
ಪ್ರಕೃತಿ ವಿಕೋಪಗಳು ಬಂದಾಗ ಸಾವು-ನೋವು, ಆಸ್ತಿಪಾಸ್ತಿ ನಷ್ಟ ಸಾಮಾನ್ಯ. ಆದರೆ ಚೀನಾದ ಗ್ವಾಂಗ್ಸಿ ಜುವಾಂಗ್ (Guangxi Zhuang) ಸ್ವಾಯತ್ತ ಪ್ರದೇಶದ ಹೆಂಗ್‌ಝೌ ನಗರದ ಜನರು ಈಗ ಅನುಭವಿಸುತ್ತಿರುವ ಸಂಕಷ್ಟ ಮಾತ್ರ ಮೈನಡುಗಿಸುವಂತಿದೆ. ಮೈಸಾಕ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಈ ನಗರ ಜಲಾವೃತವಾಗಿದ್ದರೆ, ಅದರ ಬೆನ್ನಲ್ಲೇ 900ಕ್ಕೂ ಅಧಿಕ ವಿಷಕಾರಿ ಹಾವುಗಳು ನಗರದ ಬೀದಿಗಳಿಗೆ ಲಗ್ಗೆ ಇಟ್ಟಿವೆ.
ದಕ್ಷಿಣ ಚೀನಾದಲ್ಲಿ 'ಮೈಸಾಕ್' ಚಂಡಮಾರುತ ಕೇವಲ ಪ್ರವಾಹವನ್ನಷ್ಟೇ ತಂದಿಲ್ಲ, ಅದರ ಜೊತೆಗೆ ನೂರಾರು ವಿಷಕಾರಿ ಹಾವುಗಳನ್ನೂ ನಗರದೊಳಗೆ ತಂದು ಹಾಕಿದೆ. ಹಾವು ಸಾಕಾಣಿಕೆ ಕೇಂದ್ರದಿಂದ ತಪ್ಪಿಸಿಕೊಂಡ 900ಕ್ಕೂ ಹೆಚ್ಚು ಹಾವುಗಳು ಈಗ ಜನರ ನಿದ್ದೆಗೆಡಿಸಿವೆ.
ವರದಿಗಳ ಪ್ರಕಾರ, ಹೆಂಗ್‌ಝೌ ನಗರದಲ್ಲಿದ್ದ ಬೃಹತ್ ಹಾವು ಸಾಕಾಣಿಕೆ ಕೇಂದ್ರವೊಂದು (Snake Farm) ಚಂಡಮಾರುತದಿಂದ ಉಂಟಾದ ಭಾರಿ ಮಳೆಗೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಳೆ ನೀರಿನ ರಭಸಕ್ಕೆ ಫಾರ್ಮ್‌ನ ಹಾವು ಸಾಕಣೆಯ ಬುಟ್ಟಿಗಳು ತೇಲಿಕೊಂಡು ಹೋಗಿದ್ದು, ಅದರೊಳಗೆ ಕೂಡಿಹಾಕಲಾಗಿದ್ದ ಸುಮಾರು 800 ರಿಂದ 900 ವಿಷಕಾರಿ ಹಾವುಗಳು ನೀರಿಗೆ ಬಿದ್ದಿವೆ. ಅಲ್ಲಿಂದ ತಪ್ಪಿಸಿಕೊಂಡು ನಗರದ ವಿವಿಧ ಭಾಗಗಳಿಗೆ ಹರಡಿಕೊಂಡಿವೆ.
ಈ ತಪ್ಪಿಸಿಕೊಂಡ ಹಾವುಗಳಲ್ಲಿ ಸಾಮಾನ್ಯ ಹಾವುಗಳಿಲ್ಲ. ಬದಲಿಗೆ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಎಂದು ಪರಿಗಣಿಸಲಾದ ಕಾಳಿಂಗ ಸರ್ಪ (King Cobra), ನಾಗರಹಾವು (Cobra) ಮತ್ತು ಮಂಡಲದ ಹಾವುಗಳು (Viper) ಸೇರಿವೆ. ನಗರದ ರಸ್ತೆಗಳಲ್ಲಿ, ಗದ್ದೆಗಳಲ್ಲಿ, ಮನೆ ಮುಂದಿನ ವರಾಂಡ, ಹಂಚು, ಕಸಪೊರಕೆ ಮತ್ತು ಪ್ರವಾಹದ ನೀರಿನಲ್ಲಿ ಈ ಹಾವುಗಳು ಗುಂಪುಗುಂಪಾಗಿ ಈಜುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರ ಎದೆಝಲ್ಲೆನಿಸುವಂತಿವೆ.
ಸದ್ಯ ಸ್ಥಳೀಯ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಹಾವನ್ನು ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಹಲವು ಹಾವುಗಳನ್ನು ಸೆರೆಹಿಡಿಯಲಾಗಿದ್ದರೂ, ಇನ್ನೂ ನೂರಾರು ಹಾವುಗಳು ಎಲ್ಲಿ ಅಡಗಿವೆಯೋ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಪ್ರವಾಹದ ನೀರಿನಲ್ಲಿ ಹಾವುಗಳು ಅಡಗಿರುವುದರಿಂದ ಜನರಿಗೆ ಅವುಗಳನ್ನು ಗುರುತಿಸುವುದು ಕಷ್ಟವಾಗಿದೆ. ಈಗಾಗಲೇ ಒಬ್ಬ ವ್ಯಕ್ತಿಗೆ ಹಾವಿನ ಕಚ್ಚಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಲಿಯುಲಾನ್ ಮತ್ತು ಯುನ್‌ಬಿಯಾವೊ ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಪ್ರವಾಹ ಪೀಡಿತ ಪ್ರದೇಶದ ಜನರು ಮನೆಯಿಂದ ಹೊರಬರದಂತೆ ಮತ್ತು ಸುರಕ್ಷಿತವಾಗಿರುವಂತೆ ಸರ್ಕಾರ ಮನವಿ ಮಾಡಿದೆ. ಚಂಡಮಾರುತದ ಅಬ್ಬರ ಕಡಿಮೆಯಾದರೂ, ಈ 'ಸರ್ಪ ದೋಷ' ಮಾತ್ರ ನಗರವನ್ನು ಬೆಂಬಿಡದೆ ಕಾಡುತ್ತಿದೆ.