"ಇದು ನನ್ನ ಜೀವನದ ಶ್ರೇಷ್ಠ ನಿರ್ಧಾರ!" - ಚೆನ್ನೈನಿಂದ ಸಿಲಿಕಾನ್ ಸಿಟಿಗೆ ಶಿಫ್ಟ್ ಆದ ಉದ್ಯಮಿ ಹೇಳಿದ್ದೇನು?

Published : Oct 03, 2026, 10:16 AM IST
Why This Founder Moved His Startup From Chennai to Bengaluru

ಸಾರಾಂಶ

ಚೆನ್ನೈನಿಂದ ಬೆಂಗಳೂರಿಗೆ ತಮ್ಮ ಸ್ಟಾರ್ಟ್‌ಅಪ್‌ ಸ್ಥಳಾಂತರಿಸಿದ ಉದ್ಯಮಿ ಹರೀಶ್ ವರದರಾಜನ್, ಒಂದು ವರ್ಷದ ಬಳಿಕ ಈ ನಿರ್ಧಾರವನ್ನು ತಮ್ಮ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು ಎಂದು ಹೇಳಿದ್ದಾರೆ. ಬೆಂಗಳೂರಿನ ಹವಾಮಾನ, ಪ್ರೀಮಿಯಂ ಹಣ್ಣುಗಳ ಮಾರುಕಟ್ಟೆ, ಹೂಡಿಕೆದಾರರು ಮತ್ತು ಸ್ಟಾರ್ಟ್‌ಅಪ್‌ ಸಂಪರ್ಕಗಳು ತಮ್ಮ ಉದ್ಯಮಕ್ಕೆ ಹೇಗೆ ನೆರವಾದವು ಎಂಬುದನ್ನು ಹಂಚಿಕೊಂಡಿದ್ದಾರೆ.

ಚೆನ್ನೈ ಬಿಟ್ಟು ಬೆಂಗಳೂರಿಗೆ ಬಂದ ಫೌಂಡರ್; ಒಂದು ವರ್ಷದ ಬಳಿಕ ಏನಾಯ್ತು?

ಚೆನ್ನೈನಿಂದ ಬೆಂಗಳೂರಿಗೆ ತಮ್ಮ ಸ್ಟಾರ್ಟ್‌ಅಪ್‌ ಅನ್ನು ಸ್ಥಳಾಂತರಿಸಿದ ಉದ್ಯಮಿ ಹರೀಶ್ ವರದರಾಜನ್, ಈ ನಿರ್ಧಾರ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು ಎಂದು ಹೇಳಿದ್ದಾರೆ. ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು LinkedInನಲ್ಲಿ ಹಂಚಿಕೊಂಡ ಅನುಭವ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿಗೆ ಬಂದ ಬಳಿಕ ಏನೆಲ್ಲ ಬದಲಾಯಿತು?

ಹರೀಶ್ ಅವರ ಸ್ಟಾರ್ಟ್‌ಅಪ್ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ್ದು, ಪ್ರೀಮಿಯಂ ಹಣ್ಣುಗಳ ಮಾರುಕಟ್ಟೆ ಅವರ ವ್ಯವಹಾರಕ್ಕೆ ಪ್ರಮುಖವಾಗಿದೆ. ದಕ್ಷಿಣ ಭಾರತದ ನಗರಗಳ ಪೈಕಿ ಬೆಂಗಳೂರಿನಲ್ಲಿ ಪ್ರೀಮಿಯಂ ಹಣ್ಣುಗಳಿಗೆ ದೊಡ್ಡ ಮಾರುಕಟ್ಟೆ ಇರುವುದರಿಂದ ತಮ್ಮ ವ್ಯವಹಾರಕ್ಕೆ ಇದು ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲ, ಬೆಂಗಳೂರಿನ ಹವಾಮಾನದಿಂದ ಕೆಲವು ಕಾರ್ಯಾಚರಣಾ ವೆಚ್ಚಗಳನ್ನು ಕಡಿಮೆ ಮಾಡಲು ಸಾಧ್ಯವಾಗಿದೆ ಎಂಬುದು ಅವರ ಅನುಭವ. ಉದ್ಯಮದ ಬೆಳವಣಿಗೆಗೆ ಅಗತ್ಯವಿರುವ ಗ್ರಾಹಕರು, ಹೂಡಿಕೆದಾರರು ಮತ್ತು ಇತರ ಸ್ಟಾರ್ಟ್‌ಅಪ್ ಸಂಸ್ಥಾಪಕರ ಸಂಪರ್ಕವೂ ಸುಲಭವಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೂಡಿಕೆದಾರರ ಸಂಪರ್ಕವೂ ಸುಲಭವಾಯ್ತಾ?

ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಸಂಗ್ರಹಣೆ ಬಹುಮುಖ್ಯ. ಈ ವಿಚಾರದಲ್ಲೂ ಬೆಂಗಳೂರಿನ ಪರಿಸರ ತಮ್ಮ ಕಂಪನಿಗೆ ಸಹಾಯ ಮಾಡಿದೆ ಎಂದು ಹರೀಶ್ ಹೇಳಿದ್ದಾರೆ. ನಗರದಲ್ಲಿ ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು, ಏಂಜೆಲ್ ಇನ್ವೆಸ್ಟರ್‌ಗಳು ಮತ್ತು ಹಲವು ಸ್ಟಾರ್ಟ್‌ಅಪ್ ಸಂಸ್ಥಾಪಕರ ದೊಡ್ಡ ಜಾಲವಿರುವುದರಿಂದ ಹೂಡಿಕೆ ಕುರಿತ ಮಾತುಕತೆ ನಡೆಸುವುದು ಸುಲಭವಾಯಿತು ಎಂಬುದು ಅವರ ಅಭಿಪ್ರಾಯ.

ಗ್ರಾಹಕರನ್ನು ತಲುಪುವುದು ಮತ್ತು ಪ್ರತಿಭಾವಂತ ಉದ್ಯೋಗಿಗಳನ್ನು ಹುಡುಕುವುದರಲ್ಲೂ ಬೆಂಗಳೂರಿನ ಪರಿಸರ ಅನುಕೂಲಕರವಾಗಿದೆ ಎಂಬ ಅನುಭವವನ್ನು ಇತರ ಉದ್ಯಮಿಗಳೂ ಹಂಚಿಕೊಂಡಿದ್ದಾರೆ.

“ಬೆಂಗಳೂರಿನ ಹವಾಮಾನಕ್ಕೆ ಸರಿಸಾಟಿಯಿಲ್ಲ”

ಹರೀಶ್ ಕಳೆದ 10 ವರ್ಷಗಳಲ್ಲಿ ವಿಶ್ವದ ವಿವಿಧ ನಗರಗಳು ಸೇರಿದಂತೆ ಐದು ನಗರಗಳಲ್ಲಿ ವಾಸಿಸಿದ್ದಾಗಿ ಹೇಳಿದ್ದಾರೆ. ಆದರೆ ವರ್ಷಪೂರ್ತಿ ಹವಾಮಾನದ ವಿಚಾರದಲ್ಲಿ ಬೆಂಗಳೂರಿಗೆ ಸರಿಸಾಟಿಯಿಲ್ಲ ಎಂಬುದು ಅವರ ಅಭಿಪ್ರಾಯ.

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸಾಮಾನ್ಯವಾಗಿ ಕೇಳಿಬರುವ ಟೀಕೆಗಳ ನಡುವೆಯೂ, ತಮ್ಮ ತಂಡ ಕಳೆದ ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಗಂಟೆ ಟ್ರಾಫಿಕ್‌ನಲ್ಲಿ ಸಿಲುಕಿದ್ದು ಕೇವಲ ಎರಡು ಬಾರಿ ಎಂದು ಅವರು ಹೇಳಿದ್ದಾರೆ. ಮೆಟ್ರೋ, ಆಫ್-ಪೀಕ್ ಪ್ರಯಾಣ ಮತ್ತು ನಗರದ ಹೊರವಲಯದಲ್ಲಿ ವಾಸಿಸುವುದು ಇದಕ್ಕೆ ಕಾರಣ ಎಂದು ವಿವರಿಸಿದ್ದಾರೆ.

ಎಲ್ಲರಿಗೂ ಬೆಂಗಳೂರು ಒಂದೇ ಆಯ್ಕೆಯೇ?

ಹರೀಶ್ ಭಾರತದಲ್ಲಿ ಹೊಸ ಕಂಪನಿ ಆರಂಭಿಸುವವರು ಅಥವಾ ವಿದೇಶದಿಂದ ಮರಳಿ ಬಂದು ಉದ್ಯಮ ಆರಂಭಿಸುವವರು ಬೆಂಗಳೂರನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಇದೇ ಅಭಿಪ್ರಾಯ ಹೊಂದಿಲ್ಲ.

ಕೆಲವರು ಬೆಂಗಳೂರಿನ ಸ್ಟಾರ್ಟ್‌ಅಪ್ ಮತ್ತು ಹೂಡಿಕೆ ಪರಿಸರವನ್ನು ಶ್ಲಾಘಿಸಿದರೆ, ಕೃಷಿ ಮತ್ತು ಆಹಾರ ಕ್ಷೇತ್ರದ ಉದ್ಯಮಗಳಿಗೆ ನಾಶಿಕ್‌ನಂತಹ ನಗರಗಳೂ ಉತ್ತಮ ಅವಕಾಶಗಳನ್ನು ನೀಡುತ್ತವೆ ಎಂದು ಮತ್ತೊಬ್ಬ ಉದ್ಯಮಿ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಒಬ್ಬ ಉದ್ಯಮಿಗೆ ಸೂಕ್ತವಾದ ನಗರ ಮತ್ತೊಬ್ಬರಿಗೆ ಅದೇ ರೀತಿ ಇರಬೇಕೆಂದಿಲ್ಲ ಎಂಬ ಚರ್ಚೆಯೂ ನಡೆದಿದೆ.

PREV
Read more Articles on
click me!

Recommended Stories

2027ರಲ್ಲಿ ಉದ್ಯೋಗಿಗಳಿಗೆ ಶಾಕ್! ವೀಕೆಂಡ್‌ನಲ್ಲೇ ಹಲವು ಪ್ರಮುಖ ಹಬ್ಬಗಳು, ಲಾಂಗ್ ವೀಕೆಂಡ್‌ಗೆ ಕತ್ತರಿ?
ಯುದ್ಧಪೀಡಿತ ಪ್ರದೇಶದಂತಿರುವ ಇಂದಿರಾ ನಗರ ಪುಟ್‌ಪಾತ್! ವಿದೇಶಿಗನ ವಿಡಿಯೋ ವೈರಲ್