ಕೇವಲ ₹10ಕ್ಕೆ ಹೊಟ್ಟೆತುಂಬ ಊಟ: ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡುವ ಕಂಪನಿ ವೀಡಿಯೋ ವೈರಲ್!

Published : Jul 31, 2026, 08:57 PM IST
10 RS Lunch

ಸಾರಾಂಶ

ಸೆಕ್ಯೂರಿಟಿ ಗಾರ್ಡ್ ಒಬ್ಬರು ತಮ್ಮ ಕಂಪನಿ ಕೇವಲ ₹10ಕ್ಕೆ ನೀಡುವ ಭರ್ಜರಿ ಊಟದ ವೀಡಿಯೋವನ್ನು ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಅನ್ನ, ಸಾರು, ಪಲ್ಯಗಳನ್ನೊಳಗೊಂಡ ಈ ಊಟಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಕೆಲವರು ಪ್ಲಾಸ್ಟಿಕ್ ಪ್ಯಾಕಿಂಗ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಜು.31): ಇಂದಿನ ದುಬಾರಿ ದುನಿಯಾದಲ್ಲಿ ಒಂದು ಹೊತ್ತಿನ ಸಾಮಾನ್ಯ ಊಟಕ್ಕೂ ಹೊರಗಡೆ ಕನಿಷ್ಠ 100 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣ ತೆರಬೇಕಾದ ಪರಿಸ್ಥಿತಿಯಿದೆ. ಆದರೆ ಸೆಕ್ಯೂರಿಟಿ ಗಾರ್ಡ್‌ ಒಬ್ಬರು ತಮಗೆ ಕೆಲಸ ಮಾಡುವ ಕಂಪನಿಯು ಕೇವಲ ₹10 ಕ್ಕೆ ನೀಡುತ್ತಿರುವ ಭರ್ಜರಿ ಊಟದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟ್ ನೆಟ್ಟಿಗರ ತೀವ್ರ ಗಮನ ಸೆಳೆದಿದೆ.

ಅನಂದ್ ಕುಮಾರ್ ಎಂಬ ಸೋಷಿಯಲ್ ಮೀಡಿಯಾ ಯೂಸರ್‌ ಹಾಗೂ ಸೆಕ್ಯೂರಿಟಿ ಗಾರ್ಡ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾವು ಕೆಲಸ ಮಾಡುವ ಸ್ಥಳದಲ್ಲಿ ನೀಡಲಾಗುವ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ಡಿಯೋಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು "ಕಂಪನಿಯ ಊಟ ಕೇವಲ 10 ರೂಪಾಯಿಗೆ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.

₹10 ರ ಪ್ಲೇಟ್‌ನಲ್ಲಿ ಏನೇನಿತ್ತು?

ವೈರಲ್ ವೀಡಿಯೋದಲ್ಲಿ ಮಾತನಾಡುವ ಕುಮಾರ್, "ಸ್ನೇಹಿತರೇ, ನಮ್ಮ ಕಂಪನಿಯ ಊಟ ಬಂದಿದೆ. ನಮ್ಮ ಕಂಪನಿ ಇದಕ್ಕೆ ಕೇವಲ 10 ರೂಪಾಯಿ ಮಾತ್ರ ತೆಗೆದುಕೊಳ್ಳುತ್ತದೆ. ಈಗ ಊಟದ ಸಮಯ, ಇವತ್ತು ಕಂಪನಿಯವರು ಏನು ಕಳುಹಿಸಿದ್ದಾರೆ ನೋಡೋಣ ಬನ್ನಿ" ಎಂದು ಊಟದ ಪ್ಯಾಕೆಟ್ ಬಿಚ್ಚುತ್ತಾರೆ. ಆ ಪ್ಯಾಕೆಟ್‌ನಲ್ಲಿ ಹಪ್ಪಳ, ಹಾಗಲಕಾಯಿ ಫ್ರೈ, ಸೋಯಾಬೀನ್ ಪಲ್ಯ, ಅನ್ನ, ಬಿಸಿ ಬಿಸಿ ಬೇಳೆ ಸಾರುಹಾಗೂ ಈರುಳ್ಳಿ ತುಂಡುಗಳಿದ್ದವು. ಇಷ್ಟು ಪರಿಪೂರ್ಣ ಹಾಗೂ ಹೊಟ್ಟೆತುಂಬುವ ಊಟ ಕೇವಲ 10 ರೂಪಾಯಿಗೆ ಸಿಗುತ್ತಿರುವುದನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ತಮ್ಮ ಕಂಪನಿಗೆ ಧನ್ಯವಾದ ಅರ್ಪಿಸಿದ ಕುಮಾರ್, "ಇದೇ ಊಟವನ್ನು ಹೊರಗಡೆ ತಿನ್ನಬೇಕೆಂದರೆ ಕನಿಷ್ಠ 50 ರಿಂದ 100 ರೂಪಾಯಿ ಖರ್ಚಾಗುತ್ತದೆ. ಆದರೆ ಇಲ್ಲಿ ನಮಗೆ ಕೇವಲ 10 ರೂಪಾಯಿಗೆ ಸಿಗುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ಪ್ಯಾಕಿಂಗ್‌ಗೆ ಕಳವಳ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಈ ವೀಡಿಯೋ ಕ್ಷಣಾರ್ಧದಲ್ಲೇ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಅನೇಕ ಯೂಸರ್‌ಗಳು ಕನಿಷ್ಠ ದರದಲ್ಲಿ ಇಂತಹ ಪೌಷ್ಟಿಕ ಆಹಾರ ಒದಗಿಸುತ್ತಿರುವ ಕಂಪನಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹೋಟೆಲ್ ಅಥವಾ ರಸ್ತೆಬದಿಯ ಡಾಬಾಗಳಿಗೆ ಹೋಲಿಸಿದರೆ ಇದು ನಿಜಕ್ಕೂ ಶ್ರೇಷ್ಠ ಕೆಲಸ ಎಂದು ಬಣ್ಣಿಸಿದ್ದಾರೆ.

ಆದರೆ, ಅದೇ ಸಮಯದಲ್ಲಿ ಊಟವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿರುವುದಕ್ಕೆ ಅನೇಕ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಚೀಲಗಳ ಬದಲಿಗೆ ಮರುಬಳಕೆ ಮಾಡಬಹುದಾದ ಟಿಫಿನ್ ಬಾಕ್ಸ್ ಅಥವಾ ಫುಡ್-ಗ್ರೇಡ್ ಕಂಟೇನರ್‌ಗಳನ್ನು ಬಳಸುವಂತೆ ಕಂಪನಿಗೆ ಸಲಹೆ ನೀಡಿದ್ದಾರೆ.'ಪ್ಲಾಸ್ಟಿಕ್ ಕವರ್‌ನಲ್ಲಿ ಬಿಸಿ ಆಹಾರ ನೀಡುವುದನ್ನು ನಿಲ್ಲಿಸಲು ಕಂಪನಿಗೆ ತಿಳಿಸಿ, ಇದು ಆರೋಗ್ಯ ಸಮಸ್ಯೆ ತರುತ್ತದೆ' ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಪ್ಲಾಸ್ಟಿಕ್ ಬ್ಯಾಗ್ ಬದಲು ಟಿಫಿನ್ ಬಾಕ್ಸ್ ಬಳಸಿ" ಎಂದು ಕೋರಿದ್ದಾರೆ. ನೆಟ್ಟಿಗರ ಈ ಕಮೆಂಟ್‌ಗೆ ಉತ್ತರಿಸಿದ ಕುಮಾರ್, ಈ ವಿಷಯವನ್ನು ತಮ್ಮ ಕಂಪನಿಯ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಕಂಪನಿಯ ದಯಾಗುಣಕ್ಕೆ ಸಲಾಂ ಅಂದ ನೆಟ್ಟಿಗರು

ಪ್ಲಾಸ್ಟಿಕ್ ಪ್ಯಾಕಿಂಗ್ ಬಗ್ಗೆ ಅಪಸ್ವರಗಳಿದ್ದರೂ, ಹೆಚ್ಚಿನ ಜನರು ಕಂಪನಿಯ ಈ ಮಾನವೀಯ ಕಾರ್ಯವನ್ನು ಬೆಂಬಲಿಸಿದ್ದಾರೆ. ಒಬ್ಬ ಯೂಸರ್‌, "ಆ ಕಂಪನಿಗೆ ನನ್ನದೊಂದು ಸಲ್ಯೂಟ್. ಕೇವಲ ₹10 ಕ್ಕೆ ಹೊಟ್ಟೆ ತುಂಬಿಸುತ್ತಿದ್ದಾರೆ, ಅವರಿಗೆ ನನ್ನ ಗೌರವಗಳು. ಪ್ರತಿಯೊಂದು ಸಣ್ಣ ವಿಷಯಕ್ಕೂ ನೆಗೆಟಿವ್ ಆಗಿ ಮಾತನಾಡುವುದನ್ನು ಬಿಟ್ಟು ಇಂತಹ ಕೆಲಸಗಳನ್ನು ಗೌರವಿಸುವುದನ್ನು ಕಲಿಯಿರಿ" ಎಂದು ಬರೆದುಕೊಂಡಿದ್ದಾರೆ.

ಇನ್ನು ಕೆಲ ಯೂಸರ್‌ ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದು, "ಅದು ಯಾವ ಕಂಪನಿ? ಸಿಎಸ್‌ಇ (CSE) ಗ್ರಾಜುಯೇಟ್‌ಗಳಿಗೆ ಅಲ್ಲಿ ಕೆಲಸ ಸಿಗುತ್ತಾ?", "ಅಣ್ಣಾ, ನನಗೂ ಅದೇ ಕಂಪನಿಯಲ್ಲಿ ಒಂದು ಕೆಲಸ ಕೊಡಿಸಪ್ಪಾ" ಎಂದು ತಮಾಷೆ ಮಾಡಿದ್ದಾರೆ. ಇಂದಿನ ಕಾಲದಲ್ಲಿ ₹10 ಕ್ಕೆ ಪೂರ್ಣ ಪ್ರಮಾಣದ ಊಟ ಸಿಗುವುದು ಪವಾಡವೇ ಸರಿ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

PREV
Read more Articles on
click me!

Recommended Stories

Crime: ಪ್ರೇಮದಾಹಕ್ಕೆ ಬಲಿಯಾದ ಪತಿ; 12 ಅಡಿ ಆಳದಲ್ಲಿ ಹೂತ ಹೆಂಡತಿಯ ಪಾಪದ ಗುಟ್ಟು ರಟ್ಟಾಗಿದ್ದು ಹೇಗೆ?
ಭಾರೀ ಅನಾಹುತ, ನಟಿ ರಶ್ಮಿಕಾ ಮಂದಣ್ಣಗೆ ಬಲವಾದ ಏಟು; ಇನ್ನೆಷ್ಟು ದಿನ ಮನೆಯಲ್ಲೇ ಇರ್ಬೇಕು ಗೊತ್ತಾ?