ಬಿರಿಯಾನಿಗಾಗಿ ಫ್ಲೈಟ್ ಮಿಸ್ ಮಾಡ್ಕೊಂಡಿದ್ದ ಜಪಾನ್ ವ್ಯಕ್ತಿ; ಇಂದು ಟೋಕಿಯೋದಲ್ಲಿ ಬಿರಿಯಾನಿ ಕಿಂಗ್!

Published : Sep 09, 2026, 08:46 PM IST
japanese chef biryani story

ಸಾರಾಂಶ

ಜೀವನದಲ್ಲಿ ಯಾವ ಕ್ಷಣದಲ್ಲಿ ಟರ್ನಿಂಗ್ ಪಾಯಿಂಟ್ ಸಿಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಜಪಾನ್‌ನ ಜೈವಿಕ ಇಂಧನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಕಾಮಾಸಾ ಒಸಾವಾ ಎಂಬ ಯುವಕನ ಬದುಕಿನಲ್ಲೂ ಇಂಥದ್ದೇ ಒಂದು ನಂಬಲಾಗದ ತಿರುವು ಸಿಕ್ಕಿತು.

ಜೀವನದಲ್ಲಿ ಯಾವ ಕ್ಷಣದಲ್ಲಿ ಟರ್ನಿಂಗ್ ಪಾಯಿಂಟ್ ಸಿಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಜಪಾನ್‌ನ ಜೈವಿಕ ಇಂಧನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಕಾಮಾಸಾ ಒಸಾವಾ (Takamasa Osawa) ಎಂಬ ಯುವಕನ ಬದುಕಿನಲ್ಲೂ ಇಂಥದ್ದೇ ಒಂದು ನಂಬಲಾಗದ ತಿರುವು ಸಿಕ್ಕಿತು. ಇಂದು ಆತ ಜಪಾನ್‌ನ ರಾಜಧಾನಿ ಟೋಕಿಯೋದಲ್ಲಿ ಭಾರತೀಯ ಘಮಘಮಿಸುವ ಬಿರಿಯಾನಿ ಮೂಲಕ ಎಲ್ಲರ ಮನಗೆದ್ದಿದ್ದಾನೆ. ಇಷ್ಟಕ್ಕೂ ಆತ ಭಾರತೀಯ ಬಿರಿಯಾನಿ ಪ್ರೇಮಿಯಾಗಿದ್ದು ಹೇಗೆ? ಬಿರಿಯಾನಿಗಾಗಿ ಫ್ಲೈಟ್ ಮಿಸ್ ಮಾಡಿಕೊಂಡ ಆ ಕ್ರೇಜಿ ಕಥೆ ಇಲ್ಲಿದೆ!

ಬಿರಿಯಾನಿ ಲವ್ ಸ್ಟೋರಿ

2009ರಲ್ಲಿ ತಕಾಮಾಸಾ ಒಸಾವಾ ರಜೆಯ ಮಜಾ ಕಳೆಯಲು ಭಾರತದ ತಮಿಳುನಾಡಿನ ಕೊಯಮತ್ತೂರಿಗೆ ಬಂದಿದ್ದರು. ಬಾಲ್ಯದಿಂದಲೂ ಅನ್ನದ ಊಟವನ್ನು ವಿಪರೀತ ಇಷ್ಟಪಡುತ್ತಿದ್ದ ಒಸಾವಾ, ಭಾರತಕ್ಕೆ ಬಂದಾಗ ಮೊದಲ ಬಾರಿಗೆ ಬಿರಿಯಾನಿ ಸವಿದರು. ಆ ಮಸಾಲೆಗಳ ಘಮಲು, ಬಾಸುಮತಿ ಅಕ್ಕಿಯ ಸುವಾಸನೆ ಮತ್ತು ಆ ಅದ್ಭುತ ರುಚಿ ಅವರ ಮನಸ್ಸನ್ನು ಸಂಪೂರ್ಣವಾಗಿ ಸೂರೆಗೊಂಡಿತು. ಆ ಒಂದು ಕ್ಷಣದಿಂದ ಆರಂಭವಾದ ಬಿರಿಯಾನಿ ಪ್ರೀತಿ ಭಾರತದ ಯಾವುದೇ ಮೂಲೆಗೆ ಹೋದರೂ ಬಿರಿಯಾನಿ ಹುಡುಕಿ ತಿನ್ನುವಂತೆ ಮಾಡಿತು.

ಬಿರಿಯಾನಿ ತಿನ್ನುವ ಭರದಲ್ಲಿ ಫ್ಲೈಟ್‌ ಮಿಸ್!

ಒಸಾವಾಗೆ ಬಿರಿಯಾನಿ ಮೇಲಿದ್ದ ಕ್ರೇಜ್ ಎಷ್ಟಿತ್ತೆಂದರೆ.. ಒಮ್ಮೆ ದೆಹಲಿಯ ಲೋಕಲ್ ಹೋಟೆಲ್‌ ಒಂದರಲ್ಲಿ ಬಿರಿಯಾನಿ ಸವಿಯುತ್ತಾ ಕುಳಿತಿದ್ದರು. ಆ ರುಚಿಯಲ್ಲಿ ಎಷ್ಟು ಮುಳುಗಿಹೋದರೆಂದರೆ, ಸುತ್ತಮುತ್ತಲಿನ ಪ್ರಪಂಚವೇ ಅವರಿಗೆ ಮರೆತುಹೋಯಿತು. ಸಮಯ ಕಳೆದದ್ದೇ ಗೊತ್ತಾಗದೆ ಕೊನೆಗೆ ತಾವು ಹತ್ತಬೇಕಿದ್ದ ವಿಮಾನವನ್ನೇ (Flight) ಮಿಸ್ ಮಾಡಿಕೊಂಡಿದ್ದರು! ಈ ಹುಚ್ಚು ಪ್ರೀತಿಯೇ ಅವರನ್ನು ಭಾರತದ ಮೂಲೆ ಮೂಲೆಗೂ ಪ್ರಯಾಣಿಸಿ, ಬಿರಿಯಾನಿಯ ರಹಸ್ಯಗಳನ್ನು ಕಲಿಯುವಂತೆ ಮಾಡಿತು. ಹೈದರಾಬಾದ್, ಲಕ್ನೋ, ಕೋಲ್ಕತ್ತಾ, ದೆಹಲಿ ಮಾತ್ರವಲ್ಲದೆ ಲಾಹೋರ್‌ ಶೈಲಿಯ ಬಿರಿಯಾನಿ ರುಚಿಗಳನ್ನು ಖುದ್ದು ಕಲಿತರು.

2021ರಲ್ಲಿ ಟೋಕಿಯೋಗೆ ಮರಳಿದ ಒಸಾವಾ, ಅಲ್ಲಿ ಕೇವಲ 10 ಸೀಟುಗಳಿರುವ ‘ಬಿರಿಯಾನಿ ಒಸಾವಾ’ ಎಂಬ ಪುಟ್ಟ ರೆಸ್ಟೋರೆಂಟ್ ಆರಂಭಿಸಿದರು. ಜಪಾನ್‌ನಲ್ಲಿ ‘ದೋ’ (Do) ಎಂಬ ಶತಮಾನಗಳ ಹಳೆಯ ಸಂಪ್ರದಾಯವಿದೆ. ಅಂದರೆ ಜೀವನದಲ್ಲಿ ಯಾವುದಾದರೂ ಒಂದೇ ಒಂದು ಕಲೆಯನ್ನು (ಅದು ಟೀ ಸಮಾರಂಭವಿರಲಿ, ಹೂವಿನ ಅಲಂಕಾರವಿರಲಿ ಅಥವಾ ಸುಶಿ ಅಡುಗೆಯಿರಲಿ) ಆಯ್ದುಕೊಂಡು, ಇಡೀ ಜೀವಮಾನ ಪೂರ್ತಿ ಅದೇ ಕೆಲಸದಲ್ಲಿ ಪರಿಪೂರ್ಣತೆ (Perfection) ಸಾಧಿಸುವುದು. ಒಸಾವಾ ಕೂಡ ಅದೇ ಹಾದಿ ತುಳಿದರು. ದೊಡ್ಡ ದೊಡ್ಡ ಬಾಣಸಿಗರಿಗಿಂತ, ಬೀದಿಬದಿಯಲ್ಲಿ ನಿಷ್ಠೆಯಿಂದ ಬಿರಿಯಾನಿ ಬೇಯಿಸುವ ಸಾಮಾನ್ಯ ಅಡುಗೆಯವರೇ ನನ್ನ ನಿಜವಾದ ಗುರುಗಳು. ನಿನ್ನೆಗಿಂತ ಇಂದು ನನ್ನ ಬಿರಿಯಾನಿ ಹೇಗೆ ಇನ್ನಷ್ಟು ರುಚಿಯಾಗಿರಬೇಕು ಎಂದು ಯೋಚಿಸುವುದೇ ನನ್ನ ಕಾಯಕ ಎನ್ನುತ್ತಾರೆ ಒಸಾವಾ.

ಭಾರತೀಯರ ಅಗ್ನಿಪರೀಕ್ಷೆ!

ಜಪಾನ್‌ನಲ್ಲಿ ಮೊದಲ ಬಾರಿಗೆ ಬಿರಿಯಾನಿ ಪರಿಚಯಿಸಿದಾಗ ಜನರಿಗೆ ವಿಚಿತ್ರ ಎನಿಸಿತ್ತು. ಫ್ರೈಡ್ ರೈಸ್‌ಗೂ ಇದಕ್ಕೂ ಏನು ವ್ಯತ್ಯಾಸ? ರೈಸ್ ಕೊಟ್ಟಿದ್ದೀರಿ, ಜೊತೆಗೆ ಕರ್ರಿ (ಸಾಂಬಾರ್) ಎಲ್ಲಿ? ಎಂದೆಲ್ಲಾ ಜನರು ಕೇಳುತ್ತಿದ್ದರಂತೆ. ಒಸಾವಾಗೆ ನಿಜವಾದ ಸವಾಲು ಎದುರಾಗಿದ್ದು ತಮ್ಮ ರೆಸ್ಟೋರೆಂಟ್‌ಗೆ ಬರುವ ಭಾರತೀಯ ಗ್ರಾಹಕರಿಂದ! ಭಾರತೀಯರಿಗೆ ಬಿರಿಯಾನಿ ಕೇವಲ ಊಟವಲ್ಲ, ಅದೊಂದು ಎಮೋಷನ್. ಅವರಿಗೆ ಅಸಲಿ ರುಚಿ ಚೆನ್ನಾಗಿ ಗೊತ್ತು. ಹೀಗಾಗಿ ಭಾರತೀಯರಿಗೆ ಬಡಿಸುವುದು ನನಗೆ ನಿತ್ಯದ ಅಗ್ನಿಪರೀಕ್ಷೆ ಎನ್ನುತ್ತಾರೆ ಅವರು. ಒಂದು ವೇಳೆ ಯಾರಾದರೂ ಭಾರತೀಯ ಗ್ರಾಹಕರು ಬಿರಿಯಾನಿಯನ್ನು ಅರ್ಧಕ್ಕೆ ಬಿಟ್ಟರೆ ಅವರು ಬೇಸರಗೊಳ್ಳುವುದಿಲ್ಲ. ಬದಲಾಗಿ, ನನ್ನ ತಯಾರಿಕೆಯಲ್ಲಿ ಎಲ್ಲಿ ತಪ್ಪಾಯಿತು? ಮುಂದಿನ ಬಾರಿ ಇದನ್ನು ಹೇಗೆ ಸುಧಾರಿಸಬೇಕು? ಎಂದು ವಿಮರ್ಶೆ ಮಾಡಿಕೊಂಡು ರೆಸಿಪಿಯನ್ನು ಮತ್ತಷ್ಟು ಬೆಸ್ಟ್ ಮಾಡಿಕೊಳ್ಳುತ್ತಾರೆ.

ಹೈದರಾಬಾದಿ ದಮ್ ಬಿರಿಯಾನಿಯ ಪಕ್ವತೆ, ಕೋಲ್ಕತ್ತಾದ ಸುವಾಸಿತ ಮಸಾಲೆ, ಬಾಸುಮತಿ ಅಕ್ಕಿ ಬೇಯಿಸುವ ಜಾದೂ, ಮಾಂಸವನ್ನು ಹೂವಿನಂತೆ ಮೃದುವಾಗಿಸುವ ಬಲೂಚಿಸ್ತಾನಿ ಪದ್ಧತಿ ಮತ್ತು ತಮಿಳುನಾಡು ಸ್ಟೈಲ್ ರುಚಿ—ಇವೆಲ್ಲವನ್ನೂ ಬೆರೆಸಿ ಒಸಾವಾ ತಮ್ಮದೇ ಆದ ಸ್ಪೆಷಲ್ ಬಿರಿಯಾನಿ ತಯಾರಿಸುತ್ತಾರೆ. ಬೇರೆ ದೇಶದಲ್ಲಿ ಹುಟ್ಟಿ, ಭಾರತೀಯ ಪಾಕಪದ್ಧತಿಯ ಆಳವನ್ನು ಅರಿತು, ನಿಷ್ಠೆ ಮತ್ತು ಶ್ರಮದಿಂದ ಜಪಾನ್‌ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಒಸಾವಾ ಅವರ ಈ ಯಶೋಗಾಥೆ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕ!

PREV
Read more Articles on
click me!

Recommended Stories

"ಕೆಲಸ ಹೋದ ಮೇಲೆ ಬದಲಾಯ್ತು ಹೆಂಡತಿಯ ವರಸೆ! ಊಟ ಹಾಕ್ತಿಲ್ಲ, ಬೈಗುಳ ತಾಳಲಾರದೆ ಕಣ್ಣೀರಿಡುತ್ತಿದ್ದಾನೆ ಈ ಪತಿ..."
ಅತ್ತಿಗೆ ಸಾನಿಯಾ ಜತೆ ಟ್ವಿನ್ಸ್ ರೀತಿ ಡ್ರೆಸ್ ಮಾಡಿಕೊಂಡ ಸಾರಾ ತೆಂಡೂಲ್ಕರ್..! ಯಾರ ದೃಷ್ಟಿಯೂ ಬೀಳದಿರಲಿ ಎಂದ ಫ್ಯಾನ್ಸ್