4 ತಿಂಗಳಲ್ಲಿ ಬರೋಬ್ಬರಿ 22 ಅಪರಾಧಿಗಳಿಗೆ ಗಲ್ಲು ಶಿಕ್ಷೆ! ಇಲ್ಲಿವೆ ನ್ಯಾಯಾಧೀಶ ರವಿ ಕುಮಾರ್ ಖಡಕ್ ತೀರ್ಪುಗಳ ವಿವರ

Published : Aug 18, 2026, 02:54 PM IST
judge ravi kumar diwakar

ಸಾರಾಂಶ

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ ಅವರು, ಕಳೆದ ಕೇವಲ 4 ತಿಂಗಳಲ್ಲಿ 10 ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ 22 ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ. ಈ ಹಿಂದೆ ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಆದೇಶಿಸಿ ಗಮನ ಸೆಳೆದಿದ್ದ ಇವರು, ಇದೀಗ ಕ್ರೂರ ಅಪರಾಧ ಪ್ರಕರಣಗಳಲ್ಲಿ ಕಠಿಣ ನಿಲುವು ತಳೆದು ದೇಶದಾದ್ಯಂತ ಸಂಚಲನ ಮೂಡಿಸಿದ್ದಾರೆ.

ದೇಶದ ನ್ಯಾಯಾಂಗ ಇತಿಹಾಸದಲ್ಲಿ ಇದೀಗ ಒಬ್ಬರೇ ಒಬ್ಬ ನ್ಯಾಯಾಧೀಶರ ಹೆಸರು ದೇಶಾದ್ಯಂತ ಭಾರಿ ಸಂಚಲನ ಮೂಡಿಸುತ್ತಿದೆ. ಅವರೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವಿ ಕುಮಾರ್ ದಿವಾಕರ್ (Ravi Kumar Diwakar). ಮುಜಫರ್‌ನಗರದ ತ್ವರಿತಗತಿ ನ್ಯಾಯಾಲಯದ (Fast-Track Court) ನ್ಯಾಯಾಧೀಶರಾಗಿರುವ ಇವರು, ಕಳೆದ ಕೇವಲ 4 ತಿಂಗಳಲ್ಲಿ ಬರೋಬ್ಬರಿ 10 ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳಲ್ಲಿ 22 ಅಪರಾಧಿಗಳಿಗೆ ಮರಣದಂಡನೆ (ಗಲ್ಲು ಶಿಕ್ಷೆ) ವಿಧಿಸಿ ಐತಿಹಾಸಿಕ ತೀರ್ಪುಗಳನ್ನು ನೀಡಿದ್ದಾರೆ.

ಈ ಹಿಂದೆ 2022 ರಲ್ಲಿ ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆಗೆ ಆದೇಶಿಸಿ ಇಡೀ ದೇಶದ ಗಮನ ಸೆಳೆದಿದ್ದ ನ್ಯಾಯಾಧೀಶ ರವಿ ಕುಮಾರ್ ದಿವಾಕರ್, ಇದೀಗ ಕ್ರಿಮಿನಲ್‌ಗಳಿಗೆ ಸಿಂಹಸ್ವಪ್ನವಾಗಿ ಹೊರಹೊಮ್ಮಿದ್ದಾರೆ.

ಏಪ್ರಿಲ್‌ನಿಂದ ಆಗಸ್ಟ್‌ ತಿಂಗಳ ಅವಧಿಯಲ್ಲಿ ಇತ್ಯರ್ಥಗೊಂಡ ಈ ಪ್ರಕರಣಗಳಲ್ಲಿ, ವಕೀಲರ ಹತ್ಯೆ, ಹೋಂ ಗಾರ್ಡ್‌ ಕೊಲೆ, ಹೆದ್ದಾರಿ ದರೋಡೆ ಹಾಗೂ 27 ವರ್ಷಗಳಷ್ಟು ಹಳೆದ ಅಪಹರಣ ಮತ್ತು ಕೊಲೆ ಕೇಸ್‌ಗಳು ಸೇರಿವೆ. ಹತ್ಯೆಗಳ ಕ್ರೂರತೆ, ಸಂತ್ರಸ್ತರ ಸ್ಥಿತಿ ಮತ್ತು ಕಾನೂನು ವ್ಯವಸ್ಥೆಗೆ ಎದುರಾದ ಸವಾಲುಗಳನ್ನು ಪರಿಗಣಿಸಿ ಇವೆಲ್ಲವನ್ನೂ ‘ಅಪರೂಪದಲ್ಲೇ ಅಪರೂಪದ ಪ್ರಕರಣಗಳು’ ಎಂದು ವರ್ಗೀಕರಿಸಿ ಈ ಶಿಕ್ಷೆ ಪ್ರಕಟಿಸಿದ್ದಾರೆ. ತ್ವರಿತ ನ್ಯಾಯ ಪ್ರಕಟಣೆಗೆ ಹಲವರು ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನು ಕೆಲ ಕಾನೂನು ತಜ್ಞರು ‘ಅಪರೂಪದಲ್ಲೇ ಅಪರೂಪ’ ಸಿದ್ಧಾಂತ ಅನ್ವಯಿಸಿದ್ದರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಯಾರಿದು ನ್ಯಾಯಾಧೀಶ ರವಿ ಕುಮಾರ್ ದಿವಾಕರ್?

ಹಿನ್ನೆಲೆ: 46 ವರ್ಷದ ಇವರು ಮೂಲತಃ ಲಖನೌ ನಿವಾಸಿ. ಬಿಕಾಂ (B.Com) ಹಾಗೂ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (LLM) ಪಡೆದಿದ್ದಾರೆ.

ವೃತ್ತಿ ಜೀವನ: 2009 ರಲ್ಲಿ ಅಜಂಗಢದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಆರಂಭಿಸಿದ ಇವರು, ಸುಲ್ತಾನ್‌ಪುರ, ವಾರಾಣಸಿ ಸೇರಿದಂತೆ ವಿವಿಧೆಡೆ ನ್ಯಾಯಾಂಗ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಮುಜಫರ್‌ನಗರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

4 ತಿಂಗಳಲ್ಲಿ 22 ಮಂದಿಗೆ ಗಲ್ಲು: 10 ತೀರ್ಪುಗಳ ಸಂಪೂರ್ಣ ವಿವರ:

ಆಗಸ್ಟ್ 13 – 12 ವರ್ಷಗಳ ಹಿಂದಿನ ಕೊಲೆ ಕೇಸ್ (4 ಮಂದಿಗೆ ಗಲ್ಲು):

2014 ರಲ್ಲಿ ಶಾಮ್ಲಿಯಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪವನ್ ಕುಮಾರ್ ಎಂಬುವವರ ಮನೆಗೆ ನುಗ್ಗಿ ಗುಂಡಿಕ್ಕಿ ಕೊಂದಿದ್ದ ರಾಮವೀರ್, ರಾಜೀವ್, ರಾಹುಲ್ ಮತ್ತು ಹರೇಂದರ್ ಕುಮಾರ್ ಎಂಬ ನಾಲ್ವರಿಗೆ ಗಲ್ಲು ಶಿಕ್ಷೆ ಹಾಗೂ ₹1.70 ಲಕ್ಷ ದಂಡ ವಿಧಿಸಿದರು.

ಆಗಸ್ಟ್ 12 – 27 ವರ್ಷಗಳ ಹಿಂದಿನ ಅಪಹರಣ & ಕೊಲೆ (1 ಅಪರಾಧಿಗೆ ಗಲ್ಲು):

1999 ರಲ್ಲಿ ₹5 ಲಕ್ಷ ಸುಲಿಗೆಗಾಗಿ ಸಲೀಂ ಎಂಬ ಮರದ ವ್ಯಾಪಾರಿಯನ್ನು ಅಪಹರಿಸಿ, ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿದ್ದ ಶಹನವಾಜ್ ಎಂಬಾತನಿಗೆ 27 ವರ್ಷಗಳ ನಂತರ ಮರಣದಂಡನೆ ವಿಧಿಸಲಾಯಿತು.

ಜುಲೈ 17 – ದರೋಡೆ ವೇಳೆ ರೈತನ ಹತ್ಯೆ (4 ಮಂದಿಗೆ ಗಲ್ಲು):

2011 ರಲ್ಲಿ ಶಾಮ್ಲಿ ಜಿಲ್ಲೆಯಲ್ಲಿ ದರೋಡೆಗೆ ಯತ್ನಿಸಿದ ವೇಳೆ ಪ್ರತಿರೋಧ ಒಡ್ಡಿದ ರಾಜ್ ಸಿಂಗ್ ಎಂಬ ರೈತನನ್ನು ಗುಂಡಿಕ್ಕಿ ಕೊಂದು, ಆತನ ಸ್ನೇಹಿತನನ್ನು ಕಬ್ಬಿನ ಗದ್ದೆಗೆ ಎಸೆದಿದ್ದ ನಾಲ್ವರು ದರೋಡೆಕೋರರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.

ಜುಲೈ 6 – ಗ್ರಾ.ಪಂ ಚುನಾವಣಾ ದ್ವೇಷದ ಕೊಲೆ (ಇಬ್ಬರಿಗೆ ಗಲ್ಲು):

2010 ರಲ್ಲಿ ಚುನಾವಣಾ ದ್ವೇಷಕ್ಕಾಗಿ 60 ವರ್ಷದ ರಾಜ್‌ಬೀರ್ ಸಿಂಗ್ ಎಂಬುವವರನ್ನು ಹತ್ಯೆ ಮಾಡಿದ್ದ ಮಾಜಿ ಗ್ರಾಮ ಪ್ರಧಾನ ಪ್ರಮೋದ್ ಮತ್ತು ಆತನ ಸಹಚರ ಸಹದೇವ್‌ಗೆ ಮರಣದಂಡನೆ ವಿಧಿಸಲಾಯಿತು.

ಜುಲೈ 2 – ಕರ್ತವ್ಯದಲ್ಲಿದ್ದ ಹೋಂ ಗಾರ್ಡ್ ಹತ್ಯೆ (1 ಅಪರಾಧಿಗೆ ಗಲ್ಲು):

2020 ರಲ್ಲಿ ತಾಯಿಯ ಮೇಲೆ ಹಲ್ಲೆ ಮಾಡುತ್ತಿದ್ದ ಆರೋಪಿ ದೀಪಕ್‌ನನ್ನು ತಡೆಯಲು ಬಂದ ಹೋಂ ಗಾರ್ಡ್ ರತಿರಾಮ್ ಎಂಬುವವರನ್ನು ಚಾಕುವಿನಿಂದ ಇರಿದು ಕೊಂದಿದ್ದ ದೀಪಕ್‌ಗೆ ಗಲ್ಲು ಶಿಕ್ಷೆ ಪ್ರಕಟಿಸಲಾಯಿತು.

ಜೂನ್ 20 – ರಾಜೇಂದ್ರ ಸೈನಿ ಹತ್ಯೆ ಕೇಸ್ (ಇಬ್ಬರಿಗೆ ಗಲ್ಲು):

ರಾಜೇಂದ್ರ ಸೈನಿ ಕೊಲೆ ಪ್ರಕರಣದಲ್ಲಿ ಗಜೇಂದ್ರ ಮತ್ತು ರಾಮಕಿರಣ್ ಎಂಬ ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು.

ಮೇ 30 – 15 ವರ್ಷಗಳ ಹಿಂದಿನ ತಾಯಿ-ಮಗನ ಜೋಡಿ ಕೊಲೆ (1 ಅಪರಾಧಿಗೆ ಗಲ್ಲು):

2011 ರಲ್ಲಿ ರಾಜೇಶ್ ದೇವಿ (30) ಮತ್ತು ಆಕೆಯ 6 ವರ್ಷದ ಮಗ ಹಿಮಾಂಶು ಎಂಬುವವರನ್ನು ಕಬ್ಬಿನ ಗದ್ದೆಗೆ ಕರೆದೊಯ್ದು ಇಟ್ಟಿಗೆಗಳಿಂದ ತಲೆ ಜಜ್ಜಿ ಬರ್ಬರವಾಗಿ ಕೊಂದಿದ್ದ ರಹೀಸ್ (50) ಎಂಬಾತನಿಗೆ ಮರಣದಂಡನೆ ವಿಧಿಸಲಾಯಿತು.

ಏಪ್ರಿಲ್ 28 – ತಾಯಿ ಮತ್ತು ಆಕೆಯ ಮೂವರು ಗಂಡು ಮಕ್ಕಳಿಗೆ ಗಲ್ಲು (4 ಮಂದಿಗೆ ಶಿಕ್ಷೆ):

2019 ರ ಭೀಕರ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಮಹಿಳೆ ಮತ್ತು ಆಕೆಯ ಮೂವರು ಪುತ್ರರಿಗೆ ಏಕಕಾಲದಲ್ಲಿ ಮರಣದಂಡನೆ ವಿಧಿಸಿ ತೀರ್ಪು ನೀಡಿದರು.

ಏಪ್ರಿಲ್ 6 – ವಕೀಲರ ಅಪಹರಣ & ಕೊಲೆ ಪ್ರಕರಣ (3 ಮಂದಿಗೆ ಗಲ್ಲು):

2019 ರಲ್ಲಿ ₹45 ಲಕ್ಷ ಹಣದ ವಿವಾದಕ್ಕಾಗಿ ವಕೀಲ ಮೊಹಮ್ಮದ್ ಸಮೀರ್ ಅವರನ್ನು ಅಪಹರಿಸಿ, ಕೊಂದು ಕಾಡಿನಲ್ಲಿ ಶವ ಬಿಸಾಕಿದ್ದ ಮೂವರು ಹಂತಕರಿಗೆ ಗಲ್ಲು ಶಿಕ್ಷೆ ನೀಡಲಾಯಿತು.

‘ಅಪರೂಪದಲ್ಲೇ ಅಪರೂಪ’ ಮಾನದಂಡ:

ಈ ಎಲ್ಲಾ ಪ್ರಕರಣಗಳಲ್ಲಿ ಕೊಲೆಯ ಕ್ರೂರತೆ, ಸಂತ್ರಸ್ತರ ಅಸಹಾಯಕತೆ ಮತ್ತು ಸಮಾಜದ ಮೇಲಿನ ಪ್ರಭಾವವನ್ನು ಪರಿಗಣಿಸಿ, ಇವೆಲ್ಲವೂ ಸುಪ್ರೀಂ ಕೋರ್ಟ್‌ನ ‘Rarest of Rare’ (ಅಪರೂಪದಲ್ಲೇ ಅಪರೂಪ) ವ್ಯಾಪ್ತಿಗೆ ಬರುತ್ತವೆ ಎಂದು ಸ್ಪಷ್ಟಪಡಿಸಿ ಗರಿಷ್ಠ ಶಿಕ್ಷೆ ನೀಡಲಾಗಿದೆ.

ತ್ವರಿತವಾಗಿ ನ್ಯಾಯದಾನ ಮಾಡುವ ಮೂಲಕ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುತ್ತಿರುವ ಜಡ್ಜ್ ರವಿ ಕುಮಾರ್ ದಿವಾಕರ್ ಅವರ ಕಾರ್ಯವೈಖರಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

PREV
Read more Articles on
click me!

Recommended Stories

ನಾಲ್ಕು ವರ್ಷ ನಂತರ ಬಂದ ಅದೃಷ್ಟ; ಭಾರತೀಯ ಸೆಕ್ಯೂರಿಟಿ ಗಾರ್ಡ್‌ಗೆ ಯುಎಇಯಲ್ಲಿ ಬಂಪರ್ ಲಾಟರಿ, ಲಕ್ಷ ಲಕ್ಷ ಹಣ
"ಜನರ ಮಧ್ಯೆ ಇದ್ದರೂ ಯಾರೂ ಜೊತೆಗಿಲ್ಲ..." ವೈರಲ್ ಆಯ್ತು ಬೆಂಗಳೂರಿನ ಮಹಿಳೆಯ ಒಂಟಿತನದ ವಿಡಿಯೋ!