ಒಂದು ಆರ್ಡಿನರಿ ಮೊಬೈಲ್ ರೇಟಿಗೆ ಹೊಸ ಕಾರು ಖರೀದಿಸಿದ್ದ ಅಪ್ಪ; ವೈರಲ್ ಆಯ್ತು 1984ರ ಮಾರುತಿ 800 ಬಿಲ್!

Published : May 18, 2026, 08:48 PM IST
Maruti 800 white color 1984 Price

ಸಾರಾಂಶ

40 ವರ್ಷಗಳ ಹಿಂದೆ, 1984ರಲ್ಲಿ, ಕೇವಲ 60,000 ರೂಪಾಯಿಗೆ ಖರೀದಿಸಿದ ಮಾರುತಿ 800 ಕಾರಿನ ಹಳೆಯ ಬಿಲ್ ಒಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಈ ಬಿಲ್ ಅಂದಿನ ಮತ್ತು ಇಂದಿನ ಬೆಲೆಗಳ ನಡುವಿನ ವ್ಯತ್ಯಾಸ, ಹಣದ ಮೌಲ್ಯದ ಬದಲಾವಣೆ ಮತ್ತು ಜನರ ಜೀವನಶೈಲಿಯ ಬೆಳವಣಿಗೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಇಂದಿನ ಕಾಲದಲ್ಲಿ ಒಂದು ಸಾಮಾನ್ಯ ಮೊಬೈಲ್ ಫೋನ್ ಖರೀದಿಸಬೇಕಾದರೂ 40 ರಿಂದ 50 ಸಾವಿರ ರೂಪಾಯಿ ಬೇಕು. ಇನ್ನು ಮಧ್ಯಮ ವರ್ಗದ ಕುಟುಂಬವೊಂದು ಒಂದು ಪುಟ್ಟ ಕಾರು ಖರೀದಿಸಬೇಕೆಂದರೆ ಕನಿಷ್ಠ 6 ರಿಂದ 10 ಲಕ್ಷ ರೂಪಾಯಿ ಕೈಯಲ್ಲಿರಬೇಕು. ಆದರೆ, 40 ವರ್ಷಗಳ ಹಿಂದೆ ಭಾರತದ ರಸ್ತೆಗಿಳಿದಿದ್ದ ಮಧ್ಯಮ ವರ್ಗದ ಜನರ ಕನಸಿನ ಕಾರು 'ಮಾರುತಿ 800' ಬೆಲೆ ಎಷ್ಟಿತ್ತು ಎಂಬ ಈ ಹಳೇ ಬಿಲ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.

ವೈರಲ್ ಬಿಲ್‌ನಲ್ಲಿ ಏನಿದೆ?

ಸದ್ಯ ಜಾಲತಾಣಗಳಲ್ಲಿ ನಮ್ಮ ಮೈಸೂರು1994 ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಪೋಸ್ಟ್ ಮಾಡಿರುವ' ಈ ರಸೀದಿ ಜುಲೈ 12, 1984ಕ್ಕೆ ಸೇರಿದ್ದಾಗಿದೆ. ಮಧ್ಯ ಪ್ರದೇಶದ ಬಗಾನ್ ಗ್ರಾಮದ 'ಶಾಮ ರಾವ್' ಎಂಬುವವರು ಈ ಕಾರನ್ನು ಖರೀದಿಸಿದ್ದಾರೆ. ಅಂದು ಮಾರುತಿ 800 ಕಾರಿನ 'ಎಕ್ಸ್ ಶೋರೂಮ್' ಬೆಲೆ ಕೇವಲ 47,500 ರೂಪಾಯಿಗಳು! ಇದಕ್ಕೆ ಇನ್ಶೂರೆನ್ಸ್, ಟ್ಯಾಕ್ಸ್ ಮತ್ತು ಇತರ ಶುಲ್ಕಗಳನ್ನು ಸೇರಿಸಿ ಒಟ್ಟು ರಸ್ತೆಗೆ ಇಳಿಯುವಾಗ (On-Road Price) ಆದ ಒಟ್ಟು ಖರ್ಚು ಬರೋಬ್ಬರಿ 60,000 ರೂಪಾಯಿಗಳು.

ಅಂದಿನ 60 ಸಾವಿರ.. ಇಂದಿನ 6 ಲಕ್ಷ!

ಈ ಬಿಲ್ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. 1984ರಲ್ಲಿ 60 ಸಾವಿರ ರೂಪಾಯಿ ಎಂದರೆ ಅದು ಇಂದಿನ ಸುಮಾರು 5 ರಿಂದ 6 ಲಕ್ಷ ರೂಪಾಯಿಗಳಿಗೆ ಸಮಾನ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಅಂದು ಮಾರುತಿ 800 ಕಾರು ಹೊಂದುವುದು ಒಂದು ದೊಡ್ಡ ಪ್ರತಿಷ್ಠೆಯ ವಿಷಯವಾಗಿತ್ತು. ಅಂದಿನ ಕಾಲಕ್ಕೆ ಎಸಿ ಇಲ್ಲದ, ಸರಳ ವಿನ್ಯಾಸದ ಈ ಕಾರು ಇಡೀ ಭಾರತೀಯ ವಾಹನ ಮಾರುಕಟ್ಟೆಯನ್ನೇ ಬದಲಿಸಿತ್ತು.

ಇಂದಿನ ಬೆಲೆಗಳೊಂದಿಗೆ ಹೋಲಿಕೆ:

ಇಂದು ಮಾರುತಿ ಸುಜುಕಿ 800 ಕಾರಿನ ಉತ್ಪಾದನೆ ನಿಂತು ಹೋಗಿ ದಶಕಗಳೇ ಕಳೆದಿವೆ. ಆದರೆ, ಅದೇ ರೇಂಜ್‌ನ ಬದಲಿ ಸುಜುಕಿ ಹಾಗೂ ಟಾಟಾ ಕಾರುಗಳ ಬೆಲೆ ಸುಮಾರು 4.5 ರಿಂದ 5.5 ಲಕ್ಷ ರೂಪಾಯಿಗಳಾಗಿದೆ. ಅಂದರೆ, ಅಂದಿನ ಬೆಲೆಗೆ ಹೋಲಿಸಿದರೆ ಇಂದು ಕಾರುಗಳ ಬೆಲೆ ಹತ್ತು ಪಟ್ಟು ಹೆಚ್ಚಾಗಿದೆ. ಇನ್ನು ವಿಶೇಷವೆಂದರೆ, ಇಂದು 60 ಸಾವಿರ ರೂಪಾಯಿಗೆ ಒಂದು ಸುಸಜ್ಜಿತ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಸಿಗುವುದು ಕಷ್ಟವಾಗಿದೆ. ಇನ್ನು ಒಂದು ಆರ್ಡಿನರಿ ಸ್ಮಾರ್ಟ್ ಫೋನ್ ಕೂಡ 50 ಸಾವಿರ ರೂ.ಗಿಂತ ಕಡಿಮೆ ಇಲ್ಲ. ಹೀಗಿರುವಾಗ ಆಗ 60 ಸಾವಿರಕ್ಕೆ ಒಂದು ಹೊಸ ಕಾರನ್ನು ಖರೀದಿ ಮಾಡಿದ್ದ ಬಿಲ್ ಇದೀಗ ವೈರಲ್ ಆಗುತ್ತಿದೆ.

ಈ ಹಳೆಯ ಬಿಲ್ ಕೇವಲ ಕಾಗದದ ತುಣುಕಲ್ಲ, ಅದು ಭಾರತದ ಆರ್ಥಿಕ ಬದಲಾವಣೆ ಮತ್ತು ಜನರ ಜೀವನಶೈಲಿಯ ಬೆಳವಣಿಗೆಯ ಸಂಕೇತವಾಗಿದೆ. ಹಳೆಯ ತಲೆಮಾರಿನ ಜನರು ಈ ಬಿಲ್ ನೋಡಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರೆ, ಯುವ ಪೀಳಿಗೆ ಹಣದ ಮೌಲ್ಯ ಅಂದು ಹೇಗಿತ್ತು ಎಂದು ಬೆರಗಾಗುತ್ತಿದ್ದಾರೆ.

 

 

ಈ ಹಳೆಯ ಬಿಲ್ ಅನ್ನು ನೋಡಿದ ಹಲವರು ಇದು ಎಐ ನಿರ್ಮಿತ ಬಿಲ್ ಎಂದು ಪೋಸ್ಟ್ ಮಾಡಿದವರ ಕಾಲೆಳೆದಿದ್ದಾರೆ. ಇದರಲ್ಲಿ ಬಿಲ್ ರಚನೆಗೆ ಅಕ್ಷರಗಳು ಹಾಗೂ ಕಾರಿನ ಚಾಸಿಸ್ ಸಂಖ್ಯೆಯನ್ನು ನೋಡಿ ಇದು ಫೇಕ್ ಬಿಲ್ ಆಗಿದ್ದು, ವೈರಲ್ ಆಗುವುದಕ್ಕೆಂದೇ ಇಂತಹ ಎಐ ನಿರ್ಮಿತ ಪೋಸ್ಟರ್ ಹಂಚಿಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗಳಿಗೆ ಸ್ಪಷ್ಟೀಕರಣ ನೀಡುವ ಗೋಜಿಗೆ ಹೋಗಿಲ್ಲ.

PREV
Read more Articles on
click me!

Recommended Stories

ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ! 100ರಲ್ಲಿ ಒಂದು ಅಪರೂಪದ ಘಟನೆ
Video: ಪುಟ್ಟ ಅಭಿಮಾನಿಗೆ 'ಸೈಡ್‌ಗೆ ಹೋಗು' ಎಂದು ಗದರಿದ ರಿಯಾನ್ ಪರಾಗ್; ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ