Viral Video: ಕೆಂಪಾದವೋ ಎಲ್ಲಾ ಕೆಂಪಾದವೋ.. ಸೈಕ್ಲೋನ್‌ ಆರ್ನಬ್‌ ಎಫೆಕ್ಟ್‌ನಿಂದ ಆಕಾಶ ಪೂರ್ತಿ ಕೆಂಪು, ಕೆಂಪು!

Published : Oct 30, 2026, 03:42 PM IST
chhattisgarh sky turns blood red

ಸಾರಾಂಶ

ಛತ್ತೀಸ್‌ಗಢದ ದಂತೇವಾಡ ಮತ್ತು ಕಿರಂಡೂಲ್‌ನಲ್ಲಿ ಅರ್ನಬ್ ಚಂಡಮಾರುತದ ನಡುವೆ ಆಕಾಶವು ರಕ್ತ ಕೆಂಪು ಬಣ್ಣಕ್ಕೆ ತಿರುಗಿದ ವಿಡಿಯೋಗಳು ವೈರಲ್ ಆಗಿವೆ. ಬಲವಾದ ಮಾರುತಗಳು ಕಬ್ಬಿಣದ ಅಂಶವಿರುವ ಕೆಂಪು ಮಣ್ಣಿನ ಧೂಳನ್ನು ವಾತಾವರಣಕ್ಕೆ ಚಿಮ್ಮಿಸಿರುವುದು ಇದಕ್ಕೆ ಕಾರಣವೆಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.

ನವದೆಹಲಿ (ಅ.30): 'ಅರ್ನಬ್' ಚಂಡಮಾರುತದ ನಡುವೆಯೇ ಛತ್ತೀಸ್‌ಗಢದ ದಂತೇವಾಡ (Dantewada) ಮತ್ತು ಕಿರಂಡೂಲ್ (Kirandul) ಸೇರಿದಂತೆ ವಿವಿಧ ಭಾಗಗಳಲ್ಲಿ ರಕ್ತ ಕೆಂಪು (Blood Red) ಬಣ್ಣಕ್ಕೆ ತಿರುಗಿರುವ ಆಕಾಶದ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಆಕಾಶದ ಈ ಕೆಂಪು ಬಣ್ಣಕ್ಕೂ ಹಾಗೂ ಅರ್ನಬ್‌ ಚಂಡಮಾರುತಕ್ಕೂ ನೇರ ಸಂಪರ್ಕವಿದೆಯೇ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣ ನೀಡದಿದ್ದರೂ, ಚಂಡಮಾರುತದ ತೀವ್ರತೆಯೇ ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಆಸ್ಟ್ರೇಲಿಯಾ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಲ್ಲಿ ಚಂಡಮಾರುತ ಅಪ್ಪಳಿಸುವ ಮುನ್ನ ಇಂತಹ ಸುದೀರ್ಘ 'ಅಪೋಕ್ಯಾಲಿಪ್ಟಿಕ್' (Apocalyptic) ಭಯಾನಕ ದೃಶ್ಯಗಳು ಕಂಡುಬಂದಿದ್ದ ಉದಾಹರಣೆಗಳಿವೆ.

ಆಕಾಶ ಕೆಂಪು ಬಣ್ಣಕ್ಕೆ ತಿರುಗಿದ್ದೇಕೆ?: ವಿಜ್ಞಾನಿಗಳು ಹೇಳುವುದೇನು?

'ದಿ ನ್ಯೂಯಾರ್ಕ್ ಟೈಮ್ಸ್' ಉಲ್ಲೇಖಿಸಿರುವ ಹವಾಮಾನ ತಜ್ಞರ ಪ್ರಕಾರ; ತೀವ್ರ ಸ್ವರೂಪದ ಚಂಡಮಾರುತ ಬೀಸುವಾಗ ಅದರ ಭೀಕರ ಮಾರುತಗಳು ಅಪಾರ ಪ್ರಮಾಣದ ಧೂಳು, ಮರಳು ಅಥವಾ ಕಬ್ಬಿಣದ ಅಂಶ ಹೆಚ್ಚಿರುವ ಕೆಂಪು ಮಣ್ಣನ್ನು (Iron-rich red soil) ಭಾರಿ ಎತ್ತರಕ್ಕೆ ಎತ್ತಿ ವಾತಾವರಣದ ಮೇಲ್ಭಾಗದಲ್ಲಿ ಸೇರುವಂತೆ ಮಾಡುತ್ತವೆ. ಛತ್ತೀಸ್‌ಗಢದಲ್ಲೂ ಅರ್ನಬ್‌ ಚಂಡಮಾರುತದ ಬಲವಾದ ಗಾಳಿಯು ಕೆಂಪು ಮಣ್ಣಿನ ಧೂಳನ್ನು ವಾತಾವರಣಕ್ಕೆ ಚಿಮ್ಮಿಸಿರುವುದರಿಂದ ಆಕಾಶವು ಈ ರೀತಿ ಕೆಂಪು ಬಣ್ಣಕ್ಕೆ ತಿರುಗಿರಬಹುದು ಎಂದು ಅಂದಾಜಿಸಲಾಗಿದೆ.

ಇದೇ ವರ್ಷದ ಮೇ ತಿಂಗಳಿನಲ್ಲಿ ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಡೆನ್‌ಹಾಮ್‌ಗೆ 'ನರೆಲ್ಲೆ' (Cyclone Narelle) ಚಂಡಮಾರುತ ಅಪ್ಪಳಿಸಿದಾಗಲೂ ಇಂತಹುದೇ ದೃಶ್ಯ ಕಂಡುಬಂದಿತ್ತು. ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತದ (NOAA) ನ್ಯಾಷನಲ್ ಎನ್ವಿರಾನ್‌ಮೆಂಟಲ್ ಸ್ಯಾಟಲೈಟ್ ವಿಭಾಗದ ಪ್ರಕಾರ, ಆಸ್ಟ್ರೇಲಿಯಾದ ಆ ಭಾಗದ ಮಣ್ಣಿನಲ್ಲಿ ಕಬ್ಬಿಣದ ಅಂಶ ಹೆಚ್ಚಿದ್ದು, ಚಂಡಮಾರುತದ ವಾತಾವರಣದಲ್ಲಿ ಆಕ್ಸಿಡೀಕರಣಕ್ಕೆ (Oxidation) ಒಳಗಾಗುತ್ತದೆ. ಈ ಮಣ್ಣಿನ ಧೂಳು ಗಾಳಿಯಲ್ಲಿ ವೇಗವಾಗಿ ತೇಲಲು ಪ್ರಾರಂಭಿಸಿದಾಗ ಇಡೀ ಆಕಾಶವು ಮಂಗಳ ಗ್ರಹದಂತೆ ಕಡುಗೆಂಪು ಬಣ್ಣದ ನೋಟವನ್ನು ನೀಡುತ್ತದೆ.

'ಸ್ಟ್ರೇಂಜರ್ ಥಿಂಗ್ಸ್'ಗೆ ಹೋಲಿಸಿದ ನೆಟ್ಟಿಗರು!

ಛತ್ತೀಸ್‌ಗಢದ ಈ ವಿಚಿತ್ರ ಕೆಂಪು ಆಕಾಶದ ವಿಡಿಯೋಗಳು ಇಂಟರ್ನೆಟ್ ಯೂಸರ್‌ಗಳ ಕಂಟೆಂಟ್‌ಗೆ ದಾರಿಯಾಗಿದೆ. ಪ್ರಸಿದ್ಧ ನೆಟ್‌ಫ್ಲಿಕ್ಸ್ ಸರಣಿ 'ಸ್ಟ್ರೇಂಜರ್ ಥಿಂಗ್ಸ್'ಗೆ (Stranger Things) ಹೋಲಿಸಿರುವ ಯೂಸರ್‌ ಒಬ್ಬರು, "ಇದು ಅಪ್‌ಸೈಡ್ ಡೌನ್ ಸೀನ್ ಇರಬೇಕಲ್ಲವೇ?" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ವೆಕ್ನಾ (Vecna) ಪ್ರತ್ಯಕ್ಷನಾಗುತ್ತಿದ್ದಾನೆ" ಎಂದು ಹಾಸ್ಯ ಮಾಡಿದ್ದಾರೆ. ಇನ್ನು ಕೆಲವರು 'ಈವಿಲ್ ಡೆಡ್' ಸಿನೆಮಾದ ಶೂಟಿಂಗ್ ಸೆಟ್‌ ನಂತೆ ಆಕಾಶ ಕಾಣಿಸುತ್ತಿದೆ ಎಂದಿದ್ದರೆ, ಮತ್ತೆ ಕೆಲವರು ಇದು ಅಪಾಯಕಾರಿ ಮುನ್ಸೂಚನೆಯಾಗಿದ್ದು ಎಚ್ಚರಿಕೆಯಿಂದ ಇರಲು ಜನರಿಗೆ ಸಲಹೆ ನೀಡಿದ್ದಾರೆ.

ಅಕ್ಟೋಬರ್ 28 ರಂದು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ 'ಆರ್ನಬ್' ಚಂಡಮಾರುತವನ್ನು ಭಾರತೀಯ ಹವಾಮಾನ ಇಲಾಖೆಯು (IMD) 'ಅತ್ಯಂತ ತೀವ್ರ ಚಂಡಮಾರುತ' (Very Severe Cyclonic Storm) ಎಂದು ವರ್ಗೀಕರಿಸಿದೆ. ಅಪ್ಪಳಿಸುವ ವೇಳೆ ಗಂಟೆಗೆ ಬರೋಬ್ಬರಿ 130 ಕಿಲೋಮೀಟರ್ ವೇಗದಲ್ಲಿ ಭೀಕರ ಗಾಳಿ ಬೀಸಿದೆ. ಆಂಧ್ರಪ್ರದೇಶದಲ್ಲಿ ಚಂಡಮಾರುತ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ 5 ಜನರು ದುರ್ಮರಣಕ್ಕೀಡಾಗಿದ್ದಾರೆ. ನೂರಾರು ಮರಗಳು ಧರೆಗುರುಳಿವೆ. ಬೆಳೆಗಳು ಹಾಗೂ ಮನೆಗಳು ಜಲಾವೃತಗೊಂಡಿವೆ. ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರಿಗೆ ಮತ್ತು ವಿದ್ಯುತ್ ಜಾಲ ಸಂಪೂರ್ಣವಾಗಿ ಕಡಿತಗೊಂಡಿದೆ. ಅರ್ನಾಬ್ ಚಂಡಮಾರುತದ ದುಷ್ಪರಿಣಾಮಗಳು ಅಕ್ಟೋಬರ್ 31 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ಚಂಡಮಾರುತ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ಒದಗಿಸಲು ಆಂಧ್ರಪ್ರದೇಶದಿಂದ ಬಿಹಾರದವರೆಗೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ದೆವ್ವಗಳ ಕಥೆಗಳದ್ದೇ ಸದ್ದು! ಕಣ್ಣಾರೆ ಕಂಡ ಭಯಾನಕ ಅನುಭವಗಳನ್ನು ಬಿಚ್ಚಿಟ್ಟ ಜನರು
7 ವರ್ಷ ಕೋಮಾದಲ್ಲಿದ್ದ ಯುವತಿ, ಪ್ರಜ್ಞೆ ಬರುತ್ತಿದ್ದಂತೆಯೇ ಆಕೆಯ ಆಸೆ ಈಡೇರಿಸಿದ ಪ್ರಿಯಕರ -ವೈರಲ್ ವಿಡಿಯೋ