
ಮಕ್ಕಳಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ತಂದೆ-ತಾಯಿಗೆ ಪ್ರತಿಯಾಗಿ ಏನಾದರೂ ವಿಶೇಷವಾಗಿ ಕೊಡಬೇಕೆಂಬ ಆಸೆ ಪ್ರತಿಯೊಬ್ಬ ಮಕ್ಕಳಿಗೂ ಇರುತ್ತದೆ. ಅಂತಹ ಹೃದಯಸ್ಪರ್ಶಿ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತೆಲಂಗಾಣದ ನಂದಿನಿ ಕಾವೇರಿ ಎಂಬ ಯುವತಿ ತನ್ನ ತಂದೆಯ 50ನೇ ಹುಟ್ಟುಹಬ್ಬದ ಪ್ರಯುಕ್ತ ಅವರಿಗೆ ಹೊಸ ಬೈಕ್ ಉಡುಗೊರೆಯಾಗಿ ನೀಡಿದ್ದು, ಆ ಕ್ಷಣದ ವಿಡಿಯೋ ಲಕ್ಷಾಂತರ ಜನರ ಮನ ಮುಟ್ಟಿದೆ.
ತಂದೆಗೆ ಗೊತ್ತಾಗದಂತೆ ಹಲವು ವಾರಗಳ ಕಾಲ ಕುಟುಂಬದವರ ಸಹಾಯದಿಂದ ನಂದಿನಿ ಈ ಪ್ಲಾನ್ ಮಾಡಿದ್ದರು. ಹುಟ್ಟುಹಬ್ಬದ ದಿನ ಕುಟುಂಬದವರು ಮನೆಯ ಹೊರಗೆ ಕೆಂಪು ಬಟ್ಟೆಯಿಂದ ಮುಚ್ಚಿಟ್ಟಿದ್ದ ವಾಹನದ ಬಳಿ ತಂದೆಯನ್ನು ಕರೆದುಕೊಂಡು ಹೋದರು. ಕುತೂಹಲದಿಂದ ಬಟ್ಟೆ ತೆಗೆದ ಕ್ಷಣವೇ ಅವರ ಮುಂದೆ ಹೊಸ ಬೈಕ್ ಕಾಣಿಸಿಕೊಂಡಿತು. ಅದನ್ನು ನೋಡಿದ ತಂದೆ ಭಾವುಕರಾಗಿ ಕಣ್ಣೀರಿಟ್ಟರು. ಬಳಿಕ ಕುಟುಂಬದ ಪ್ರತಿಯೊಬ್ಬರನ್ನು ಅಪ್ಪಿಕೊಂಡು ತಮ್ಮ ಸಂತೋಷವನ್ನು ಹಂಚಿಕೊಂಡರು. ಆ ದೃಶ್ಯ ಅಲ್ಲಿದ್ದವರ ಕಣ್ಣಲ್ಲೂ ನೀರು ತರಿಸಿತು.
ವಿಡಿಯೋ ಜೊತೆಗೆ ನಂದಿನಿ ಬರೆದಿರುವ ಸಂದೇಶವೂ ನೆಟ್ಟಿಗರ ಮನ ಮುಟ್ಟಿದೆ. "ನನ್ನ ಅಪ್ಪ ನಮ್ಮ ಕುಟುಂಬಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ನಾನು ಇಂದು ಇರುವ ಸ್ಥಾನಕ್ಕೆ ಅವರು ಕಾರಣ. ಅವರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ. ಇದು ಅವರ ತ್ಯಾಗಕ್ಕೆ ಸಮನಾಗುವುದಿಲ್ಲ. ಆದರೆ ನನ್ನ ಕೃತಜ್ಞತೆಯ ಪುಟ್ಟ ಕಾಣಿಕೆ ಮಾತ್ರ." ಎಂದು ಅವರು ಬರೆದುಕೊಂಡಿದ್ದಾರೆ. ತಮ್ಮ ತಾಯಿ ಹಾಗೂ ಸಹೋದರ ಈ ಸರ್ಪ್ರೈಸ್ ಯಶಸ್ವಿಯಾಗಲು ನೆರವಾದದ್ದಕ್ಕೂ ಧನ್ಯವಾದ ತಿಳಿಸಿದ್ದಾರೆ.
ಲಕ್ಷಾಂತರ ಜನರ ಮನಗೆದ್ದ ವಿಡಿಯೋ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೊನೆಯ ಮಾಹಿತಿ ಪ್ರಕಾರ 1.25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಾರು ಮಂದಿ ಲೈಕ್ ಮಾಡಿ, ಹೃದಯಸ್ಪರ್ಶಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಒಬ್ಬ ಬಳಕೆದಾರ, "ತುಂಬಾ ಸಿಹಿಯಾದ ಕ್ಷಣ. ನಿಮಗಾಗಿ ನಿಜವಾಗಿಯೂ ಸಂತೋಷವಾಗಿದೆ" ಎಂದು ಬರೆದಿದ್ದಾರೆ.
ಇನ್ನೊಬ್ಬರು, "ನನ್ನ ಜೀವನದಲ್ಲೂ ಒಂದು ದಿನ ನನ್ನ ಪೋಷಕರಿಗಾಗಿ ಹೀಗೆ ಮಾಡಲು ನಾನು ಕಷ್ಟಪಟ್ಟು ದುಡಿಯುತ್ತಿದ್ದೇನೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬ ನೆಟ್ಟಿಗ, "ಅವರ ಕಣ್ಣೀರು ಈ ಉಡುಗೊರೆ ಹೃದಯದಿಂದ ಬಂದದ್ದು ಎಂಬುದನ್ನು ಹೇಳುತ್ತಿದೆ. ನಿಮ್ಮ ತಂದೆಗೆ ನನ್ನ ಕಡೆಯಿಂದಲೂ ತಡವಾದ ಹುಟ್ಟುಹಬ್ಬದ ಶುಭಾಶಯಗಳು" ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೋರ್ವ, "ಅಪ್ಪಂದಿರು ಎಷ್ಟೇ ವಯಸ್ಸಾದರೂ ಕುಟುಂಬಕ್ಕಾಗಿ ಕೊಡುವುದನ್ನೇ ಯೋಚಿಸುತ್ತಾರೆ. ನೀವು ಅವರಿಗೆ ನೀಡಿದ ಈ ಉಡುಗೊರೆ ನಿಜಕ್ಕೂ ಮನಮುಟ್ಟುವಂತಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ" ಎಂದು ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.