ಬೆಂಗಳೂರಿಗೆ ವರ ಈ ಚಿರಾಗ್‌ ಅರೋರ!

By Web DeskFirst Published Jun 19, 2019, 11:27 AM IST
Highlights

ದಶಕದ ಹಿಂದೆ ಬೆಂಗಳೂರು ಜಾಗತಿಕವಾಗಿ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿಯೇ ದೂರದ ಮಧ್ಯ ಪ್ರದೇಶದಿಂದ ಬೆಂಗಳೂರಿಗೆ ಬಂದವರು ಚಿರಾಗ್‌ ಅರೋರ. ಇವರು ಎಲ್ಲರಂತಲ್ಲ. ತುಂಬಾ ಭಿನ್ನ. ‘ಬೆಂಗಳೂರು ಕರ್ಮಭೂಮಿ. ನಾನಿದ್ದಷ್ಟುದಿನ ಈ ಸಿಟಿಯನ್ನು ಅಂದವಾಗಿ ನೋಡಲು ಬಯಸುತ್ತೇನೆ. ಅದರ ಅಂದ ಹೆಚ್ಚಲು ನನ್ನಿಂದ ಏನು ಸಾಧ್ಯವೋ ಅದನ್ನು ಮಾಡುತ್ತೇನೆ’ ಎಂದು ಹೇಳಿಕೊಳ್ಳುತ್ತಲೇ ಹನ್ನೊಂದು ವರ್ಷದಲ್ಲಿ ಸಾಕಷ್ಟುಸಮಾಜಮುಖಿ ಕಾರ್ಯ ಮಾಡಿದ್ದಾರೆ. ಅವುಗಳ ಪುಟ್ಟಪರಿಚಯ ಇಲ್ಲಿದೆ.

ಕೆಂಡಪ್ರದಿ

ಚಿರಾಗ್‌ ಅರೋರ ಬೆಂಗಳೂರಿಗೆ ಬಂದು ಇಲ್ಲಿಗೆ ತುಂಬು ಹನ್ನೊಂದು ವರ್ಷ. ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಒಳ್ಳೆಯ ಕೆಲಸ ಹಿಡಿದು ಇಲ್ಲಿಗೆ ಬಂದ ಅವರನ್ನು ಸ್ವಾಗತ ಮಾಡಿದ್ದು ಬೆಂಗಳೂರಿನ ಹಸಿರು, ಸುಂದರ ವಾತಾವರಣ. ಒಂದೇ ಬಾರಿಗೆ ಪ್ರವಾಹೋಪಾದಿಯಲ್ಲಿ ದೇಶ, ವಿದೇಶಗಳಿಂದ ಉದ್ಯೋಗ ಹರಸಿ ಇಲ್ಲಿಗೆ ಬಂದ ಲಕ್ಷಾಂತರ ಮಂದಿಯ ಕಾರಣ, ದಿನೇ ದಿನ ನಗರ ಬೆಳೆಯುತ್ತಾ ಸಾಗಿದಂತೆ ಮೊದಲ ಪೆಟ್ಟು ಬಿದ್ದದ್ದು ಬೆಂಗಳೂರಿನ ಸೌಂದರ್ಯಕ್ಕೆ. ಇದನ್ನು ತಕ್ಷಣಕ್ಕೆ ಅರಿತುಕೊಂಡ ಚಿರಾಗ್‌ ತಾನು ಏನಾದರೂ ಮಾಡಬೇಕು ಎಂದುಕೊಂಡು ಅಗ್ಲಿ ಇಂಡಿಯಾ ಎನ್ನುವ ಸಂಸ್ಥೆ ಸೇರಿ ಆ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ಕೆ ಅಧಿಕೃತವಾಗಿ ಧುಮುಕಿದರು.

ಬಸ್‌ನಲ್ಲೆ ಗಿಡ ಬೆಳೆಸುವ ಬಿಎಂಟಿಸಿ ಚಾಲಕ,ನಿರ್ವಾಹಕ!

ತಾತನೇ ಸ್ಫೂರ್ತಿ

‘ನಮ್ಮ ತಾತ ಮಧ್ಯಪ್ರದೇಶದಲ್ಲಿ ಪರಿಸರ ಕಾಪಾಡುವ ನಿಟ್ಟಿನಲ್ಲಿ ಸಾಕಷ್ಟುಕೆಲಸ ಮಾಡಿದ್ದಾರೆ. ಅವರೇ ನನಗೆ ಮೊದಲ ಸ್ಫೂರ್ತಿ. ಅವರೊಂದಿಗೆ ಸೇರಿ ನಾನೂ ಒಂದಷ್ಟುಕೆಲಸ ಮಾಡುತ್ತಿದ್ದೆ. ನಾವಿರುವ ಜಾಗವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು ಎಂದು ನನ್ನ ತಾತನೇ ನನಗೆ ಮೊದಲು ಹೇಳಿಕೊಟ್ಟದ್ದು. ಉದ್ಯೋಗ ನಿಮಿತ್ತ ನಾನು ಬೆಂಗಳೂರಿಗೆ ಬಂದಿದ್ದರೂ ಹಣ ಸಂಪಾದನೆಯೇ ನನ್ನ ಮುಖ್ಯ ಉದ್ದೇಶವಾಗಬಾರದು, ನನಗೆ ಅನ್ನ ಕೊಡುತ್ತಿರುವ ಈ ಭೂಮಿಗೆ ನಾನು ಮರಳಿ ಏನಾದರೂ ಕೊಡಬೇಕು ಎಂದುಕೊಂಡೇ ಈ ರೀತಿಯ ಕಾರ್ಯಗಳನ್ನು ಮಾಡಲು ಶುರು ಮಾಡಿದೆ’ ಎನ್ನುವ ಚಿರಾಗ್‌ ತನ್ನ ಜೊತೆಗೆ ಸಹೋದ್ಯೋಗಿಗಳ ದೊಡ್ಡ ತಂಡವನ್ನೇ ಕಟ್ಟಿವೀಕೆಂಡ್‌ಗಳಲ್ಲಿ ಉದ್ಯಾನ, ರಸ್ತೆಗಳು, ಕೆರೆಗಳ ಸ್ವಚ್ಛತೆಗೆ ಮುಂದಾಗುತ್ತಾರೆ.

ಬೆಂಗಳೂರಿಗರ ಸಹಕಾರವೇ ಕಾರಣ

‘ನಾನು ಇಲ್ಲಿಗೆ ಬಂದು ಹನ್ನೊಂದು ವರ್ಷವಾಯಿತು. ಪ್ರಾರಂಭದಲ್ಲಿ ಚಿಕ್ಕ ಮಟ್ಟದಲ್ಲಿ ಶುರು ಮಾಡಿದ ನನ್ನ ಸೇವಾ ಕಾರ್ಯ ಇಂದು ಒಂದು ಸ್ವರೂಪ ಪಡೆದುಕೊಂಡಿದೆ. ಇದೆಲ್ಲಕ್ಕೂ ಬೆಂಗಳೂರಿಗರ ಸಹಕಾರ, ಸಹಾಯವೇ ಕಾರಣ. ನಾನು ಏನಾದರೂ ಮಾಡಬೇಕು ಎಂದು ಹೊರಟಾಗ ಸಹೋದ್ಯೋಗಿಗಳಿಂದ ಹಿಡಿದು ಇಲ್ಲಿನ ನಾಗರಿಕರೂ ಸಹಾಯಕ್ಕೆ ನಿಂತರು. ತಮ್ಮಿಂದ ಆಗುತ್ತಿದ್ದ ಸಹಾಯ ಮಾಡುತ್ತಿದ್ದರು. ಇದರಿಂದ ನಾನು ಮತ್ತಷ್ಟುಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಯಿತು. ನನ್ನ ಸಹೋದ್ಯೋಗಿಗಳು, ಕಂಪನಿಯ ಸಹಾಯದಿಂದ ಫಂಡ್‌ ಕಲೆಕ್ಟ್ ಮಾಡಿ ಸಂಗ್ರಹವಾದ ಹಣದಿಂದ ಬೆಂಗಳೂರಿನ ಹೊರ ಭಾಗದ ಹಳ್ಳಿಗಳು, ಮಾಲೂರಿನ ಸುತ್ತಮುತ್ತಲಿನ ಭಾಗಗಳಿಗೆ ತೆರಳಿ ಇದೇ ರೀತಿಯ ಕಾರ್ಯವನ್ನೂ ಮಾಡಿದ್ದೇವೆ’.

ಲಾಠಿಯನ್ನೇ ಕೊಳಲಾಗಿಸಿದ ಪೊಲೀಸ್‌ ಚಂದ್ರಕಾಂತ್‌!

‘ಸರ್ಜಾಪುರ, ಕೋರಮಂಗಲ, ನಗರದ ಪ್ರಮುಖ ರಸ್ತೆಗಳು, ಕೆರೆಗಳು, ಮೆಟ್ರೋ ಸ್ಟೇಷನ್‌ಗಳೇ ನಮ್ಮ ಕೆಲಸಗಳ ಕೇಂದ್ರವಾದರೂ ಇದನ್ನು ಬಿಟ್ಟು ಬೇರೆ ಏನೆಲ್ಲಾ ಮಾಡಲು ಸಾಧ್ಯವೋ ಅದನ್ನು ಮಾಡುತ್ತಿದ್ದೇವೆ. ಇಂದು ಕೆರೆಗಳು ಅತಿ ಹೆಚ್ಚು ಮಲಿನವಾಗುತ್ತಿವೆ. ರಾಸಾಯನಿಕ, ಇ-ತ್ಯಾಜ್ಯಗಳು ಕೆರೆಗಳನ್ನು ಸೇರುತ್ತಿವೆ. ಇದು ಮುಂದಿನ ದಿನಗಳಲ್ಲಿ ನೇರವಾಗಿಯೇ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪುಟ್ಟೇನಹಳ್ಳಿ, ಯಡಿಯೂರು ಸೇರಿದಂತೆ ವಿವಿಧ ಕೆರೆಗಳ ಬಳಿಗೆ ತೆರಳಿ ಅಲ್ಲಿನ ಸ್ಥಳೀಯರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ. ಯಾಕೆಂದರೆ ನಾವು ಒಂದಷ್ಟುಮಂದಿ ಎಲ್ಲಿಂದಲೋ ಬಂದವರು ಸೇರಿಕೊಂಡು ಇದನ್ನೆಲ್ಲಾ ಮಾಡುವುದು ಕಷ್ಟ. ಅದಕ್ಕೆ ಸ್ಥಳೀಯರ ಸಹಕಾರ ಮತ್ತು ಜಾಗೃತಿಯೇ ಪರಿಣಾಮಕಾರಿ ಮಂತ್ರ’ ಎನ್ನುವ ಚಿರಾಗ್‌ ಇಲ್ಲಿನವರನ್ನೂ ಒಟ್ಟಾಗಿ ಸೇರಿಕೊಂಡು ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ.

ದುಡ್ಡಿನಿಂದಲೇ ಎಲ್ಲವೂ ಆಗುವುದಿಲ್ಲ

‘ನಾನು ಕಾರ್ಪೊರೇಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಕೈ ತುಂಬಾ ಸಂಬಳವೂ ಬರುತ್ತದೆ. ಹಾಗಾಗಿ ದುಡ್ಡಿಗೆ ಏನೂ ಸಮಸ್ಯೆ ಇಲ್ಲ. ಆದರೆ ಈ ಕೆಲಸಗಳನ್ನೆಲ್ಲಾ ಮಾಡಲು ದುಡ್ಡೊಂದಿದ್ದರೆ ಸಾಲದು. ಅದಕ್ಕೂ ಮಿಗಿಲಾಗಿ ಬದ್ಧತೆ, ಇದು ನನ್ನ ನಗರ ಎನ್ನುವ ಅಭಿಮಾನ ಇರಬೇಕು. ಹಾಗಿದ್ದಾಗಲೇ ಕೆಲಸ ಪೂರ್ಣವಾಗುವುದು. ಹೆಚ್ಚಿನವರು ಆಧುನಿಕ ಜೀವನದಲ್ಲಿ ನಮ್ಮ ವೈಯಕ್ತಿಕ ಕೆಲಸಗಳಿಗೇ ಸಮಯ ಸಿಗುವುದಿಲ್ಲ, ನಾವು ಬ್ಯುಸಿ, ಬ್ಯುಸಿ ಎಂದು ಹೇಳುತ್ತಾರೆ. ಆದರೆ ಇಂದು ನಾವು ಪರಿಸರ ಸಂರಕ್ಷಣೆಗಾಗಿ ಒಂದಷ್ಟುಸಮಯ ಮೀಸಲಿಡದೇ ಇದ್ದರೆ ಮುಂದಿನ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯಬೇಕಾಗುತ್ತದೆ’ ಎನ್ನುತ್ತಾರೆ ಚಿರಾಗ್‌.

ಮುಂದಿನ ಬಾರಿ ಎಲ್ಲಾ ಐಪಿಎಲ್‌ ತಂಡಗಳೊಂದಿಗೆ ಒಪ್ಪಂದ

ಈ ವರ್ಷ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಬಳಸಿದ ಫ್ಲ್ಯಾಗ್‌ಗಳನ್ನು ಇಟ್ಟುಕೊಂಡು ಬ್ಯಾಗ್‌ ತಯಾರಿಸಿದ ರಾಮನ್‌ ಅಯ್ಯರ್‌ ಅವರಿಂದ ತಮ್ಮ ಸ್ವಂತ ಹಣ ಕೊಟ್ಟು ಬ್ಯಾಗ್‌ಗಳನ್ನು ಕೊಂಡುಕೊಂಡು ಬಡ ವ್ಯಾಪಾರಿಗಳಿಗೆ ಅವುಗಳನ್ನು ಉಚಿತವಾಗಿ ಹಂಚಿದ್ದರು ಚಿರಾಗ್‌. ಮುಂದಿನ ವರ್ಷ ದೇಶದ ಎಲ್ಲಾ ಕಡೆಗಳಲ್ಲೂ ನಡೆಯುವ ಐಪಿಎಲ್‌ ಪಂದ್ಯಗಳಲ್ಲಿ ಬಳಸಿದ ಫ್ಲ್ಯಾಗ್‌ಗಳನ್ನು ಸಂಗ್ರಹಿಸಿ, ಸ್ಥಳೀಯ ಮಹಿಳೆಯರಿಗೆ ಉದ್ಯೋಗ ದೊರಕಿಸುವ ಹಾಗೂ ಬಡ ವ್ಯಾಪಾರಿಗಳಿಗೆ ಹಂಚುವ ಯೋಜನೆ ಹಾಕಿಕೊಂಡಿದ್ದಾರೆ.

ಚಿಕ್ಕಮಗಳೂರು ತರೀಕೆರೆಯ ಮಂಗಳಮುಖಿಯರ ಕೃಷಿ ಸಾಹಸ!

‘ಪ್ರಾಮಾಣಿಕವಾಗಿ ನಾವು ಮುಂದೆ ಸಾಗುತ್ತಿದ್ದರೆ ನಮ್ಮಂತೆಯೇ ಪ್ರಾಮಾಣಿಕತೆ ಇರುವವರು ನಮ್ಮ ಜೊತೆ ಸೇರಿಕೊಳ್ಳುತ್ತಾರೆ. ನಾನು ಹನ್ನೊಂದು ವರ್ಷದ ಹಿಂದೆ ಈ ರೀತಿಯ ಪ್ರಯತ್ನಕ್ಕೆ ಇಳಿದಾಗ ಒಬ್ಬನೇ ಇದ್ದೆ. ಈಗ ನನ್ನೊಂದಿಗೆ ತುಂಬಾ ಮಂದಿ ಇದ್ದಾರೆ. ಅವರೆಲ್ಲರ ನಂಬಿಕೆ ಗಳಿಸಿದ್ದೇನೆ. ನಿಸ್ವಾರ್ಥದಿಂದ ನಾವು ಇರುವ ಜಾಗವನ್ನೇ ನಮ್ಮದು ಎಂದುಕೊಂಡು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಹೇಳುವ ಚಿರಾಗ್‌ ಅವರ ಕಾರ್ಯ ನಿಜಕ್ಕೂ ಅನುಕರಣೀಯ.

click me!