
ನವದೆಹಲಿ (ಸೆ.14): ಹರಿಯಾಣದ ಗುರುಗ್ರಾಮ್‌ನ ಪ್ರಸಿದ್ಧ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ (Golf Course Road) ಬೈಕಿಂಗ್ ಮಾಡುತ್ತಿದ್ದಾಗ ತಮ್ಮ ಬೈಕ್ ಅನ್ನು ಕಾರಿನಲ್ಲಿ ಚೇಸ್ ಮಾಡಿ, ಭೀಕರವಾಗಿ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಮಹಿಳಾ ಬೈಕರ್ 'ಸಿಯಾ' ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ತಮಗೆ ಬೆಂಬಲವಾಗಿ ನಿಂತ ಜನರಿಗೆ ಧನ್ಯವಾದ ತಿಳಿಸಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಕೀಲರೊಂದಿಗೆ ತೆರಳಿ ಇಂದು ಸಂಜೆಯೊಳಗೆ ಎಫ್‌ಐಆರ್ (FIR) ದಾಖಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ'ರೆಬೆಲ್ ವೀಲ್ಸ್ ಸಿಯಾ' (Rebel Wheels Sia) ಎಂಬ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಗುರುತಿಸಿಕೊಂಡಿರುವ ಇವರು, ಇತ್ತೀಚೆಗೆ ಕಾರಿನಲ್ಲಿದ್ದ ಕಿಡಿಗೇಡಿಗಳು ತಮ್ಮ ಬೈಕನ್ನು ಚೇಸ್ ಮಾಡಿ ಡಿಕ್ಕಿ ಹೊಡೆಸಿದ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಅಪ್‌ಡೇಟ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಿಯಾ, 'ಘಟನೆಗೆ ಕಾರಣರಾದವರನ್ನು ಪತ್ತೆಹಚ್ಚಲು ಯತ್ನಿಸುತ್ತಿರುವ ಹಾಗೂ ಪೊಲೀಸರಿಗೆ ದೂರು ನೀಡಿದ್ದೀರಾ ಎಂದು ವಿಚಾರಿಸುತ್ತಿರುವ ಹಲವರಿಂದ ನನಗೆ ನಿರಂತರ ಸಂದೇಶಗಳು ಬರುತ್ತಿವೆ. ನನ್ನ ವಕೀಲರೊಂದಿಗೆ ನಾನು ಇಂದು ಸಂಜೆಯೊಳಗೆ ಪೋಲಿಸರಿಗೆ ದೂರು ಸಲ್ಲಿಸಿ, ಎಫ್‌ಐಆರ್ ದಾಖಲಿಸಲಿದ್ದೇನೆ ಮತ್ತು ಕಾನೂನಾತ್ಮಕ ಕ್ರಮ ಕೈಗೊಳ್ಳಲಿದ್ದೇನೆ' ಎಂದು ತಿಳಿಸಿದ್ದಾರೆ.
ಗುರುಗ್ರಾಮ್‌ನ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಸಿಯಾ ಅವರು ತಮ್ಮ ಸಹ-ಬೈಕರ್‌ಗಳ ಗ್ರೂಪ್ ಜೊತೆ ರೈಡ್ ಹೋಗುತ್ತಿದ್ದಾಗ ಈ ಭೀಕರ ಘಟನೆ ಸಂಭವಿಸಿತ್ತು. ವೈರಲ್ ಆದ ವಿಡಿಯೋದಲ್ಲಿ ಕಾರೊಂದು ಬೈಕರ್ಸ್ ಗ್ರೂಪ್ ಅನ್ನು ಸುಮ್ಮನೆ ಹಿಂಬಾಲಿಸಿಕೊಂಡು ಬರುವುದು ಹಾಗೂ ಬಳಿಕ ಹಠಾತ್ತನೆ ಸಿಯಾ ಅವರ ಮೋಟಾರ್ ಸೈಕಲ್‌ಗೆ ತೀರಾ ಹತ್ತಿರ ಬಂದು ಜೋರಾಗಿ ಡಿಕ್ಕಿ ಹೊಡೆಯುವುದು ಸ್ಪಷ್ಟವಾಗಿ ಸೆರೆಯಾಗಿತ್ತು. ಡಿಕ್ಕಿಯ ರಭಸಕ್ಕೆ ಸಿಯಾ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟರೆ, ಅಪಘಾತ ಎಸಗಿದ ಕಾರು ನಿಲ್ಲಿಸದೆ ಸ್ಥಳದಿಂದ ವೇಗವಾಗಿ ಪರಾರಿಯಾಗಿತ್ತು.
ಸಿಯಾ ಅವರ ಮೊದಲಿನ ವರದಿಯ ಪ್ರಕಾರ, ಕಾರಿನಲ್ಲಿದ್ದ ವ್ಯಕ್ತಿಗಳು ಬೈಕರ್ಸ್ ಗ್ರೂಪ್ ಅನ್ನು ಅನಗತ್ಯವಾಗಿ ಹಿಂಬಾಲಿಸಲು ಪ್ರಾರಂಭಿಸಿದಾಗ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಂತೆ ಸಿಯಾ ಅವರಿಗೆ ಸೂಚಿಸಿದ್ದರು. ಆದರೆ, ಕಾರಿನಲ್ಲಿದ್ದ ಪುಂಡರು ಮದ್ಯಪಾನ ಮಾಡಿದ್ದಂತೆ ಕಂಡುಬಂದಿದ್ದು, ಸಿಯಾ ಅವರೊಂದಿಗೆ ಗಲಾಟೆಗೆ ಇಳಿದು ಉಗ್ರವಾಗಿ ವರ್ತಿಸಿದ್ದರು. ಈ ವೇಳೆ ಜೊತೆಯಲ್ಲಿದ್ದ ಇನ್ನೊಬ್ಬ ಬೈಕರ್ ಕಾರಿನಿಂದ ಸಿಯಾ ಅವರನ್ನು ರಕ್ಷಿಸಲು ಬೈಕ್ ಅಡ್ಡತಂದು ತಡೆಯಲು ಯತ್ನಿಸಿದ್ದರು ಎನ್ನಲಾಗಿದೆ.
ಅಪಘಾತ ಸಂಭವಿಸಿದ ತಕ್ಷಣವೇ ಸಿಯಾ ಅವರ ಸ್ನೇಹಿತರೊಬ್ಬರು ಕಾರನ್ನು ಹಿಂಬಾಲಿಸಿಕೊಂಡು ಹೋಗಿ, ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಕಾರನ್ನು ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೇ ವೇಳೆ ತಮಗೆ ಹಲವು ಮಾಧ್ಯಮ ಸಂಸ್ಥೆಗಳಿಂದ ಸಂದರ್ಶನಕ್ಕೆ ವಿನಂತಿಗಳು ಬರುತ್ತಿರುವುದಾಗಿ ತಿಳಿಸಿರುವ ಸಿಯಾ, ಪ್ರಸ್ತುತ ತಮ್ಮ ನಿಜವಾದ ಗುರುತು ಅಥವಾ ಮುಖವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ನನ್ನ ಗುರುತು ಅಥವಾ ಮುಖವನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. ಹಾಗೂ ಪ್ರಸ್ತುತ ಯಾವುದೇ ಮಾಧ್ಯಮ ಸಂಸ್ಥೆಗಳಿಗೂ ಸಂದರ್ಶನ ನೀಡುವುದಿಲ್ಲ" ಎಂದು ಹೇಳಿರುವ ಅವರು, ಪ್ರತಿಯೊಬ್ಬರೂ ತಮ್ಮ ಈ ನಿರ್ಧಾರವನ್ನು ಗೌರವಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ಎಲ್ಲಾ ಅಪ್‌ಡೇಟ್‌ಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕವೇ ನೀಡುವುದಾಗಿ ಅವರು ತಿಳಿಸಿದ್ದಾರೆ.