
ನಿಮ್ಮ ಸಂಬಳ ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ಬೆಂಗಳೂರಿಗೆ ಬರಬೇಡಿ ಎಂದು ಉದ್ಯೋಗಿಯೊಬ್ಬ ಜನರಿಗೆ ಸಲಹೆ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೆಂಗಳೂರಿನ ಜೀವನ ದಿನೇದಿನೆ ದುಬಾರಿಯಾಗುತ್ತಿರುವ ಕುರಿತಂತೆ ಹೊಸದೊಂದು ಚರ್ಚೆ ಹುಟ್ಟುಹಾಕಿದೆ.
ಬೆಂಗಳೂರಿನಲ್ಲಿ ಬದುಕಬೇಕೆಂದರೆ ನೀರಿನಿಂದ ರಾತ್ರಿಯ ಬೀರ್‌ನ ವರೆಗೂ ಪ್ರತಿಯೊಂದಕ್ಕೂ ದುಡ್ಡು ಕೊಡಬೇಕು. ನಿಮಗೆ ಬರುವ ಸಂಬಳ ಲಕ್ಷಕ್ಕಿಂತ ಕಡಿಮೆ ಇದ್ದರೆ ನೀವು ಬೆಂಗಳೂರಿನಿಂದ ದೂರ ಇರುವುದು ಉತ್ತಮ. ಇಲ್ಲಿ ವಾಸಿಸುವುದು ಸುಲಭವಲ್ಲ. ನಗರದಲ್ಲಿ ಪ್ರತಿಯೊಂದು ಕೆಲಸಕ್ಕೂ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಎಂದು ಬೆಂಗಳೂರಿನ ವೃತ್ತಿಪರ ಉದ್ಯೋಗಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಪೋಸ್ಟ್ ಆಗಿದೆ. ಆ ವಿಡಿಯೋವನ್ನು ಗೋಯಲ್ ಎಂಬುವವರು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಗೋಯಲ್‌ಗೆ ವರ್ಷಕ್ಕೆ ₹12 ಲಕ್ಷ ಸಂಬಳ ಪಡೆಯುತ್ತಿದ್ದರೂ ಅದು ವರ್ಷಕ್ಕೆ ₹4 ಲಕ್ಷ ಯಂತೆ ಅನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅಂದರೆ ವಾರ್ಷಿಕ ಹನ್ನೆರಡು ಲಕ್ಷ ರೂಪಾಯಿ ಬಂದರೂ ಬೆಂಗಳೂರಿನಲ್ಲಿ ಪ್ರತಿಯೊಂದಕ್ಕೂ ಹಣ ಖರ್ಚು ಮಾಡಬೇಕಿರುವುದರಿಂದ ವರ್ಷದ ಕೊನೆಯಲ್ಲಿ ನಾಲ್ಕು ಲಕ್ಷ ರೂಪಾಯಿಯೂ ಬ್ಯಾಂಕ್ ಖಾತೆಯಲ್ಲಿ ಉಳಿಯುವುದು ಕಷ್ಟ ಎಂದಿದ್ದಾರೆ.
ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕಂಟೆಂಟ್ ಕ್ರಿಯೆಟರ್ ಅಂಡ್ ಪ್ರಾಡಕ್ಟ್ ಮ್ಯಾನೇಜರ್ ಆಗಿರುವ ಗೋಯಲ್ ಬೆಂಗಳೂರಿನಲ್ಲಿ ಪ್ರತಿದಿನ ಜನರು ಹಣ ಖರ್ಚು ಮಾಡಬೇಕಾದ ವಿವಿಧ ಸಂದರ್ಭಗಳ ಬಗ್ಗೆ ವಿವರಿಸಿದ್ದಾರೆ. ನಗರದಲ್ಲಿ ಜನರನ್ನು ಭೇಟಿ ಮಾಡುವುದು, ದುಬಾರಿ ಸ್ಥಳಗಳಲ್ಲಿ ಊಟ ಮಾಡುವುದು ಬಿಟ್ಟರೆ ಮಾಡಲು ಹೆಚ್ಚಿನ ಕೆಲಸಗಳಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ನಿಮ್ಮ ಸಂಬಳ ₹1 ಲಕ್ಷಕ್ಕಿಂತ ಕಡಿಮೆಯಿದ್ದರೆ ದಯವಿಟ್ಟು ಬೆಂಗಳೂರಿಗೆ ಬರಬೇಡಿ!
ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಇದ್ದರೂ ಇಲ್ಲಿ ಬದುಕುವುದು ಕಷ್ಟ. ಹೀಗಿರುವಾಗ ನಿಮಗೆ ಮಾಸಿಕ ಒಂದು ತಿಂಗಳಿಗಿಂತ ಕಡಿಮೆ ಸಂಬಳ ಸಿಗುತ್ತಿದ್ದರೆ ದಯವಿಟ್ಟು ಬೆಂಗಳೂರಿಗೆ ಬರಲೇಬೇಡಿ ಎಂದಿದ್ದಾರೆ ಗೋಯಲ್, ಇದಕ್ಕೆ ಕಾರಣಗಳನ್ನೂ ಕೊಟ್ಟಿದ್ದಾರೆ. ಇಲ್ಲಿನ ಮೋಜು ಎಂದರೆ ಅತಿಯಾಗಿ ಖರ್ಚು ಮಾಡುವುದು ಮತ್ತು ಕೆಫೆ ಸಂಸ್ಕೃತಿ. ಬೆಂಗಳೂರಿಗೆ ಬಂದು ಹಣ ಉಳಿಕೆ ಮಾಡುತ್ತೇವೆ ಎಂದರೂ ಇಲ್ಲಿನ ಸಂಸ್ಕೃತಿಗೆ ದಾಸರಾಗಿ ಹೋಗುತ್ತೇವೆ. ಪ್ರತಿಯೊಂದು ಕಾರ್ಯಕ್ರಮಕ್ಕೂ ಟಿಕೆಟ್ ಬೇಕು, ಪ್ರತಿಯೊಂದು ಹವ್ಯಾಸಕ್ಕೂ ಸಬ್‌ಸ್ಕ್ರಿಪ್ಶನ್ ಬೇಕು, ಸುಮ್ಮನೆ ಹೊರಗೆ ಹೊರಟರೂ ನೂರಿನ್ನೂರು ಖರ್ಚು ಆಗುತ್ತೆ ಎಂದಿದ್ದಾರೆ.
ಇನ್‌ಸ್ಟಾಗ್ರಾಂ ಬಯೋದಲ್ಲಿ 9-5 ಉದ್ಯೋಗಿ ಎಂದು ಹೇಳಿಕೊಂಡಿರುವ ಗೋಯಲ್, ಬೆಂಗಳೂರಿನಲ್ಲಿ ಮನೆ ಬಾಡಿಗೆ, ಸೆಕ್ಯುರಿಟಿ ಡೆಪಾಸಿಟ್ ಕೂಡ ಹೆಚ್ಚಾಗಿದೆ. ಬಾಡಿಗೆ ಮನೆಗೆ ₹2 ಲಕ್ಷ ಸೆಕ್ಯುರಿಟಿ ಡೆಪಾಸಿಟ್ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಕಡಿಮೆ ದೂರದ ಕ್ಯಾಬ್ ಪ್ರಯಾಣಕ್ಕೆ ₹600 ಪಾವತಿಸುವುದೂ ಸಾಮಾನ್ಯವಾಗಿದೆ. ₹2 ಲಕ್ಷ ಸೆಕ್ಯುರಿಟಿ ಡೆಪಾಸಿಟ್ ಯಾಕೆ ಇಷ್ಟೊಂದು ಕೊಡಬೇಕು ಎಂದು ಯಾರೂ ಪ್ರಶ್ನಿಸುವುದಿಲ್ಲ. 5 ಕಿ.ಮೀ. ಕ್ಯಾಬ್ ಪ್ರಯಾಣಕ್ಕೆ ₹600 ಹೇಗಾಗುತ್ತೆ, ಯಾಕೆ ಅಷ್ತು ಹಣ ಕೊಡಬೇಕು ಎಂದು ಯಾರೂ ಪ್ರಶ್ನಿಸುವುದಿಲ್ಲ. ಪ್ರಶ್ನಿಸಿದ ಅಷ್ಟೊಂದು ಹಣ ಕೊಡುವುದು ಇಲ್ಲಿ ಸಾಮಾನ್ಯವಾಗಿದೆ. ಇಷ್ಟೆಲ್ಲ ಖರ್ಚು ಮಾಡಿದ್ರೂ ಸಮಯಕ್ಕೆ ಸರಿಯಾಗಿ ಹೋಗುತ್ತೇವೆ ಎಂದುಕೊಂಡರೆ ಅದೂ ಅಸಾದ್ಯ. ಒಂದು ಗಂಟೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ಪ್ರಯಾಣಿಸಬೇಕಾಗುತ್ತದೆ ನಗರ ಇಷ್ಟೊಂದು ಕರ್ಷಿಯಲ್ ಆಗಿ ಬೆಳೆದಿದೆ ಎಂದರೆ ನನಗೆ ಬರುವ ₹12 ಲಕ್ಷ ವಾರ್ಷಿಕ ಸಂಬಳವು ₹4 ಲಕ್ಷದಂತೆ ಅನಿಸುತ್ತದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಒಂದಾದ ಮೇಲೊಂದು ಬಿಲ್ ಪಾವತಿಸುವಂತಾಗುತ್ತದೆ. ಕಬ್ಬನ್ ಪಾರ್ಕ್‌ಗೆ ಹೋಗೋಣವೆಂದರೆ ಅಲ್ಲಿಗೆ ಹೋಗಲು ಒಂದು ದಿನ ಮುಂಚಿತವಾಗಿಯೇ ಪ್ಲಾನ್ ಮಾಡಬೇಕು. ಅದಕ್ಕಾಗಿ ನನ್ನ ಜೀವನದ 4 ಗಂಟೆ ಕಳೆಯಬೇಕು ಎಂದು ಗೋಯಲ್ ಹೇಳಿದ್ದಾರೆ.
ನಗರದ ಸಮಸ್ಯೆಗಳಿಗೆ ವಲಸಿಗರನ್ನು ದೂಷಿಸುವ ಬದಲು ಬೆಂಗಳೂರಿನ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕಿದೆ ಎಂದು ಹೇಳಿದ್ದಾರೆ. ಇದಕ್ಕೆ ಹಲವರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಬೇಡಿಕೆ ಮತ್ತು ಪೂರೈಕೆಯ ಸಮಸ್ಯೆ. ಯಾವ ನಗರವಾಗಿದ್ದರೂ ಇದೇ ಪರಿಸ್ಥಿತಿ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ 'ಬೆಂಗಳೂರು ಮೋಜು ಎಂದಿದ್ದೀರಿ. ನೀವು ಏನನ್ನು ಹುಡುಕುತ್ತಿದ್ದೀರಿ. ನಗರವನ್ನು ಹೇಗೆ ಅನುಭವಿಸಲು ಬಯಸುತ್ತೀರಿ ಎಂಬುದರ ಮೇಲೆ ಡಿಪೆಂಡ್ ಆಗಿದೆ' ಎಂದು ಹೇಳಿದ್ದಾರೆ.
ಕೈಗೆಟುಕುವ ದರದಲ್ಲಿ ಆಹಾರ ಸಿಗುವ ಕೆಫೆಗಳು ಮತ್ತು ಸ್ಥಳಗಳಿವೆ.ಉಚಿತ ಕಾರ್ಯಾಗಾರಗಳು ಮತ್ತು ಮೀಟ್‌ಅಪ್‌ಗಳನ್ನು ಆಯೋಜಿಸುವ ಗ್ರೂಪ್‌ಗಳಿವೆ. ಪ್ರವೇಶ ಶುಲ್ಕವಿಲ್ಲದ ಕಾರ್ನಿವಲ್‌ಗಳು ಮತ್ತು ಹಬ್ಬಗಳೂ ಇವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಮತ್ತೊಬ್ಬ, 'ನಾನು ಬೆಂಗಳೂರಿಗೆ 10 ದಿನ ಬರುತ್ತೇನೆ. ಆ 10 ದಿನಗಳಲ್ಲೇ ನನ್ನ ಒಂದು ತಿಂಗಳ ಸಂಬಳ ಖರ್ಚಾಗುತ್ತದೆ'
ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.