೆಯಾಗಿದೆ. ಹೀಗಾಗಿ ಮನೆಯಲ್ಲೇ ಇರುವ ಜನರಿಗೆ ಹೆಚ್ಚು ಹತ್ತಿರವಾಗಿ, ಮಾಹಿತಿಯನ್ನು ಶೀಘ್ರವಾಗಿ ತಲುಪಿಸಲು ಶಕ್ತವಾಗುತ್ತಿರುವುದು ತಂತ್ರಜ್ಞಾನಗಳಿಂದ ಮಾತ್ರ. ಈಗ ಫೇಸ್‌ಬುಕ್ ಸಹಿತ ತನ್ನ ಅಂಗ ಸಂಸ್ಥೆಗಳಾದ ವಾಟ್ಸ್ಆ್ಯಪ್, ಇನ್‌ಸ್ಟಾಗ್ರಾಂಗಳಲ್ಲಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಿದೆ.

ಈಗಿನ ಸಂದರ್ಭಗಳೂ ಹಾಗೆಯೇ ಇದ್ದು, ವರ್ಕ್ ಫ್ರಂ ಹೋಂ ಬಹಳ ಸೇಫ್ ಎನ್ನುವಷ್ಟರ ಮಟ್ಟಿಗೆ ಆಗಿದೆ. ಹೀಗಾಗಿ ಬಹುತೇಕ ಐಟಿ ಕಂಪನಿಗಳು ಮನೆಯಲ್ಲೇ ಕೆಲಸ ಮಾಡಲು ತಮ್ಮ ನೌಕರರಿಗೆ ಹೇಳುತ್ತಿವೆ. ಆದರೆ, ಇದಕ್ಕೆ ತಂತ್ರಜ್ಞಾನದಲ್ಲಿ ಹಲವಾರು ಸೌಲಭ್ಯಗಳು ಬೇಕಿದ್ದು, ಆ ನಿಟ್ಟಿನಲ್ಲಿ ತನ್ನ ಬಳಕೆದಾರರಿಗೆ ಒದಗಿಸಲು ಫೇಸ್‌ಬುಕ್ ಮುಂದಾಗಿದೆ. 

ಫೇಸ್‌ಬುಕ್‌ನಲ್ಲಿ ಮೆಸೆಂಜರ್ ರೂಂ
ಫೇಸ್‌ಬುಕ್ ಮೆಸೆಂಜರ್ ರೂಂ ಎಂಬ ನೂತನ ವಿಡಿಯೋ ಕಾನ್ಫರೆನ್ಸ್ ಫೀಚರ್ ಅನ್ನು ಪರಿಚಯಿಸಿದೆ. ಈ ಮೂಲಕ ಝೂಮ್, ಗೂಗಲ್ ಮೀಟ್ ಸೇರಿದಂತೆ ತನ್ನ ಪ್ರತಿಸ್ಪರ್ಧಿಗಳಿಗೆ ಠಕ್ಕರ್ ಕೊಡಲು ಹೊರಟಿದೆ. ಈ ಮೆಸ್ಸೆಂಜರ್ ರೂಂನಲ್ಲಿ 50 ಮಂದಿವರೆಗೆ ಒಟ್ಟಿಗೆ ವಿಡಿಯೋ ಕಾನ್ಫರೆನ್ಸ್ ಮಾಡಬಹುದಾಗಿದ್ದು, ಕಾನ್ಫರೆನ್ಸ್ ಮೀಟಿಂಗ್‌ಗೆ ಸಹಕಾರಿಯಾಗಲಿದೆ. ಇನ್ನೊಂದು ವಿಶೇಷವೆಂದರೆ ಹೀಗೆ ಎಷ್ಟು ಸಮಯ ಬೇಕಾದರೂ ವಿಡಿಯೋ ಕಾಲಿಂಗ್ ಮಾಡಬಹುದಾಗಿದ್ದು, ಸಮಯದ ನಿಗದಿ ಇಲ್ಲ. ಆದರೆ, ಇಂಟರ್ನೆಟ್ ಸೌಲಭ್ಯ ಸರಿ ಇರಬೇಕಷ್ಟೇ. ಇನ್ನೊಂದು ಹೆಚ್ಚುವರಿ ಫೀಚರ್ ಎಂದರೆ ಫೇಸ್‌ಬುಕ್ ಖಾತೆ ಹೊಂದದವರನ್ನೂ ಸಹ ಮೆಸೆಂಜರ್ ಆ್ಯಪ್ ಮೂಲಕ ಪಾಲ್ಗೊಳ್ಳುವಂತೆ ಅಡ್ಮಿನ್ ಗಳು ಸೇರಿಸುವ ಅವಕಾಶವನ್ನು ನೀಡಲಾಗಿದೆ. 

ಇದನ್ನು ಓದಿ: ನಿತ್ಯ 3 ಜಿಬಿ ಡೇಟಾ; ಜಿಯೋ ನಾಗಾಲೋಟ

ಸ್ಥಳೀಯ ಉದ್ಯಮಗಳಿಗೆ ಬೆಂಬಲ
ಇನ್ನೊಂದು ಪ್ರಮುಖ ಸಂಗತಿಯೆಂದರೆ ಈಗಾಗಲೇ ಸೊರಗಿರುವ ಸಣ್ಣ ಉದ್ದಿಮೆದಾರರ ಬೆಂಬಲಕ್ಕೆ ನಿಂತಿರುವ ಫೇಸ್‌ಬುಕ್ ಅವರಿಗೆ ಹಾಗೂ ಗ್ರಾಹಕರ ಮಧ್ಯೆ ಸೇತುವಾಗಿ ಕಾರ್ಯನಿರ್ವಹಿಸಲು ವೇದಿಕೆ ನಿರ್ಮಿಸಿದೆ. ಇದಕ್ಕೋಸ್ಕರ ಕಂಪನಿಯು “ಸಪೋರ್ಟ್ ಸ್ಮಾಲ್ ಬ್ಯಸಿನೆಸ್” ಎಂಬ ಸ್ಟಿಕ್ಕರ್ ಮತ್ತು ಹ್ಯಾಷ್ ಟ್ಯಾಗ್ ಅನ್ನು ಪ್ರಾರಂಭಿಸಿದೆ. ಇಲ್ಲಿ ಉದ್ದಿಮೆ ಸಮೀಪದ ಹಾಗೂ ಮಾರುಕಟ್ಟೆ ಪ್ರದೇಶಗಳನ್ನು ಆ್ಯಡ್ ಮಾಡಬಹುದಾಗಿದ್ದು, ಆ ಮೂಲಕ ಜನರಿಗೆ ತಮ್ಮ ಸಮೀಪದ ಇಲ್ಲವೇ ಅಕ್ಕ-ಪಕ್ಕದ ಅಂಗಡಿಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಇದರಿಂದ ಕೆಲವು ಸಲ ಪಕ್ಕದಲ್ಲಿದ್ದವರಿಗೂ ಅಲ್ಲಿ ಏನು ಸಿಗುತ್ತದೆ ಎಂಬ ಐಡಿಯಾ ಇರದಿರುವ ಕಾರಣ, ಇಂತಹ ಒಂದು ಫೀಚರ್ ನಿಂದ ಉದ್ದಿಮೆದಾರ ಹಾಗೂ ಗ್ರಾಹಕನಿಗೆ ಸಹಾಯವಾಗುತ್ತಿದೆ ಎಂದೇ ಹೇಳಲಾಗುತ್ತಿದೆ. 

ಇನ್ಫಾರ್ಮೇಶನ್ ಸೆಂಟರ್ ಹಾಗೂ ಡೊನೇಷನ್
ಕೋವಿಡ್ -19-ಸ್ಪೆಸಿಫಿಕ್ ಇನ್ಫಾರ್ಮೇಶನ್ ಸೆಂಟರ್ ಎಂಬ ಪುಟವನ್ನು ಫೇಸ್‌ಬುಕ್‌ನಲ್ಲಿ ಪ್ರಾರಂಭಿಸಲಾಗಿದ್ದು, ಇದರಲ್ಲಿ ಕೋವಿಡ್-19ಗೆ ಸಂಬಂಧಪಟ್ಟ ಸುದ್ದಿಗಳು, ವಿವರಗಳು ಹಾಗೂ ರೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದರಲ್ಲಿ ಡೊನೇಷನ್ ಬಟನ್ ಅನ್ನೂ ಅಭಿವೃದ್ಧಿಪಡಿಸಲಾಗಿದ್ದು, ಕೋವಿಡ್ ರಿಲೀಫ್ ಫಂಡ್ ಅನ್ನು ಸಂಗ್ರಹಿಸಲಾಗುತ್ತಿದೆ. 

ಇನ್‌ಸ್ಟಾದಲ್ಲೂ ಸಣ್ಣ ಉದ್ದಿಮೆಗೆ ಬೂಸ್ಟ್
ಇನ್‌ಸ್ಟಾಗ್ರಾಂನಲ್ಲೂ ಸಣ್ಣ ಉದ್ದಿಮೆಗೆ ಬೂಸ್ಟ್ ಸಿಕ್ಕಿದ್ದು, ಫೇಸ್‌ಬುಕ್ ಮಾದರಿಯಲ್ಲೇ ಎಲ್ಲ ಸ್ಟಿಕ್ಕರ್ ಪ್ಯಾಕ್‌ಗಳನ್ನು ಇನ್‌ಸ್ಟಾದಲ್ಲಿ ಪರಿಚಯಿಸಲಾಗಿದೆ. ಇದರಲ್ಲಿ ಯಾವುದೇ ಒಂದು ಸ್ಟಿಕ್ಕರ್ ಅನ್ನು ಒಬ್ಬರು ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡರೂ ಅದಕ್ಕೆ ಸಂಬಂಧಿಸಿದ ಎಲ್ಲ ಸ್ಟಿಕ್ಕರ್‌ಗಳು ಒಂದೆಡೆ ಒಟ್ಟುಗೂಡಿ ಇನ್‌ಸ್ಟಾದಲ್ಲಿ ಸ್ಟಿಕ್ಕರ್ ಸ್ಟೋರಿಗಳಾಗಿ ಮಾರ್ಪಡುತ್ತವೆ. ಈ ಮೂಲಕ ಬಳಕೆದಾರರಿಗೆ ಉದ್ದಿಮೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದೆ. 

ಇದನ್ನು ಓದಿ: ಕೊರೋನಾ ಫೇಕ್‌ನ್ಯೂಸ್ ಗೆ ವಾಟ್ಸ್ಆ್ಯಪ್ ಚಾಟ್‌ಬಾಟ್ ಬ್ರೇಕ್!

ಒಂದೇ ಬಾರಿ ಕಮೆಂಟ್ ಡಿಲೀಟ್ ಮಾಡಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಯಾವುದೇ ಕಮೆಂಟ್‌ಗಳನ್ನು ಡಿಲೀಟ್ ಮಾಡಬೇಕೆಂದಿದ್ದರೆ ಒಂದೊಂದನ್ನೇ ಸೆಲೆಕ್ಟ್ ಮಾಡಿ ಡಿಲೀಟ್ ಒತ್ತಬೇಕಿತ್ತು. ಇದು ಸಾಮಾನ್ಯದವರಿಗಾದರೆ ಅಷ್ಟೇನೂ ಸಮಸ್ಯೆಯಾಗದು. ಅದೇ ಸೆಲೆಬ್ರಿಟಿಗಳಂಥವರಾದರೆ ಅವರ ಕಥೆ ಏನು? ಹೀಗಾಗಿಯೇ ಬಲ್ಕ್ ಮೆಸೇಜ್ ಡಿಲೀಟ್ ಆಯ್ಕೆಯನ್ನು ಕೊಡಲಾಗಿದೆ. ಮುಂದುವರಿದ ಭಾಗವಾಗಿ ಕೆಲವರ ಕಮೆಂಟ್ ಬಾರದಂತೆ ಅವರ ಅಕೌಂಟ್ ಅನ್ನು ಬ್ಲಾಕ್ ಇಲ್ಲವೇ ರಿಸ್ಟ್ರಿಕ್ಟ್ ಮಾಡುವ ಅವಕಾಶವನ್ನೂ ನೀಡಲಾಗಿದೆ.

ಸೈಬರ್ ಅಕ್ರಮದ ವಿರುದ್ಧ ಸಮರ
ಇನ್ ಸ್ಟಾದಲ್ಲಿ ಈಚೆಗೆ ಬಾಯ್ಸ್ ಲಾಕರ್ ರೂಂ ವಿವಾದ ಆಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಸಂಸ್ಥೆ ಕಮ್ಯುನಿಟಿ ಸ್ಟ್ಯಾಂಡರ್ಡ್ ಎನ್ಫೋರ್ಸ್ ಮೆಂಟ್ ವರದಿಯನ್ನು ಇದೇ ಮೇ 13ರಂದು ಸಿದ್ಧಪಡಿಸಿದ್ದು, ಈ ಮೂಲಕ ಸೈಬರ್ ಬೆದರಿಕೆ ಇಲ್ಲವೇ ದೌರ್ಜನ್ಯದ ವಿರುದ್ಧ ಕೆಲವೊಂದು ನೀತಿಯನ್ನು ರೂಪಿಸಿದೆ. 

ಡೆಸ್ಕ್‌ಟಾಪ್ ಸಾಮರ್ಥ್ಯ ಹೆಚ್ಚಳ
ಈಗಾಗಲೇ ಇನ್ ಸ್ಟಾಗ್ರಾಂ ಮೊಬೈಲ್ ಸ್ನೇಹಿಯಾಗಿದೆ. ಆದರೆ, ಇದನ್ನು ಲ್ಯಾಪ್‌ಟಾಪ್ ಇಲ್ಲವೇ ಡೆಸ್ಕ್‌ಟಾಪ್‌ನಲ್ಲಿ ಬಳಸುವವರಿದ್ದರೆ ಅಂಥವರಿಗಾಗಿ ಅನುಕೂಲ ಮಾಡಿಕೊಡಲು ಆ್ಯಪ್ ಅನ್ನು ಮತ್ತಷ್ಟು ಅಭಿವೃದ್ಧಿ ಮಾಡಲಾಗಿದೆ. ಈಚೆಗಷ್ಟೇ ಇನ್‌ಸ್ಟಾ ಲೈವ್ ವಿಡಿಯೋವನ್ನು ಲ್ಯಾಪ್‌ಟಾಪ್‌ಗೆ ಹೊಂದಾಣಿಕೆಯಾಗುವಂತೆ ರೂಪಿಸಿತ್ತು. ಈಗ ಲೈವ್ IGTV ವಿಡಿಯೋಗಳನ್ನು ಒಬ್ಬರ ಖಾತೆಯಲ್ಲಿ ಸೇವ್ ಮಾಡಿಕೊಳ್ಳುವ ಸೌಲಭ್ಯವನ್ನು ರೂಪಿಸಲಾಗಿದೆ. ಇದಕ್ಕೆ 24 ಗಂಟೆ ಕಾಲಾವಧಿಯನ್ನು ನಿಗದಿಪಡಿಸಲಾಗಿದೆ.

ವಾಟ್ಸ್‌ಆ್ಯಪ್‌ನಲ್ಲಿ ವಿಡಿಯೋ ಕಾಲ್ ಸಾಮರ್ಥ್ಯ ಹೆಚ್ಚಳ
ವರ್ಕ್ ಫ್ರಂ ಹೋಂ ಬರುತ್ತಿದ್ದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರಿ ಚುರುಕು ಮೂಡಿದೆ. ಹೀಗಾಗಿ ವಿಡಿಯೋ ಕಾಲಿಂಗ್ ಆ್ಯಪ್‌ಗಳು ಹೆಚ್ಚು ಹೆಚ್ಚು ಅಭಿವೃದ್ಧಿಯಾಗುತ್ತಿವೆ. ಇನ್ನು ಕೆಲವು ಇರುವ ಸಾಮರ್ಥ್ಯವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿಕೊಳ್ಳುತ್ತಿವೆ. ಇದೇ ನಿಟ್ಟಿನಲ್ಲಿ ಕೇವಲ ನಾಲ್ಕು ಮಂದಿ ವಿಡಿಯೋ ಕಾಲಿಂಗ್ ಮಾಡುವ ಸಾಮರ್ಥ್ಯವಿದ್ದ ವಾಟ್ಸ್ಆ್ಯಪ್‌ನಲ್ಲೀಗ 50 ಮಂದಿವರೆಗೆ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. 

ಇದನ್ನು ಓದಿ: ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ

ಲಾಕ್‌ಡೌನ್ ಸ್ಟಿಕ್ಕರ್ ಪ್ಯಾಕೇಜ್
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂದಿ ಮನೆಯಲ್ಲೇ ಕೂರುವುದು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅವರು ವಾಟ್ಸ್‌ಆ್ಯಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳನ್ನು ಬಳಸುವುದೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಹಲವಾರು ಲಾಕ್‌ಡೌನ್ ಸ್ಟಿಕ್ಕರ್‌ಗಳನ್ನು ವಾಟ್ಸ್‌ಆ್ಯಪ್ ಪರಿಚಯಿಸಿದ್ದು, ಭರ್ಜರಿಯಾಗಿ ಬಳಕೆಯಾಗುತ್ತಿವೆ. ಸ್ಟೇ ಅಟ್ ಹೋಂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಹಲವು ಸ್ಟಿಕ್ಕರ್ ಗಳು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಿವೆ. ಈಗಾಗಲೇ ಫೇಸ್‌ಬುಕ್ ಚಾಲ್ತಿಗೆ ತಂದಿರುವ ಮೆಸೆಂಜರ್ ರೂಂ ಸೌಲಭ್ಯವನ್ನು ವಾಟ್ಸ್‌ಆ್ಯಪ್ ವೆಬ್‌ನಲ್ಲೂ ಪರಿಚಯಿಸಲು ಮುಂದಾಗಿದೆ. 

ಇನ್ನೂ ಬರಲಿವೆ ಹೊಸ ಫೀಚರ್‌ಗಳು
ಈ ಮೇ ಮಾಸಾಂತ್ಯಕ್ಕೆ ಇನ್ನೂ ಹಲವು ಫೀಚರ್‌ಗಳನ್ನು ನೀಡಲು ಫೇಸ್‌ಬುಕ್ ನಿರ್ಧರಿಸಿದೆ. ತನ್ನದೇ ಆದ ಯುಪಿಐ ಆಧಾರಿತ ಹಣ ವರ್ಗಾವಣೆ ಸೇವೆಯಾದ ವಾಟ್ಸ್ಆ್ಯಪ್ ಪೇ ಅನ್ನು ಪರಿಚಯಿಸಲು ವಾಟ್ಸ್‌ಆ್ಯಪ್ ಮುಂದಾಗಿದೆ. ಡಿಸ್ಅಪಿಯರಿಂಗ್ ಮೆಸೇಜಸ್ ಸೇರಿ ಮತ್ತಿತರೆ ಸೌಲಭ್ಯಗಳನ್ನು ನೀಡಲು ಮುಂದಾಗಲಾಗಿದೆ.

click me!